×
Ad

ವಿಜಯನಗರ | ಎರಡನೇ ಬೆಳೆಗೆ ನೀರು ಬಿಡುಗಡೆ ಮಾಡಲು 120 ಕಿಮೀ ಪಾದಯಾತ್ರೆ : ತುಂಗಭದ್ರಾ ಮಂಡಳಿಗೆ ರೈತರ ಮನವಿ

Update: 2025-11-17 19:50 IST

ವಿಜಯನಗರ (ಹೊಸಪೇಟೆ) : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡನೇ ಬೆಳೆಗೆ ನೀರು ಬಿಡುವುದಿಲ್ಲ, ಜನವರಿ ತಿಂಗಳವರೆಗೆ ಮಾತ್ರ ನೀರು ಬಿಡುತ್ತೇವೆ ಎಂಬ ತೀರ್ಮಾನವನ್ನು ರೈತರು ತೀವ್ರವಾಗಿ ವಿರೋಧಿಸಿದ್ದಾರೆ. ಹಿಂಗಾರು ಬೆಳೆಗಳಿಗೆ ಎಲ್​.ಎಲ್​.ಸಿ ಕಾಲುವೆಗೆ ಜನವರಿಯಿಂದ ಮಾರ್ಚ್ ತನಕ ನೀರು ಬಿಡಬೇಕು, ಜೊತೆಗೆ ಕ್ರಸ್ಟ್ ಗೆಟ್ ಅಳವಡಿಕೆ ತಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ನೂರಾರು ರೈತರು ಕರೂರು ಗ್ರಾಮದಿಂದ ತುಂಗಭದ್ರಾ ಮಂಡಳಿಯವರೆಗೆ ಸುಮಾರು 120 ಕಿಮೀ ಪಾದಯಾತ್ರೆ ನಡೆಸಿದರು.

ಪಾದಯಾತ್ರೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಘಟಕ ನ.12 ರಿಂದ ಆರಂಭಿಸಿತ್ತು. ಕರೂರು, ಸಿರಿಗೇರಿ ಕ್ರಾಸ್, ಶಾನವಾಸಪುರ ಸೇರಿದಂತೆ 30ಕ್ಕೂ ಹೆಚ್ಚು ಹಳ್ಳಿಗಳನ್ನು ದಾಟಿಕೊಂಡು ಬಂದ ರೈತರು ನ.17ರಂದು ಮಂಡಳಿಗೆ ತಲುಪಿ ಮನವಿ ಸಲ್ಲಿಸಿದರು.

ಈ ವೇಳೆ ರೈತ ಸಂಘದ ಕರೂರು ಘಟಕ ಅಧ್ಯಕ್ಷ ಆರ್.ಮಾಧವರೆಡ್ಡಿ ಮಾತನಾಡಿ, ರೈತರ ಹೆಸರನ್ನು ಹೇಳಿಕೊಂಡು ಕಾರ್ಖಾನೆಗಳಿಗೆ ನೀರು ಬಿಡುತ್ತಿದ್ದಾರೆ. ಎರಡನೇ ಬೆಳೆಗೆ ನೀರು ಕೊಡಬೇಡಿ ಎಂಬ ನಿರ್ಧಾರಕ್ಕೆ ರೈತರೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಜಲಾಶಯದಲ್ಲಿ 78 ಕ್ಯೂಸೆಕ್ಸ್ ನೀರು ಇದ್ದರೂ ನೀರು ಬಿಡುವುದಿಲ್ಲ ಎನ್ನುವುದು ನ್ಯಾಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಂಧ್ರ–ತೆಲಂಗಾಣಕ್ಕೆ ಹೋಲಿಸಿದರೆ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಈ ನಾಲ್ಕು ಜಿಲ್ಲೆಗಳ 10 ಲಕ್ಷ ಎಕರೆ ಜಮೀನಿನ ಬದುಕೇ ತುಂಗಭದ್ರಾ ಜಲಾಶಯದ ಮೇಲೆ ನಿಂತಿದೆ. ಜಲಾಶಯದ ಕ್ರಸ್ಟ್ ಕಿತ್ತು ಹೋಗಿದ್ದರಿಂದ ಸಾವಿರಾರು ಕ್ಯೂಸೆಕ್ಸ್ ನೀರು ಸಮುದ್ರ ಪಾಲಾಗಿದೆ. ವರ್ಷಗಳಿಂದ ಗೇಟ್ ಅಳವಡಿಕೆ ವಿಳಂಬವಾಗಿದೆ ಎಂದರು.

ಪಾದಯಾತ್ರೆಯಲ್ಲಿ ಯುವ ಮುಖಂಡ ಎಚ್‌.ರಾಘವೇಂದ್ರ, ಜಾಗನೂರು ಮಲ್ಲಿಕಾರ್ಜುನರೆಡ್ಡಿ, ಕಾಳಿದಾಸ ಬಸವರಾಜಸ್ವಾಮಿ, ಲೇಪಾಕ್ಷಿ, ಪಂಪನಗೌಡ, ಸದಾಶಿವಪ್ಪ ಸೇರಿದಂತೆ ಅನೇಕ ರೈತರು ಭಾಗವಹಿಸಿದರು. ದಲಿತ ಹೋರಾಟಗಾರ ಕರಿಯಪ್ಪ ಗುಡಿಮನಿ, ವಸಂತ್ ರಾಜಕಾಳೆ ಹಾಗೂ ಕೆಆರ್‌ಎಸ್‌ ಪಕ್ಷದ ಪರ ಗಣೇಶ್ ಅವರು ರೈತರ ಬೇಡಿಕೆಗಳಿಗೆ ಬೆಂಬಲ ಸೂಚಿಸಿದರು.

ಟಿ.ಬಿ. ಬೋರ್ಡ್ ಕಾರ್ಯದರ್ಶಿಗಳು ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರ ನೀಡಿದ ಸೂಚನೆಯಂತೆ ನೀರು ಬಿಡುತ್ತೇವೆ. ನೀರು ಬ್ಯಾಂಕ್‌ನಲ್ಲಿರುವ ಹಣದಂತಿದೆ. ನೀವು ಬೇಕಾದಾಗ ಬಳಸಿಕೊಳ್ಳಬಹುದು. ಸರ್ಕಾರ ಹೇಳಿದರೆ ನೀರು ಬಿಡಲು ನಮ್ಮ ವಿರೋಧವಿಲ್ಲ. ಕ್ರೆಸ್ಟ್ ಗೇಟ್ ಅಳವಡಿಕೆಯನ್ನು ಡಿ.23ರಿಂದ ಆರಂಭಿಸಿ ಜೂ.20ರೊಳಗೆ ಪೂರ್ಣಗೊಳಿಸುವ ಯೋಜನೆಯಿದೆ. 40ಟಿ.ಎಂ.ನೀರು ಇದ್ದಾಗ ಗೇಟ್ ಅಳವಡಿಸುವುದಕ್ಕೂ ನೀರು ಬಿಡುವುದಕ್ಕೂ ಸಂಬಂಧವಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News