ವಿಜಯನಗರ | ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ
ವಿಜಯನಗರ (ಹೊಸಪೇಟೆ) : ನಗರದಲ್ಲಿ ವಾಹನಗಳಿಂದ ಹೊರಸೂಸುವ ಹೊಗೆ ಸೇರಿ ವಿಷಕಾರಕ ಅನಿಲ ಸೇವನೆಯಿಂದ ಅನಾರೋಗ್ಯ ಪ್ರಮಾಣ ಹೆಚ್ಚಳವಾಗಿದ್ದು, ವಾಯುಮಾಲಿನ್ಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೇ ಮಾನವ ಸಂಕುಲ ವಿನಾಶ ಖಚಿತ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ್ ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಹನಗಳ ವಾಯುಮಾಲಿನ್ಯದಿಂದ ಉಸಿರಾಟದ ಸಮಸ್ಯೆಗಳು, ಅಸ್ತಮಾ, ಮಕ್ಕಳ ಮಾನಸಿಕ ದುರ್ಬಲತೆ, ಬುದ್ಧಿಮಾಂದ್ಯತೆ, ಮೆದುಳಿನ ಕಾರ್ಯಚಟುವಟಿಕೆ ಕುಂಠಿತಗೊಳ್ಳುವುದು, ಗರ್ಭಿಣಿ ಮಹಿಳೆಗಳಿಗೆ ಗರ್ಭಸ್ರಾವ, ಹುಟ್ಟುವ ಮಕ್ಕಳ ಆರೋಗ್ಯದಲ್ಲಿ ಹಾನಿ ಉಂಟಾಗುವುದು ಸೇರಿದಂತೆ ನಾನಾ ದುಷ್ಪರಿಣಾಮಗಳು ಸಂಭವಿಸುತ್ತವೆ ಎಂದು ಹೇಳಿದರು.
ಚಳಿಗಾಲದಲ್ಲಿ ದಟ್ಟವಾದ ಹೊಗೆಯಿಂದಾಗುವ ಅಗೋಚರತೆ ಹೆಚ್ಚಾಗುವುದರಿಂದ ವಾಹನ ಅಪಘಾತಗಳ ಸಂಭವ ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ವಾಹನಗಳನ್ನು ಸುಸ್ಥಿತಿಯಲ್ಲಿ ಇಡದಿದ್ದರೆ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 1,500 ರೂ., ನಾಲ್ಕು ಚಕ್ರದ ವಾಹನಗಳಿಗೆ 3,000 ರೂ. ಹಾಗೂ ಭಾರಿವಾಹನಗಳಿಗೆ 3,000 ರೂ. ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪರಿಸರವಾದಿ ಪ್ರಭಾಕರ್ ಪರಿಸರದ ಮಹತ್ವವನ್ನು ಯುವಪೀಳಿಗೆ ಮತ್ತು ಮಕ್ಕಳಿಗೆ ಅರಿತುಕೊಳ್ಳಬೇಕೆಂದು ಒತ್ತಾಯಿಸಿದರು.
ಪೊಲೀಸ್ ವೃತ್ತ ನಿರೀಕ್ಷಕ ಡಿ. ಹುಲುಗಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೋಟಾರ್ ಹಿರಿಯ ನಿರೀಕ್ಷಕರು ಮಂಜುನಾಥ ಪ್ರಸಾದ್, ಮೋಟಾರು ನಿರೀಕ್ಷಕ ಮುಹಮ್ಮದ್ ಶರೀಫ್ ಶೇಖ್‌ಜಿ, ಸಾರ್ವಜನಿಕರು, ಪ್ರಾದೇಶಿಕ ಸಾರಿಗೆ ಸಿಬ್ಬಂದಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.