ವಿಜಯನಗರ | ಹೆರಿಗೆಯ ವೇಳೆ ನಿರ್ಲಕ್ಷ್ಯ ಆರೋಪ; ನವಜಾತ ಅವಳಿ ಶಿಶುಗಳು ಮೃತ್ಯು
ಅವಳಿ ಮಕ್ಕಳ ಹೆರಿಗೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿದರೆ ವೈದ್ಯರೇ ಇರಲಿಲ್ಲ: ಕುಟುಂಬಸ್ಥರ ಆರೋಪ
ವಿಜಯನಗರ/ ಹೊಸಪೇಟೆ: ನಗರದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವಳಿ ನವಜಾತ ಶಿಶುಗಳು ಬುಧವಾರ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.
ಹಗರಿಬೊಮ್ಮನಹಳ್ಳಿಯ ಪರ್ವೀನ್ ಬಾನು ಎಂಬ ಮಹಿಳೆಯನ್ನು ಹಗರಿಬೊಮ್ಮನಹಳ್ಳಿಯ ಸರ್ಕಾರಿ ಆಸ್ಪತ್ರೆಯಿಂದ ಅವಳಿ ಮಕ್ಕಳಿರುವ ಕಾರಣ ಶಸ್ತ್ರಚಿಕಿತ್ಸೆಗೆ “ಅನೆಸ್ತೇಷಿಯಾ ವೈದ್ಯರು ಇಲ್ಲ” ಎಂದು ಹೇಳಿ ಹೊಸಪೇಟೆಯ ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿತ್ತು.
ಆಸ್ಪತ್ರೆ ತಲುಪುತ್ತಿದ್ದಂತೆ, ಗರ್ಭಿಣಿಗೆ ಹೊಟ್ಟೆ ನೋವು ಹೆಚ್ಚಾಯಿತು. ಆದರೆ ಅಲ್ಲಿನ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿರಲಿಲ್ಲ. ಶಸ್ತ್ರ ಚಿಕಿತ್ಸೆಗಾಗಿ ಇಲ್ಲಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರೂ ಸಿಬ್ಬಂದಿಗಳು ಸಾಮಾನ್ಯ ಹೆರಿಗೆ ಆಗುತ್ತದೆ ಎಂದೇ ಸತಾಯಿಸಿದರು. ವೈದ್ಯರು ಆಸ್ಪತ್ರೆಯಲ್ಲಿ ಇರಲೇ ಇಲ್ಲ. ಕರ್ತವ್ಯದಲಿದ್ದ ನರ್ಸ್ಗಳಿಗೆ ವೈದ್ಯರು ಫೋನ್ ಮೂಲಕ ಸೂಚನೆ ನೀಡುತ್ತಿದ್ದರು ಎಂದು ಪರ್ವೀನ್ ಅವರ ತಂದೆ ಅಲ್ಲಾ ಭಕ್ಷಿ ಆರೋಪಿಸಿದ್ದಾರೆ.
ಮಧ್ಯಾಹ್ನ 1.30ರ ಸುಮಾರಿಗೆ ನಾವು ಆಸ್ಪತ್ರೆಗೆ ತಲುಪಿದ್ದೆವು. ರಾತ್ರಿ 7.30 ಗಂಟೆಯ ನಂತರ ವೈದ್ಯರು ಇಲ್ಲದ ಕಾರಣ ಸಿಬ್ಬಂದಿ “ಸ್ಕ್ಯಾನಿಂಗ್ ಮಾಡಿ ರಿಪೋರ್ಟ್ ತರುವಂತೆ” ತಿಳಿಸಿದ್ದು, ರಿಪೋರ್ಟ್ ಬಂದ ಬಳಿಕವೂ ವೈದ್ಯರು “ನಾನು ಬ್ಯುಸಿ, ನಾರ್ಮಲ್ ಡೆಲಿವರಿ ಆಗುತ್ತದೆ” ಎಂದಷ್ಟೇ ಹೇಳಿ ತುರ್ತು ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಲಿಲ್ಲ. ನಿರ್ಲಕ್ಷ್ಯ ತೋರಿದರು ಎಂದು ಅವರು ಹೇಳಿದ್ದಾರೆ.
ಅಂತಿಮವಾಗಿ ರಾತ್ರಿ 11 ಗಂಟೆಗೆ ತರಾತುರಿಯಲ್ಲಿ ಸ್ಟಾಫ್ ನರ್ಸ್ ಗಳೇ ಸಾಮಾನ್ಯ ಹೆರಿಗೆ ಮಾಡಿಸಿದಾಗ ಒಂದು ಮಗು ಜನಿಸಿದ ತಕ್ಷಣ ಮೃತಪಟ್ಟಿದ್ದು, ಮತ್ತೊಂದು ಮಗು ಕೊಪ್ಪಳದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿತು ಎಂದು ಅಲ್ಲಾ ಭಕ್ಷಿ ಘಟನೆಯನ್ನು ವಿವರಿಸಿದರು.
ನವಜಾತ ಅವಳಿ ಶಿಶುಗಳು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದು, ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.