ವಿಜಯನಗರ| ಉಚ್ಚಂಗಿದುರ್ಗ ಕೋಟೆ ಕ್ಯಾಂಪ್ ಬಳಿ ಪುರಾತನ ಕಾಲದ ಬಾವಿ ಪತ್ತೆ
ಹರಪನಹಳ್ಳಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಉಚ್ಚಂಗಿದುರ್ಗ ಕೋಟೆ ಕ್ಯಾಂಪ್ ಬಳಿ ಪುರಾತನ ಕಾಲದ ಬಾವಿ ಪತ್ತೆಯಾಗಿದೆ.
ಗ್ವಾಲಿಯರ್ ಖ್ಯಾತಿಯ ಕೋಟೆಗೆ ತೆರಳುವ ಮಾರ್ಗದ ದುರಸ್ತಿ ಕಾರ್ಯ ನಡೆಸುವಾಗ ಏಕಾಏಕಿ ವಾಹನದ ಚಕ್ರಗಳು ಕುಸಿದಿದೆ. ಸ್ಥಳದಲ್ಲಿ ಹೆಚ್ಚಿನ ಪರಿಶೀಲನೆ ನಡೆಸಿದಾಗ ಪುರಾತನ ರಸ್ತೆಯಡಿ ಪುರಾತನ ಕಾಲದ ಬಾವಿ ಪತ್ತೆಯಾಗಿದೆ. ಬಾವಿಯು 20 ಅಡಿಯಷ್ಟು ಅಳವಾಗಿದ್ದು, ಬಾವಿಗೆ ಅಡ್ಡವಾಗಿ ಕಲ್ಲುಗಳು ಇವೆ. ಮೇಲ್ನೋಟಕ್ಕೆ ಬಾವಿಯಂತೆ ಗೋಚರವಾಗುತ್ತಿದ್ದರೂ ಅಗೆವು ಅಥವಾ ಟಂಕಸಾಲೆಯಂತೆ ಕಾಣುತ್ತಿದೆ.
ಹಿಂದೆ ಕೋಟೆ ಬೀದಿಯಲ್ಲಿ ಗ್ರಾಮವೊಂದಿತ್ತು. ರಾಜರು ಆಳ್ವಿಕೆ ಕಾಲದಲ್ಲಿ ಪ್ರತಿ ಸಮುದಾಯಕ್ಕೊಂದು ಕುಡಿಯುವ ನೀರಿನ ಬಾವಿ ಕೊರೆಯಲಾಗಿತ್ತು. ಪ್ರಸ್ತುತ ಒಂದೆರಡು ಬಾವಿಯನ್ನು ಹೊರತು ಪಡಿಸಿದರೆ, ಹಲವು ಬಾವಿಗಳು ಮುಚ್ಚಲ್ಪಟ್ಟಿವೆ. ಅವುಗಳ ಉತ್ಖನನದ ಕುರಿತು ಅಧ್ಯಯನ ನಡೆಯಬೇಕು' ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕೋಟೆಯ ಸುತ್ತಲೂ ಹಲವು ದೇವಾಲಯಗಳು, ಬಾವಿಗಳು ಪುರಾತತ್ವ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿ ನಶಿಸಿಹೋಗಿವೆ. ಹಿರಿಯರು ನೀಡಿದ ಬಳುವಳಿಯನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಸಮಗ್ರ ಉತ್ಖನನ ಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡ ಸುರೇಶ್ ಒತ್ತಾಯಿಸಿದರು.