ವಿಜಯನಗರ | ಸಹಾಯ ಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನ
ವಿಜಯನಗರ (ಹೊಸಪೇಟೆ) : 2025-26ನೇ ಸಾಲಿನ ಹೂವಿನಹಡಗಲಿ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(ಹನಿ ನೀರಾವರಿ), ಯಂತ್ರೋಪಕರಣ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಹಣ್ಣು(ಬಾಳೆ), ಹೈಬ್ರಿಡ್ ತರಕಾರಿಗಳ ಪ್ರದೇಶ ವಿಸ್ತರಣೆ ಮತ್ತು ಹೂವು ಪ್ರದೇಶ ವಿಸ್ತರಣೆ (ಕತ್ತರಿಸಿದ ಹೂ, ಗಡ್ಡೆ ಜಾತಿಯ ಹೂ, ಬಿಡಿ ಹೂ) ವೈಯಕ್ತಿಕ ಕೃಷಿಹೊಂಡ, ಸಣ್ಣ ಟ್ರಾಕ್ಟರ್, ಪಾಲಿಹೌಸ್, ನೆರಳು ಪರದೆ, ಈರುಳ್ಳಿ ಶೇಖರಣಾ ಘಟಕ, ಎರೆಹುಳು ಘಟಕ, ಜೇನುಪೆಟ್ಟಿಗೆ, ಪ್ಲಾಸ್ಟಿಕ್ ಮಲ್ಚಿಂಗ್, ಮಾವು ಪುನಃಶ್ಚೇತನ, ಘಟಕಗಳಿಗೆ ರೈತರಿಗೆ ಸಹಾಯ ಧನ ಸೇರಿದಂತೆ ಹನಿ ನೀರಾವರಿ ಯೋಜನೆಯಡಿ ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಹನಿ ನೀರಾವರಿ ಸಹಾಯಧನ ಸೌಲಭ್ಯ ಇರುತ್ತದೆ.
ಯಂತ್ರೋಪಕರಣಗಳ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳಿಗೆ ಸಹಾಯಧನ ಸೌಲಭ್ಯ ಇರುತ್ತದೆ. ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ರೈತರು ಸ್ವಂತ ಜಮೀನು ಮತ್ತು ನೀರಾವರಿ ಸೌಲಭ್ಯ ಹೊಂದಿರಬೇಕು. ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಗಣಕೀಕೃತ ಬೆಳೆ ದೃಢೀಕರಣ ಪತ್ರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಪಾಸ್ ಬುಕ್ ಗಳನ್ನು ಹೊಂದಿರಬೇಕು. (ಎಪ್ಐಡಿ ಸಂಖ್ಯೆ ಹೊಂದಿರಬೇಕು) ಪರಿಶಿಷ್ಟ ಜಾತಿ ಶೇ.17, ಪರಿಶಿಷ್ಟ ಪಂಗಡ ಶೇ.7, ಮಹಿಳೆ ಶೇ.33, ಅಲ್ಪಸಂಖ್ಯಾತರು ಶೇ.5 ಹಾಗೂ ಅಂಗವಿಕಲರಿಗೆ ಶೇ.3 ರಂತೆ ಮೀಸಲಾತಿಗೆ ಆದ್ಯತೆ ನೀಡಲಾಗುವುದು.
ಅರ್ಜಿಗಳನ್ನು ಹಡಗಲಿ, ಇಟ್ಟಿಗಿ ಮತ್ತು ಹಿರೇಹಡಗಲಿ ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಹೂವಿನಹಡಗಲಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.