ವಿಜಯನಗರ | ಜನರ ಆರೋಗ್ಯ ಸಮಸ್ಯೆಯ ಕುರಿತು ಎಚ್ಚರ ವಹಿಸಿ : ಡಾ.ಬಿ.ಜಿ ರವಿಕುಮಾರ್
ವಿಜಯನಗರ : ತಾಲೂಕಿನ ಹಿರೇಮೇಗಳಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆರೈಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಪ್ರೀತಿ ಆರೋಗ್ಯ ಟ್ರಸ್ಟ್ ಇದರ ಸಂಯುಕ್ತಾಶ್ರಯದಲ್ಲಿ ಗುರುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ 500 ಹೆಚ್ಚಿನ ಹೊರ ರೋಗಿಗಳಿಗೆ ತಪಾಸಣೆ ನಡೆಸಿ ಔಷಧ ವಿತರಿಸಲಾಯಿತು. ಹೃದಯರೋಗ, ನರರೋಗ, ಮೂತ್ರಪಿಂಡ, ಕ್ಯಾನ್ಸರ್, ಕೀಲು, ಮೂಳೆ, ಚರ್ಮರೋಗ, ಕಿಡ್ನಿ ಸಮಸ್ಯೆ, ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುವವರು ಶಿಬಿರದಲ್ಲಿ ಭಾಗವಹಿಸಿದ್ದರು.
ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ಬಿ.ಜಿ ರವಿಕುಮಾರ್ ಮಾತನಾಡಿ, ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಅಗತ್ಯ ಇರುವ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು. 1 ರಿಂದ 10ನೇ ತರಗತಿ ಓದುತ್ತಿರುವ ಮಕ್ಕಳಿಗೆ ಹೃದಯ ಸಮಸ್ಯೆ ಕಂಡುಬಂದಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಮುನಾ ನಾಯ್ಕ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚೆಚ್ಚು ಶಿಬಿರಗಳು ಆಯೋಜನೆಗೊಂಡರೆ, ಅನಾರೋಗ್ಯ ಮುಕ್ತ ಗ್ರಾಮವನ್ನಾಗಿಸಲು ಸಾಧ್ಯ. ವೈದ್ಯರು, ಸಂಘ ಸಂಸ್ಥೆಗಳು ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು' ಎಂದರು.
ಈ ಸಂದರ್ಭದಲ್ಲಿ ಮುಖಂಡ ಕೆ.ಪರಶುರಾಮಪ್ಪ, ಅಂಜಿನಪ್ಪ ಗ್ರಾಮ ಪಂಚಾಯತಿ ಸಿಬ್ಬಂದಿ ಮಂಜುನಾಥ್, ರಮೇಶ್, ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.