ವಿಜಯನಗರ | ದೇವದಾಸಿ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಆದ್ಯತೆ : ಜಿ.ಪದ್ಮಾವತಿ
ವಿಜಯನಗರ (ಹೊಸಪೇಟೆ): ಜಿಲ್ಲೆಯ ಮಾಜಿ ದೇವದಾಸಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಯಾರೂ ಹೊರತಾಗದೆ ಸಮೀಕ್ಷೆಯಲ್ಲಿ ಸೇರಿಕೊಳ್ಳುವಂತೆ ಅಧಿಕಾರಿಗಳು ಸಮನ್ವಯತೆಯಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಸೂಚಿಸಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ದೇವದಾಸಿ ಮಕ್ಕಳ ಶಿಕ್ಷಣಕ್ಕಾಗಿ 70 ಲಕ್ಷ ರೂ. ಅನುದಾನ ಕಲ್ಪಿಸಲಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ನಿಗಮದ ಮೂಲಕ ಆರ್ಥಿಕ ನೆರವು ಒದಗಿಸಲಾಗುತ್ತದೆ. ದೇವದಾಸಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಗಳಿಸಬೇಕು ಎಂಬುದು ಸರ್ಕಾರದ ಆಶಯ ಎಂದು ಅವರು ಹೇಳಿದರು.
ಸೆ.15ರಿಂದ ಆರಂಭವಾಗಿ 45 ದಿನಗಳ ಅವಧಿಯಲ್ಲಿ ನಡೆಯುತ್ತಿರುವ ಸಮೀಕ್ಷೆ ಕಾರ್ಯಕ್ಕೆ ಉಪನಿರ್ದೇಶಕರು, ಶಿಶು ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಬ್ಯಾಂಕುಗಳು ಸಾಲ ವಿತರಣೆಯಲ್ಲಿ ಅಸಮರ್ಪಕವಾಗಿ ವರ್ತಿಸಬಾರದು, ಫಲಾನುಭವಿಗಳಿಗೆ ತೊಂದರೆ ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಮಾತನಾಡಿದರು.
ಸಭೆಯಲ್ಲಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಅಕ್ಕಮಹಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕಿ ಎಸ್. ಶ್ವೇತಾ, ಜಿಲ್ಲಾ ನಿರೂಪಣಾಧಿಕಾರಿ ಹೆಚ್. ಮುದುಕಪ್ಪ, ನಿಗಮದ ಅಭಿವೃದ್ಧಿ ನಿರೀಕ್ಷಕಿ ಸುಧಾ ಚಿದ್ರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.