×
Ad

ವಿಜಯನಗರ | ಜಿಲ್ಲಾ ನೀರು, ನೈರ್ಮಲ್ಯ ಮಿಷನ್ ಸಭೆ

Update: 2025-06-20 22:01 IST

ವಿಜಯನಗರ(ಹೊಸಪೇಟೆ) : ಆರೋಗ್ಯ ಹಿತದೃಷ್ಟಿಯಿಂದ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕ, ಜಲಜೀವನ್ ಮಿಷನ್ ನಿಂದ ಪೂರೈಕೆಯಾಗುವ ನೀರನ್ನು ಕಡ್ಡಾಯವಾಗಿ ಕುಡಿಯಲು ಬಳಸಬೇಕು ಎಂದು ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮುಹಮ್ಮದ್ ಅಕ್ರಂ ಅಲಿ ಷಾ ಹೇಳಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇಸಿಗೆ ಮುಗಿದು ಮಳೆಗಾಲ ಆರಂಭವಾದ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಮುಂಜಾಗೃತ ಕ್ರಮಗಳನ್ನು ಪಾಲಿಸಬೇಕಿದೆ. ಈ ವೇಳೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆರೋಗ್ಯ ಹಿತದೃಷ್ಟಿಯಿಂದ ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಗಮನವಿರಲಿ. ಮನೆಗಳಲ್ಲಿ ಬಳಸುವ ನೀರಿನ ಮೂಲಗಳು ಬಾವಿ, ಕೊಳವೆ ಬಾವಿ, ಸಂಗ್ರಹ ಟ್ಯಾಂಕ್‌ಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ. ಕುಡಿಯುವ ನೀರನ್ನು ಆರ್‌ಓ ಪ್ಲಾಂಟ್‌ಗಳು ಹಾಗೂ ಜಲ ಜೀವನ್ ಮಿಷನ್‌ನಲ್ಲಿ ಪೂರೈಕೆಯಾಗುತ್ತಿರುವ ನೀರನ್ನು ಕಡ್ಡಾಯವಾಗಿ ಕುಡಿಯಬೇಕು ಎಂದರು.

ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖ ಗೌಡ ಮಾತನಾಡಿ, ಹಂಪಿಯ ಎಂ.ಪಿ.ಪ್ರಕಾಶ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಗೆ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಸದ್ಯದಲ್ಲಿ ವಿದ್ಯುತ್ ಸಂಪರ್ಕವಿದ್ದಾಗ ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ. ವಿದ್ಯುತ್ ವ್ಯತ್ಯಯವಾದಲ್ಲಿ ನೀರು ಸರಬರಾಜು ಮಾಡಲು ಸಮಸ್ಯೆಯಾಗಿದೆ. ಹಂಪಿ ಪ್ರಾಧಿಕಾರದಿಂದ ಟ್ಯಾಂಕ್ ನಿರ್ಮಾಣಕ್ಕೆ ಅನುಮತಿ ನೀಡಲು ಒಪ್ಪಲಾಗಿದೆ. ಶೀಘ್ರವೇ ಅನುದಾನ ನೀಡಿ ಭೂಮಿಪೂಜೆ ನೆರವೇರಿಸುವಂತೆ ತಿಳಿಸಿದರು.

ಈ ವೇಳೆ ಬೈಲುವದ್ದಿಗೇರಿ ಗ್ರಾಪಂ ಅಧ್ಯಕ್ಷೆ ಜೆ.ಲಕ್ಷ್ಮೀ ದೇವಿ, ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಜಿಲ್ಲಾ ಕಾರ್ಯಪಾಲಕ ಅಭಿಯಂತರರಾದ ದೀಪಾ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ, ಜಿಲ್ಲಾ ಬುಡಕಟ್ಟು ಕಲ್ಯಾಣ ಅಧಿಕಾರಿ ರವಿಕುಮಾರ್, ಜಿಲ್ಲಾ ಐಸಿಡಿಎಸ್ ಅಧಿಕಾರಿ ಸುಭದ್ರ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News