ವಿಜಯನಗರ | ಅಟಲ್‌ಜೀ ಮೃಗಾಲಯದಲ್ಲಿ ಹೆಣ್ಣು ಹುಲಿ ಸಾವು
Update: 2025-06-19 20:31 IST
ವಿಜಯನಗರ : ಹೊಸಪೇಟೆ ತಾಲೂಕಿನ ಕಮಲಾಪುರದ ಶ್ರೀಅಟಲ್ ಬಿಹಾರಿ ವಾಜಪೇಯಿ ಝಿಯೋಲಾಜಿಕಲ್ ಪಾರ್ಕ್ ಮೃಗಾಲಯದಲ್ಲಿನ ‘ದೇವಿ’ ಎಂಬ ಹೆಸರಿನ ಹೆಣ್ಣು ಹುಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ ಎಂದು ಉಪಸಂರಕ್ಷಣಾಧಿಕಾರಿ ಹಾಗೂ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜೇಶ್ ನಾಯ್ಕ ತಿಳಿಸಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷದಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಹೆಣ್ಣು ಹುಲಿಯನ್ನು ಚಿಕಿತ್ಸೆಗಾಗಿ ಶ್ರೀಅಟಲ್ ಬಿಹಾರಿ ವಾಜಪೇಯಿ ಝಿಯೋಲಾಜಿಕಲ್ ಪಾರ್ಕ್ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಮೃಗಾಲಯದಲ್ಲಿರುವ ರಕ್ಷಣಾ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ನೀಡಿದ ಕಾರಣ ಹುಲಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು. ಆದರೆ ಈಗ ವಯೋಸಹಜವಾಗಿ ಮೃತಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹುಲಿಗೆ ಅಂದಾಜು 18 ರಿಂದ 19 ವರ್ಷ ವಯಸ್ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.