×
Ad

ವಿಜಯನಗರ | ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ

ರಾಣಿ ಚೆನ್ನಮ್ಮ ಮಹಿಳಾ ಸಮುದಾಯಕ್ಕೆ ದೊಡ್ಡ ಪ್ರೇರಣಾ ಶಕ್ತಿ : ಡಿಸಿ ಕವಿತಾ ಎಸ್.ಮನ್ನಿಕೇರಿ

Update: 2025-10-23 19:35 IST

ವಿಜಯನಗರ (ಹೊಸಪೇಟೆ) : ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ದೇಶದ ಸ್ವಾತಂತ್ರ್ಯಕ್ಕಾಗಿ ವೀರರನ್ನು ಪ್ರೇರೇಪಿಸಿದ ಮೊದಲ ಮಹಿಳಾ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ ಮತ್ತು ಸಾಹಸ ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಣಿ ಚೆನ್ನಮ್ಮ ಇಂದಿಗೂ ಮಹಿಳಾ ಸಮುದಾಯಕ್ಕೆ ದೊಡ್ಡ ಪ್ರೇರಣಾ ಶಕ್ತಿ ಆಗಿದ್ದಾರೆ. ಅವರ ಧೃಡ ನಿರ್ಧಾರ ಮತ್ತು ಹೋರಾಟದ ಮನೋಭಾವ ಪ್ರತಿಯೊಬ್ಬ ಮಹಿಳೆಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸ್ಫೂರ್ತಿ ನೀಡುತ್ತದೆ ಎಂದು ಅವರು ಹೇಳಿದರು.

ಪುರುಷ ಪ್ರಧಾನ ಸಮಾಜದಲ್ಲಿಯೂ ಅವರು ದಕ್ಷತೆಯಿಂದ ರಾಜ್ಯಭಾರ ನಡೆಸಿ ಜನರ ಹಿತಾಸಕ್ತಿಯನ್ನು ಕಾಪಾಡಿದ್ದರು. ಮಹಿಳೆಯರು ಆಡಳಿತ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಯಶಸ್ವಿ ನಾಯಕರಾಗಬಹುದು ಎಂಬುದನ್ನು ಚೆನ್ನಮ್ಮ ಸಾಬೀತುಪಡಿಸಿದ್ದಾರೆ. ಚಿಕ್ಕಂದಿನಲ್ಲಿಯೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆ ಕೌಶಲ್ಯಗಳಲ್ಲಿ ಅವರು ನಿಪುಣರಾಗಿದ್ದರು. ಇಂದಿನ ಹೆಣ್ಣುಮಕ್ಕಳೂ ಸ್ವಯಂರಕ್ಷಣಾ ಕೌಶಲ್ಯ ಕಲಿಯಲು ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ. ತಿಮ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ್, ಪ್ರಧಾನ ಕಾರ್ಯದರ್ಶಿ ನೀಲಕಂಠ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಿಚಡಿ ಕೊಟ್ರೇಶ್, ಮಧುರಚನ್ನಶಾಸ್ತ್ರಿ, ರವಿಶಂಕರ್, ಶರಣುಸ್ವಾಮಿ, ಎಲ್. ಬಸವರಾಜ್, ಸೋಮಶೇಖರ್, ಶಿವಶಂಕರ್, ಅಶ್ವಿನ್ ಕೊತ್ತಂಬರಿ, ಶಿವಪುತ್ರಪ್ಪ, ಕಾಶಿನಾಥಯ್ಯ, ಚಿತ್ತಪ್ಪ, ಮಲ್ಲಿಕಾರ್ಜುನ ಮೆಟ್ರಿ, ವಿಶ್ವನಾಥ್, ಗೌಳಿ ರುದ್ರಪ್ಪ, ಮಲ್ಲೇಶಪ್ಪ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News