×
Ad

ವಿಜಯನಗರ | ನ.3 ರಿಂದ ನ.19 ರವರೆಗೆ ಕುಷ್ಠರೋಗ ಪತ್ತೆಹಚ್ಚುವ ಆಂದೋಲನ ಕಾರ್ಯಾರಂಭ

Update: 2025-10-24 20:21 IST

ವಿಜಯನಗರ (ಹೊಸಪೇಟೆ): ನವೆಂಬರ್ 3ರಿಂದ 19ರವರೆಗೆ ನಡೆಯಲಿರುವ ಕುಷ್ಠರೋಗ ಪತ್ತೆಹಚ್ಚುವ ಆಂದೋಲನಕ್ಕಾಗಿ ಜಿಲ್ಲೆಯಲ್ಲಿ 624 ತಂಡಗಳನ್ನು ರಚಿಸಲಾಗಿದ್ದು, ಒಟ್ಟು 1,74,693 ಮನೆಗಳನ್ನು 14 ದಿನಗಳಲ್ಲಿ ಸಮೀಕ್ಷೆ ಮಾಡುವ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರನಾಯ್ಕ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಚರ್ಮದ ಮೇಲೆ ಮಚ್ಚೆಗಳು, ತಿಳಿಬಿಳಿ ಅಥವಾ ತಾಮ್ರ ಬಣ್ಣದ ಚುಕ್ಕೆಗಳು, ಸ್ಪರ್ಶಜ್ಞಾನ ಕಳೆದುಕೊಳ್ಳುವ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಕುಷ್ಠರೋಗ ಪತ್ತೆಗೆ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಧಿಕಾ.ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 76 ಕುಷ್ಠರೋಗ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಹುತೇಕವು ಆರಂಭಿಕ ಹಂತದಲ್ಲೇ ಪತ್ತೆಯಾಗಿವೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಅಂಗವೈಕಲ್ಯ ತಡೆಗಟ್ಟುವತ್ತ ಹೆಚ್ಚು ಗಮನ ಹರಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಕುಷ್ಠರೋಗ ನಿಯಂತ್ರಣಕ್ಕೆ ವರ್ಧಿತ ಕಾರ್ಯತಂತ್ರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕುಷ್ಠರೋಗ ಪತ್ತೆ ಆಂದೋಲನದ ಪೋಸ್ಟರ್ ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ ಮಾತನಾಡಿ, ತಂಬಾಕುಮುಕ್ತ ಯುವ ಅಭಿಯಾನ 3.0 ಪ್ರಾರಂಭವಾಗಿದ್ದು, ದೇಶದಲ್ಲಿ ಪ್ರತಿ ವರ್ಷ 13.5 ಲಕ್ಷ ಸಾವುಗಳು ತಂಬಾಕು ಬಳಕೆಯಿಂದ ಸಂಭವಿಸುತ್ತಿವೆ ಎಂದು ತಿಳಿಸಿದರು.

2003ರ ತಂಬಾಕು ನಿಯಂತ್ರಣ ಕಾಯ್ದೆಯ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮತ್ತು ಶಿಕ್ಷಣ ಸಂಸ್ಥೆಗಳ 100 ಮೀಟರ್ ಒಳಗೆ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಬಳ್ಳಾರಿ ಜಿಲ್ಲಾ ವೈದ್ಯಾಧಿಕಾರಿ ಡಾ. ಶ್ರೀಧರ.ಬಿ ಮಾತನಾಡಿ, ಭಾರತ ಸರ್ಕಾರವು 2026ರೊಳಗೆ ದಡಾರ ಮತ್ತು ರುಬೆಲ್ಲಾ ಮುಕ್ತ ರಾಷ್ಟ್ರವಾಗುವ ಗುರಿ ಹೊಂದಿದೆ. ಈ ವೈರಾಣುಗಳು ಕೆಮ್ಮು, ಸೀನುವ ಮೂಲಕ ಹರಡುತ್ತವೆ. ದಡಾರದಿಂದ ನ್ಯೂಮೋನಿಯಾ, ಮೆದುಳಿನ ಸೋಂಕು ಮುಂತಾದ ಗಂಭೀರ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಸಿದರು.

ರುಬೆಲ್ಲಾ ರೋಗವು ಗರ್ಭಿಣಿಯರಲ್ಲಿ ಕಂಡುಬಂದರೆ ಹುಟ್ಟುವ ಮಕ್ಕಳಲ್ಲಿ ಕಣ್ಣು, ಕಿವಿ, ಮೆದುಳು ಹಾಗೂ ಹೃದಯ ಸಂಬಂಧಿ ಅಸ್ವಸ್ಥತೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ವೈದ್ಯರು ಹೆಚ್ಚಿನ ಜಾಗೃತಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ಕೆ. ತಿಮ್ಮಪ್ಪ, ಆರ್‌ಸಿಹೆಚ್ ಅಧಿಕಾರಿ ಜಂಬಯ್ಯ, ಡಾ. ಹರಿಪ್ರಸಾದ್, ಡಾ. ಭಾಸ್ಕರ್, ಹಾಗೂ ತಾಲೂಕು ವೈದ್ಯಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News