ವಿಜಯನಗರ | ಜಿಲ್ಲಾ ನ್ಯಾಯಾಲಯದಲ್ಲಿ ಜನರಿಗೆ ಪಾರದರ್ಶಕ ನ್ಯಾಯ ತ್ವರಿತವಾಗಿ ಸಿಗಲಿ : ಆರ್.ನಟರಾಜ್
ವಿಜಯನಗರ (ಹೊಸಪೇಟೆ) : ನಾಗರಿಕರಿಗೆ ಪ್ರಾಮಾಣಿಕ ಮತ್ತು ಪಾರದರ್ಶಕ ನ್ಯಾಯ ಸೇವೆ ನೀಡಲು ನ್ಯಾಯಾಲಯಗಳು ಸದಾಕಾಲ ಕಾರ್ಯನಿರ್ವಹಿಸುತ್ತವೆ ಎಂದು ಹೈಕೋರ್ಟ್ ನ್ಯಾ.ಆರ್.ನಟರಾಜ್ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ, ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಹೊಸಪೇಟೆ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೂತನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶರ ನ್ಯಾಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನ್ಯಾಯಾಲಯವನ್ನು ಅರಸಿ ಬರುವ ಕಕ್ಷಿದಾರರಿಗೆ ನ್ಯಾಯದ ಪ್ರಾಮಾಣಿಕ ಸೇವೆ ಮತ್ತು ಪಾರದರ್ಶಕ ಸೇವೆ ನೀಡಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ನಾಲ್ಕು ವರ್ಷದ ನಂತರ ಆರಂಭವಾಗುತ್ತಿರುವ ನ್ಯಾಯಾಲಯವು ಸ್ಥಳೀಯರಿಗೆ ಅತ್ಯಂತ ಅನುಕೂಲವಾಗಲಿದೆ. ನ್ಯಾಯಾಲಯದ ಮಹತ್ವ, ಸಂವಿಧಾನದ ಪ್ರಾಮುಖ್ಯತೆ ಹಾಗೂ ವಕೀಲರ ಸೇವೆಯ ಬಗ್ಗೆ ಅವರು ವಿವರಿಸಿದರು.
ವಕೀಲರು ತಮ್ಮ ಜೀವನದ ಅರ್ಧಭಾಗವನ್ನು ನ್ಯಾಯಾಲಯದಲ್ಲಿ ಕಳೆಯುತ್ತಾರೆ. ಅವರ ಪ್ರಾಮಾಣಿಕ ಕಾರ್ಯದಿಂದ ಕಕ್ಷಿದಾರರಿಗೆ ನ್ಯಾಯ ದೊರಕುತ್ತದೆ ಎಂದರು.
ಗುವಾಹಟಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ. ಶ್ರೀಧರರಾವ್ ಹೊಸಪೇಟೆಯಲ್ಲಿ ವಕೀಲ ವೃತ್ತಿ ನಡೆಸಿದ್ದ ಅನುಭವವನ್ನು ಹಂಚಿಕೊಂಡರು.
ಉದ್ಘಾಟನೆ ಸಂದರ್ಭದಲ್ಲಿ ನೂತನ ಕಟ್ಟಡಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಜಿ. ಶಾಂತಿ, ರಾಜ್ಯ ವಕೀಲರ ಪರಿಷತ್ ಸದಸ್ಯ ಜೆ.ಎಂ. ಅನಿಲ್ ಕುಮಾರ್, ಬಾರ್ ಕೌನ್ಸಿಲ್ ರಾಜ್ಯ ಸದಸ್ಯ ಕೆ. ಕೋಟೇಶ್ವರ ರಾವ್, ವಿಜಯನಗರ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಪಿ. ಕುಮಾರಸ್ವಾಮಿ, ಸಂಸದ ಇ. ತುಕಾರಾಂ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ. ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ಪಿ. ಶ್ರೀನಿವಾಸಮೂರ್ತಿ, ಲೋಕೋಪಯೋಗಿ ಇಲಾಖೆ ಇಇ ಟಿ. ದೇವದಾಸ್ ಉಪಸ್ಥಿತರಿದ್ದರು.