ವಿಜಯನಗರ | ನಾರಾಯಣ ಗುರುಗಳು ಒಂದು ಜಾತಿ, ಧರ್ಮಕ್ಕೆ ಸಿಮೀತರಾದವರಲ್ಲ : ಪಿ.ವಿವೇಕಾನಂದ
ಬ್ರಹ್ಮಶ್ರೀ ನಾರಾಯಣಗುರು ಜಯಂತಿ
ವಿಜಯನಗರ ( ಹೊಸಪೇಟೆ) : ಶಿಕ್ಷಣ, ಸಮಾನತೆ, ಸಮಾಜ ಸುಧಾರಣೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರೂಜೀ ಅಪ್ರತಿಮ ಸಮಾಜ ಪರಿವರ್ತಕ, ಧಾರ್ಮಿಕ ಚಿಂತಕರು ಆಗಿದ್ದರು ಎಂದು ಹೊಸಪೇಟೆ ಸಹಾಯಕ ಆಯುಕ್ತರಾದ ಪಿ.ವಿವೇಕಾನಂದ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಶ್ರೀನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು.
ಬ್ರಹ್ಮರ್ಷಿ ನಾರಾಯಣ ಗುರುಗಳು ಒಂದು ಜಾತಿ, ಧರ್ಮಕ್ಕೆ ಸಿಮೀತರಾದವರಲ್ಲ. ಇಡೀ ಜಗತ್ತಿನ ಮಾನವ ಕುಲಕ್ಕೇ ಗುರುಗಳು. ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದವರು. ಅವರು ಪ್ರತಿಪಾದಿಸಿದ ತತ್ವವೆಂದರೆ ಜಗತ್ತಿನಲ್ಲಿರುವುದು, ʼಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರುʼ ಎಂಬುದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಮಾತನಾಡಿದರು.
ಆರ್ಯ ಈಡಿಗ ಸಮುದಾಯದ ಜಿಲ್ಲಾಧ್ಯಕ್ಷ ಕೆ.ಚಂದ್ರಶೇಖರ, ಮುಖಂಡ ಯರ್ರಿಸ್ವಾಮಿ, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಇತರರು ಇದ್ದರು.