×
Ad

ವಿಜಯನಗರ | ಪ್ರವಾಸಿ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಸಿ.ದೇವರಾಜ್

Update: 2025-09-27 20:03 IST

ವಿಜಯನಗರ(ಹೊಸಪೇಟೆ ): ಸ್ಥಳೀಯ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಭಕ್ತಿ ಕೇಂದ್ರಗಳ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವೆಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಸಿ.ದೇವರಾಜ್ ಹೇಳಿದರು.

ಅವರು ಹಂಪಿಯ ಶ್ರೀವಿಜಯ ವಿಠಲ ದೇವಸ್ಥಾನದ ಆವರಣದಲ್ಲಿ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಭಾರತೀಯ ಪುರಾತತ್ವ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ವರ್ಷವು ಪ್ರವಾಸೋದ್ಯಮ ಮತ್ತು ಸುಸ್ಥಿರ ಪರಿವರ್ತನೆ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಪ್ರವಾಸೋದ್ಯಮ ಮತ್ತು ಪರಂಪರೆಯನ್ನು ಎರಡು ಮುಖಗಳ ನಾಣಕದಂತೆ ತಾಳಿಕೊಂಡು, ಐತಿಹಾಸಿಕ ಪರಂಪರೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿರಬೇಕು ಎಂದು ಅವರು ಹೇಳಿದರು. ಪ್ರವಾಸೋದ್ಯಮದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎನ್ನುವುದನ್ನೂ ಗಮನಕ್ಕೆ ತಂದರು.

“ಪ್ರವಾಸೋದ್ಯಮಕ್ಕೆ ಹೆಚ್ಚು ಜನರನ್ನು ಆಕರ್ಷಿಸುವ ಕಾರ್ಯವನ್ನು ಇಲಾಖೆ ಹಮ್ಮಿಕೊಳ್ಳುತ್ತಿದೆ. ಪ್ರವಾಸಿ ತಾಣದಲ್ಲಿರುವ ಹೊಟೇಲ್ ಮಾಲೀಕರು, ಹೋಂಸ್ಟೇಗಳು, ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಮುಕ್ತ ಸಹಕಾರ ನೀಡಲಾಗುತ್ತಿದೆ. ಈ ವರ್ಷ ಹಂಪಿಯಲ್ಲಿ 42 ನೂತನ ತಾಣಗಳನ್ನು ಗುರುತಿಸಿ ವೀಕ್ಷಣಾ ಸ್ಥಳಗಳನ್ನು ಹೆಚ್ಚಿಸಲಾಗಿದೆ. ಸ್ಥಳೀಯರಿಂದ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ಅಗತ್ಯವಿದೆ ಎಂದು ಪ್ರವಾಸೋದ್ಯಮ ಉಪನಿರ್ದೇಶಕ ಪ್ರಭುಲಿಂಗ.ಎಸ್. ತಳಕೇರಿ ಹೇಳಿದರು.”

ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನಿ ಕೊತಂಬರಿ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ವಲಯದ ಬಗ್ಗೆ ಜಾಗೃತಿ ಮೂಡಿಸುವುದೇ ದಿನಾಚರಣೆಯ ಮುಖ್ಯ ಉದ್ದೇಶವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರವಾಸಿ ಮಿತ್ರರಿಗೆ, ಉತ್ತಮ ಪ್ರವಾಸಿ ಮಾರ್ಗದರ್ಶಕರಿಗೆ ಪ್ರಮಾಣ ಪತ್ರ ವಿತರಣೆ ನಡೆಸಲಾಯಿತು.

ಹಂಪಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಬ್ರಹ್ಮಕುಮಾರಿ ಈಶ್ವರಿಯ ಸಂಸ್ಥೆಯ ಮಾನಸ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ದೀಪಕ್, ಪುರಾತತ್ವ ಇಲಾಖೆ ಸರ್ವೇಕ್ಷಣಾಧಿಕಾರಿ ರವಿಕುಮಾರ, ಹೆರಿಟೇಜ್ ಮಾಲೀಕ ಪ್ರಸನ್ನ, ಪ್ರವಾಸಿ ಮಾರ್ಗದರ್ಶಕ ಸಂಘದ ಉಪಾಧ್ಯಕ್ಷ ದೇವರಾಜ, ಕಮಲಾಪುರ ಸಾರಿಗೆ ವ್ಯವಸ್ಥಾಪಕಿ ಮಂಜುಳಾ ಸೇರಿದಂತೆ ಹಲವಾರು ಪ್ರವಾಸಿ ಮಾರ್ಗದರ್ಶಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News