×
Ad

ವಿಜಯನಗರ | ಕಮಲಾಪುರ ಪಟ್ಟಣ ಅಭಿವೃದ್ದಿಗೆ 15 ಕೋಟಿ ರೂ. ಅನುದಾನ ಬಿಡುಗಡೆ : ಶಾಸಕ ಹೆಚ್.ಆರ್.ಗವಿಯಪ್ಪ

ನೂತನ ಪುರಸಭೆ ಕಚೇರಿ ಕಟ್ಟಡ ಲೋಕಾರ್ಪಣೆ

Update: 2025-10-10 18:03 IST

ವಿಜಯನಗರ (ಹೊಸಪೇಟೆ): ಕಮಲಾಪುರ ಪಟ್ಟಣದ ಪುರಸಭೆ ವ್ಯಾಪ್ತಿಯ 21 ವಾರ್ಡುಗಳ ಅಭಿವೃದ್ಧಿಗೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಹೆಚ್.ಆರ್. ಗವಿಯಪ್ಪ ತಿಳಿಸಿದ್ದಾರೆ.

ತಾಲೂಕಿನ ಕಮಲಾಪುರ ಪುರಸಭೆ ಆವರಣದಲ್ಲಿ 1.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಪುರಸಭೆ ಕಚೇರಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರತಿ ವಾರ್ಡಿನಲ್ಲೂ ಸಿಸಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಅನುದಾನ ಮಂಜೂರಾಗಿದೆ ಎಂದರು.

ಮಾಸಾಂತ್ಯದೊಳಗೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.

ಹಂಪಿಗೆ ಆಗಮಿಸುವ ಪ್ರವಾಸಿಗರ ಸೌಕರ್ಯಕ್ಕಾಗಿ ಕಮಲಾಪುರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಸ್ ನಿಲ್ದಾಣದ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಳೆಯ ಬಸ್ ನಿಲ್ದಾಣದಲ್ಲಿ ಫುಡ್‌ಕೋರ್ಟ್ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಮಾತನಾಡಿ, ಹೊಸ ಕಚೇರಿ ಕಟ್ಟಡವು ಆಡಳಿತಾತ್ಮಕ ಕಾರ್ಯಗಳಿಗೆ ಸಹಕಾರಿಯಾಗಿದ್ದು, ಸಾರ್ವಜನಿಕ ಸೇವೆ ಸುಧಾರಣೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಈ. ತುಕಾರಾಮ್, ಶಾಸಕಿ ಅನ್ನಪೂರ್ಣ ತುಕಾರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೆಚ್.ಎನ್.ಎಫ್. ಇಮಾಮ್ ನಿಯಾಜಿ, ಪುರಸಭೆ ಅಧ್ಯಕ್ಷೆ ಅಮೀನಾ, ಉಪಾಧ್ಯಕ್ಷ ಹೆಚ್. ಗೋಪಾಲಕೃಷ್ಣ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News