×
Ad

ವಿಜಯನಗರ | ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಸಮಾರಂಭ

Update: 2025-10-10 20:12 IST

ವಿಜಯನಗರ : ಭವಿಷ್ಯದ ಪೀಳಿಗೆಗಾಗಿ ಹಸಿರುಕರಣಕ್ಕೆ ಆದ್ಯತೆ ನೀಡಿ ಊರಿಗೊಂದು ಕೆರೆ, ಮನೆಗೊಂದು ಮರ ಎಂಬ ಪರಿಕಲ್ಪನೆಯಲ್ಲಿ ಪ್ರತಿಯೊಬ್ಬರು ಮನೆಗಳ ಮುಂದೆ ಮರ ಬೆಳೆಸಲು ನೀರು ಹಾಕಿ ಪೋಷಣೆ ಮಾಡುವ ಸಂಕಲ್ಪ ಮಾಡಬೇಕಿದೆ ಎಂದು ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.

ಕಾರ್ಯಕ್ರಮವು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲ್ಪಟ್ಟಿತ್ತು.

ಈ ವೇಳೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾಗಾಂಧಿಯ ಪರಿಸರ ಸಂರಕ್ಷಣೆಗೆ ಕೊಡುಗೆಗಳನ್ನು ಸ್ಮರಿಸಿದರು. 1972ರಲ್ಲಿ ವನ್ಯಜೀವಿ ಸಂರಕ್ಷಣೆ ಕಾಯಿದೆ ಜಾರಿಗೆ ತಂದರು, 1974ರಲ್ಲಿ ಜಲ ಕಾಯಿದೆ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದರು. 1980ರಲ್ಲಿ ಅರಣ್ಯ ಕಾಯಿದೆ, 1981ರಲ್ಲಿ ವಾಯು ಮಾಲಿನ್ಯ ನಿವಾರಣೆ ಕಾಯಿದೆ ಜಾರಿಗೆ ಬಂದಿತ್ತು.

ಸಚಿವರು, ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಉಳಿಸುವ ಮಹತ್ವವನ್ನು ವಿವರಿಸಿದರು. ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನವನಗಳು, 5 ಹುಲಿ ಸಂರಕ್ಷಿತ ಪ್ರದೇಶಗಳು, 37 ವನ್ಯಜೀವಿಧಾಮಗಳು, 19 ಮೀಸಲು ಪ್ರದೇಶಗಳು ಇವೆ. ರಾಜ್ಯದಲ್ಲಿ ಒಟ್ಟು 6395 ಆನೆಗಳು ಮತ್ತು 560 ಹುಲಿಗಳು ಇದ್ದು, ಅರಣ್ಯ ಭೂಭಾಗ ರಾಜ್ಯದ ಶೇ.21 ರಷ್ಟು. ಸ್ಥಳೀಯ ನೀರುಮೂಲಗಳ ಸಂರಕ್ಷಣೆ ಮತ್ತು ಕೈಗಾರಿಕೆಗಳ ತ್ಯಾಜ್ಯ ನಿರ್ವಹಣೆ ಕುರಿತು ಅವರು ಮಹತ್ವವನ್ನು ಒತ್ತಿ ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ, 31 ಜಿಲ್ಲೆಗಳಲ್ಲಿ ಸುವರ್ಣ ಮಹೋತ್ಸವದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಹೊಸಪೇಟೆಯಲ್ಲಿ 156 ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ; ಮಾಲಿನ್ಯ ನಿಯಂತ್ರಣ ಹಾಗೂ ನೀರುಮೂಲಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ.

ವಿಜಯನಗರ ಸಂಸದ ಈ.ತುಕಾರಾಮ್ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಿಎಸ್ಆರ್ ಅನುದಾನದಡಿ 8000 ಬಟ್ಟೆ ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಲು ವೇದಿಕೆಯಲ್ಲಿ ಚಾಲನೆ ನೀಡಿದರು. ಕೊಪ್ಪಳ ಸಂಸದ ಕೆ.ರಾಜಶೇಖರ್ ಬಸವರಾಜ ಹಿಟ್ನಾಳ್ ಮತ್ತು ಹೊಸಪೇಟೆ ಶಾಸಕ ಹೆಚ್.ಆರ್. ಗವಿಯಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವೇದಿಕೆಯಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಹೂವಿನಹಡಗಲಿ ಶಾಸಕ ಎಲ್.ಕೃಷ್ಣನಾಯಕ, ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಶ್ರೀನಿವಾಸ ಗುಪ್ತಾ, ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ, ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಶಾ, ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯ ಕಾರ್ಯದರ್ಶಿ ಎಸ್.ಎಸ್.ಲಿಂಗರಾಜ, ವಿಜಯನಗರದ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಪ್ಪಳದ ಪರಿಸರ ಅಧಿಕಾರಿ ಹರಿಶಂಕರ್.ವೈ.ಎಸ್ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯನಗರದ ಪರಿಸರ ಅಧಿಕಾರಿ ಮೀನಾಕ್ಷಿ.ಹೆಚ್.ಎ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News