×
Ad

ವಿಜಯನಗರ | ಸೆ.15 ರಿಂದ ಲಿಂಗತ್ವ ಅಲ್ಪಸಂಖ್ಯಾತರ, ಮಾಜಿ ದೇವದಾಸಿಯರ ಸಮೀಕ್ಷೆ ಕಾರ್ಯ ಆರಂಭ

Update: 2025-09-12 21:40 IST

ವಿಜಯನಗರ(ಹೊಸಪೇಟೆ) : ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಬೇಸ್ ಲೈನ್ ಸರ್ವೆಯಿಂದ ಹೊರ ಉಳಿಯದಂತೆ ಸರಿಯಾಗಿ ಹಾಗೂ ನಿಖರವಾದ ಮಾಹಿತಿ ಸಂಗ್ರಹಿಸಬೇಕು ಎಂದು ಹೊಸಪೇಟೆ ತಹಶೀಲ್ದಾರ್‌ ಶೃತಿ ಎಂ.ಮಳ್ಳಪ್ಪಗೌಡ ಹೇಳಿದರು.

ನಗರದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಕುರಿತು ತಾಲ್ಲೂಕು ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೊಸಪೇಟೆ ತಾಲೂಕಿನಲ್ಲಿ ಮಾಜಿ ದೇವದಾಸಿ ಮಹಿಳೆಯರ ಸಮೀಕ್ಷೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಮೂಲ ಸಮೀಕ್ಷೆಯನ್ನು ಸೆ.15 ರಿಂದ ಆರಂಭವಾಗಿ 45 ದಿನಗಳ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಅದರ ಜತೆಗೆ ದೇವದಾಸಿ ಮಹಿಳೆಯರ ಮರುಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಈ ಹಿಂದೆ 1993-94 ಮತ್ತು 2007-08 ರಲ್ಲಿ ದೇವದಾಸಿ ಮಹಿಳೆಯರ ಸಮೀಕ್ಷೆ ನಡೆಸಿದ್ದು, ಆ ಸಮೀಕ್ಷೆಯಲ್ಲಿ ಮಾಜಿ ದೇವದಾಸಿಯರು ಕೈಬಿಟ್ಟು ಹೋಗಿದ್ದಲ್ಲಿ ಈಗ ನಡೆಯುವ ಮರು ಸಮೀಕ್ಷೆಯಲ್ಲಿ ಸೇರ್ಪಡೆ ಮಾಡಬಹುದು ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಈ ವೇಳೆ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಮ್ ಭಾಷ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ವರಪೇಟಿ, ವೈದ್ಯಾಧಿಕಾರಿ ಡಾ.ವಿನೋದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News