×
Ad

ವಿಜಯನಗರ | ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಸಂಕೇತ : ಬಸವಲಿಂಗ ಮಹಾಸ್ವಾಮೀಜಿ

Update: 2025-10-30 21:15 IST

ವಿಜಯನಗರ (ಹೊಸಪೇಟೆ) : ಸ್ವಾತಂತ್ರ್ಯದ ಪ್ರಥಮ ಮಹಿಳಾ ಹೋರಾಟಗಾರ್ತಿ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಸ್ವಾಭಿಮಾನದ ವ್ಯಕ್ತಿತ್ವವು ಪ್ರತಿಯೊಬ್ಬ ಮಹಿಳೆಗೂ ಮಾದರಿಯಾಗಬೇಕು ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಆರ್ಶಿವಚನದಲ್ಲಿ ಹೇಳಿದರು.

ನಗರದ ಶ್ರೀ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ʼʼವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವʼʼದಲ್ಲಿ ಅವರು ಗುರುವಾರ ಮಾತನಾಡಿದರು.

ರಾಣಿ ಚೆನ್ನಮ್ಮ ಕೇವಲ ಒಂದು ಸಮುದಾಯದ ನಾಯಕಿ ಅಲ್ಲ, ನಾಡಿನ ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ದಿಟ್ಟವಾಗಿ ಹೋರಾಡಿದ ಸಾಹಸಿ ಮಹಿಳೆ. ಅವರ ಧೈರ್ಯ, ಸಾಹಸ, ಮಾನವೀಯತೆ ಮತ್ತು ಸ್ವಾಭಿಮಾನ ಇಂದಿನ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಮೌಲ್ಯಗಳು ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವವರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಉಲ್ಲೇಖಿಸಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ಮಹಿಳೆಯರಲ್ಲಿ ಬೆಳೆಸಬೇಕು. ಕಿತ್ತೂರು ರಾಣಿ ಚೆನ್ನಮ್ಮರು ಆ ಹೋರಾಟದ ಸ್ಫೂರ್ತಿ ಎಂದು ಹೇಳಿದರು.

ಹೊಸಪೇಟೆ ಸಹಾಯಕ ಆಯುಕ್ತ ಪಿ. ವಿವೇಕಾನಂದ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ದೇಶಕ್ಕಾಗಿ ಹೋರಾಡಿದ ವೀರಮಹಿಳೆಯರ ಜೀವನ ಚರಿತ್ರೆ ತಿಳಿಯಬೇಕು. ರಾಣಿ ಚೆನ್ನಮ್ಮರು ನಾಯಕತ್ವದ ಗುಣ ಮತ್ತು ಧೈರ್ಯದ ಪ್ರತೀಕ ಎಂದರು.

ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ ಮಾತನಾಡಿ, ಹೆಣ್ಣುಮಕ್ಕಳು ರಾಣಿ ಚೆನ್ನಮ್ಮರಂತೆ ಧೈರ್ಯ ಮತ್ತು ಹೋರಾಟದ ಮನೋಭಾವ ಹೊಂದಬೇಕು. ಸ್ವಯಂ ರಕ್ಷಣಾ ಕೌಶಲ್ಯಗಳನ್ನು ಕಲಿಯಬೇಕು. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಆದರ್ಶ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಬಳಿಕ ಉಪನ್ಯಾಸಕಿ ಭಾರತಿ ಮಲ್ಲಿಕಾರ್ಜುನ್ ಅವರು ಕಿತ್ತೂರು ರಾಣಿ ಚೆನ್ನಮ್ಮರ ಜೀವನ ಹಾಗೂ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ, ಸದಸ್ಯ ಕೆ. ಮಂಜುನಾಥ, ಪ್ರಮುಖರು ಬಿ. ಚಿತ್ತಪ್ಪ, ಮೆಟ್ರಿ ಮಲ್ಲಿಕಾರ್ಜುನ, ಕೋರಿಶೆಟ್ಟಿ ಲಿಂಗಪ್ಪ, ಸಾಲಿ ಸಿದ್ದಯ್ಯ ಸ್ವಾಮಿ, ಹೆಚ್.ವಿ. ಶರಣಸ್ವಾಮಿ, ಕೆ. ರವಿಶಂಕರ ಸೇರಿದಂತೆ ಹಲವರು ಹಾಜರಿದ್ದರು. ಕಾರ್ಯಕ್ರಮವನ್ನು ಬಿ. ಭುವನ ನಿರ್ವಹಿಸಿದರು.

ಭವ್ಯ ಮೆರವಣಿಗೆ :

ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯಿಂದ ರಾಣಿ ಚೆನ್ನಮ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಸಕರಾದ ಹೆಚ್.ಆರ್.ಗವಿಯಪ್ಪ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಒ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಷಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಪುಷ್ಪನಮನ ಸಲ್ಲಿಸಿದರು.

ಮೆರವಣಿಗೆ ಜಂಬುನಾಥ ರಸ್ತೆ–ಬಳ್ಳಾರಿ ರಸ್ತೆ–ವಡಕರಾಯ ದೇವಸ್ಥಾನ ವೃತ್ತ ಮಾರ್ಗವಾಗಿ ಶ್ರೀ ಕೊಟ್ಟೂರು ಸ್ವಾಮಿ ಮಠದವರೆಗೆ ವಿವಿಧ ವಾದ್ಯಕಲಾ ತಂಡಗಳೊಡನೆ ಅಕರ್ಷಕವಾಗಿ ಸಾಗಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News