ವಿಜಯನಗರ | ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ʼಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾʼ : ತಾಹಿರ್ ಹುಸೇನ್
ವಿಜಯನಗರ (ಹೊಸಪೇಟೆ) : ಹೊಸಪೇಟೆ ವೃತ್ತದಿಂದ ಬೀದರ್ ವರೆಗೆ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾ ಅನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದೆ. ಈ ಜಾಥಾ ಬಳ್ಳಾರಿ ಯಿಂದ ಆರಂಭವಾಗಿದ್ದು, ಹೊಸಪೇಟೆ, ಕೊಪ್ಪಳ ಮೂಲಕ ಕಲಬುರಗಿವರೆಗೆ ನಡೆಯುತ್ತದೆ. ಈ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಸೇರಿದ ಏಳು ಜಿಲ್ಲೆಗಳ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ತಿಳಿಸಿದ್ದಾರೆ.
ಜಾಥಾದ ವೇಳೆ ಮಾತನಾಡಿದ ಅವರು, “ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 78 ವರ್ಷಗಳಾದರೂ ಕಲ್ಯಾಣ ಕರ್ನಾಟಕ ಭಾಗ ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿಯೇ ಉಳಿದಿದೆ. 2013 ರಲ್ಲಿ ಸಂವಿಧಾನದ 98ನೇ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ಸಿಕ್ಕಿದ್ದರೂ, ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ’ ನಿಗಮದ ಮೂಲಕ ಬಿಡುಗಡೆಯಾದ ಸುಮಾರು 25,000 ಕೋಟಿ ಅನುದಾನವು ಜನರ ಕೈಗೆ ತಲುಪಿಲ್ಲ. ಕಾರ್ಮಿಕರಿಗೆ ನ್ಯಾಯ ಸಿಗುತ್ತಿಲ್ಲ, ಯುವಕರಿಗೆ ಉದ್ಯೋಗ ಅವಕಾಶಗಳು ಸೀಮಿತವಾಗಿವೆ, ಆರೋಗ್ಯ ಕೇಂದ್ರಗಳು ಜನಸಂಖ್ಯೆಗೆ ಅನುಗುಣವಾಗಿ ಸ್ಥಾಪನೆಯಾಗಿಲ್ಲ. ಅಪೌಷ್ಟಿಕತೆ, ತಾಯಿ-ಮಗು ಮರಣ, ಉರಿ ಬಿಸಿಲಿನಲ್ಲಿ ಶ್ರಮಿಸುವ ಅನ್ನದಾತರ ಸಮಸ್ಯೆಗಳು ಇನ್ನೂ ಮುಂದುವರಿದಿವೆ. ಹಿಂದುಳಿದ, ಅಲ್ಪಸಂಖ್ಯೆ, ದಲಿತ, ಅಡಿವಾಸಿಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ” ಎಂದು ಅವರು ಆರೋಪಿಸಿದರು.
ಜಾಥಾದ ವೇಳೆ, ಜನರಿಗೆ ಕಲ್ಯಾಣ ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸಲು ಪಕ್ಷ ಬದ್ಧವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಾಬಿಹಾ ಪಟೇಲ್, ಕೃಷ್ಣಾ ರೈತ ಮುಖಂಡರು ಮತ್ತು 371ಜೆ ಹೋರಾಟಗಾರರು ಪಾಲ್ಗೊಂಡಿದ್ದರು.