×
Ad

ವಿಜಯನಗರ | ವಿಶ್ವ ಪ್ರವಾಸೋದ್ಯಮ ದಿನಾಚರಣೆ : ಬೈಕ್ ರ‍್ಯಾಲಿ, ಪಾರಂಪರಿಕ ನಡಿಗೆ ಕಾರ್ಯಕ್ರಮ

Update: 2025-09-27 19:51 IST

ವಿಜಯನಗರ(ಹೊಸಪೇಟೆ): ವಿಶ್ವವಿಖ್ಯಾತ ಹಂಪಿಯ ಪರಂಪರೆ, ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಐತಿಹಾಸಿಕ ವೈಭವವನ್ನು ಉಳಿಸುವುದು ನಮ್ಮ ಪ್ರಮುಖ ಕರ್ತವ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಶನಿವಾರ ಹೇಳಿದರು.

ಅವರು ಹಂಪಿಯ ಎದುರು ಬಸವಣ್ಣ ದೇವಸ್ಥಾನದ ಆವರಣದಲ್ಲಿ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಭಾರತೀಯ ಪುರಾತತ್ವ ಇಲಾಖೆಯ ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2025 ನಿಮಿತ್ತ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿ ಮತ್ತು ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಂಪಿ ಪ್ರವಾಸೋದ್ಯಮದಿಂದ ಜಿಲ್ಲೆಯ ಆರ್ಥಿಕ ಅಭಿವೃದ್ಧಿ, ಸ್ಥಳೀಯ ಉದ್ಯೋಗಾವಕಾಶಗಳು ಮತ್ತು ಗ್ರಾಮೀಣಾಭಿವೃದ್ಧಿಗೆ ಸಹಕಾರವಾಗಿದೆ. ಹಂಪಿಯ ಸಾಂಸ್ಕೃತಿಕ, ಐತಿಹಾಸಿಕ ಸ್ಮಾರಕಗಳು ವಿಶ್ವ ಮಟ್ಟದಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿವೆ. ಮುಂದಿನ ಪೀಳಿಗೆಯವರಿಗೆ ವಿಜಯನಗರದ ವೈಭವ ಮತ್ತು ಪರಂಪರೆ ಪರಿಚಯಿಸಲು ಸ್ಮಾರಕ ಸಂರಕ್ಷಣೆಯಲ್ಲಿ ಸ್ಥಳೀಯರು ಹಾಗೂ ಸಂಘಸಂಸ್ಥೆಗಳು ಕೈ ಜೋಡಿಸಬೇಕೆಂದು ಅವರು ಹೇಳಿದರು.

ಬೈಕ್ ರ‍್ಯಾಲಿ :

ಕಮಲ ಮಹಲ್ ಬಳಿ ಇರುವ ಪ್ರವಾಸೋದ್ಯಮ ಇಲಾಖೆ ಕಚೇರಿಯಿಂದ ಪ್ರಾರಂಭವಾಗಿ, ಮಹಾನವಮಿ ದಿಬ್ಬ, ರಾಣಿ ಸ್ನಾನಗೃಹ, ಕಮಲಾಪುರದ ಅಂಬೇಡ್ಕರ್ ಸರ್ಕಲ್, ಶ್ರೀಉದ್ದಾನ ವೀರಭದ್ರಸ್ವಾಮಿ ದೇವಸ್ಥಾನ, ಉಗ್ರನರಸಿಂಹ ದೇವಸ್ಥಾನ, ಸಾಸಿವೆ ಕಾಳು ಗಣೇಶ ಮಾರ್ಗದಿಂದ ಶ್ರೀವಿರೂಪಾಕ್ಷ ದೇವಸ್ಥಾನದ ಮುಂಭಾಗದ ಎದುರು ಬಸವಣ್ಣ ದೇವಸ್ಥಾನವರೆಗೆ 200ಕ್ಕೂ ಹೆಚ್ಚು ಬೈಕ್ ಸವಾರರು ಭಾಗವಹಿಸಿದರು.

ಪಾರಂಪರಿಕ ನಡಿಗೆ :

ಶ್ರೀವಿಜಯ ವಿಠ್ಠಲ ದೇವಸ್ಥಾನದ ಗೆಜ್ಜಲ ಮಂಟಪದಿಂದ ಆರಂಭವಾಗಿ, ಕುದುರೆಗೊಂಬೆ ಮಂಟಪ, ಪುಷ್ಕರಣಿ, ಮಾರುಕಟ್ಟೆ ಬೀದಿ ಮಾರ್ಗದಿಂದ ಶ್ರೀವಿಜಯ ವಿಠ್ಠಲ ದೇವಸ್ಥಾನದವರೆಗೆ ಸುಮಾರು 300 ಪ್ರವಾಸಿಗರು ಪಾಲ್ಗೊಂಡು ಪಾರಂಪರಿಕ ನಡಿಗೆ ನಡೆಸಿದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಉಪನಿರ್ದೇಶಕ ಪ್ರಭುಲಿಂಗ.ಎಸ್. ತಳಕೇರಿ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನಿ ಕೊತಂಬರಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ದೀಪಕ್, ಭಾರತೀಯ ಪುರಾತತ್ವ ಸರ್ವೇಕ್ಷಣಾಧಿಕಾರಿ ರವಿಕುಮಾರ, ಪ್ರಸನ್ನ, ಪ್ರವಾಸಿ ಮಾರ್ಗದರ್ಶಕರ ಸಂಘದ ಉಪಾಧ್ಯಕ್ಷ ದೇವರಾಜ ಮತ್ತು ಹಲವಾರು ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News