×
Ad

ಶಿಶುವಿನ ಬೆಳವಣಿಗೆಗೆ ತಾಯಿ ಎದೆಹಾಲು ಅಮೃತಕ್ಕೆ ಸಮಾನ: ಡಿಎಚ್‌ಒ ಡಾ.ಶಂಕರ್ ನಾಯ್ಕ್

Update: 2025-08-01 21:45 IST

ವಿಜಯನಗರ(ಹೊಸಪೇಟೆ): ಶಿಶುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾದದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಶಂಕರ್ ನಾಯ್ಕ್ ಎಲ್.ಆರ್ ಹೇಳಿಕೆ ನೀಡಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು. ತಾಯಿ ಮಗುವಿನ ಸಂಬಂಧ ಗರ್ಭದಿಂದಲೇ ಆರಂಭವಾಗುತ್ತದೆ. ಎದೆಹಾಲುಣಿಸಿದ ತಾಯಿ ದೇವರಿಗೆ ಸಮಾನ. ತಾಯಿಗೆ ನಮ್ಮ ದೇಶದಲ್ಲಿ ದೈವಿಕ ಸ್ಥಾನಮಾನವಿದೆ. ಮಕ್ಕಳ ಆರೋಗ್ಯಕ್ಕೆ ತಾಯಿಯ ಎದೆಹಾಲು ಬಹಳ ಮುಖ್ಯವಾಗಿದೆ. ಬದಲಾಗಿ ಯಾವುದೇ ಆಹಾರಗಳು ಯೋಗ್ಯವಲ್ಲ. ಜಿಲ್ಲೆಯ ಎಲ್ಲಾ 5 ತಾಲೂಕಾಸ್ಪತ್ರೆಗಳಲ್ಲಿ ವಿಶೇಷ ನವಜಾತ ಶಿಶು ಆರೈಕೆ ಮಕ್ಕಳ ಘಟಕ, ಪೌಷ್ಠಿಕ ಪುರ್ನಚೇತನ ಕೇಂದ್ರ ಮತ್ತು ಸಮುದಾಯ ಮಟ್ಟದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸುವ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಆರ್‌ಸಿಎಚ್.ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಮಗು ಜನಿಸಿದ ಆರು ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲನ್ನು ಮಾತ್ರ ನೀಡಬೇಕು. ತಾಯಿಯ ಎದೆ ಹಾಲಿನಲ್ಲಿ ಶಿಶುವಿನ ಸದೃಢ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳು, ವಿಟಮಿನ್, ಖನಿಜಾಂಶಗಳು ಅಡಕವಾಗಿದೆ. ಎದೆ ಹಾಲಿನ ಸಂಪೂರ್ಣ ಲಾಭಗಳನ್ನು ಪಡೆಯಲು ಮಗುವು ಸಂಪೂರ್ಣ ವಿಕಸನ ಹೊಂದಲು, ಮಗುವನ್ನು ನ್ಯೂಮೊನಿಯಾ, ಅತಿಸಾರ ಬೇಧಿ, ಅಪೌಷ್ಠಿಕತೆ ಹಾಗೂ ನವಜಾತ ಶಿಶು ಮತ್ತು ಚಿಕ್ಕಮಕ್ಕಳ ಮರಣ ಪ್ರಮಾಣವನ್ನು ತಡೆಗಟ್ಟಲು ಸ್ತನ್ಯಪಾನವು ಅತ್ಯಂತ ಮಹತ್ವ ಪೂರ್ಣ ಪಾತ್ರ ವಹಿಸುತ್ತದೆ. ಸ್ತನ್ಯಪಾನವು ವಿಶೇಷವಾಗಿ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಟಕ್ಕೆ ಹೆಚ್ಚು ಪರಿಣಾಮಕಾರಿ. ಇದು ಪತ್ರಿರಕ್ಷಣಾವಾಹಕಗಳನ್ನು ತಾಯಿಯಿಂದ ನೇರವಾಗಿ ಪಡೆಯುವುದರ ಮೂಲಕ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಆ.1 ರಿಂದ 7 ರ ವರಗೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ವೇಳೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಭಾಸ್ಕರ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಸಾದ್, ತಾಯಿ ಮತ್ತು ಮಕ್ಕಳ ಆಸ್ಪತೆಯ ವೈದ್ಯ ಡಾ.ನೂರ್‌ಬಾಷಾ, ಮಕ್ಕಳ ತಜ್ಞೆ ಡಾ.ಉಷಾ, ಸೇರಿದಂತೆ ವೈದ್ಯಾಧಿಕಾರಿಗಳು, ಮಗುವಿನ ತಾಯಂದಿರು, ಪೊಷಕರು ಭಾಗವಹಿಸಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News