ವಿಜಯನಗರದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಮಾನಸಿಕ ಆರೋಗ್ಯವೇ ನಿಜವಾದ ಶಕ್ತಿ : ನ್ಯಾ.ಎನ್.ಸುಬ್ರಮಣ್ಯ
ವಿಜಯನಗರ (ಹೊಸಪೇಟೆ) : ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯವೇ ಮುಖ್ಯ. ಯೋಗ ಮತ್ತು ಧ್ಯಾನದಿಂದ ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿ ಮತ್ತು ಸಮತೋಲನ ಸಿಗುತ್ತದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾ.ಎನ್.ಸುಬ್ರಮಣ್ಯ ತಿಳಿಸಿದ್ದಾರೆ.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯ ಯೋಗಾಭ್ಯಾಸ, ಧ್ಯಾನ ಮತ್ತು ಒತ್ತಡ ರಹಿತ ಜೀವನ ಶೈಲಿ ಅಳವಡಿಸಿಕೊಂಡರೆ ಮಾನಸಿಕ ಆರೋಗ್ಯ ಉಲ್ಲಾಸಭರಿತವಾಗಿರುತ್ತದೆ. ಸಕಾರಾತ್ಮಕ ಚಿಂತನೆ, ಕುಟುಂಬದವರ ಜೊತೆ ಸಮಯ ಕಳೆಯುವುದು, ಹಾಗೂ ಆರೋಗ್ಯಕರ ಆಹಾರ ಸೇವನೆಯಿಂದ ಮಾನಸಿಕ ಸಮತೋಲನ ಕಾಪಾಡಬಹುದು ಎಂದರು.
ಅಸಮತೋಲನ ಆಹಾರ ಪದ್ಧತಿಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ. ಸಮಾಜದಲ್ಲಿನ ಮಾನಸಿಕ ರೋಗಿಗಳನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳಬೇಕು. ಅವರ ಪುನರ್ವಸತಿ ಸಾಧ್ಯ ಎಂದು ಸಲಹೆ ನೀಡಿದರು.
ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬಾಲಗರ್ಭಿಣಿಯರ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ವಿಷಾದ ವ್ಯಕ್ತಪಡಿಸಿ, ಇದನ್ನು ತಡೆಯಲು ಸಾರ್ವಜನಿಕರು ಹಾಗೂ ಇಲಾಖೆಗಳು ಕೈಜೋಡಿಸಬೇಕು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಕಂಡುಬಂದರೆ ತಕ್ಷಣ ಕಾನೂನು ಸೇವಾ ಸಮಿತಿಗೆ ಅಥವಾ ಪೊಲೀಸ್ ಇಲಾಖೆಗೆ ದೂರು ನೀಡಬೇಕು ಎಂದು ಕರೆ ನೀಡಿದರು.
ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್ ಮಾತನಾಡಿ, ಹೆಣ್ಣುಮಕ್ಕಳಿಗೆ ಗೌರವಯುತ ಸ್ಥಾನ ನೀಡುವುದು ಸಮಾಜದ ಕರ್ತವ್ಯ. ಬಾಲ್ಯವಿವಾಹ ಮತ್ತು ದೌರ್ಜನ್ಯ ತಡೆಗಟ್ಟಲು ಗ್ರಾಮೀಣ ಪ್ರದೇಶಗಳಲ್ಲೂ ಶಿಕ್ಷಣದ ಮಹತ್ವ ತಿಳಿಸಬೇಕಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಂಕರ್ ನಾಯ್ಕ್ ಎಲ್.ಆರ್ ಅವರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಪ್ರತಿ ತಿಂಗಳು ಮಂಗಳವಾರ ಮನೋಚೈತನ್ಯ ಕಾರ್ಯಕ್ರಮ ನಡೆಯುತ್ತದೆ. ಸಹಾಯಕ್ಕಾಗಿ 14416 ಸಂಖ್ಯೆಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.
ನಗರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರಾಜಶೇಖರ ಅವರು, ಸೈಬರ್ ಕ್ರೈಮ್‌ಗಳಿಂದ ಎಚ್ಚರಿಕೆ ವಹಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ರಾಧಿಕಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಶ್ರೀನಿವಾಸ ಮೂರ್ತಿ, ಹಾಗೂ ಹಲವು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಟಿಎಂಎಇಎಸ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.