ನಗರದಲ್ಲೇ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ತಾಳಿಕೋಟಿ ಬಂದ್
ತಾಳಿಕೋಟಿ: ನಗರ ಹೊರ ಪ್ರದೇಶದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಿರುವುದನ್ನು ವಿರೋಧಿಸಿ ತಾಲೂಕು ಹೋರಾಟ ಸಮಿತಿ ನೀಡಿದ್ದ ಕರೆಯಂತೆ ಬುಧವಾರ ತಾಳಿಕೋಟಿ ಬಂದ್ ಆಗಿತ್ತು.
ಬಂದ್ ಗೆ ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಬೀದಿಬದಿ ವ್ಯಾಪಾರಸ್ಥರು ಹಾಗೂ ಎಲ್ಲಾ ಸಮುದಾಯಗಳ ಮುಖಂಡರು ಬೆಂಬಲ ಸೂಚಿಸಿದ್ದರಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಂಡಿತ್ತು.
ಈ ವೇಳೆ ಪ್ರತಿಭಟನೆ ನಡೆಯಿತು.
ತಾಲೂಕು ಆಡಳಿತವು ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಿಸಲು ಸ್ಥಳ ಗುರುತಿಸಿದ್ದು, ಈ ಸ್ಥಳ ತಾಳಿಕೋಟಿ ಪಟ್ಟಣದಿಂದ ಸುಮಾರು 4ರಿಂದ 5 ಕಿಲೋಮೀಟರ್ ದೂರದಲ್ಲಿದೆ. ಇದರಿಂದ ತಾಲೂಕಿನ ಸಾರ್ವಜನಿಕರು, ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ಅಂಗವಿಕಲರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ದೂರಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಜಾಸೌಧ ನಗರದಲ್ಲಿ ಆಗಬೇಕು ಎಂದು ಹೇಳಿದರು.
ಕಾಶೀನಾಥ್ ಮುರಾಳ ಮಾತನಾಡಿ, ಈಗ ಗುರುತಿಸಿರುವ ಸ್ಥಳವು ಸಾರ್ವಜನಿಕರಿಗೆ ಅನುಕೂಲಕರವಲ್ಲ. ಆದ್ದರಿಂದ ಪ್ರಜಾಸೌಧ ಕಟ್ಟಡವನ್ನು ತಾಳಿಕೋಟಿ ಪಟ್ಟಣದ ವ್ಯಾಪ್ತಿಯಲ್ಲೇ ನಿರ್ಮಾಣವಾಗಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಳಿಕೋಟಿ ಹೋರಾಟ ಸಮಿತಿಯ ಅಧ್ಯಕ್ಷ ದಶರಥ ಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಎಂ. ಕೆ. ಜೋರಗಸ್ತಿ, ಮಾಸುಮಸಾಬ ಕೆಂಭಾವಿ, ಪರಶುರಾಮ ತಂಗಡಗಿ, ಪ್ರಕಾಶ್ ಹಜೇರಿ, ರವೀಂದ್ರ ಕಟ್ಟಿಮನಿ, ದತ್ತು ಹೆಬಸೂರ, ರಾಜು ಹಂಚಾಟೆ, ಗಂಗಾಧರ್ ಕಸ್ತೂರಿ, ಮಂಜು ಶೆಟ್ಟಿ, ಸುರೇಶ ಹಜೇರಿ, ಸದ್ದಾಂ ಬೀಳಗಿ, ಲತೀಫ್ ಬೀಳಗಿ, ಅಮಿತ್ ಮನಗೂಳಿ, ನಾಗೇಶ ಕಟ್ಟಿಮನಿ, ತಿಪ್ಪಣ್ಣ ಸಜ್ಜನ, ಮಾನಸಿಂಗ ಕೋಕಟನೂರ, ಸಿರಸಕುಮಾರ ಹಜೇರಿ, ನಿತಿನ ವಿಜಾಪುರ್ ಮುಖಂಡರು ಉಪಸ್ಥಿತರಿದ್ದರು.