×
Ad

Vijayapura | ಹಲಸಂಗಿ ಚಿನ್ನಾಭರಣ ಮಳಿಗೆ ದರೋಡೆ ಪ್ರಕರಣ; ಇಬ್ಬರ ಬಂಧನ

Update: 2026-02-19 20:16 IST

ವಿಜಯಪುರ : ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದು ಗನ್ ತೋರಿಸಿ ಚಿನ್ನದ ಅಂಗಡಿಯನ್ನು ದೋಚಿದ್ದ ಇಬ್ಬರು ಅಂತರಾಜ್ಯ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ 26 ರಂದು ಹಲಸಂಗಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಇಲಾಖೆ ಜತ್ತ ನಿವಾಸಿ ಹಣಮಂತ ಮಲ್ಲಪ್ಪ ವಾಘೋಲಿ (28), ಪುಣೆಯಲ್ಲಿ ನೆಲೆಸಿದ್ದ ಶಿವರಾಜ್ ಉರ್ಫ್ ಗೌಡಪ್ಪ ರಾವುಸಾಹೇಬ ನಾವಿ (28) ಯನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 205 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ಸೇರಿದಂತೆ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯದ ವೇಳೆ ಬಳಸಿದ ಕಂಟ್ರಿ ಪಿಸ್ತೂಲ್ ಸೇರಿದಂತೆ 3 ಕಂಟ್ರಿ ಪಿಸ್ತೂಲ್, 26 ಜೀವಂತ ಗುಂಡು, ಒಂದು ಏರ್‌ ಗನ್, ಮೋಟಾರ್ ಸೈಕಲ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.

ಸಾಲಬಾಧೆ ಹಾಗೂ ಶೋಕಿ ಮೋಹದಿಂದಾಗಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಮೊದಲು ಸೊಲ್ಲಾಪೂರದ ಬಂಗಾರ ಅಂಗಡಿ ದೋಚುವ ಯೋಜನೆ ರೂಪಿಸಿದ್ದು, ನಂತರ ಅಲ್ಲಿ ಜನಸಂದಣಿ ಅಧಿಕವಾಗಿರುವುದರಿಂದ ಗಡಿ ಭಾಗದ ಹಲಸಂಗಿಯನ್ನು ಆಯ್ಕೆ ಮಾಡಿ ದರೋಡೆ ಮಾಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದರು.

ಎಎಸ್‌ಪಿ ರಾಮಗೌಡ ಹಟ್ಟಿ ನೇತೃತ್ವದಲ್ಲಿ ರಚನೆ ಮಾಡಲಾದ ಡಿವೈಎಸ್‌ಪಿಗಳಾದ ಸದಾಶಿವ ಕಟ್ಟಿಮನಿ, ಸುನೀಲ ಕಾಂಬಳೆ, ಪರಶುರಾಮ ಮನಗೂಳಿ, ಸೋಮೇಶ ಗೆಜ್ಜೆ, ರಾಕೇಶ ಬಗಲಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ನಿಂಬರಗಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News