×
Ad

ಕ್ರಿಸ್ಮಸ್ ಶಾಂತಿ, ಸಮಾನತೆ ಮತ್ತು ಭರವಸೆಯ ಹಬ್ಬ

Update: 2025-12-25 08:47 IST

ಜಾಗತಿಕವಾಗಿ ಸಂಪತ್ತು ಮತ್ತು ಅವಕಾಶಗಳ ಅಂತರ ಹೆಚ್ಚುತ್ತಿರುವ ಈ ಕಾಲದಲ್ಲಿ, ಯೇಸು ಬಡತನ ಮತ್ತು ಸರಳತೆಯಲ್ಲಿ ಜನಿಸಿದ್ದು ಪ್ರಬಲ ಸಂದೇಶ ನೀಡುತ್ತದೆ. ಅವರು ಸಂಪತ್ತು ಅಥವಾ ಅಧಿಕಾರವಿರುವ ಸ್ಥಳದಲ್ಲಿ ಹುಟ್ಟಲಿಲ್ಲ, ಬದಲಿಗೆ ಗೋದಲಿಯನ್ನು ಆರಿಸಿಕೊಂಡರು. ಇದು ನಮ್ಮ ಗಮನವನ್ನು ವಸ್ತುಸಂಗ್ರಹಣೆ ಮತ್ತು ವೈಭವದ ಬದಲು, ಸೇವೆ ಮತ್ತು ದೀನತೆಯ ಕಡೆಗೆ ಸೆಳೆಯುತ್ತದೆ.

ಜಗತ್ತು ಹಲವಾರು ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟುಗಳಿಂದ ನರಳುತ್ತಿದೆ. ಯುದ್ಧದ ಭಯ, ಆರ್ಥಿಕ ಅಸಮಾನತೆ, ಪರಿಸರ ನಾಶ ಮತ್ತು ಸಮಾಜದಲ್ಲಿನ ವಿಭಜನೆ- ಈ ಎಲ್ಲಾ ಸವಾಲುಗಳು ನಮ್ಮನ್ನು ವಿವಶಗೊಳಿಸಿವೆ. ಈ ಸಂದರ್ಭದಲ್ಲಿ, 2000 ವರ್ಷಗಳ ಹಿಂದೆ ಬೆತ್ಲೆೆಹೆಮ್‌ನ ಗೋದಲಿಯಲ್ಲಿ ಜನಿಸಿದ ಯೇಸುಕ್ರಿಸ್ತರ ಸಂದೇಶವು ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ಆತನ ಜನನವು ಇಂದಿನ ಜಗತ್ತಿಗೆ ನೀಡುವ ಭರವಸೆ, ಶಾಂತಿ ಮತ್ತು ಸಮಾನತೆಯ ಕರೆಗಳ ಕುರಿತು ಯೋಚಿಸೋಣ.

1. ಯುದ್ಧ ಮತ್ತು ವಿಭಜನೆಯ ನಡುವೆ ಶಾಂತಿಯ ಕರೆ

ಇಂದು ಅನೇಕ ದೇಶಗಳಲ್ಲಿ ಯುದ್ಧಗಳು, ರಾಜಕೀಯ ಕಲಹಗಳು ಮತ್ತು ಭಯೋತ್ಪಾದನೆ ಜನರನ್ನು ಭೀತಿಯಲ್ಲಿ ಇರಿಸಿದೆ. ಕ್ರಿಸ್ಮಸ್ ಸಂದೇಶವು ಈ ಅಂಧಕಾರವನ್ನು ಸೀಳುವ ದೈವಿಕ ಬೆಳಕು. ಯೇಸುವು ‘ಶಾಂತಿದಾಯಕ ಪ್ರಭು’. (ಯೆಶಾಯ 9:6) ಅವರ ಜನನದ ಉದ್ದೇಶವೇ ಮಾನವಕುಲಕ್ಕೆ ಶಾಂತಿಯನ್ನು ತರುವುದು. ದೇವದೂತರು ಯೇಸುವಿನ ಜನನದ ರಾತ್ರಿ ಹಾಡಿದ ಸಂದೇಶವು ಸಾರ್ವಕಾಲಿಕವಾಗಿದೆ: ‘‘ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭುವಿಯಲ್ಲಿ ಸುಮನಸ್ಕರಿಗೆ ಶಾಂತಿ.’’ (ಲೂಕ 2:14). ಈ ಶಾಂತಿಯು ಕೇವಲ ಯುದ್ಧದ ಅನುಪಸ್ಥಿತಿಯಲ್ಲ, ಅದು ದೇವರೊಂದಿಗೆ ಮತ್ತು ಪರರೊಂದಿಗೆ ಸೌಹಾರ್ದದ ಸ್ಥಿತಿ. ನಮ್ಮ ಕಾಲದ ಸಂಘರ್ಷಗಳನ್ನು ಕುರಿತು ವಿಶ್ವಗುರು ಫ್ರಾನ್ಸಿಸ್‌ರವರು ಆಳವಾದ ಕಳವಳ ವ್ಯಕ್ತಪಡಿಸಿದ್ದರು. ‘‘ನಾವು ನಮ್ಮ ಸಹೋದರ ಸಹೋದರಿಯರನ್ನು ನೋವಿನಿಂದ ನೋಡಿದಾಗ, ಕ್ರಿಸ್ತನ ಬೆಳಕು ಮಸುಕಾಗುತ್ತದೆ. ಈ ಕ್ರಿಸ್ಮಸ್‌ನಲ್ಲಿ, ನಮ್ಮ ಹೃದಯಗಳು ಶಾಂತಿಯ ಮಾರ್ಗವನ್ನುಕಂಡುಕೊಳ್ಳಬೇಕು, ಏಕೆಂದರೆ ಯೇಸುವೇ ನಮ್ಮ ಶಾಂತಿ’’ ಎಂದು.

2. ಆರ್ಥಿಕ ಅಸಮಾನತೆ ಮತ್ತು ಬಡತನದ ಸವಾಲು

ಜಾಗತಿಕವಾಗಿ ಸಂಪತ್ತು ಮತ್ತು ಅವಕಾಶಗಳ ಅಂತರ ಹೆಚ್ಚುತ್ತಿರುವ ಈ ಕಾಲದಲ್ಲಿ, ಯೇಸು ಬಡತನ ಮತ್ತು ಸರಳತೆಯಲ್ಲಿ ಜನಿಸಿದ್ದು ಪ್ರಬಲ ಸಂದೇಶ ನೀಡುತ್ತದೆ. ಅವರು ಸಂಪತ್ತು ಅಥವಾ ಅಧಿಕಾರವಿರುವ ಸ್ಥಳದಲ್ಲಿ ಹುಟ್ಟಲಿಲ್ಲ, ಬದಲಿಗೆ ಗೋದಲಿಯನ್ನು ಆರಿಸಿಕೊಂಡರು. ಇದು ನಮ್ಮ ಗಮನವನ್ನು ವಸ್ತುಸಂಗ್ರಹಣೆ ಮತ್ತು ವೈಭವದ ಬದಲು, ಸೇವೆ ಮತ್ತು ದೀನತೆಯ ಕಡೆಗೆ ಸೆಳೆಯುತ್ತದೆ. ದೇವರ ಪ್ರೀತಿ ಕೇವಲ ಮಾತುಗಳಲ್ಲಿರದೆ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾದವರ ಪರವಾದ ಕಾರ್ಯಗಳಲ್ಲಿ ಇರಬೇಕು. ವಿಶ್ವಗುರು ಲಿಯೋಘಿ XIIIರವರು ಬಡವರ ಪರವಾಗಿ ಧ್ವನಿ ಎತ್ತುತ್ತಾ, ‘‘ಯಾವ ವ್ಯಕ್ತಿ ಸಮಾನತೆ ಮತ್ತು ಸಹೋದರತ್ವವನ್ನು ಗೌರವಿಸುತ್ತಾನೋ, ಆತನು ಕ್ರಿಸ್ತನ ದೀನತೆಯ ಮನೋಭಾವವನ್ನು ಪ್ರತಿಬಿಂಬಿಸುತ್ತಾನೆ. ಸಂಪತ್ತು ಒಂದುಗುರಿಯಲ್ಲ, ಆದರೆ ಅದನ್ನು ನ್ಯಾಯಯುತವಾಗಿ ಹಂಚಿಕೊಳ್ಳುವ ಸಾಧನ’’ ಎಂದರು.

3. ಪರಿಸರ ಬಿಕ್ಕಟ್ಟು ಮತ್ತು ಸೃಷ್ಟಿಯ ರಕ್ಷಣೆ

ಇಂದು ಹವಾಮಾನ ಬದಲಾವಣೆ, ಪ್ರಕೃತಿಯ ಅಸಮತೋಲನ ಮತ್ತು ಅತಿಯಾದ ಶೋಷಣೆಯಿಂದ ಜಗತ್ತು ತತ್ತರಿಸಿದೆ. ಕ್ರಿಸ್ಮಸ್ ಹಬ್ಬವು ನಮ್ಮನ್ನು ಮತ್ತೆ ಪ್ರಕೃತಿಯೊಂದಿಗೆ ಸೌಹಾರ್ದದ ಸಂಬಂಧಕ್ಕೆ ಕರೆ ನೀಡುತ್ತದೆ. ಯೇಸುವು ಕಾಂಕ್ರಿಟ್ ಕಟ್ಟಡದಲ್ಲಿ ಅಲ್ಲ, ಪ್ರಕೃತಿಯ ಮಡಿಲಾದ ಗೋದಲಿಯಲ್ಲಿ ಹುಲ್ಲು ಮತ್ತು ದನ ಕರುಗಳ ನಡುವೆ ಜನಿಸಿದ್ದು ಒಂದು ಸಾಂಕೇತಿಕ ಅರ್ಥವನ್ನು ಹೊಂದಿದೆ. ನಾವು ಪ್ರಕೃತಿಯ ಯಜಮಾನರಲ್ಲ, ಆದರೆ ಅದರ ವಿಶ್ವಾಸಾರ್ಹ ಪಾಲಕರಾಗಿದ್ದೇವೆ. ದೇವರ ಸೃಷ್ಟಿಗೆ ಗೌರವವನ್ನು ನೀಡುವ ಕುರಿತು ಬೈಬಲ್ ಗ್ರಂಥ ಹೀಗೆ ಹೇಳುತ್ತದೆ: ‘‘ಆಕಾಶಮಂಡಲಗಳು ದೇವರ ಮಹಿಮೆಯನ್ನು ಪ್ರಚುರಪಡಿಸುತ್ತವೆ; ಆಕಾಶವು ಆತನ ಕೈಕೆಲಸವನ್ನು ಪ್ರಕಟಿಸುತ್ತದೆ.’’(ಕೀರ್ತನೆಗಳು 19:1). ಈ ಸೃಷ್ಟಿಯನ್ನು ನಾಶಮಾಡುವುದು ದೇವರ ಮಹಿಮೆಯನ್ನು ನಿರಾಕರಿಸಿದಂತೆ.ವಿಶ್ವಗುರು ಫ್ರಾನ್ಸಿಸ್‌ರವರು ಪರಿಸರ ಕಾಳಜಿಗೆ ಹೆಚ್ಚಿನ ಒತ್ತು ನೀಡುತ್ತಾ ಹೀಗೆನ್ನುತ್ತಾರೆ: ‘‘ನಮಗೆ ಸ್ವಾಭಾವಿಕ ಮನೆಯಾದ ಈ ಭೂಮಿಯನ್ನು ನಾವು ಅದರ ಮೂಲಭೂತ ಅವಶ್ಯಕತೆಗಳಿಗಿಂತ ಹೆಚ್ಚು ಶೋಷಿಸುವಂತಿಲ್ಲ. ದೇವರ ಸೃಷ್ಟಿಯನ್ನು ಪ್ರೀತಿಸುವುದು ದೇವರನ್ನು ಪ್ರೀತಿಸುವ ಭಾಗವಾಗಿದೆ’’.

4. ವೈಯಕ್ತಿಕ ಖಿನ್ನತೆ ಮತ್ತು ಭರವಸೆಯ ಅಗತ್ಯ

ಇಂದು, ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಯೇಸುವಿನ ಆಗಮನವು ಕೇವಲ ಜಾಗತಿಕ ಸಮಸ್ಯೆಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಹೋರಾಟಗಳಿಗೂ ಉತ್ತರ ನೀಡುತ್ತದೆ. ಕ್ರಿಸ್ಮಸ್ ಸಂದೇಶವು ಪ್ರತಿಯೊಬ್ಬರಿಗೂ ‘‘ನೀವು ದೇವರ ಪ್ರೀತಿಯ ಮಗು’’

ಎಂಬ ದೃಢೀಕರಣವನ್ನು ನೀಡುತ್ತದೆ. ನಮ್ಮ ಮೌಲ್ಯ

ನಮ್ಮ ಸಾಧನೆಗಳಲ್ಲಿ ಅಥವಾ ಸಂಪತ್ತಿನಲ್ಲಿಲ್ಲ, ಆದರೆ ನಾವು ಯೇಸುವಿನ ಮೂಲಕ ದೇವರೊಂದಿಗೆ ಹೊಂದಿರುವ ಆಳವಾದ ಸಂಬಂಧದಲ್ಲಿದೆ. ಪ್ರಸ್ತುತ ವಿಶ್ವಗುರು ಲಿಯೋಘಿ XIIIರವರ ಪ್ರೇರಣೆ, ‘‘ಭರವಸೆಯು ಕ್ರೈಸ್ತ ಜೀವನದ ಸ್ತಂಭವಾಗಿದೆ. ಯೇಸುವಿನ ಜನನವು ಭವಿಷ್ಯದ ಬಗ್ಗೆ ನಾವು ಭಯಪಡಬೇಕಾಗಿಲ್ಲ, ಆದರೆ ಭರವಸೆಯಿಂದ ಎದುರು ನೋಡಬೇಕು ಎಂಬುದನ್ನು ಖಚಿತಪಡಿಸುತ್ತದೆ. ಆ ಭರವಸೆಯು ಕ್ರಿಸ್ತನಲ್ಲಿ ನೆಲೆಯಾಗಿದೆ’’.

ಬೈಬಲ್ ಭರವಸೆಯ ಮೂಲವನ್ನು ಹೀಗೆ

ವಿವರಿಸುತ್ತದೆ. ‘‘ವಿಶ್ವಾಸದಲ್ಲಿ ಸ್ಥಿರವಾಗಿರುವ ನಾವು ನಮ್ಮ ಪ್ರಭು ಯೇಸುಕ್ರಿಸ್ತನ ಮೂಲಕ ದೇವರೊಂದಿಗೆ ಸಮಾಧಾನವನ್ನು ಹೊಂದಿದ್ದೇವೆ’’ (ರೋಮಾಪುರ 5:1). ಈ ಸಮಾಧಾನವೇ ನಿಜವಾದ ಆಂತರಿಕ ನೆಮ್ಮದಿ ಮತ್ತು ಖಿನ್ನತೆಯನ್ನು ಗೆಲ್ಲುವ ಶಕ್ತಿ. ಭರವಸೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ. ಈ ಕ್ರಿಸ್ಮಸ್ ಹಬ್ಬವು ನಮಗೆ ಮರಳಿ ಗೋದಲಿಯ ಸರಳತೆಗೆ ಕರೆನೀಡುತ್ತದೆ. ನಾವು ಹೊಸ ವಸ್ತ್ರಗಳನ್ನು ಧರಿಸುವುದರ ಜೊತೆಗೆ, ನಮ್ಮ ಹೃದಯಕ್ಕೆ ದೀನತೆ ಮತ್ತು ಪ್ರೀತಿಯನ್ನು ಧರಿಸಿಕೊಳ್ಳಬೇಕು. ವರ್ತಮಾನದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ, ನಾವು ಪ್ರತಿಯೊಬ್ಬರೂ ಶಾಂತಿಯ ರಾಯಭಾರಿಗಳಾಗಿ, ಪ್ರಕೃತಿಯ ಪಾಲಕರಾಗಿ ಮತ್ತು ಬಡವರ ಸಹಾಯಕರಾಗಿ ಬಾಳಲು ಯೇಸುಕ್ರಿಸ್ತನ ಆದರ್ಶವನ್ನು ಅನುಸರಿಸಬೇಕು. ನಮ್ಮ ಬದುಕು ಮತ್ತು ಜಗತ್ತಿನ ಕತ್ತಲೆಯಲ್ಲೂ ಆತನು ಬೆಳಕಾಗಿ ಬರಲು ಸಿದ್ಧನಿದ್ದಾರೆ. ನಿಜವಾದ ಕ್ರಿಸ್ಮಸ್‌ನ ಶಾಂತಿ, ಭರವಸೆ ಮತ್ತು ಮರುಸಂಧಾನದ ಸಂದೇಶವು ನಿಮ್ಮೆಲ್ಲರೊಂದಿಗೆ ಇರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News