×
Ad

1963 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಆಗಿನ ಪ್ರಧಾನಿ ನೆಹರೂ ಆರೆಸ್ಸಸನ್ನು ಆಹ್ವಾನಿಸಿದ್ದರೆ?

Update: 2025-12-25 08:06 IST

ಆರೆಸ್ಸೆಸ್ 100 ವರ್ಷ ಪೂರೈಸಿದ ಪ್ರಯುಕ್ತ ಈ ಸಂಘಟನೆಯ ಪತ್ರಿಕೆಗಳ ಲೇಖನಗಳಲ್ಲಿ, ನಾಯಕರ ಭಾಷಣಗಳಲ್ಲಿ ಈ ವಿಷಯವನ್ನು ಮತ್ತೆ ಮತ್ತೇ ಹೇಳಲಾಗುತ್ತಿದೆ.

1962 ರಲ್ಲಿ ಚೀನಾದೊಡನೆ ನಡೆದ ಯುದ್ಧದಲ್ಲಿ ಭಾರತ ಸೋತು ಹೋಗಿ ನೆಹರೂ ಹತಾಶರಾಗಿದ್ದರು ಇಂತಹ ವಿಷಮ ಪರಿಸ್ಥಿತಿಯಲ್ಲಿ 1963ರ ಗಣರಾಜ್ಯೋತ್ಸವ ಪಾರಂಪರಿಕ ಪರೇಡ್ ನಲ್ಲಿ ಭಾಗವಹಿಸಲು ನೆಹರೂ ಆರೆಸ್ಸೆಸ್ ವಿನಂತಿಸಿಕೊಂಡರು. ಉಜ್ವಲ ದೇಶಭಕ್ತಿಯನ್ನು ಬೆಳೆಸುವ ಆರೆಸ್ಸೆಸ್ ಈ ಮನವಿಯನ್ನು ಅಂಗೀಕರಿಸಿತು. ಗಣರಾಜ್ಯೋತ್ಸವದಲ್ಲಿ ಅಧಿಕೃತವಾಗಿ ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರು ಭಾಗವಹಿಸಿ ರಾಷ್ಟ್ರ ನಿಷ್ಠೆಯನ್ನು ಪ್ರದರ್ಶಿಸಿದರು. ಹಾಗಾಗಿ ಸ್ವತ: ಪ್ರಧಾನಿ ನೆಹರೂರವರೇ ಆರೆಸ್ಸೆಸ್ ರಾಷ್ಟ್ರ ಭಕ್ತಿಯನ್ನು ಮಾನ್ಯ ಮಾಡಿದ್ದರು ಎಂದು ಪ್ರಚಾರ ಮಾಡುತ್ತಾರೆ.

ಭಾರತದ ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಯವರು ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೆೇಟಿಯಿತ್ತಾಗ ಭಾರೀ ವಿರೋಧ ವ್ಯಕ್ತವಾಯಿತು. ಆಗ ಕೂಡ ಆರೆಸ್ಸಸ್ ತನ್ನ ರಾಷ್ಟ್ರಭಕ್ತಿಯನ್ನು ಸ್ವತ: ನೆಹರೂವವರೇ ಒಪ್ಪಿಕೊಂಡಿದ್ದರು ಎಂದು ಹೇಳಿಕೊಂಡಿತ್ತು.

‘‘1962ರ ಭಾರತ-ಚೀನಾ ಯುದ್ಧ್ದದ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಲ್ಲಿಸಿದ ಸೇವೆಗಳಿಗೆ ಮನಸೋತು ಆಗಿನ ಪ್ರಧಾನಿ ನೆಹರೂ ಅವರು 1963 ರ ಗಣರಾಜ್ಯೋತ್ಸವದ ವಿಶೇಷ ಪಥ ಸಂಚಲನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಆಹ್ವಾನಿಸಿದ್ದರು’’ (ವಿಕ್ರಮ ವಾರ ಪತ್ರಿಕೆ- ಟಿ. ದೇವಿದಾಸ್ 24-8-2025)

‘‘ಪರೇಡ್‌ನಲ್ಲಿ ಭಾಗವಹಿಸಬೇಕೆಂದು ಕೇವಲ ಒಂದು ವಾರವಿದ್ದಾಗ ದಿಲ್ಲಿಯ ಸಂಘ ಕಾರ್ಯಾಲಯಕ್ಕೆ ಕೇಂದ್ರ ಸರಕಾರದ ಕಡೆಯಿಂದ ಆಮಂತ್ರಣ ನೀಡಲಾಗಿತ್ತು’’ (ದು.ಗ.ಲಕ್ಷ್ಮಣ ಹೊಸ ದಿಗಂತ ದಿನ ಪತ್ರಿಕೆ 8-12-2025)

‘‘ಸಂಘದ ರಾಷ್ಟ್ರೀಯವಾದಿ ಕಾರ್ಯದ ಪ್ರಭಾವ ಎಷ್ಟಿತ್ತೆೆಂದರೆ ಸಂಘದ ಕುರಿತು ದ್ವೇಷ ಭಾವನೆಯನ್ನೇ ಹೊಂದಿದ ನೆಹರೂರವರು ಸಹ ತಮ್ಮ ಭಾವನೆ ಬದಲಿಸಿಕೊಳ್ಳಬೇಕಾಯಿತು. 1963ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗಣವೇಷಧಾರಿ ಸ್ವಯಂ ಸೇವಕರಿಗೆ ಪಥ ಸಂಚಲನ ನಡೆಸಲು ಅವಕಾಶ ನೀಡಿದರು’’

(ಸಂತೋಷ್ ಜಿ. ಆರ್. ಪುಟ 103 ಉತ್ಥಾನ ಗಣರಾಜ್ಯೋತ್ಸವ ಹಾಗೂ ಸಂಕ್ರಾಂತಿ ವಿಶೇಷಾಂಕ ಜನವರಿ 2025)

ಆದರೆ ವಾಸ್ತವವೇನು?: ಗಣರಾಜ್ಯೋತ್ಸವದ ದಿನದಂದು ದಿಲ್ಲಿಯಲ್ಲಿ ಮಾಮೂಲಾಗಿ ಸಶಸ್ತ್ರ ಪಡೆಗಳು ಭಾಗವಹಿಸುವ ಅದ್ದೂರಿ ಗಣರಾಜ್ಯೋತ್ಸವ ಪರೇಡ್ ಮತ್ತು ದೇಶವನ್ನು ಉದ್ದೇಶಿಸಿ ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿಗಳು ಭಾಷಣ ಮಾಡುವ ಕಾರ್ಯಕ್ರಮಗಳು ಪ್ರಸಿದ್ಧ್ದವಾಗಿವೆೆ. ಆದರೆ 1963 ರಲ್ಲಿ ಚೀನಾದೊಡನೆ ನಡೆದ ಯುದ್ಧ್ದದ ಕಾರಣ ಬಹುತೇಕ ಪಡೆಗಳು ಗಡಿ ಪ್ರದೇಶಗಳಿಗೆ ರವಾನೆಯಾಗಿದ್ದವು.

ಈ ವಿಷಮ ಪರಿಸ್ಥಿತಿಯಲ್ಲಿ ಗಣರಾಜ್ಯೋತ್ಸವ ಪರೇಡನ್ನು ರದ್ದು ಪಡಿಸಬೇಕೆಂಬುದು ರಕ್ಷಣಾ ಇಲಾಖೆಯ ಇಂಗಿತವಾಗಿತ್ತು.

ಆದರೆ ಪ್ರಧಾನಮಂತ್ರಿ ನೆಹರೂ ಆಗಿನ ರಕ್ಷಣಾ ಮಂತ್ರಿ ವೈ. ಬಿ. ಚವ್ಹಾಣರಿಗೆ ದಿನಾಂಕ 10-12-1962 ರಂದು ದೀರ್ಘ ಪತ್ರವನ್ನು ಬರೆದು ಆ ವರ್ಷದ ಗಣರಾಜ್ಯೋತ್ಸವ ಪರೇಡ್ ಬದಲಿಗೆ ಎಲ್ಲಾ ನಾಗರಿಕರೂ ಭಾಗವಹಿಸುವ ಮೆರವಣಿಗೆಯ ಮೂಲಕ ಆಚರಿಸಬೇಕೆಂದು ಸಲಹೆ ನೀಡಿದರು. ಈ ಮೆರವಣಿಗೆಯಲ್ಲಿ ದಿಲ್ಲಿಯಲ್ಲಿರುವ ಸೈನ್ಯದ ಕೆಲವು ತುಕಡಿಗಳಲ್ಲದೆ ನಾಗರಿಕರು, ಹೋಮ್ ಗಾರ್ಡ್ಸ್, ಎನ್. ಸಿ. ಸಿ. ಕೆಡೆಟ್‌ಗಳು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳ ಮತ್ತು ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಸಬಹುದು. ಅವರಿಗೆಲ್ಲ ತರಬೆೇತಿ ಇಲ್ಲದಿರಬಹುದು. ಆದರೆ ಈ ನಡೆಯು ಅದರಲ್ಲಿ ಭಾಗವಹಿಸಿದವರ ಮೇಲೆ ಮತ್ತು ಅದನ್ನು ನೋಡುವವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಂಬ ನಂಬಿಕೆಯಿದೆ ನನಗೆ ಎಂದರು ನೆಹರೂ ಈ ಪತ್ರದಲ್ಲಿ.

ಮರು ದಿನ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ‘‘ಈ ಪರೇಡನ್ನು ನಾವು ಸೈನಿಕ ಕಾರ್ಯಕ್ರಮಕ್ಕೆ ಬದಲಾಗಿ ಒಂದು ಸಾರ್ವಜನಿಕ ನಾಗರಿಕ ಕಾರ್ಯಕ್ರಮವಾಗಿ ನಡೆಸುತ್ತೇವೆ. ಹಾಗಾಗಿ ಸಂಸತ್ ಸದಸ್ಯರು ಗುಂಪಾಗಿ ಭಾಗವಹಿಸಬೇಕು’’ ಎಂದರು.

ಆ ದಿನ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಒಂದು ಲಕ್ಷ ಸಾರ್ವಜನಿಕರು ಭಾಗವಹಿಸಿದರು. ಸಂಸತ್ ಸದಸ್ಯರು ಮತ್ತು ತನ್ನ ಮಂತ್ರಿ ಮಂಡಲದ ಸದಸ್ಯರೊಂದಿಗೆ ನೆಹರೂ ಈ ಮೆರವಣಿಗೆಯ ಮುಂಚೂಣಿಯಲ್ಲಿದ್ದರು ಎಂದಿತು ಟೈಮ್ಸ್ ಆಫ್ ಇಂಡಿಯಾದ ವರದಿ. ಈ ಮೆರವಣಿಗೆಯ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ 1963ರ ಜನವರಿ 28ರ ಸಂಚಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಚೀನೀ ದಾಳಿ ಮತ್ತು ದ್ರೋಹದ ವಿರುದ್ಧ್ದ ಮತ್ತು ಭಾರತದ ಗೌರವ ಮತ್ತು ಏಕ್ಯತೆಯ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಒಂದು ಲಕ್ಷ ಜನರು ಭಾಗವಹಿಸಿದರು.

ಆ ವರ್ಷ ಚೀನೀ ದಾಳಿಯಿಂದ ದೇಶವನ್ನು ರಕ್ಷಿಸಲು ಹೆಚ್ಚಿನ ಪಡೆಗಳು ಗಡಿಯಲ್ಲಿ ಕಾರ್ಯಾಚರಿಸುತ್ತಿತ್ತು. ಹಾಗಾಗಿ ಪರೇಡ್‌ನಲ್ಲಿ ಸಶಸ್ತ್ರ ಪಡೆಗಳ ಸಂಖ್ಯೆ ಕಡಿಮೆಯಿತ್ತು. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಕಾರಣ ಮತ್ತು ದೇಶದ ಆರ್ಥಿಕತೆಗೆ ಹೊರೆಯಾಗದಂತೆ ಮಿತವ್ಯಯ ಪಾಲಿಸಲು ಈ ನಾಗರಿಕ ಮೆರವಣಿಗೆಯಲ್ಲಿ ಯಾವುದೇ ಆಡಂಬರದ (ವರ್ಣರಂಜಿತ)ಬಹಿರಂಗ ಪ್ರದರ್ಶನಗಳಿರಲಿಲ್ಲ ಎಂದು ವರದಿ ಮಾಡಲಾಗಿತ್ತು.

ಆ ದಿನಗಳಲ್ಲಿ ಗಾಂಧಿ ಹತ್ಯೆಯ ಕಳಂಕದಿಂದ ತತ್ತರಿಸಿದ್ದ ಆರೆಸ್ಸೆಸ್ ಹೇಗಾದರೂ ಮಾಡಿ ಸಾಮಾಜಿಕ ಮಾನ್ಯತೆಯನ್ನು ಗಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಹಾಗಾಗಿ ಆರೆಸ್ಸೆಸ್ ಕಾರ್ಯಕರ್ತರು ಸಮವಸ್ತ್ರಧಾರಿಗಳಾಗಿ ಭಾರತೀಯ

ಮಜ್ದೂರ್ ಸಂಘದ ಸದಸ್ಯರಾಗಿ ಭಾಗವಹಿಸಿರಬಹುದು. ಆದರೆ ಇದರಲ್ಲಿ ಆರೆಸ್ಸೆಸ್ ವಿಶೇಷ ಪಾತ್ರವೇನೂ ಇರಲಿಲ್ಲ. ಗುಂಪಿನೊಡನೆ ಗೋವಿಂದ ಎಂಬಂತೆ ಆ ಭಾರೀ ಜನಪ್ರವಾಹದ ನಡುವೆ ಹೆಜ್ಜೆ ಹಾಕಿದರು ಆರೆಸ್ಸೆಸ್ ಕಾರ್ಯಕರ್ತರು. ಹಾಗಾಗಿ ಯಾವುದೇ ರಾಷ್ಟ್ರೀಯ ಪತ್ರಿಕೆ ಸಂಘದ ಭಾಗವಹಿಸುವಿಕೆಯ ಬಗ್ಗೆ ವಿಶೇಷ ವರದಿಯನ್ನೇನೂ ಮಾಡಲಿಲ್ಲ.

ಹಿಂದೂಸ್ಥಾನ ಎನ್ನುವ ಹಿಂದಿ ದೈನಿಕ ಜನವರಿ 28ರ ಸಂಚಿಕೆಯಲ್ಲಿ ಒಂದು ಪುಟವಿಡೀ ಈ ಮೆರವಣಿಗೆಯ ಪೋಟೊಗಳನ್ನು ಪ್ರಕಟಿಸಿತ್ತು. ಅದರಲ್ಲಿ ಆರೆಸ್ಸೆಸ್‌ನ ಒಂದಷ್ಟು ಕಾರ್ಯಕರ್ತರು ಭಾಗವಹಿಸಿದ ಪೋಟೊ ಪ್ರಕಟವಾಗಿತ್ತು. ಮತ್ತೊಂದು ಮುಖ್ಯ ಸಂಗತಿಯೆಂದರೆ ಈ ಪೋಟೊದಲ್ಲಿ ಆರೆಸ್ಸಸ್ ಸನಾತನ ಹಿಂದೂ ಧರ್ಮದ ಪ್ರತೀಕ ಎಂದೆಲ್ಲ ಬಿಂಬಿಸುವ ಕೇಸರಿ ಧ್ವಜವನ್ನು ಹಿಡಿದಿರಲಿಲ್ಲ. ಅದು ರಾಷ್ಟ್ರ ಧ್ವಜವನ್ನು ಹಿಡಿಯಬೇಕಾದ ಅನಿವಾರ್ಯತೆಯಿತ್ತು.

ಆರೆಸ್ಸ್ಸೆಸ್‌ನ ಮುಖವಾಣಿ ಆರ್ಗನೈಸರ್ ವಾರಪತ್ರಿಕೆಯು 1963 ರ ಫೆಬ್ರವರಿ 4ರ ಸಂಚಿಕೆಯಲ್ಲಿ, ಸಮವಸ್ತ್ರ ಧರಿಸಿದ ಎರಡು ಸಾವಿರ ಸ್ವಯಂ ಸೇವಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಮತ್ತು ಅದು ದಿಲ್ಲಿ ನಾಗರಿಕರ ಗುಂಪಿನ ಮುಖ್ಯ ಅಂಗವಾಗಿತ್ತು ಎಂದಿತು. ಆರೆಸ್ಸೆಸ್‌ನ ಈ ಮೆರವಣಿಗೆಯಲ್ಲಿ ಭಾಗವಹಿಸುವುದರ ಕುರಿತು ಹಲವು ಕಾಂಗ್ರೆಸಿಗರು ಆಕ್ಷೇಪಿಸಿದರು. ಅದಕ್ಕೆ ಉತ್ತರಿಸುತ್ತ ನೆಹರೂ ಹೀಗೆಂದಿದ್ದರು ‘‘ಆರೆಸ್ಸೆಸ್‌ನವರು ಘಾಝಿಯಾಬಾದ್, ಮೀರತ್ ಮತ್ತು ಇತರ ಸ್ಥಳಗಳಿಂದ ಸಮವಸ್ತ್ರಧಾರಿ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆಂದು ಮೆರವಣಿಗೆಯ ಮುನ್ನಾ ದಿನ ನನಗೆ ಕೆಲವು ಕಾಂಗ್ರೆಸಿಗರು ತಿಳಿಸಿದರು. ನಾನು ಆರೆಸ್ಸೆಸ್‌ನವರು ಭಾಗವಹಿಸುವುದನ್ನು ತಡೆಯಲು ಸಾಧ್ಯವಿಲ್ಲ. ಯಾರನ್ನೂ ನಿರ್ಬಂಧಿಸುವುದು ಸರಿಯಲ್ಲ. ಯಾವುದೇ ಖಾಸಗಿ ವಾದ್ಯ ಮಾತ್ರ ಬೇಡವೆಂದೆ. ಇನ್ನುಳಿದಂತೆ ಯಾವುದೇ ಉಡುಪು ಅಥವಾ ಸಮವಸ್ತ್ರ ಧರಿಸಿ ಭಾಗವಹಿಸುವುದನ್ನು ತಡೆಯಲು ಸಾಧ್ಯವಿಲ್ಲ’’

ಹಾಗಾಗಿ ಆರೆಸ್ಸ್ಸೆಸ್ ಭಾಗವಹಿಸಿದ್ದ ಮೆರವಣಿಗೆ ಹಲವಾರು ಸಂಘ ಸಂಸ್ಥೆಗಳು ಭಾಗವಹಿಸಿದ್ದ್ದ ಒಂದು ಬೃಹತ್ ನಾಗರಿಕ ನಡೆಯಾಗಿತ್ತು.

1963ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಪ್ರಧಾನಿ ನೆಹರೂ ಆರೆಸ್ಸೆಸ್‌ನ ಸರಸಂಘ ಚಾಲಕ ಎಂ. ಎಸ್. ಗೋಳ್ವಾಲ್ಕರವರನ್ನು ಆಹ್ವಾನಿಸಿದ್ದರು ಮತ್ತು ಅದಕ್ಕೆ ಸಮ್ಮತಿಸಿ ಆರೆಸ್ಸೆಸ್ ಕಾರ್ಯಕರ್ತರು ಭಾಗವಹಿಸಿದ್ದರು ಎನ್ನುವುದೇ ಆರೆಸ್ಸೆಸ್‌ನ ಸುಳ್ಳಿನ ಕಾರ್ಖಾನೆಯಲ್ಲಿ ತಯಾರಾದ ‘ದೇಶಭಕ್ತ’ ಎಂಬ ಪ್ಯಾಕೇಟಿನೊಳಗೆ ಮಡಚಿಟ್ಟ ಅಪ್ಪಟ ಬೊಗಳೆ.

(ಆಧಾರ: ಧಿರೇಂದ್ರ ಕೆ. ಝಾ., ದಿ. ಕಾರವಾನ ಇಂಗ್ಲಿಷ್ ಮಾಸ ಪತ್ರಿಕೆ, ಫೆಬ್ರವರಿ 2023)


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News