×
Ad

ಐಟಿಆರ್ ತಡೆಹಿಡಿಯಲಾಗಿದೆಯೆ?; ತೆರಿಗೆ ಪಾವತಿದಾರರಿಗೆ ಬರುತ್ತಿರುವ ʼಅಲರ್ಟ್ʼಗಳ ಬಗ್ಗೆ ತೆರಿಗೆ ಇಲಾಖೆಯ ಸ್ಪಷ್ಟೀಕರಣವೇನು?

Update: 2025-12-24 17:14 IST

ಸಾಂದರ್ಭಿಕ ಚಿತ್ರ | PC : freepik.com

ತಪ್ಪು ಮಾಹಿತಿಯನ್ನು ಸ್ವಯಂಪ್ರೇರಿತರಾಗಿ ಸರಿಪಡಿಸಬೇಕಿದೆ ಅಥವಾ ಕ್ಲೇಮ್ ಮಾನ್ಯವಾದುದು ಎಂದು ಪರಿಶೀಲನೆಯಾದ ನಂತರ ಮರುಪಾವತಿಯನ್ನು ಮಾಡಲಾಗುತ್ತದೆ ಎಂದು ಇಲಾಖೆ ಹೇಳಿದೆ.

ತೆರಿಗೆ ಪಾವತಿದಾರರಿಗೆ ಬರುತ್ತಿರುವ ಅಲರ್ಟ್ಗಳ ಕುರಿತಾಗಿ ಇದೀಗ ತೆರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದೆ. ಅಲರ್ಟ್ಗಳು ಸಲಹೆ ರೂಪದಲ್ಲಿ ನೀಡಲಾಗಿದ್ದು, ತಮ್ಮ ತಪ್ಪನ್ನು ಸರಿಪಡಿಸುವಂತೆ ಪ್ರೋತ್ಸಾಹಿಸಲಾಗಿದೆ. ತಪ್ಪು ಮಾಹಿತಿಯನ್ನು ಸರಿಪಡಿಸುವುದು ಅಥವಾ ಕ್ಲೇಮ್ ಮಾನ್ಯವಾದುದು ಎಂದು ಪರಿಶೀಲನೆಯಾದ ನಂತರ ಮರುಪಾವತಿಯನ್ನು ಮಾಡಲಾಗುತ್ತದೆ ಎಂದು ಇಲಾಖೆ ಹೇಳಿದೆ.

ಆದಾಯ ತೆರಿಗೆ ಇಲಾಖೆಯಿಂದ ಬರುತ್ತಿರುವ ಸಂದೇಶಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ. “ಅಲರ್ಟ್ಗಳು ಹೊಸ ಡಾಟಾ-ಚಾಲಿತ ನಡ್ಜ್ (ಕ್ಲೇಮ್ ತಪ್ಪಾಗಿರುವ ಕುರಿತು ವ್ಯವಸ್ಥೆಯಿಂದ ಬಂದಿರುವ ಎಚ್ಚರಿಕೆ) ಅಭಿಯಾನವಾಗಿದೆ. ತೆರಿಗೆ ಪಾವತಿದಾರರು ತಮ್ಮ ಕ್ಲೇಮ್ನಲ್ಲಿ ಮಾಡಿರಬಹುದಾದ ತಪ್ಪುಗಳನ್ನು ಸ್ವಯಂಪ್ರೇರಿತರಾಗಿ ಸರಿಪಡಿಸುವಂತೆ ಈ ಅಲರ್ಟ್ಗಳನ್ನು ನೀಡಲಾಗಿದೆ. ನಿರ್ದಿಷ್ಟ ತೆರಿಗೆ ಪಾವತಿದಾರರು ಅನರ್ಹ ಮರುಪಾವತಿಗಳನ್ನು ಕ್ಲೇಮ್ ಮಾಡಿದ್ದಾರೆ ಅಥವಾ ಅರ್ಹವಲ್ಲದ ವಿನಾಯಿತಿಗಳನ್ನು ಕೇಳಿದ್ದಾರೆ. ಅಂತಹವರಿಗೆ ಅಲರ್ಟ್ ಕೊಡಲಾಗಿದೆ” ಎಂದು ಇಲಾಖೆ ಹೇಳಿದೆ.

ತೆರಿಗೆ ಪಾವತಿದಾರರು ಅಲರ್ಟ್ ಸ್ವೀಕರಿಸಿರುವುದೇಕೆ?

ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೆರಿಗೆ ಪಾವತಿದಾರರು ನಿರ್ದಿಷ್ಟ ತಪ್ಪುಗಳಿಗೆ ತಮ್ಮ ಮರುಪಾವತಿ ಕ್ಲೇಮ್ ಅನ್ನು ತಡೆಹಿಡಿಯಲಾಗಿದೆ ಎಂದು ಸಂದೇಶಗಳನ್ನು ಹಾಕುತ್ತಿದ್ದಾರೆ. ಅಲರ್ಟ್ಗಳಲ್ಲಿರುವ ಕೆಲವು ಪದಗಳು ಗೊಂದಲಕ್ಕೆ ಕಾರಣವಾಗಿದೆ. ಅಲರ್ಟ್ ಸಂದೇಶವನ್ನು ನೋಟೀಸ್ ರೂಪದಲ್ಲಿ ಕೊಡಲಾಗಿದೆಯೆ ಅಥವಾ ಅನುಸರಣೆಯಲ್ಲಿ ಗಂಭೀರ ತಪ್ಪುಗಳನ್ನು ಸೂಚಿಸಲಾಗಿದೆಯೇ ಎಂಬ ಗೊಂದಲವಿತ್ತು.

ಇದೀಗ ಇಲಾಖೆ ನೀಡಿದ ಸ್ಪಷ್ಟೀಕರಣದಲ್ಲಿ ಅಲರ್ಟ್ಗಳು ಶಿಕ್ಷಾರ್ಹವಲ್ಲ ಎಂದು ತಿಳಿಸಲಾಗಿದೆ. “ಅಲರ್ಟ್ಗಳು ಶಿಕ್ಷೆಯ ಸೂಚನೆಯಲ್ಲ, ಬದಲಾಗಿ ವಿನಾಯಿತಿ ಕ್ಲೇಮ್ಗಳು ಅಥವಾ ಕಡಿತಗಳು ತೃತೀಯ ಪಕ್ಷದ ಡಾಟಾ ಜೊತೆಗೆ ಹೊಂದಿಕೆಯಾಗದೆ ಇರಬಹುದು ಅಥವಾ ಸಂಭವಿಸಿರಬಹುದಾದ ನಿರ್ದಿಷ್ಟ ದೋಷಗಳನ್ನು ಮುಂದಿಡಲಾಗಿದೆ. 2025-26ರ ವಿತ್ತೀಯ ವರ್ಷದಲ್ಲಿ ಪ್ರಕರಣಗಳನ್ನು ಅತ್ಯಾಧುನಿಕ ಡಾಟಾ ಅನಾಲಿಟಿಕ್ಸ್ ಬಳಸಿ ಗುರುತಿಸಲಾಗುತ್ತಿದೆ” ಎಂದು ವಿವರಣೆ ನೀಡಲಾಗಿದೆ.

ಬೋಗಸ್ ರಾಜಕೀಯ ದಾನಗಳು, ಅಮಾನ್ಯ ಅಥವಾ ತಪ್ಪು ಪ್ಯಾನ್ಗಳು ಮತ್ತು ಕ್ಲೇಮ್ ಮಾಡಿದ ಮೊತ್ತಗಳು ಹೊಂದಿಕೆಯಾಗದೆ ಇರುವುದು. ಕೆಲವು ಪ್ರಕರಣಗಳಲ್ಲಿ ಅಮಾನ್ಯ ಪ್ಯಾನ್ಗಳನ್ನೂ ತಪ್ಪಾದ ಸಲ್ಲಿಕೆ ಎಂದು ತೋರಿಸಲಾಗಿದೆ.

ದತ್ತಾಂಶ ಚಾಲಿತ ನಡ್ಜ್ ಅಭಿಯಾನ

ನೇರ ತೆರಿಗೆಯ ಕೇಂದ್ರೀಯ ಮಂಡಳಿ (ಸಿಟಿಬಿಟಿ) ಹೇಳಿರುವ ಪ್ರಕಾರ 2025-26ರಲ್ಲಿ ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನ ಆಧರಿತ ಮೌಲ್ಯಮಾಪನವನ್ನು ಮಾಡಲಾಗಿದೆ. ಈ ಮೌಲ್ಯಮಾಪನದ ಸಂದರ್ಭದಲ್ಲಿ ತೆರಿಗೆದಾರರು ಅನರ್ಹ ಕಡಿತಗಳನ್ನು ಕ್ಲೇಮ್ ಮಾಡಿರಬಹುದು. ಆದರೆ ಅವುಗಳನ್ನು ಪರಿಶೀಲಿಸಿ ಸರಿಪಡಿಸುವಂತೆ ಸಂದೇಶ ಮತ್ತು ಇಮೇಲ್ ಮೂಲಕ ಸೂಚಿಸಲಾಗಿದೆ. ಇದರಿಂದ ತೆರಿಗೆ ಪಾವತಿದಾರರಿಗೆ ತಪ್ಪಾದ ಅಥವಾ ಅನರ್ಹ ಕ್ಲೇಮ್ಗಳನ್ನು ಸರಿಪಡಿಸುವ ಅವಕಾಶ ದೊರೆತಿದೆ ಎಂದು ಇಲಾಖೆ ಹೇಳಿದೆ.

“ತನಿಖೆಯ ಬದಲಾಗಿ ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸುವ ವಿಶ್ವಾಸ ಮೊದಲು” ಎನ್ನುವ ದೃಷ್ಟಿಕೋನವನ್ನು ತೆರಿಗೆ ಆಡಳಿತ ಪ್ರತಿಫಲಿಸಿದೆ. ಕಾನೂನುರೀತ್ಯ ಅನುಸರಣೆ ಮಾಡಿರುವ ಅರ್ಹವಾದ ಕಡಿತಗಳ ಕ್ಲೇಮ್ಗಳಿಗೆ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದೆ.

ತಿದ್ದುಪಡಿಗಳಿಗೆ ಡಿಸೆಂಬರ್ 31 ಅಂತಿಮ ಗಡುವು

ಇಲಾಖೆಯು ತೆರಿಗೆ ಪಾವತಿದಾರರಿಗೆ ತಮ್ಮ ಐಟಿಆರ್ ಸಲ್ಲಿಕೆಯಲ್ಲಿರಬಹುದಾದ ತಪ್ಪುಗಳನ್ನು ಸರಿಪಡಿಸಲು 2025 ಡಿಸೆಂಬರ್ 31ರವರೆಗೆ ಸಮಯ ನೀಡಿದೆ. ಪ್ರಸ್ತುತ ವಿತ್ತೀಯ ವರ್ಷಕ್ಕೆ ತೆರಿಗೆ ಸಲ್ಲಿಕೆಗೆ ಅದು ಕೊನೆಯ ದಿನಾಂಕವಾಗಿರುತ್ತದೆ. ಈ ದಿನಾಂಕದಂದು ತೆರಿಗೆ ಸಲ್ಲಿಕೆ ಸಾಧ್ಯವಾಗದೆ ಇರುವವರು 2026 ಜನವರಿ 1ರಿಂದ ನವೀಕೃತ ರಿಟರ್ನ್ ಸಲ್ಲಿಸಬಹುದು. ಅಂತಹ ಸಲ್ಲಿಕೆಗೆ ಹೆಚ್ಚುವರಿ ತೆರಿಗೆ ಬಾಧ್ಯತೆಗಳು ಬೀಳಲಿವೆ.

ಮರುಪಾವತಿ ವಿಳಂಬಕ್ಕೆ ಕಾರಣ

ತೆರಿಗೆ ಪಾವತಿದಾರರು ಆಗಿರುವ ತಪ್ಪನ್ನು ಪರಿಶೀಲಿಸುವುದು ಮತ್ತು ಸಲ್ಲಿಕೆಯನ್ನು ಸರಿಪಡಿಸಿದ ನಂತರವಷ್ಟೇ ಮರುಪಾವತಿ ದೊರೆಯಲಿದೆ. ಕಡಿತಗಳು ಅಥವಾ ವಿನಾಯಿತಿಗಳಲ್ಲಿ ಅಸಂಗತತೆಗಳು ಕಂಡುಬಂದಾಗ ವ್ಯವಸ್ಥೆ ಅಲರ್ಟ್ಗಳನ್ನು ಕಳುಹಿಸಿದೆ. ಹೀಗಾಗಿ ಮರುಪಾವತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ತೆರಿಗೆ ಪಾವತಿದಾರರು ತಮ್ಮ ಕ್ಲೇಮ್ ಅನ್ನು ಮರುಪರಿಶೀಲಿಸಿ ಸಲ್ಲಿಸುವವರೆಗೆ ಮರುಪಾವತಿ ವಿಳಂಬವಾಗಲಿದೆ.

ತೆರಿಗೆ ಪಾವತಿದಾರರು ಏನು ಮಾಡಬೇಕು?

ತೆರಿಗೆ ಪಾವತಿದಾರರು ರಿಟರ್ನ್ ಸಲ್ಲಿಕೆಯಲ್ಲಿನ ತಮ್ಮ ಕಡಿತಗಳು ಮತ್ತು ವಿನಾಯಿತಿ ಕ್ಲೇಮ್ಗಳನ್ನು AIS, ಫಾರ್ಮ್ 26AS, ಫಾರ್ಮ್ 16 ಮತ್ತು ದಾನದ ರಶೀದಿಗಳ ಜೊತೆಗೆ ಪರಿಶೀಲಿಸಿ ನೋಡಬೇಕು. ತಪ್ಪುಗಳು ಕಂಡುಬಂದಲ್ಲಿ ತಿದ್ದುಪಡಿ ಮಾಡಿ ಡಿಸೆಂಬರ್ 31ರೊಳಗೆ ಸಲ್ಲಿಕೆ ಮಾಡಬೇಕಿದೆ. ತಮ್ಮ ಕ್ಲೇಮ್ಗಳು ಸರಿಯಾಗಿವೆ ಎನ್ನುವ ವಿಶ್ವಾಸ ಇದ್ದವರು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿರುವುದಿಲ್ಲ.

ಅಲರ್ಟ್ಗಳನ್ನು ಕಳುಹಿಸಿದ ವಾರದ ನಂತರ ತೆರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದೆ. ಆತಂಕದಲ್ಲಿದ್ದ ತೆರಿಗೆ ಪಾವತಿದಾರರಿಗೆ ಕನಿಷ್ಠ ಸಮಾಧಾನ ದೊರೆತಿದೆ. ದಯವಿಟ್ಟು ಗಮನಿಸಬೇಕಾದ ವಿಷಯವೆಂದರೆ, ಅವು ತೆರಿಗೆ ತಪ್ಪಿಸಿರುವುದಕ್ಕಾಗಿ ನೀಡುವ ನೋಟೀಸ್ ಆಗಿರುವುದಿಲ್ಲ. ತನಿಖೆ ಮಾಡುತ್ತೇವೆ ಎನ್ನುವ ಸೂಚನೆಯೂ ಅಲ್ಲ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News