ಬೆಂದಕಾಳೂರಿನಲ್ಲಿ ‘ಹಿಮಗಿರಿ’ಯ ನಡುಕ
ಈ ದಟ್ಟ ಮಂಜಿನ ಹಿಂದೆ ಅಡಗಿದೆ ಭೌತಶಾಸ್ತ್ರದ ಚಳಕ!
ಕಂಸಾಲಿ ನಾಗರಾಜ ಹಾಗೂ ಚನಬಸನಗೌಡ ಎಸ್. ಪಾಟೀಲ್
ಬೆಂಗಳೂರಿನ ಇತ್ತೀಚಿನ ಶೀತಲ ಮುಂಜಾವು ಮತ್ತು ದಟ್ಟವಾದ ಮಂಜು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಉತ್ತರ ಭಾರತದ ಬಯಲು ಸೀಮೆಗೆ ಸೀಮಿತವೆಂದು ಭಾವಿಸಲಾದ ಇಂತಹ ಹವಾಮಾನ ಪರಿಸ್ಥಿತಿಗಳು, ಉಷ್ಣವಲಯದ ನಗರವಾದ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ವಿಜ್ಞಾನಿಗಳ ದೃಷ್ಟಿಕೋನದಲ್ಲಿ ಈ ಬದಲಾವಣೆಗಳು ಯಾವುದೇ ಅಸಹಜ ವಿದ್ಯಮಾನಗಳಲ್ಲ; ಬದಲಾಗಿ ಇವು ವಾತಾವರಣದ ಮೂಲಭೂತ ಭೌತಶಾಸ್ತ್ರದ ನಿಯಮಗಳ ಸಹಜ ಮತ್ತು ನಿಖರ ಪರಿಣಾಮಗಳಾಗಿವೆ. ಹವಾಮಾನವು ಮೇಲ್ನೋಟಕ್ಕೆ ಅನಿರೀಕ್ಷಿತವೆಂದು ತೋರಿದರೂ, ಅದು ಪ್ರಕೃತಿಯ ಸುಸ್ಮಾಪಿತ ಭೌತಿಕ ತತ್ವಗಳನ್ನು ಚಾಚೂತಪ್ಪದೆ ಅನುಸರಿಸುತ್ತದೆ.
ಬೆಂಗಳೂರು ನಗರವು ದಕ್ಷಿಣ ದಕ್ಕನ್ ಪೀಠಭೂಮಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿದೆ. ಈ ಭೌಗೋಳಿಕ ಎತ್ತರವು ನಗರದ ಹವಾಮಾನವನ್ನು ರೂಪಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಕರಾವಳಿ ನಗರಗಳಂತೆ ಇಲ್ಲಿ ಸಮುದ್ರದ ಹಿತಕರ ಮತ್ತು ಸ್ಥಿರ ಪ್ರಭಾವ ಇಲ್ಲದ ಕಾರಣ, ಚಳಿಗಾಲದಲ್ಲಿ ಹಗಲು ಮತ್ತು ರಾತ್ರಿಯ ತಾಪಮಾನದ ನಡುವೆ ಭಾರೀ ವ್ಯತ್ಯಾಸವಿರುತ್ತದೆ. ಚಳಿಗಾಲದ ಸಮಯದಲ್ಲಿ ಆಕಾಶವು ಮೋಡರಹಿತವಾಗಿ ಸ್ವಚ್ಛವಾಗಿರುತ್ತದೆ ಮತ್ತು ಗಾಳಿಯ ವೇಗವು ಕ್ಷೀಣಿಸಿರುತ್ತದೆ. ಈ ವಿಶಿಷ್ಟ ಪರಿಸ್ಥಿತಿಗಳು ರಾತ್ರಿಯ ವೇಳೆಯಲ್ಲಿ ಭೂಮಿಯ ಮೇಲೆಯೂ ಅತಿ ವೇಗವಾಗಿ ತಂಪಾಗಲು ಪೂರಕವಾಗಿರುತ್ತವೆ.
ಈ ಸಮಗ್ರ ಪ್ರಕ್ರಿಯೆಯಲ್ಲಿ ವಿಕಿರಣಾತ್ಮಕ ತಂಪಾಗುವಿಕೆ ಅಥವಾ ರೇಡಿಯೇಷನಲ್ ಕೂಲಿಂಗ್ ಅತ್ಯಂತ ಮುಖ್ಯವಾದುದು. ಸೂರ್ಯಾಸ್ತದ ನಂತರ ಭೂಮಿಯ ಮೇಲ್ಮೈ ತಾನು ಹಗಲಿನಲ್ಲಿ ಹೀರಿಕೊಂಡ ಶಾಖವನ್ನು ಅತಿಗೆಂಪು ಕಿರಣಗಳ ರೂಪದಲ್ಲಿ ವಾತಾವರಣದ ಮೂಲಕ ಬಾಹ್ಯಾಕಾಶಕ್ಕೆ ಹೊರಹಾಕುತ್ತದೆ. ಆಕಾಶವು ಮೋಡರಹಿತವಾಗಿದ್ದಾಗ ಈ ಉಷ್ಣತೆಯು ಯಾವುದೇ ಅಡೆತಡೆಯಿಲ್ಲದೆ ಹೊರಹೋಗುತ್ತದೆ. ಇದರಿಂದಾಗಿ ಭೂಮಿಯ ಮೇಲ್ಮೈ ತಾಪಮಾನವು ತೀವ್ರವಾಗಿ ಇಳಿಯುತ್ತದೆ. ಭೂಮಿಯು ಹೀಗೆ ತಂಪಾದಾಗ ಅದರ ಸಂಪರ್ಕದಲ್ಲಿರುವ ಗಾಳಿಯ ಪದರವೂ ಸಹ ತಂಪಾಗತೊಡಗುತ್ತದೆ.
ಯಾವಾಗ ಈ ಗಾಳಿಯ ತಾಪಮಾನವು ‘ಇಬ್ಬನಿ ಬಿಂದು’ ಎನ್ನಲಾಗುವ ಸ್ಯಾಚುರೇಶನ್ ಮಟ್ಟವನ್ನು ತಲುಪುತ್ತದೆಯೋ, ಆಗ ಗಾಳಿಯಲ್ಲಿರುವ ಅದೃಶ್ಯ ತೇವಾಂಶವು ಸಣ್ಣ ನೀರಿನ ಹನಿಗಳಾಗಿ ಪರಿವರ್ತನೆಗೊಂಡು ಮಂಜಿನ ರೂಪ ಪಡೆಯುತ್ತದೆ. ಸರಳವಾಗಿ ಹೇಳುವುದಾದರೆ, ಮಂಜು ಎಂಬುದು ಭೂಮಿಯ ಮೇಲ್ಮೈಗೆ ಅಂಟಿಕೊಂಡಂತೆ ರೂಪುಗೊಳ್ಳುವ ಒಂದು ಮೋಡವಷ್ಟೇ. ಈ ಹನಿಗಳು ಗಾಳಿಯಲ್ಲಿ ತೇಲುತ್ತಾ ಬೆಳಕನ್ನು ಚದುರಿಸುವುದರಿಂದ ನಮಗೆ ಮುಂಭಾಗದ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ.
ಆಧುನಿಕ ನಗರೀಕರಣವು ಈ ಮಂಜಿನ ಸಾಂದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ಬಿಡುಗಡೆಯಾಗುವ ಸೂಕ್ಷ್ಮ ಘನ ಕಣಗಳು ವಾತಾವರಣದಲ್ಲಿ ಇರುತ್ತವೆ. ಇವುಗಳನ್ನು ವಿಜ್ಞಾನದ ಭಾಷೆಯಲ್ಲಿ ‘ಸಾಂದ್ರೀಕರಣ ಕೇಂದ್ರಗಳು’ ಎಂದು ಕರೆಯಲಾಗುತ್ತದೆ. ಗಾಳಿಯಲ್ಲಿರುವ ತೇವಾಂಶವು ನೀರಿನ ಹನಿಯಾಗಿ ಬದಲಾಗಲು ಈ ಕಣಗಳು ಆಧಾರವಾಗಿ ಕಾರ್ಯನಿರ್ವಹಿಸುತ್ತವೆ. ಮಾಲಿನ್ಯಕಾರಕ ಕಣಗಳು ಹೆಚ್ಚಾದಷ್ಟೂ ಮಂಜಿನ ಸಾಂದ್ರತೆಯು ಹೆಚ್ಚಾಗುತ್ತದೆ ಮತ್ತು ದೃಶ್ಯತೆಯು ಇದ್ದಕ್ಕಿದ್ದಂತೆ ಕುಸಿಯುತ್ತದೆ.
ಮತ್ತೊಂದು ಸಂಕೀರ್ಣ ಭೌತಿಕ ಪ್ರಕ್ರಿಯೆಯೆಂದರೆ ‘ತಾಪಮಾನದ ವಿಲೋಮ ಸ್ಥಿತಿ’. ಸಾಮಾನ್ಯ ಪರಿಸ್ಥಿತಿಯಲ್ಲಿ ನಾವು ಎತ್ತರಕ್ಕೆ ಹೋದಂತೆ ಗಾಳಿಯು ತಂಪಾಗುತ್ತಾ ಹೋಗುತ್ತದೆ. ಆದರೆ ಚಳಿಗಾಲದ ಶಾಂತ ರಾತ್ರಿಗಳಲ್ಲಿ ಭೂಮಿಯ ಮೇಲೆ ವಿಕಿರಣದ ಮೂಲಕ ಅತಿ ವೇಗವಾಗಿ ತಂಪಾಗುವುದರಿಂದ, ಕೆಳಮಟ್ಟದಲ್ಲಿ ತಂಪಾದ ಭಾರವಾದ ಗಾಳಿ ಮತ್ತು ಅದರ ಮೇಲೆ ತುಲನಾತ್ಮ ಕವಾಗಿ ಬೆಚ್ಚಗಿನ ಹಗುರವಾದ ಗಾಳಿಯ ಪದರ ನಿರ್ಮಾಣವಾಗುತ್ತದೆ.
ಈ ವಿಲೋಮ ಸ್ಥಿತಿಯು ಗಾಳಿಯ ಲಂಬ ಚಲನೆಯನ್ನು ಸಂಪೂರ್ಣವಾಗಿ ತಡೆಯುವ ಒಂದು ಅದೃಶ್ಯ ಮುಚ್ಚಳದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಭೂಮಿಯ ಹತ್ತಿರದ ತಂಪಾದ ಗಾಳಿಯು ಮೇಲಕ್ಕೆ ಹೋಗಲಾರದೆ ಮಂಜು ಮತ್ತು ಧೂಳಿನ ಕಣಗಳನ್ನು ತನ್ನಲ್ಲೇ ಬಂಧಿಸಿಟ್ಟುಕೊಳ್ಳುತ್ತದೆ. ಸೂರ್ಯೋದಯವಾಗಿ ಭೂಮಿಯು ಮತ್ತೆ ಬಿಸಿಯಾಗುವವರೆಗೂ ಈ ಸ್ಥಿತಿ ಮುಂದುವರಿಯುತ್ತದೆ.
ಬೆಂಗಳೂರಿನ ಏರಿಳಿತದ ಭೂಪ್ರದೇಶವೂ ಸಹ ಈ ವಿದ್ಯಮಾನಕ್ಕೆ ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ತಂಪಾದ ಗಾಳಿಯು ಸಾಂದ್ರತೆ ಹೆಚ್ಚಿರುವುದರಿಂದ ಭಾರವಾಗಿರುತ್ತದೆ, ಹೀಗಾಗಿ ಅದು ಸ್ವಾಭಾವಿಕವಾಗಿ ಗುಡ್ಡಗಾಡು ಪ್ರದೇಶಗಳಿಂದ ಹರಿದು ಬಂದು ತಗ್ಗು ಪ್ರದೇಶಗಳಲ್ಲಿ ಶೇಖರಣೆಯಾಗುತ್ತದೆ. ಆದ್ದರಿಂದಲೇ ವಿಮಾನ ನಿಲ್ದಾಣದಂತಹ ನಗರದ ಹೊರವಲಯದ ತೆರೆದ ಪ್ರದೇಶಗಳಲ್ಲಿ ಮಂಜು ಹೆಚ್ಚು ದಟ್ಟವಾಗಿ ಮತ್ತು ದೀರ್ಘಕಾಲದವರೆಗೆ ಕಾಣಿಸಿಕೊಳ್ಳುತ್ತದೆ.
ಅಂತಿಮವಾಗಿ, ಸೂರ್ಯೋದಯದ ನಂತರ ಸೌರ ವಿಕಿರಣವು ಭೂಮಿಯನ್ನು ಕಾಯಿಸಿದಾಗ ಈ ವಿಲೋಮ ಪದರವು ದುರ್ಬಲಗೊಳ್ಳುತ್ತದೆ. ತಳಮಟ್ಟದ ಗಾಳಿಯು ಬೆಚ್ಚಗಾಗುತ್ತಿದ್ದಂತೆ ಮಂಜಿನ ಹನಿಗಳು ಆವಿಯಾಗಿ ಪುನಃ ಅದೃಶ್ಯವಾಗುತ್ತವೆ ಮತ್ತು ದೃಶ್ಯತೆಯು ಸುಧಾರಿಸುತ್ತದೆ. ಶೀತ ಅಲೆಗಳು, ಮಂಜು ಅಥವಾ ಯಾವುದೇ ಹವಾಮಾನದ ಏರಿಳಿತಗಳ ಹಿಂದೆ ಭೌತಶಾಸ್ತ್ರದ ಬಲವಾದ ಅಡಿಪಾಯವಿರುತ್ತದೆ. ಹವಾಮಾನದ ವಿಜ್ಞಾನವನ್ನು ಅರ್ಥಮಾಡಿಕೊಂಡಾಗ ನಮಗೆ ಪ್ರಕೃತಿಯ ಈ ವಿಸ್ಮಯಗಳು ಗೂಢವಾಗಿ ಉಳಿಯದೆ ತರ್ಕಬದ್ಧವಾಗಿ ಗೋಚರಿಸುತ್ತವೆ.