21 ದೇಶಗಳಲ್ಲಿ ಪ್ರತಿ ವರ್ಷ ಬರೋಬ್ಬರಿ 2 ಕೋಟಿ ಮಕ್ಕಳು ಆನ್ಲೈನ್ ಲೈಂಗಿಕ ಶೋಷಣೆಗೊಳಗಾಗುತ್ತಿದ್ದಾರೆ: UNICEF ವರದಿ
►ಅನುಷೆ ಇಂಜಿನಿಯರ್ – Aljazeera. com ವರದಿ
ಸಾಂದರ್ಭಿಕ ಚಿತ್ರ | Photo Credit : magnific.com
ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, 21 ದೇಶಗಳಲ್ಲಿ ಪ್ರತಿ ವರ್ಷ ಬರೋಬ್ಬರಿ 2 ಕೋಟಿ ಮಕ್ಕಳು ಆನ್ಲೈನ್ ಲೈಂಗಿಕ ಶೋಷಣೆ ಅಥವಾ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.
ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕ, ಕೆರಿಬಿಯನ್ ಮತ್ತು ಪೂರ್ವ ಯುರೋಪ್ ನ ದೇಶಗಳಲ್ಲಿ ಡಿಜಿಟಲ್ ವೇದಿಕೆಗಳನ್ನು ಬಳಸುವ 12 ರಿಂದ 17 ವರ್ಷದ ಶೇಕಡಾ 20 ಕ್ಕಿಂತ ಹೆಚ್ಚು (ಐದರಲ್ಲಿ ಒಬ್ಬರು) ಮಕ್ಕಳು ಲೈಂಗಿಕ ದೌರ್ಜನ್ಯ ಎಸಗುವವರ ಜಾಲಕ್ಕೆ ಸಿಲುಕುತ್ತಿದ್ದಾರೆ ಎಂದು ಗುರುವಾರ ಪ್ರಕಟವಾದ UNICEF ವರದಿ ತಿಳಿಸಿದೆ.
ಸಂಶೋಧಕರು 21 ದೇಶಗಳಲ್ಲಿ ಇಂಟರ್ನೆಟ್ ಬಳಸುವ 12 ರಿಂದ 17 ವರ್ಷ ವಯಸ್ಸಿನ 21,000 ಮಕ್ಕಳನ್ನು 2020 ಮತ್ತು 2021ರ ನಡುವೆ ಹಾಗೂ ಮತ್ತೊಮ್ಮೆ 2024 ಮತ್ತು 2025ರ ನಡುವೆ ಸಮೀಕ್ಷೆಗೆ ಒಳಪಡಿಸಿದ್ದರು. ಇದರ ಜೊತೆಗೆ, ಬಾಲ್ಯದಲ್ಲಿ ಆನ್ಲೈನ್ ದೌರ್ಜನ್ಯಕ್ಕೆ ಒಳಗಾದ 100 ಯುವಜನರೊಂದಿಗೆ ಮುಖಾಮುಖಿ ಸಂದರ್ಶನ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.
ವರದಿಯ ಪ್ರಕಾರ, ಶೇಕಡಾ 50ಕ್ಕಿಂತ ಹೆಚ್ಚು ದೌರ್ಜನ್ಯ ಪ್ರಕರಣಗಳಿಗೆ ಸಾಮಾಜಿಕ ಮಾಧ್ಯಮಗಳೇ ವೇದಿಕೆಯಾಗಿವೆ. ಆದರೆ, ಮಕ್ಕಳು ಘಟನೆಗಳನ್ನು ಮುಚ್ಚಿಡುವುದರಿಂದ ಈ ಅಂಕಿ-ಅಂಶಗಳು ಇಷ್ಟಕ್ಕೇ ಸೀಮಿತವಾಗಿಲ್ಲ ಎಂದು UNICEF ಎಚ್ಚರಿಸಿದೆ. ದೌರ್ಜನ್ಯಕ್ಕೊಳಗಾದ ಘಟನೆಗಳಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಪ್ರಕರಣಗಳು ಮಾತ್ರ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಕಳೆದ ವಾರ, ಮಕ್ಕಳ ಸುರಕ್ಷತೆಯನ್ನು ನಿರ್ಲಕ್ಷಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಮುಖ ಫೆಡರಲ್ ಪ್ರಕರಣದಲ್ಲಿ, ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ಮೆಟಾ 18 ಶತಕೋಟಿ ಡಾಲರ್ (ಸುಮಾರು 1.70 ಲಕ್ಷ ಕೋಟಿ ರೂ.) ಬೃಹತ್ ಪರಿಹಾರ ನೀಡಲು ಒಪ್ಪಿಕೊಂಡಿದೆ. ಮೆಟಾ ಸಂಸ್ಥೆಯು ತನ್ನ ವೇದಿಕೆಗಳನ್ನು ಮಕ್ಕಳು ದಾಸರಾಗುವಂತೆ ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಿದೆ ಮತ್ತು ಅವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಿವೆ ಎಂದು ಆರೋಪಿಸಿ ಈ ವರ್ಷ ಸರಣಿ ಕಾನೂನು ಮೊಕದ್ದಮೆಗಳನ್ನು ಎದುರಿಸಿದೆ. ಇದೀಗ ತನ್ನ ಸಾಮಾಜಿಕ ಜಾಲತಾಣಗಳ ವೈಶಿಷ್ಟ್ಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಕಂಪೆನಿ ಸಮ್ಮತಿಸಿದೆ.
UNICEF ವರದಿಯ ಮುಖ್ಯ ಅಂಶಗಳೇನು?
ಸಮೀಕ್ಷೆಗೆ ಒಳಪಡಿಸಿದ ಅವಧಿಯಲ್ಲಿ 1.5 ಕೋಟಿಗೂ ಹೆಚ್ಚು ಮಕ್ಕಳು ಇಷ್ಟವಿಲ್ಲದಿದ್ದರೂ ಲೈಂಗಿಕ ವಿಷಯಗಳಿಗೆ ಒಡ್ಡಿಕೊಂಡಿದ್ದಾರೆ. 90 ಲಕ್ಷ ಮಕ್ಕಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಭಾಷಣೆಗೆ ಅಥವಾ ಲೈಂಗಿಕ ಚಿತ್ರಗಳನ್ನು ಹಂಚಿಕೊಳ್ಳಲು ಒತ್ತಾಯಿಸಲಾಗಿದೆ. ಇನ್ನು 40 ಲಕ್ಷ ಮಕ್ಕಳ ಖಾಸಗಿ ಚಿತ್ರಗಳನ್ನು ಅವರ ಅನುಮತಿಯಿಲ್ಲದೆ ಆನ್ಲೈನ್ ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ವರದಿ ಅಂದಾಜಿಸಿದೆ.
ಮಕ್ಕಳಿಗೆ ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ಅರಿವಿರದಿರುವುದು, ಯಾರಿಗೆ ದೂರು ನೀಡಬೇಕೆಂದು ತಿಳಿಯದಿರುವುದು ಮತ್ತು ದೂರು ನೀಡಿದರೆ ತಮಗೆ ತೊಂದರೆಯಾಗಬಹುದೆಂಬ ಭಯ ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ ಎಂದು UNICEF ಹೇಳಿದೆ. ದೂರು ನೀಡುವ ಅಧಿಕೃತ ವ್ಯವಸ್ಥೆಗಳು ಮಕ್ಕಳಿಗೆ ಅಪರಿಚಿತ, ಜಟಿಲ ಮತ್ತು ಭಯ ಹುಟ್ಟಿಸುವಂತೆ ಭಾಸವಾಗುತ್ತವೆ ಎಂದು ವರದಿ ಉಲ್ಲೇಖಿಸಿದೆ.
"ಈ ವರದಿಯು ಒಂದು ಕ್ರೂರ ಸತ್ಯವನ್ನು ತೆರೆದಿಟ್ಟಿದೆ. ಅಧ್ಯಯನಕ್ಕೊಳಪಟ್ಟ ದೇಶಗಳಲ್ಲಿ 2 ಕೋಟಿಗೂ ಹೆಚ್ಚು ಮಕ್ಕಳು ಆನ್ ಲೈನ್ ನಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಶೋಷಣೆಗೆ ಒಳಗಾಗಿದ್ದಾರೆ. ತಾವು ಕಲಿಯುವ, ಆಟವಾಡುವ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವ ಡಿಜಿಟಲ್ ಜಾಗಗಳಲ್ಲೇ ಈ ಘಟನೆಗಳು ನಡೆದಿವೆ" ಎಂದು UNICEF ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸ್ಸೆಲ್ ಹೇಳಿದ್ದಾರೆ. "ಈ ಅನುಭವಗಳು ತೀವ್ರ ಭಾವನಾತ್ಮಕ ಮತ್ತು ಮಾನಸಿಕ ಆಘಾತವನ್ನುಂಟುಮಾಡುತ್ತವೆ. ಸಹಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕೆಂದು ತಿಳಿಯದೆ ಬಹುತೇಕ ಮಕ್ಕಳು ಮೌನವಾಗಿ ನರಳುತ್ತಿದ್ದಾರೆ. ಇದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ" ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
►ದತ್ತಾಂಶ ಎಲ್ಲಿಯದ್ದು?
2020 ಮತ್ತು 2025ರ ನಡುವೆ ಇಂಟರ್ನೆಟ್ ಬಳಸುವ ಸುಮಾರು 21,000 ಮಕ್ಕಳಿಂದ ಸಂಗ್ರಹಿಸಲಾದ ರಾಷ್ಟ್ರಮಟ್ಟದ ಪ್ರಾತಿನಿಧಿಕ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.
ಕೆಳಗಿನ ದೇಶಗಳ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು:
ಪೂರ್ವ ಮತ್ತು ದಕ್ಷಿಣ ಆಫ್ರಿಕಾ: ಇಥಿಯೋಪಿಯಾ, ಕೀನ್ಯಾ, ಮೊಜಾಂಬಿಕ್, ನಮೀಬಿಯಾ, ಟಾಂಜಾನಿಯಾ ಮತ್ತು ಉಗಾಂಡಾ
ಆಗ್ನೇಯ ಏಷ್ಯಾ: ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ
ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್: ಬ್ರೆಝಿಲ್, ಕೊಲಂಬಿಯಾ, ಡೊಮಿನಿಕನ್ ರಿಪಬ್ಲಿಕ್ ಮತ್ತು ಮೆಕ್ಸಿಕೋ
ಪೂರ್ವ ಯುರೋಪ್: ಅರ್ಮೇನಿಯಾ, ಮಾಂಟೆನೆಗ್ರೊ, ಉತ್ತರ ಮ್ಯಾಸಿಡೋನಿಯಾ ಮತ್ತು ಸರ್ಬಿಯಾ
ದಕ್ಷಿಣ ಏಷ್ಯಾ: ಪಾಕಿಸ್ತಾನ
►ಮಕ್ಕಳ ಮೇಲೆ ದೌರ್ಜನ್ಯ ಎಲ್ಲಿ ನಡೆಯುತ್ತಿದೆ?
ಸಾಮಾನ್ಯವಾಗಿ ಶಾಲೆಗಳು ಅಥವಾ ಸ್ಥಳೀಯ ನೆರೆಹೊರೆಯಂತಹ ಸಾರ್ವಜನಿಕ ಸ್ಥಳಗಳಲ್ಲಿ ಆರಂಭವಾಗುವ ಶೋಷಣೆ, ಬಳಿಕ ಡಿಜಿಟಲ್ ವೇದಿಕೆಗಳಿಗೆ ವ್ಯಾಪಿಸಿ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತದೆ.
"ಆರಂಭಿಕ ಸಂಪರ್ಕ, ಬಾಂಧವ್ಯ ಬೆಳೆಸುವುದು, ಲೈಂಗಿಕ ಪ್ರಚೋದನೆ, ಚಿತ್ರಗಳ ಹಂಚಿಕೆ, ಬೆದರಿಕೆ, ಬ್ಲ್ಯಾಕ್ಮೇಲ್ ಮತ್ತು ಲೈಂಗಿಕ ವಿಷಯಗಳ ನಿರಂತರ ಪ್ರಸಾರ ಸೇರಿದಂತೆ ದೌರ್ಜನ್ಯದ ವಿವಿಧ ಹಂತಗಳಿಗೆ ಸಾಮಾಜಿಕ ಜಾಲತಾಣಗಳು ಮತ್ತು ಸಂದೇಶ ಕಳುಹಿಸುವ ಆ್ಯಪ್ ಗಳು ವೇದಿಕೆಯಾಗುತ್ತಿವೆ" ಎಂದು ವರದಿ ಹೇಳಿದೆ.
ಕೆಲವೊಮ್ಮೆ ಇಂತಹ ದೌರ್ಜನ್ಯಗಳು ಸಂಪೂರ್ಣವಾಗಿ ಆನ್ ಲೈನ್ ನಲ್ಲೇ ನಡೆಯುತ್ತವೆ.
ವರದಿಯ ಪ್ರಕಾರ, ಶೇಕಡಾ 60ಕ್ಕಿಂತ ಹೆಚ್ಚು ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿವೆ. ಇವುಗಳಲ್ಲಿ ಹೆಚ್ಚಿನವು ಫೇಸ್ಬುಕ್ (ಶೇ. 50), ವಾಟ್ಸಾಪ್ (ಶೇ. 29), ಇನ್ ಸ್ಟಾಗ್ರಾಮ್ (ಶೇ. 24), ಸ್ನ್ಯಾಪ್ಚಾಟ್ (ಶೇ. 13) ಮತ್ತು ಟಿಕ್ಟಾಕ್ (ಶೇ. 12) ವೇದಿಕೆಗಳಲ್ಲಿ ದಾಖಲಾಗಿವೆ.
►ಮಕ್ಕಳು ದೌರ್ಜನ್ಯದ ಕುರಿತು ದೂರು ನೀಡುತ್ತಾರೆಯೇ?
ದೌರ್ಜನ್ಯಕ್ಕೊಳಗಾಗುವ ಬಹುತೇಕ ಮಕ್ಕಳು ಯಾವುದೇ ಸಹಾಯ ಕೋರುವುದಿಲ್ಲ. ಶೇಕಡಾ 1ಕ್ಕಿಂತ ಕಡಿಮೆ ಪ್ರಕರಣಗಳು ಮಾತ್ರ ಪೊಲೀಸ್, ಸಾಮಾಜಿಕ ಕಾರ್ಯಕರ್ತರು ಅಥವಾ ಹೆಲ್ಪ್ಲೈನ್ಗಳಿಗೆ ವರದಿಯಾಗುತ್ತವೆ. ಹತ್ತರಲ್ಲಿ ನಾಲ್ಕಕ್ಕೂ ಹೆಚ್ಚು ಪ್ರಕರಣಗಳನ್ನು ಮಕ್ಕಳು ಯಾರೊಂದಿಗೂ ಹಂಚಿಕೊಳ್ಳುವುದೇ ಇಲ್ಲ.
"ಮಕ್ಕಳು ದೂರು ನೀಡಲು ವಿಫಲರಾಗುತ್ತಿಲ್ಲ. ಬದಲಿಗೆ ದೂರು ನೀಡಲು ಸೂಕ್ತ ವ್ಯವಸ್ಥೆಯೇ ಇಲ್ಲ ಎಂಬುದನ್ನು ಅವರು ಸರಿಯಾಗಿಯೇ ಗ್ರಹಿಸಿದ್ದಾರೆ" ಎಂದು ಪಾಕಿಸ್ತಾನ ಮೂಲದ 'ಡಿಜಿಟಲ್ ರೈಟ್ಸ್ ಫೌಂಡೇಶನ್'ನ ಕಾರ್ಯನಿರ್ವಾಹಕ ನಿರ್ದೇಶಕಿ ನಿಗಾತ್ ದಾದ್ ಅಲ್ ಜಝೀರಾಗೆ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಸುರಕ್ಷಿತ ಆನ್ಲೈನ್ ವಾತಾವರಣಕ್ಕಾಗಿ ಶ್ರಮಿಸುತ್ತಿರುವ ಅವರ ಸ್ವಯಂಸೇವಾ ಸಂಸ್ಥೆಯ ಅನುಭವ ಹಂಚಿಕೊಂಡ ದಾದ್, ಆ್ಯಪ್ ಗಳ ವಿನ್ಯಾಸದಲ್ಲಿರುವ ಲೋಪಗಳಿಂದಾಗಿಯೇ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ ಎಂದಿದ್ದಾರೆ. "ಮೆಸೇಜ್ ರಿಕ್ವೆಸ್ಟ್ ಕಳುಹಿಸುವುದು, ಖಾಸಗಿ ಚಾಟ್ ಗೆ ತೆರಳುವುದು, ರೀಶೇರ್ ಮಾಡುವುದು ಮತ್ತು ಬ್ಲಾಕ್ ಮಾಡಿದ ನಂತರವೂ ಮತ್ತೆ ಹಿಂತಿರುಗುವ ಅವಕಾಶ ಇರುವುದೇ ಇದಕ್ಕೆ ಕಾರಣ" ಎಂದು ಅವರು ವಿವರಿಸಿದ್ದಾರೆ.
ಸಾಕಷ್ಟು ಮಕ್ಕಳು ತಮಗಾದ ಅನುಭವವನ್ನು ಸಣ್ಣ ವಿಷಯವೆಂದು ನಿರ್ಲಕ್ಷಿಸುತ್ತಾರೆ ಅಥವಾ ತಮ್ಮ ಮೇಲಾಗಿರುವುದು ದೌರ್ಜನ್ಯ ಎಂಬುದನ್ನೇ ಗುರುತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮಕ್ಕಳು ತಮ್ಮ ಆಪ್ತ ಸ್ನೇಹಿತರು, ಒಡಹುಟ್ಟಿದವರು ಅಥವಾ ಪೋಷಕರ ಬಳಿ ಧ್ವನಿ ಎತ್ತಿದರೂ ಸಹ, ಅದು ದೌರ್ಜನ್ಯವನ್ನು ತಡೆಯುತ್ತದೆ ಅಥವಾ ಅಪರಾಧಿಗಳಿಗೆ ಶಿಕ್ಷೆ ಕೊಡಿಸುತ್ತದೆ ಎಂದೇನೂ ಇಲ್ಲ.
ತಮ್ಮ ಸಂಶೋಧನಾ ಸಂದರ್ಶನದ ವೇಳೆಯಲ್ಲೇ ಹಲವು ಮಕ್ಕಳು ತಮಗಾದ ದೌರ್ಜನ್ಯದ ಬಗ್ಗೆ ಮೊದಲ ಬಾರಿಗೆ ಬೇರೊಬ್ಬರ ಬಳಿ ಹೇಳಿದ್ದರು ಎಂಬುದನ್ನು UNICEF ಎತ್ತಿಹಿಡಿದಿದೆ.
ಉದಾಹರಣೆಗೆ, ಪಾಕಿಸ್ತಾನದಂತಹ ದೇಶಗಳಲ್ಲಿ ಕುಟುಂಬದ 'ಗೌರವ' ಮತ್ತು ಸಾಂಸ್ಕೃತಿಕ ಅಡೆತಡೆಗಳಿಂದಾಗಿ ಮಕ್ಕಳು ತಮಗಾದ ಶೋಷಣೆಯನ್ನು ಮುಚ್ಚಿಡುತ್ತಾರೆ ಎಂದು ದಾದ್ ಎಚ್ಚರಿಸಿದ್ದಾರೆ.
"ನಡೆದ ದೌರ್ಜನ್ಯದ ಬಗ್ಗೆ ಹೇಳುವ ಹುಡುಗಿ ತನ್ನ ಮೊಬೈಲ್, ಶಿಕ್ಷಣ ಮತ್ತು ಕೆಲವೊಮ್ಮೆ ತನ್ನ ಸುರಕ್ಷತೆಯನ್ನೇ ಪಣಕ್ಕಿಡಬೇಕಾಗುತ್ತದೆ. ಇನ್ನು ಹುಡುಗನಾದರೆ ಮೌನವಾಗಿ ಸಹಿಸಿಕೊಳ್ಳಬೇಕೆಂದು ಅಪೇಕ್ಷಿಸಲಾಗುತ್ತದೆ" ಎಂದು ದಾದ್ ಹೇಳಿದ್ದಾರೆ.
►ಆನ್ ಲೈನ್ ದೌರ್ಜನ್ಯದಲ್ಲಿ ಜೆಂಡರ್ ಪಾತ್ರವೇನು?
ಮಕ್ಕಳನ್ನು ಶೋಷಣೆಗೆ ಒಳಪಡಿಸುವಾಗ ಅಪರಾಧಿಗಳು ಹೆಚ್ಚಾಗಿ ಸಾಮಾಜಿಕ ಲಿಂಗ ತಾರತಮ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಹೆಣ್ಣುಮಕ್ಕಳು ಮೌನವಾಗಿರಲು ಅವರ ಮೇಲೆಯೇ ಅಪವಾದ ಮತ್ತು ಕಳಂಕ ಹೊರಿಸಿದರೆ, ಗಂಡುಮಕ್ಕಳು ಸಮಸ್ಯೆಯನ್ನು ತಾವೇ ಸ್ವತಃ ಎದುರಿಸಬೇಕೆಂಬ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ ಅಥವಾ ಬೆದರಿಕೆಗೆ ಒಳಗಾಗುತ್ತಾರೆ.
"ಸಮಾನ ವಯಸ್ಕರ ಸಂಸ್ಕೃತಿ ಹಾಗೂ ಪುರುಷ ಪ್ರಧಾನ ವಿಚಾರಗಳು ಇಂತಹ ಕೆಟ್ಟ ನಡವಳಿಕೆಗಳನ್ನು ಸಹಜ ಎಂಬಂತೆ ಬಿಂಬಿಸುತ್ತವೆ. ಇದರಿಂದ ದೌರ್ಜನ್ಯವನ್ನು ಗುರುತಿಸುವುದು ಮತ್ತು ಅದನ್ನು ತಡೆಯುವುದು ಮತ್ತಷ್ಟು ಕಷ್ಟಕರವಾಗುತ್ತದೆ" ಎಂದು UNICEF ಉಲ್ಲೇಖಿಸಿದೆ.
►ಆನ್ ಲೈನ್ ಲೈಂಗಿಕ ದೌರ್ಜನ್ಯವು ಮಕ್ಕಳ ಮೇಲೆ ಎಂತಹ ಪರಿಣಾಮ ಬೀರುತ್ತದೆ?
ಇದರ ಪರಿಣಾಮಗಳು ಅತ್ಯಂತ ಗಂಭೀರವಾಗಿವೆ ಎಂದು UNICEF ಹೇಳಿದೆ. ಡಿಜಿಟಲ್ ತಂತ್ರಜ್ಞಾನ ಆಧಾರಿತ ಲೈಂಗಿಕ ಶೋಷಣೆಗೆ ಒಳಗಾಗುವ ಮಕ್ಕಳಲ್ಲಿ ಆತ್ಮಹತ್ಯೆಯ ಆಲೋಚನೆಗಳು, ಸ್ವಯಂ-ಹಾನಿ ಮಾಡಿಕೊಳ್ಳುವ ಪ್ರವೃತ್ತಿ ಹಾಗೂ ತೀವ್ರ ಖಿನ್ನತೆಯ ಅಪಾಯವು ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ.
ಉದಾಹರಣೆಗೆ, ಮೆಕ್ಸಿಕೋ ಅಥವಾ ಉತ್ತರ ಮ್ಯಾಸಿಡೋನಿಯಾದಲ್ಲಿ ದೌರ್ಜನ್ಯಕ್ಕೊಳಗಾದ ಮಕ್ಕಳಲ್ಲಿ ಆತ್ಮಹತ್ಯೆಯ ಆಲೋಚನೆಗಳು ಅಥವಾ ನಡವಳಿಕೆಯ ಅಪಾಯವು ಇತರ ಮಕ್ಕಳಿಗಿಂತ ಎಂಟು ಪಟ್ಟು ಹೆಚ್ಚಿದ್ದರೆ, ಪಾಕಿಸ್ತಾನದಲ್ಲಿ ಸ್ವಯಂ-ಹಾನಿ ಮಾಡಿಕೊಳ್ಳುವ ಅಪಾಯವು ಸರಾಸರಿಗಿಂತ ಏಳು ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಈ ದೌರ್ಜನ್ಯವು ಕೇವಲ ಡಿಜಿಟಲ್ ಲೋಕಕ್ಕಷ್ಟೇ ಸೀಮಿತವಾಗದೆ ಮಕ್ಕಳ ದೈನಂದಿನ ಜೀವನ, ಶಿಕ್ಷಣ ಮತ್ತು ಸಂಬಂಧಗಳ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ.
►ಮಕ್ಕಳನ್ನು ಸುರಕ್ಷಿತರಾಗಿರಿಸುವುದು ಹೇಗೆ?
ಆನ್ ಲೈನ್ ನಲ್ಲಿ ಮಕ್ಕಳನ್ನು ರಕ್ಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರಗಳು ಮತ್ತು ತಂತ್ರಜ್ಞಾನ ಕಂಪೆನಿಗಳ ಮೇಲೆಯೇ ಹೊರಿಸಬೇಕು. ಈ ಸಂಸ್ಥೆಗಳು ತಮ್ಮ ಡಿಜಿಟಲ್ ವೇದಿಕೆಗಳ ವಿನ್ಯಾಸ ಮತ್ತು ನಿಯಂತ್ರಣ ನಿಯಮಗಳಲ್ಲಿ ತಕ್ಷಣದ ಬದಲಾವಣೆಗಳನ್ನು ತರಬೇಕು ಎಂದು UNICEF ಪ್ರತಿಪಾದಿಸಿದೆ.
ಮಕ್ಕಳು ತಮ್ಮ ಮಟ್ಟದಲ್ಲಿ ಪರಸ್ಪರ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದರೂ, ಸಮಾಜ, ಶಾಲೆಗಳು ಮತ್ತು ಕುಟುಂಬಗಳು ರಕ್ಷಣೆಯ ಈ ಹೊರೆಯನ್ನು ಮಕ್ಕಳಿಂದ ದೂರವಿಡಲು ಶ್ರಮಿಸಬೇಕು ಎಂದು ವರದಿ ಒತ್ತಿಹೇಳಿದೆ.
ಮೆಟಾ ಸಂಸ್ಥೆಯ ಇತ್ತೀಚಿನ ಪರಿಹಾರ ಒಪ್ಪಂದವನ್ನು ಉಲ್ಲೇಖಿಸಿದ ದಾದ್, ಕಟ್ಟುನಿಟ್ಟಿನ ವಯಸ್ಸಿನ ಪರಿಶೀಲನೆ ಮತ್ತು ಪೋಷಕರ ನಿಯಂತ್ರಣದಂತಹ ವಿನ್ಯಾಸ ಬದಲಾವಣೆಗಳು ಸಾಧ್ಯ ಮತ್ತು ಅವು ತಕ್ಷಣವೇ ಜಾರಿಯಾಗಬೇಕು ಎಂದಿದ್ದಾರೆ.
"ಅಮೆರಿಕದ ಹೊರಗೆ ಕೆಲಸ ಮಾಡುವ ನಮಗೆ, ಇಂತಹ ಮೂಲಭೂತ ಬದಲಾವಣೆಗಳನ್ನು ಮಾಡಿದರೆ ಆ್ಯಪ್ಗಳ ಕಾರ್ಯಕ್ಷಮತೆ ಹಾಳಾಗುತ್ತದೆ ಎಂದು ವರ್ಷಗಳಿಂದ ಹೇಳಲಾಗುತ್ತಿತ್ತು. ಆದರೆ ಉತ್ಪನ್ನದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದನ್ನು ಮೆಟಾ ಈಗ ನಿರೂಪಿಸಿದೆ" ಎಂದು ಅವರು ಹೇಳಿದರು.
►ಈ ವರದಿಗೆ ಸಾಮಾಜಿಕ ಜಾಲತಾಣಗಳು ಹೇಗೆ ಪ್ರತಿಕ್ರಿಯಿಸಿವೆ?
ಮೆಟಾ ವಕ್ತಾರರೊಬ್ಬರು Aljazeera ಗೆ ಪ್ರತಿಕ್ರಿಯಿಸಿ, "ಈ ವರದಿಯು 2020ರಷ್ಟು ಹಳೆಯ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿದೆ. UNICEF ಶಿಫಾರಸು ಮಾಡಿದ ರಕ್ಷಣಾತ್ಮಕ ಕ್ರಮಗಳನ್ನು ನಾವು ಜಾರಿಗೆ ತರುವ ಮುಂಚಿನ ದತ್ತಾಂಶ ಇದಾಗಿದೆ. ನಾವು ಈಗಾಗಲೇ ಹದಿಹರೆಯದವರ ಖಾತೆಗಳನ್ನು ಸ್ವಯಂಚಾಲಿತವಾಗಿ 'ಪ್ರೈವೇಟ್' ಮಾಡಿದ್ದೇವೆ ಹಾಗೂ ಅಪರಿಚಿತ ಹಿರಿಯರು ಹದಿಹರೆಯದವರಿಗೆ ಮೆಸೇಜ್ ಮಾಡುವುದನ್ನು ತಡೆದಿದ್ದೇವೆ" ಎಂದು ಹೇಳಿದ್ದಾರೆ.
"ಈ ವರದಿಯು ದೌರ್ಜನ್ಯದ ಯಾವುದೇ ನಿರ್ದಿಷ್ಟ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಆದರೆ ನಮ್ಮ ಆ್ಯಪ್ಗಳಲ್ಲಿ ಮಕ್ಕಳ ಶೋಷಣೆಯ ವಿರುದ್ಧ ಧ್ವನಿ ಎತ್ತುವುದನ್ನು ನಾವು ಮುಂದುವರಿಸುತ್ತೇವೆ ಹಾಗೂ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಬೆಂಬಲ ನೀಡುತ್ತೇವೆ" ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಮೆಟಾ ಮಾಲೀಕತ್ವದ ವಾಟ್ಸಾಪ್ ಸಾಮಾಜಿಕ ಜಾಲತಾಣವಲ್ಲ, ಬದಲಿಗೆ ಅದೊಂದು ಖಾಸಗಿ ಸಂದೇಶ ರವಾನೆ ಸೇವೆಯಾಗಿದೆ ಎಂದೂ ವಕ್ತಾರರು ಉಲ್ಲೇಖಿಸಿದ್ದಾರೆ. "ವಿಷಯವೊಂದನ್ನು ಹೆಚ್ಚು ಜನರಿಗೆ ತಲುಪಿಸುವ ಯಾವುದೇ ಆಲ್ಗರಿದಮ್ ಗಳು ನಮ್ಮಲ್ಲಿಲ್ಲ. ಅಲ್ಲಿ ಒಬ್ಬರನ್ನು ಸಂಪರ್ಕಿಸಲು ಅವರ ಫೋನ್ ಸಂಖ್ಯೆ ಅಥವಾ ನಿಖರವಾದ ಯೂಸರ್ ನೇಮ್ ಅಗತ್ಯವಿರುತ್ತದೆ" ಎಂದಿದ್ದಾರೆ.
ಆದರೆ, ಸ್ನ್ಯಾಪ್ ಚಾಟ್ ಮತ್ತು ಟಿಕ್ ಟಾಕ್ ಸಂಸ್ಥೆಗಳು ಪ್ರತಿಕ್ರಿಯೆ ಕೋರಿಕೆಗೆ ಯಾವುದೇ ಉತ್ತರ ನೀಡಿಲ್ಲ ಎಂದು Aljazeera ವರದಿ ಹೇಳಿದೆ.
ಸೌಜನ್ಯ: Aljazeera.com