Uttar Pradesh | ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ BJPಗೆ ಕಂಟಕವಾದ ನಿಶಾದ್ ಮೀಸಲಾತಿ ಭರವಸೆ
►ಉಮರ್ ರಶೀದ್ - thewire. in ವರದಿ
Photo Credit : thewire.in
ಪ್ರಸ್ತುತ ಇತರೆ ಹಿಂದುಳಿದ ವರ್ಗಗಳ (OBC) ಪಟ್ಟಿಯಲ್ಲಿರುವ ನಿಶಾದ್ ಹಾಗೂ ನದಿ ಪಾತ್ರದ ಇತರೆ ಸಮುದಾಯಗಳಿಗೆ ಪರಿಶಿಷ್ಟ ಜಾತಿ (SC) ಸ್ಥಾನಮಾನ ನೀಡುವ ವಿಚಾರವು ಕಳೆದ ಎರಡು ದಶಕಗಳಿಂದ ಉತ್ತರ ಪ್ರದೇಶದ ರಾಜಕೀಯದಲ್ಲಿ ನಿರಂತರ ಚರ್ಚೆಯಲ್ಲಿದೆ.
ಪ್ರಮುಖವಾಗಿ 2027ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ, ಈ ಇತ್ಯರ್ಥವಾಗದ ಸವಾಲು ಆಡಳಿತಾರೂಢ BJP ಮತ್ತು ನಿಶಾದ್ ಪಾರ್ಟಿ ನಡುವಿನ ಮೈತ್ರಿಗೆ ಕಂಟಕವಾಗುವ ಲಕ್ಷಣಗಳು ಕಾಣಿಸುತ್ತಿವೆ. ಜೊತೆಗೆ, ನಿಶಾದ್ ಸಮುದಾಯಕ್ಕೆ ನೀಡಿದ್ದ ಪರೋಕ್ಷ ಭರವಸೆಯನ್ನು ಈಡೇರಿಸುವಲ್ಲಿ BJP ತೋರುತ್ತಿರುವ ಬದ್ಧತೆಯ ಮೇಲೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ.
ಆಗಸ್ಟ್ 16ರಂದು ನಡೆದ ಪಕ್ಷದ 11ನೇ ಸ್ಥಾಪನಾ ದಿನಾಚರಣೆಯಲ್ಲಿ ನಿಶಾದ್ ಪಾರ್ಟಿ ಮುಖ್ಯಸ್ಥ ಸಂಜಯ್ ನಿಶಾದ್ ತಮ್ಮ ಮೈತ್ರಿಪಕ್ಷಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ಬೇಡಿಕೆಯನ್ನು ಈಡೇರಿಸದಿದ್ದರೆ ಸಮುದಾಯದ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಬೆಂಬಲಿಗರ ‘ಹಮ್ ಲೇಕೆ ರಹೇಂಗೆ ಆರಕ್ಷಣ್’ (ನಾವು ಮೀಸಲಾತಿ ಪಡೆದೇ ತೀರುತ್ತೇವೆ) ಎಂಬ ಘೋಷಣೆಗಳ ನಡುವೆ ಮಾತನಾಡಿದ ನಿಶಾದ್, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ BJP ಸಚಿವ ದಯಾಶಂಕರ್ ಸಿಂಗ್ ಅವರಿಗೆ ಈ ವಿಷಯವನ್ನು BJP ಹೈಕಮಾಂಡ್ ಗಮನಕ್ಕೆ ತರುವಂತೆ ಮನವಿ ಮಾಡಿದರು. ಆಡಳಿತಾರೂಢ ಪಕ್ಷವು ಈ ಬೇಡಿಕೆಗೆ ಕಿವಿಗೊಡದಿದ್ದರೆ ಮುಂದಿನ ವರ್ಷ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದ ಅವರು, ‘ಸಮಯ ಮೀರುವ ಮುನ್ನವೇ ಕ್ರಮ ಕೈಗೊಳ್ಳಿ’ ಎಂದು ಮೈತ್ರಿಪಕ್ಷಕ್ಕೆ ಅಂತಿಮ ಎಚ್ಚರಿಕೆ ನೀಡಿದರು.
►ಸಂಜಯ್ ನಿಶಾದ್ ಅವರ ಎಚ್ಚರಿಕೆ ಏಕೆ ಪ್ರಾಮುಖ್ಯತೆ ಪಡೆದಿದೆ?
ಈ ಎಚ್ಚರಿಕೆಯು ಹೊಸದೇನಲ್ಲದಿದ್ದರೂ, ಚುನಾವಣೆಗೆ ಇನ್ನು ಕೇವಲ ಆರು ತಿಂಗಳು ಬಾಕಿ ಇರುವಾಗ ಬಂದಿರುವುದು ಮತ್ತು SC ಸ್ಥಾನಮಾನ ನೀಡುವ ಕಾನೂನು ಹಾಗೂ ಸಂವಿಧಾನಾತ್ಮಕ ಅಧಿಕಾರ ಸಂಪೂರ್ಣವಾಗಿ ಉತ್ತರ ಪ್ರದೇಶ ಸರ್ಕಾರದ ವ್ಯಾಪ್ತಿಯಲ್ಲಿ ಇಲ್ಲದಿರುವುದು ಇದನ್ನು ಮಹತ್ವದ್ದಾಗಿಸಿದೆ. ಇದು BJPಯನ್ನು ರಾಜಕೀಯವಾಗಿ ಮುಜುಗರಕ್ಕೀಡು ಮಾಡಿದೆ. 2022ರ ಚುನಾವಣೆಗೆ ಎಂಟು ವಾರಗಳಷ್ಟೇ ಬಾಕಿ ಇದ್ದಾಗ, ಅಂದರೆ 2021ರ ಡಿಸೆಂಬರ್ ನಲ್ಲಿ ಲಕ್ನೋ ದಲ್ಲಿ ನಡೆದ ನಿಶಾದ್ ಪಾರ್ಟಿಯ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿದ ಮಾತುಗಳನ್ನು ಇದು ನೆನಪಿಸುವಂತೆ ಮಾಡಿದೆ.
ಸಂಜಯ್ ನಿಶಾದ್ ಅವರ ಕರೆಗೆ ಸ್ಪಂದಿಸಿ ಆಗಮಿಸಿದ್ದ ಬೆಂಬಲಿಗರು, ತಮ್ಮ ದೀರ್ಘಕಾಲದ ಬೇಡಿಕೆಯ ಕುರಿತು ಅಮಿತ್ ಶಾ ಅವರು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಿದ್ದರು. ತಮ್ಮ ಭಾಷಣದಲ್ಲಿ ಶಾ, ಸಮುದಾಯಕ್ಕಾಗಿ ಸರ್ಕಾರ ಮಾಡಿದ ಕೆಲಸಗಳನ್ನು ಪಟ್ಟಿ ಮಾಡಿದರು ಮತ್ತು ಮತ್ತೆ ಅಧಿಕಾರಕ್ಕೆ ಬಂದರೆ ನಿಶಾದ್ ಪಾರ್ಟಿಯ ‘ಎಲ್ಲಾ ಕಾರ್ಯಸೂಚಿಗಳನ್ನು ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು. ಆದರೆ, ಮೀಸಲಾತಿಯ ಬಗ್ಗೆ ಅವರು ಯಾವುದೇ ಉಲ್ಲೇಖ ಮಾಡಲಿಲ್ಲ.
ಇದರಿಂದ ನಿರಾಶೆಗೊಂಡ ಪೂರ್ವ ಯುಪಿಯ ಮೂಲೆ ಮೂಲೆಗಳಿಂದ ಬಂದಿದ್ದ ನಿಶಾದ್ ಪಾರ್ಟಿಯ ಬೆಂಬಲಿಗರು ಸ್ಥಳದಲ್ಲಿದ್ದ ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯಿಂದ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಆದಿತ್ಯನಾಥ ನೇತೃತ್ವದ ರಾಜ್ಯ ಸರ್ಕಾರ, ಕೆಲ ದಿನಗಳ ನಂತರ ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಿಗೆ ಪತ್ರ ಬರೆದು, ಸಮುದಾಯಕ್ಕೆ SC ಸ್ಥಾನಮಾನ ನೀಡುವ ಕುರಿತು ಮಾರ್ಗದರ್ಶನ ಕೋರಿತು.
2022ರ ಮಾರ್ಚ್ನಲ್ಲಿ BJP ಮತ್ತೆ ಅಧಿಕಾರಕ್ಕೆ ಬಂದಿತು. ನಿಶಾದ್ ಪಾರ್ಟಿ ಆರು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು ಮತ್ತು ಅದರ ಮುಖ್ಯಸ್ಥ ಸಂಜಯ್ ನಿಶಾದ್ ಅವರಿಗೆ ಮೀನುಗಾರಿಕೆ ಇಲಾಖೆಯ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಾಯಿತು. ಬಳಿಕ ಸಂಜಯ್ ನಿಶಾದ್ ಅವರ ಅಪರೂಪದ ಸಭೆಗಳು, ಪತ್ರಗಳು ಅಥವಾ ಮಾಧ್ಯಮ ಹೇಳಿಕೆಗಳನ್ನು ಹೊರತುಪಡಿಸಿ, ಮಚ್ಚುವಾ ಅಥವಾ ನಿಶಾದ್ ಮೀಸಲಾತಿ ವಿಷಯವನ್ನು ಮೂಲೆಗೆ ತಳ್ಳಲಾಯಿತು. ಅಮಿತ್ ಶಾ ಭರವಸೆ ನೀಡಿ ಸುಮಾರು ಐದು ವರ್ಷಗಳಾಗುತ್ತಾ ಬಂದರೂ NDA ಕೊಟ್ಟ ಮಾತು ಈಡೇರಿಲ್ಲ.
ನಿಶಾದ್ ಅವರ ಎಚ್ಚರಿಕೆಯನ್ನು ಎರಡು ರೀತಿಯಲ್ಲಿ ನೋಡಬಹುದು. ಇದು ತಮ್ಮ ಬೆಂಬಲಿಗರ ಅಸಮಾಧಾನವನ್ನು ಶಮನಗೊಳಿಸುವ ಮತ್ತು ತಮ್ಮ ರಾಜಕೀಯ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿರಬಹುದು. ಅಥವಾ 2027ರ ಚುನಾವಣೆಗೆ ಮುನ್ನ BJPಯಿಂದ ತಮ್ಮ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ಗಿಟ್ಟಿಸಿಕೊಳ್ಳಲು ಬಳಸುತ್ತಿರುವ ತಂತ್ರವೂ ಆಗಿರಬಹುದು. ಕಾರಣ ಏನೇ ಇರಲಿ, ಅಂತಿಮವಾಗಿ ಇದರ ಹೊಣೆ BJPಯ ‘ಡಬಲ್ ಎಂಜಿನ್’ ಸರ್ಕಾರದ ಮೇಲೆಯೇ ಬೀಳುತ್ತದೆ.
ನಿಶಾದ್ ಅವರ ಇತ್ತೀಚಿನ ಬೆದರಿಕೆಗೆ ಆಡಳಿತಾರೂಢ ಪಕ್ಷವು ವಹಿಸಿರುವ ಜಾಣ ಮೌನವು, ಈ ವಿಷಯವು ರಾಜಕೀಯವಾಗಿ ಇಂದಿಗೂ ಅತ್ಯಂತ ಸೂಕ್ಷ್ಮವಾಗಿದೆ ಎಂಬುದನ್ನು ತೋರಿಸುತ್ತದೆ. BJPಗೆ ನಿಶಾದ್ ಸಮುದಾಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಹಾಗೆಯೇ ಅವರು ಕೇಳಿದ್ದನ್ನು ನೀಡಲು ಕೂಡ ಸಾಧ್ಯವಾಗುತ್ತಿಲ್ಲ. ಸಂಜಯ್ ನಿಶಾದ್ ಅವರು ಆದಿತ್ಯನಾಥ ಸರ್ಕಾರದಲ್ಲಿ ಸಚಿವರಾಗಿದ್ದಾರೆ ಮತ್ತು ಅವರ ಪಕ್ಷವು ಪೂರ್ವ ಯುಪಿಯಲ್ಲಿ, ವಿಶೇಷವಾಗಿ ಗೋರಖ್ಪುರ ವಿಭಾಗದಲ್ಲಿ ಪ್ರಭಾವಿ ನೆಲೆ ಹೊಂದಿರುವ ಪ್ರಮುಖ ಮೈತ್ರಿಪಕ್ಷವಾಗಿದೆ.
ವಿಶೇಷವೆಂದರೆ, ಈ ಬೃಹತ್ ಪೂರ್ವ ಯುಪಿ ಪ್ರದೇಶದಲ್ಲೇ ಸಮಾಜವಾದಿ ಪಾರ್ಟಿ ನೇತೃತ್ವದ ವಿರೋಧ ಪಕ್ಷಗಳು ಕಳೆದ ಎರಡು ಚುನಾವಣೆಗಳಲ್ಲಿ (2022 ಮತ್ತು 2024) ಅತ್ಯುತ್ತಮ ಸಾಧನೆ ಮಾಡಿವೆ.
ಯುಪಿಯಲ್ಲಿ ನಿಶಾದ್ ಮೀಸಲಾತಿ ಪ್ರಶ್ನೆ
ಉತ್ತರ ಪ್ರದೇಶದಲ್ಲಿ ನಿಶಾದ್ ಮೀಸಲಾತಿಯ ಪ್ರಶ್ನೆಯು ಅತ್ಯಂತ ಹಿಂದುಳಿದ ಜಾತಿಗಳು (MBC) ಎಂದು ರಾಜಕೀಯವಾಗಿ ವರ್ಗೀಕರಿಸಲ್ಪಟ್ಟ 17 OBC ಸಮುದಾಯಗಳ ಬೃಹತ್ ಬೇಡಿಕೆಗೆ ಬೆಸೆದುಕೊಂಡಿದೆ. ಕಶ್ಯಪ್, ಕೇವಟ್, ಮಲ್ಲಾಹ್, ನಿಶಾದ್, ಕಹಾರ್, ಕುಂಬಾರ್, ಪ್ರಜಾಪತಿ, ಧೀವರ್, ಬೈಂಡ್, ಧೀಮರ್, ಬಾಥಮ್, ತುರ್ಹಾ, ಗೋಡಿಯಾ, ಮಾಂಝಿ, ಮಚ್ಚುವಾ, ಭಾರ್ ಮತ್ತು ರಾಜ್ಭಾರ್ ಸಮುದಾಯಗಳು ಇದರಲ್ಲಿ ಸೇರಿವೆ.
ಈ 17 ಸಮುದಾಯಗಳಲ್ಲಿ 13 ಸಮುದಾಯಗಳು ನದಿ ಪಾತ್ರದ ಜನಸಮುದಾಯಗಳಾಗಿದ್ದು, ಪಾರಂಪರಿಕವಾಗಿ ಹಾಗೂ ಐತಿಹಾಸಿಕವಾಗಿ ಮೀನುಗಾರಿಕೆ, ದೋಣಿ ನಡೆಸುವುದು, ಮರಳು ಗಣಿಗಾರಿಕೆ ಮತ್ತು ಜಲ ಆಧಾರಿತ ವೃತ್ತಿಗಳಲ್ಲಿ ತೊಡಗಿಸಿಕೊಂಡಿವೆ. ಇವರು ರಾಜ್ಯಾದ್ಯಂತ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ದರೋಡೆಕೋರರಾಗಿದ್ದು ನಂತರ ರಾಜಕಾರಣಿಯಾದ ಫೂಲನ್ ದೇವಿ ಮತ್ತು ರಾಮಾಯಣದಲ್ಲಿ ಶ್ರೀರಾಮನನ್ನು ಗಂಗಾನದಿ ದಾಟಿಸಿದ ಪೌರಾಣಿಕ ದೋಣಿ ಚಾಲಕ ‘ನಿಶಾದರಾಜ’ ಈ ಸಮುದಾಯದ ಪ್ರಮುಖ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ನಾಯಕರು. ಫೂಲನ್ ದೇವಿ ಮೇಲ್ವರ್ಗದ ದೌರ್ಜನ್ಯದ ವಿರುದ್ಧ ಹಿಂದುಳಿದ ವರ್ಗದ ಪ್ರತಿರೋಧದ ಸಂಕೇತವಾದರೆ, ನಿಶಾದರಾಜನು ನಿಶಾದ್ ಜಾತಿ, ಹಿಂದೂ ಧರ್ಮ ಮತ್ತು ಇತ್ತೀಚಿನ ಹಿಂದುತ್ವ ರಾಜಕೀಯದ ನಡುವಿನ ಬಾಂಧವ್ಯದ ಸಂಕೇತವಾಗಿದ್ದಾರೆ. ಇನ್ನೊಂದೆಡೆ, ಮಂಡಲ್ ಮತ್ತು ಬಹುಜನ ರಾಜಕೀಯದ ಪ್ರತಿಪಾದಕರು ಏಕಲವ್ಯನ ಕಥೆಯನ್ನು ಹೆಚ್ಚಾಗಿ ಉಲ್ಲೇಖಿಸುತ್ತಾರೆ. ಅರ್ಜುನನಿಗಿಂತ ಶ್ರೇಷ್ಠ ಧನುರ್ಧರನಾಗಬಾರದೆಂಬ ಕಾರಣಕ್ಕೆ ದ್ರೋಣಾಚಾರ್ಯರಿಗೆ ತನ್ನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ನೀಡಿದ ಏಕಲವ್ಯನ ಉದಾಹರಣೆ ನೀಡಿ, ಶೋಷಿತ ಜಾತಿಗಳಿಗೆ ಐತಿಹಾಸಿಕವಾಗಿ ಶಿಕ್ಷಣ ಮತ್ತು ಅವಕಾಶಗಳನ್ನು ನಿರಾಕರಿಸಲಾಗಿದೆ ಎಂದು ವಾದಿಸುತ್ತಾರೆ.
ಉಳಿದ ನಾಲ್ಕು ಸಮುದಾಯಗಳು ಎರಡು ಪ್ರತ್ಯೇಕ ಗುಂಪುಗಳಿಗೆ ಸೇರುತ್ತವೆ. ಮೊದಲನೆಯದಾಗಿ, ಭಾರ್ ಮತ್ತು ರಾಜ್ಭಾರ್ ಸಮುದಾಯಗಳು. BJPಯ ಮತ್ತೊಂದು ಮೈತ್ರಿಪಕ್ಷವಾದ ಓಂ ಪ್ರಕಾಶ್ ರಾಜ್ಭಾರ್ ಅವರ ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿ (SBSP) ಇವರನ್ನು ಪ್ರತಿನಿಧಿಸುತ್ತದೆ. ಆದರೆ ರಾಜ್ಭಾರ್ ಅವರು OBC ಕೋಟಾದ ಒಳಮೀಸಲಾತಿ ಮತ್ತು ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡುವಂತೆ ಒತ್ತಾಯಿಸುವುದರ ಮೇಲಷ್ಟೇ ಗಮನ ಹರಿಸಿದ್ದಾರೆ. ಎರಡನೆಯದಾಗಿ, ಐತಿಹಾಸಿಕವಾಗಿ ಕುಂಬಾರಿಕೆ ಮತ್ತು ಕರಕುಶಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪ್ರಜಾಪತಿ ಮತ್ತು ಕುಂಬಾರ್ ಜಾತಿಗಳು.
ಕಳೆದ ಹಲವು ವರ್ಷಗಳಿಂದ ಈ ಸಮುದಾಯಗಳನ್ನು OBC ಪಟ್ಟಿಯಿಂದ ತೆಗೆದು SC ಪಟ್ಟಿಗೆ ಸೇರಿಸಬೇಕೆಂದು ನಿಶಾದ್ ನಾಯಕರು ಆಗ್ರಹಿಸುತ್ತಿದ್ದಾರೆ. ಕಳೆದ 25 ವರ್ಷಗಳಲ್ಲಿ BJP ನೇತೃತ್ವದ ಸರ್ಕಾರಗಳು ರಚಿಸಿದ್ದ ಎರಡು ಸಾಮಾಜಿಕ ನ್ಯಾಯ ವರದಿಗಳು, ಸದ್ಯ ಇರುವ ಶೇಕಡಾ 27ರಷ್ಟು OBC ಮೀಸಲಾತಿಯಲ್ಲೇ ಇವುಗಳಿಗೆ ಪ್ರತ್ಯೇಕ ಒಳಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದವು. 2018ರಲ್ಲಿ ಆದಿತ್ಯನಾಥ್ ಸರ್ಕಾರ ನೇಮಿಸಿದ್ದ ಸಾಮಾಜಿಕ ನ್ಯಾಯ ಸಮಿತಿಯು OBC ಕೋಟಾವನ್ನು ಮೂರು ಭಾಗಗಳಾಗಿ ವಿಂಗಡಿಸಲು ಶಿಫಾರಸು ಮಾಡಿತ್ತು. ಈ 17 ಜಾತಿಗಳನ್ನು ‘ಅತ್ಯಂತ ಹಿಂದುಳಿದ’ ವಿಭಾಗದ 33 ಜಾತಿಗಳ ಪಟ್ಟಿಯಲ್ಲಿ ಸೇರಿಸಿ ಶೇಕಡಾ 9ರಷ್ಟು ಒಳಮೀಸಲಾತಿ ನೀಡಲು ಸಲಹೆ ನೀಡಲಾಗಿತ್ತು.
ಕಡಿಮೆ ರಾಜಕೀಯ ಪ್ರಾತಿನಿಧ್ಯ, ತೀವ್ರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿನ್ನೆಡೆ ಹೊಂದಿರುವ ಈ ಸಮುದಾಯಗಳು ಅತ್ಯಂತ ವಂಚಿತ ವರ್ಗಗಳಾಗಿವೆ ಎಂಬುದನ್ನು ಸಮಿತಿ ಕಂಡುಕೊಂಡಿತ್ತು. ಇವರಲ್ಲಿ ಹೆಚ್ಚಿನವರು ತಳಮಟ್ಟದ ಗ್ರೂಪ್ ‘ಸಿ’ ಮತ್ತು ‘ಡಿ’ ಸರ್ಕಾರಿ ಉದ್ಯೋಗಗಳಲ್ಲಿದ್ದಾರೆ ಅಥವಾ ಉದ್ಯೋಗವೇ ಇಲ್ಲದ ಸ್ಥಿತಿಯಲ್ಲಿದ್ದಾರೆ. ಆದರೆ, ಆದಿತ್ಯನಾಥ ಸರ್ಕಾರ ಈ ಶಿಫಾರಸುಗಳನ್ನು ಜಾರಿಗೆ ತರಲೇ ಇಲ್ಲ. ಇದನ್ನು ಜಾರಿಗೊಳಿಸುವುದು ರಾಜಕೀಯವಾಗಿ ಭಾರೀ ರಿಸ್ಕ್ ಆಗಿತ್ತು. ಏಕೆಂದರೆ ಸಮಿತಿಯು ಯಾದವ್, ಕುರ್ಮಿ ಮತ್ತು ಜಾಟ್ನಂತಹ ಪ್ರಬಲ OBC ಜಾತಿಗಳನ್ನು ಒಂದೇ ಗುಂಪಿಗೆ ಸೇರಿಸಿತ್ತು. ಹೀಗೆ ಮಾಡಿದ್ದರೆ, BJPಯ ಯಾದವೇತರ ಒಗ್ಗೂಡುವಿಕೆ ತಂತ್ರಕ್ಕೆ ಧಕ್ಕೆಯಾಗಿ, ತನ್ನ ರಾಜಕೀಯ ಪ್ರಾಬಲ್ಯಕ್ಕೆ ಅತ್ಯಗತ್ಯವಾಗಿದ್ದ ಕುರ್ಮಿ ಮತ್ತು ಜಾಟ್ ಮತದಾರರು ದೂರವಾಗುವ ಅಪಾಯವಿತ್ತು.
►ಸರ್ಕಾರಿ ಉದ್ಯೋಗಗಳಲ್ಲಿ ತೀರಾ ಕಡಿಮೆ ಪಾಲು
ಅದೇ ರೀತಿ, 2001ರಲ್ಲಿ ಅಂದಿನ ಮುಖ್ಯಮಂತ್ರಿ ರಾಜನಾಥ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಹುಕುಂ ಸಿಂಗ್ ನೇತೃತ್ವದ ಸಾಮಾಜಿಕ ನ್ಯಾಯ ಸಮಿತಿಯು, ಯಾದವರ ಪಾಲನ್ನು ಶೇಕಡಾ 5ಕ್ಕೆ ಮಿತಿಗೊಳಿಸಿ OBC ಕೋಟಾವನ್ನು ವಿಂಗಡಿಸಲು ಶಿಫಾರಸು ಮಾಡಿತ್ತು. ಈ ವರದಿಯು ಕೇವಟ್, ಮಲ್ಲಾಹ್ ಮತ್ತು ಕಹಾರ್ ಸಮುದಾಯಗಳು ತಮ್ಮ ಜನಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆ ಸರ್ಕಾರಿ ಉದ್ಯೋಗಗಳನ್ನು ಹೊಂದಿವೆ ಎಂಬುದನ್ನು ಬಯಲು ಮಾಡಿತ್ತು.
ಕೇವಟ್ ಮತ್ತು ಮಲ್ಲಾಹ್ ಸಮುದಾಯಗಳು ರಾಜ್ಯದ OBC ಜನಸಂಖ್ಯೆಯ ಶೇಕಡಾ 4.3ರಷ್ಟಿದ್ದರೂ, ಸರ್ಕಾರಿ ಉದ್ಯೋಗಗಳಲ್ಲಿ ಅವರ ಪಾಲು ಕೇವಲ ಶೇಕಡಾ 1.36ರಷ್ಟಿತ್ತು. ಕಹಾರ್ ಸಮುದಾಯವು OBC ಜನಸಂಖ್ಯೆಯ ಶೇಕಡಾ 3.31ರಷ್ಟಿದ್ದು, ಶೇಕಡಾ 2.63ರಷ್ಟು ಉದ್ಯೋಗಗಳನ್ನು ಮಾತ್ರ ಹೊಂದಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಶೇಕಡಾ 19.4ರಷ್ಟಿದ್ದ ಯಾದವರು ಶೇಕಡಾ 33ರಷ್ಟು ಉದ್ಯೋಗಗಳನ್ನು ಹೊಂದಿದ್ದರು. ಶೇಕಡಾ 3.61ರಷ್ಟಿದ್ದ ಜಾಟ್ಗಳು ಶೇಕಡಾ 6.85ರಷ್ಟು ಮತ್ತು ಶೇಕಡಾ 7.46ರಷ್ಟಿದ್ದ ಕುರ್ಮಿಗಳು ಶೇಕಡಾ 12.49ರಷ್ಟು ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿದ್ದರು.
‘ನದಿ ಪುತ್ರ: ಉತ್ತರ ಭಾರತ್ ಮೇಂ ನಿಶಾದ್ ಔರ್ ನದಿ’ ಪುಸ್ತಕದ ಲೇಖಕ ಹಾಗೂ ಸಂಶೋಧಕ ರಮಾ ಶಂಕರ್ ಸಿಂಗ್ ಅವರ ಪ್ರಕಾರ, ಬಹುಪಾಲು ಸೌಲಭ್ಯ ಮತ್ತು ಉದ್ಯೋಗಗಳನ್ನು ಬಾಚಿಕೊಳ್ಳುವ ಯಾದವ್ ಮತ್ತು ಕುರ್ಮಿಗಳಂತಹ ಪ್ರಬಲ ಜಾತಿಗಳ ಎದುರು OBC ಪಟ್ಟಿಯಲ್ಲಿ ತಮಗೆ ನ್ಯಾಯಯುತ ಸ್ಪರ್ಧೆ ಸಾಧ್ಯವಿಲ್ಲ ಎಂಬ ನಿಶಾದ್ ನಾಯಕರ ನಂಬಿಕೆಯೇ SC ಸ್ಥಾನಮಾನದ ಬೇಡಿಕೆಗೆ ಮೂಲ ಕಾರಣ. ಆದರೆ, SC ಪಟ್ಟಿಗೆ ಸೇರ್ಪಡೆಯಾಗುವುದರಿಂದಲೇ ದೊಡ್ಡ ಮಟ್ಟದ ಪ್ರಯೋಜನ ಸಿಗದಿರಬಹುದು. ಏಕೆಂದರೆ ತಮ್ಮ ಕೋಟಾವನ್ನು ಹಂಚಿಕೊಳ್ಳಲು ಇಷ್ಟಪಡದ ಹಾಲಿ SC ಸಮುದಾಯಗಳೊಂದಿಗೆ ಇದು ಸಂಘರ್ಷವನ್ನು ಹುಟ್ಟುಹಾಕಬಹುದು ಎಂದು ಸಿಂಗ್ ವಾದಿಸುತ್ತಾರೆ.
“ನಿಶಾದ್ ಗಳ ಸೇರ್ಪಡೆಯು ಈಗಾಗಲೇ ನೆಲೆಯೂರಿರುವ ದಲಿತ ಸಮುದಾಯಗಳೊಂದಿಗೆ ನೇರ ಸಂಘರ್ಷದ ವಾತಾವರಣವನ್ನು ಸೃಷ್ಟಿಸುವುದು ಅನಿವಾರ್ಯ” ಎಂದು ‘the wire’ ಜತೆ ಮಾತನಾಡಿದ ಸಿಂಗ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಈ ಜಾತಿಗಳನ್ನು SC ವರ್ಗಕ್ಕೆ ವರ್ಗಾಯಿಸುವುದರಲ್ಲಿ ಗಂಭೀರ ಕಾನೂನು ತೊಡಕುಗಳಿವೆ. ಇಷ್ಟೊಂದು ದೊಡ್ಡ ಪ್ರಮಾಣದ ಬದಲಾವಣೆಯು ಸದ್ಯದ ರಾಜಕೀಯ ಸಮತೋಲನವನ್ನು ಸಂಪೂರ್ಣವಾಗಿ ಬುಡಮೇಲು ಮಾಡುವುದರಿಂದ, ಪ್ರಸ್ತುತ ಸನ್ನಿವೇಶದಲ್ಲಿ ಇದು ಕಾರ್ಯಸಾಧ್ಯವಾಗುವುದು ತೀರಾ ವಿರಳ. ಸ್ವಾತಂತ್ರ್ಯದ ನಂತರ ನಿಶಾದ್ ಸಮುದಾಯಗಳನ್ನು ತಪ್ಪಾಗಿ SC ಪಟ್ಟಿಯಿಂದ ಹೊರಗಿಡಲಾಯಿತು ಮತ್ತು ತದನಂತರ OBC ವರ್ಗಕ್ಕೆ ತಳ್ಳಲಾಯಿತು ಎಂಬುದು ಸಂಜಯ್ ನಿಶಾದ್ ಅವರ ಪ್ರಮುಖ ವಾದವಾಗಿದೆ.
ಅವರ ಪ್ರಕಾರ, ನಿಶಾದ್ ಮತ್ತು ಅದರ ಉಪಜಾತಿಗಳು ಈಗಾಗಲೇ SC ಪಟ್ಟಿಯಲ್ಲಿರುವ ಮಾಂಝಿ ಮತ್ತು ತುರೈಹಾ ಜಾತಿಗಳ ಪ್ರಾದೇಶಿಕ ಪರ್ಯಾಯ ಹೆಸರುಗಳಷ್ಟೇ. ಜನರು ಬೇರೆ ಬೇರೆ ಪ್ರಾದೇಶಿಕ ಉಪಜಾತಿ ಹೆಸರುಗಳನ್ನು ಬಳಸುತ್ತಿರುವುದರಿಂದ, ರಾಜ್ಯ ಸರ್ಕಾರವು ಅವರಿಗೆ ವ್ಯವಸ್ಥಿತವಾಗಿ SC ಪ್ರಮಾಣಪತ್ರಗಳನ್ನು ನಿರಾಕರಿಸುತ್ತಿದೆ ಎಂದು ಅವರು ಪ್ರತಿಪಾದಿಸುತ್ತಾರೆ.
ಈ ಸಮುದಾಯಗಳನ್ನು SC ಪಟ್ಟಿಗೆ ಸೇರಿಸಲು ಹಿಂದೆ ನಡೆದ ವಿಫಲ ಯತ್ನಗಳು
ಹಲವು ವರ್ಷಗಳಿಂದ ರಾಜ್ಯದ ಸತತ ಸರ್ಕಾರಗಳು ಈ ಸಮುದಾಯಗಳನ್ನು SC ಪಟ್ಟಿಗೆ ಸೇರಿಸಲು ಹತ್ತು ಹಲವು ಪ್ರಯತ್ನಗಳನ್ನು ಮಾಡಿವೆ. ಆದರೆ ಕೇಂದ್ರ ಸರ್ಕಾರ, ಮೊದಲು ಯುಪಿಎ ಆಡಳಿತ ಮತ್ತು ಈಗಿನ NDA ಸರ್ಕಾರ, ಇದನ್ನು ಮುಂದುವರಿಸಲು ಹಿಂದೇಟು ಹಾಕುತ್ತಲೇ ಬಂದಿದೆ. ನ್ಯಾಯಾಂಗವೂ ಕೂಡ ಈ ಪ್ರಯತ್ನಗಳಿಗೆ ತಡೆ ನೀಡಿದೆ ಅಥವಾ ರದ್ದುಗೊಳಿಸಿದೆ.
2005ರಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಈ 17 ಜಾತಿಗಳನ್ನು SC ಪಟ್ಟಿಗೆ ಸೇರಿಸಲು ಅನುಕೂಲವಾಗುವಂತೆ ಯುಪಿ ಸಾರ್ವಜನಿಕ ಸೇವೆಗಳ ಕಾಯ್ದೆ 1994ಕ್ಕೆ ತಿದ್ದುಪಡಿ ತಂದರು. SC ಪಟ್ಟಿಯನ್ನು ತಿದ್ದುಪಡಿ ಮಾಡುವ ಸಂವಿಧಾನಾತ್ಮಕ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂಬ ಕಾರಣಕ್ಕೆ ಅಲಹಾಬಾದ್ ಹೈಕೋರ್ಟ್ ಈ ನಡೆಯನ್ನು ರದ್ದುಗೊಳಿಸಿತು. 2007ರಲ್ಲಿ ಅಧಿಕಾರಕ್ಕೆ ಬಂದ ಮಾಯಾವತಿ ಸರ್ಕಾರ ಈ ಪ್ರಸ್ತಾಪದಡಿಯಲ್ಲಿ ನೀಡಲಾಗಿದ್ದ ಸೌಲಭ್ಯಗಳನ್ನು ಹಿಂಪಡೆಯಿತು. 2008ರಲ್ಲಿ ಅವರು ಕೇಂದ್ರಕ್ಕೆ ಶಿಫಾರಸು ಕಳುಹಿಸಿದರಾದರೂ, ಈ 17 ಸಮುದಾಯಗಳ ಸೇರ್ಪಡೆಯೊಂದಿಗೆ ದಲಿತರ ಒಟ್ಟು ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕು ಎಂಬ ಷರತ್ತು ವಿಧಿಸಿದ್ದರು.
ಅಖಿಲೇಶ್ ಯಾದವ್ ಸರ್ಕಾರ 2013ರಲ್ಲಿ ಈ ಪ್ರಸ್ತಾಪಕ್ಕೆ ಮರುಜೀವ ನೀಡಿತು. ಈ ಸೇರ್ಪಡೆಗೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಆದರೆ ಭಾರತೀಯ ರಿಜಿಸ್ಟ್ರಾರ್ ಜನರಲ್ ಇದನ್ನು ಒಪ್ಪಲು ನಿರಾಕರಿಸಿದ್ದರಿಂದ ಪ್ರಸ್ತಾಪ ತಿರಸ್ಕೃತಗೊಂಡಿತು.
2017ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿದ್ದಾಗ ಅಖಿಲೇಶ್ ಯಾದವ್ 2016ರ ಡಿಸೆಂಬರ್ನಲ್ಲಿ ಈ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದರು. ಈ 17 ಜಾತಿಗಳನ್ನು ಮರುವರ್ಗೀಕರಣ ಮಾಡುವ ನಿರ್ಧಾರಕ್ಕೆ ಅಲಹಾಬಾದ್ ಹೈಕೋರ್ಟ್ ಮಧ್ಯಂತರ ತಡೆ ನೀಡಿತು. 2017ರಲ್ಲಿ BJP ಅಧಿಕಾರಕ್ಕೆ ಬಂದ ನಂತರ, ಅದು ಕೂಡ ಈ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿತು. ಈ ಜಾತಿಗಳನ್ನು SC ಪಟ್ಟಿಗೆ ಸೇರಿಸಲು “ಕೇಂದ್ರ ಸರ್ಕಾರಕ್ಕೆ ಪ್ರಬಲ ಶಿಫಾರಸು ಮಾಡಲಾಗುವುದು” ಮತ್ತು ಮಧ್ಯಂತರ ಅವಧಿಯಲ್ಲಿ ರಾಜ್ಯದ BJP ಸರ್ಕಾರವೇ ಇವುಗಳಿಗೆ ಸಮಾನ ಸೌಲಭ್ಯ ನೀಡಲಿದೆ ಎಂದು ತನ್ನ 2012ರ ಚುನಾವಣಾ ಪ್ರಣಾಳಿಕೆಯಲ್ಲಿ BJP ಭರವಸೆ ನೀಡಿತ್ತು.
2019ರ ಜೂನ್ನಲ್ಲಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ, ನಿಶಾದ್ ಪಾರ್ಟಿಯ ಬೆಂಬಲದಿಂದ ಬಲಗೊಂಡಿದ್ದ BJP ನೇತೃತ್ವದ ಯುಪಿ ಸರ್ಕಾರ ಮೈತ್ರಿಪಕ್ಷವನ್ನು ಓಲೈಸಲು ಈ ವಿಷಯವನ್ನು ಮತ್ತೆ ಕೈಗೆತ್ತಿಕೊಂಡಿತು. ಐತಿಹಾಸಿಕ ದಾಖಲೆಗಳ ಪರಿಶೀಲನೆಯ ನಂತರ ಈ 17 ಅತ್ಯಂತ ಹಿಂದುಳಿದ ಜಾತಿಗಳಿಗೆ SC ಪ್ರಮಾಣಪತ್ರಗಳನ್ನು ನೀಡುವಂತೆ ಆದಿತ್ಯನಾಥ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಆದರೆ ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು ಮತ್ತು 2019ರ ಸೆಪ್ಟೆಂಬರ್ನಲ್ಲಿ ಹೈಕೋರ್ಟ್ ಇದಕ್ಕೆ ತಡೆ ನೀಡಿತು. ಜಾತಿ ಪ್ರಮಾಣಪತ್ರಗಳು ಉತ್ತರ ಪ್ರದೇಶದ ರಾಷ್ಟ್ರಪತಿಗಳ ಅಧಿಸೂಚನೆಗೆ ಕಡ್ಡಾಯವಾಗಿ ಬದ್ಧವಾಗಿರಬೇಕು ಹಾಗೂ ರಾಷ್ಟ್ರಪತಿಗಳ ಪಟ್ಟಿಯಲ್ಲಿರುವ ನಮೂದುಗಳನ್ನು ಬದಲಾಯಿಸುವ, ಸೇರಿಸುವ ಅಥವಾ ಸ್ಪಷ್ಟಪಡಿಸುವ ಸಂವಿಧಾನಾತ್ಮಕ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಕೋರ್ಟ್ ತೀರ್ಪು ನೀಡಿತು. ಅಂದರೆ, ಕೇವಲ ಕೇಂದ್ರ ಸರ್ಕಾರ ಮಾತ್ರ SC ಪಟ್ಟಿಗೆ ಜಾತಿಯೊಂದನ್ನು ಸೇರಿಸಬಹುದು, ರಾಜ್ಯಕ್ಕೆ ಅಂತಹ ಯಾವುದೇ ಅಧಿಕಾರವಿಲ್ಲ.
2022ರ ಆಗಸ್ಟ್ ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಗ್ರಂಥಾಲಯ ಏವಂ ಜನ ಕಲ್ಯಾಣ ಸಾರ್ವಜನಿಕ ಹಿತಾಸಕ್ತಿ ಅರ್ಜಿ (2017ರಲ್ಲಿ ಸಲ್ಲಿಕೆಯಾಗಿದ್ದ) ಮತ್ತು ಗೋರಖ್ ಪ್ರಸಾದ್ ಅರ್ಜಿಗಳ (ಆದಿತ್ಯನಾಥ್ ಆದೇಶದ ವಿರುದ್ಧ 2019ರಲ್ಲಿ ಸಲ್ಲಿಕೆಯಾಗಿದ್ದ) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಲ್ ನೇತೃತ್ವದ ಅಲಹಾಬಾದ್ ಹೈಕೋರ್ಟ್ ನ ದ್ವಿಪೀಠವು, 2016ರ ಡಿಸೆಂಬರ್ 22ರಂದು (ಅಖಿಲೇಶ್ ಯಾದವ್ ಆಡಳಿತಾವಧಿ) ಮತ್ತು 2019ರ ಜೂನ್ 24ರಂದು (ಆದಿತ್ಯನಾಥ್ ಆಡಳಿತಾವಧಿ) ಹೊರಡಿಸಲಾಗಿದ್ದ ಕಾರ್ಯಾಂಗದ ಆದೇಶಗಳನ್ನು ಅಧಿಕೃತವಾಗಿ ರದ್ದುಗೊಳಿಸಿತು.
ಸಂಸದೀಯ ಕಾನೂನಿನ ಮೂಲಕ ಮಾತ್ರ 1950ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶದ ಪಟ್ಟಿಗೆ ನಿರ್ದಿಷ್ಟ ಜಾತಿಯನ್ನು ಸೇರಿಸಲು ಅಥವಾ ಹೊರಗಿಡಲು ಸಾಧ್ಯ ಎಂದು ಕೋರ್ಟ್ ಸ್ಪಷ್ಟಪಡಿಸಿತು. 341(2) ವಿಧಿಯಡಿ ರಾಷ್ಟ್ರಪತಿಗಳ ಆದೇಶದಲ್ಲಿ ನಿರ್ದಿಷ್ಟಪಡಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಗೆ ಯಾವುದೇ ಬದಲಾವಣೆ ಮಾಡಲು ಸಂಸತ್ತಿಗೆ ಮಾತ್ರ ಕಾನೂನಿನ ಮೂಲಕ ಅಧಿಕಾರವಿದೆ ಎಂದು ತಿಳಿಸಿತು.
ಇದೇ ರೀತಿಯ ನಿಯಮವನ್ನು 2024ರಲ್ಲಿ ಬಿಹಾರದ ತಾಂತಿ-ತಾಂದ್ವಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆ, ಹೊರಗಿಡುವಿಕೆ ಅಥವಾ ಮರುವರ್ಗೀಕರಣವನ್ನು 341ನೇ ವಿಧಿಯಡಿ ಸಂಸತ್ತಿನ ಶಾಸನದ ಮೂಲಕವೇ ಕೈಗೊಳ್ಳಬೇಕು ಎಂದು ತೀರ್ಪು ನೀಡಿತು.
ಬಿಹಾರ ಸರ್ಕಾರವು ‘ತಾಂತಿ-ತಾಂದ್ವಾ’ ಅತ್ಯಂತ ಹಿಂದುಳಿದ ವರ್ಗವನ್ನು ಪರಿಶಿಷ್ಟ ಜಾತಿಗಳ ಪಟ್ಟಿಯ ನಮೂದು 20ರ ಅಡಿಯಲ್ಲಿ ‘ಪಾನ್, ಸವಾಸಿ, ಪಾನ್ರ್’ ಸಮುದಾಯಗಳೊಂದಿಗೆ ಸೇರಿಸಿ ನಿರ್ಣಯ ಅಂಗೀಕರಿಸಿತ್ತು. ಇದು ಬದಲಾವಣೆಯಲ್ಲ, ಕೇವಲ ಸ್ಪಷ್ಟೀಕರಣ ಎಂದು ವಾದಿಸಿತ್ತು. ಆದರೆ ‘ಸ್ಪಷ್ಟೀಕರಣ’ದ ನೆಪದಲ್ಲಿ ತಾಂತಿ-ತಾಂದ್ವಾ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಬಿಹಾರ ಸರ್ಕಾರ ಮಾಡಿದ ಪ್ರಯತ್ನವು ಕಾನೂನುಬಾಹಿರ ಮತ್ತು ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.
►ಅಲಹಾಬಾದ್ ಹೈಕೋರ್ಟ್ ನಲ್ಲಿ ಹಿನ್ನಡೆ
2026ರ ಜೂನ್ ನಲ್ಲಿ, ಈಗಾಗಲೇ SC ಪಟ್ಟಿಯಲ್ಲಿರುವ ‘ಮಾಂಝಿ’ ಜಾತಿಯ ಪ್ರಾದೇಶಿಕ ಹೆಸರುಗಳು ಅಥವಾ ಉಪಜಾತಿಗಳೆಂದು ಪರಿಗಣಿಸಿ ನಿಶಾದ್, ಮಲ್ಲಾಹ್, ಕಹಾರ್, ಕಶ್ಯಪ್ ಮತ್ತು ಬೈಂಡ್ ಸಮುದಾಯಗಳನ್ನು SC ವರ್ಗಕ್ಕೆ ಸೇರಿಸಬೇಕು ಎಂಬ ವಾದವನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿಹಾಕಿತು. ಅರ್ಜಿ ಸಲ್ಲಿಸಿದ್ದ ಚಂದ್ರ ಶೇಖರ್ ನಿಶಾದ್, ದೋಣಿ ನಡೆಸುವ ಪಾರಂಪರಿಕ ವೃತ್ತಿಯನ್ನು ಹಂಚಿಕೊಂಡಿರುವುದರಿಂದ ನಿಶಾದ್, ಕೇವಟ್, ಮಲ್ಲಾಹ್ ಮತ್ತು ಬೈಂಡ್ ಸಮುದಾಯಗಳು ಮಾಂಝಿ ಜಾತಿಗೆ ಸಮಾನವಾಗಿದ್ದು, ಅವರಿಗೂ ಅದೇ ಸೌಲಭ್ಯಗಳು ಸಿಗಬೇಕು ಎಂದು ಕೋರಿದ್ದರು.
ಈ ನಿಶಾದ್ ಸಮುದಾಯಗಳನ್ನು ಉತ್ತರ ಪ್ರದೇಶದಲ್ಲಿ ಅಧಿಕೃತವಾಗಿ OBC ಎಂದು ಗುರುತಿಸಲಾಗಿದ್ದು, ಸಂಸತ್ತಿನ ಕಾಯ್ದೆಯಿಲ್ಲದೆ ಕೇವಲ ಉಪಜಾತಿ ಅಥವಾ ಸಮಾನಾರ್ಥಕ ಪದಗಳೆಂದು ಪರಿಗಣಿಸಿ 1950ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶದಡಿ ಮಾಂಝಿ ಜಾತಿಯೊಂದಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಈ ಉಪಜಾತಿಗಳನ್ನು ಮಾಂಝಿ ಜಾತಿಯೊಂದಿಗೆ ಸೇರಿಸುವ ಉದ್ದೇಶ ಸಂಸತ್ತಿಗೆ ಇದ್ದಿದ್ದರೆ, 1950ರ ಆದೇಶದಲ್ಲೇ ಅವುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತಿತ್ತು ಎಂದೂ ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಶಾಸನಬದ್ಧವಾಗಿ ಮೀಸಲಾತಿ ನೀಡುವ ಕುರಿತು ಯಾವುದೇ ಸ್ಪಷ್ಟ ನಿಲುವು ತಳೆಯದಿದ್ದರೂ, BJP ಈ ಮೀಸಲಾತಿ ವಿಷಯವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಲೇ ಬಂದಿದೆ. 2023ರ ಜನವರಿಯಲ್ಲಿ ಗೋರಖ್ಪುರದಲ್ಲಿ ನಡೆದ ನಿಶಾದ್ ಪಾರ್ಟಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆದಿತ್ಯನಾಥ, ಮರುವರ್ಗೀಕರಣ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದು ಹೇಳಿಕೊಂಡಿದ್ದರು.
ಇನ್ನೊಂದೆಡೆ, ಸಂಜಯ್ ನಿಶಾದ್ ಅವರ ಮೇಲಿನ ವೈಯಕ್ತಿಕ ಒತ್ತಡವೂ ಹೆಚ್ಚುತ್ತಿದೆ. 2017ರ ವಿಧಾನಸಭಾ ಚುನಾವಣೆಗೆ ಮುನ್ನ ಹಿಂದುಳಿದ ನದಿ ಪಾತ್ರದ ಸಮುದಾಯಗಳ ರಾಜಕೀಯ ಧ್ವನಿಯಾಗಿ ಹೊರಹೊಮ್ಮಿದ ಅವರ ಪಕ್ಷ, ಗೋರಖ್ಪುರದಿಂದ ಪ್ರತಿಭಟನೆಯನ್ನೂ ನಡೆಸಿತ್ತು. ಸ್ವತಃ ಸಂಜಯ್ ನಿಶಾದ್ ತಮ್ಮನ್ನು “ಮೀನುಗಾರ ಸಮುದಾಯದ ರಾಜಕೀಯ ಮಾರ್ಗದರ್ಶಿ” ಎಂದು ಬಿಂಬಿಸಿಕೊಳ್ಳಲು ತೊಡಗಿದ್ದರು.
ಮಚ್ಚುವಾ ಮೀಸಲಾತಿ ಅಥವಾ ನಿಶಾದ್ಗಳಿಗೆ SC ಮೀಸಲಾತಿ ಕೊಡುವುದು ಅವರ ಪಕ್ಷದ ಮುಖ್ಯ ಬೇಡಿಕೆಯಾಗಿತ್ತು. ಆದರೆ, BJPಯೊಂದಿಗೆ ಮೈತ್ರಿ ಮಾಡಿಕೊಂಡು ಲಕ್ನೋದಲ್ಲಿ ಅಧಿಕಾರ ಅನುಭವಿಸುತ್ತಿರುವ ಸಂಜಯ್ ನಿಶಾದ್, ಪಕ್ಷದ ಮುಖ್ಯ ಬೇಡಿಕೆಯನ್ನು ಈಡೇರಿಸುವ ಬದಲು ತಮ್ಮ ಹಾಗೂ ತಮ್ಮ ಕುಟುಂಬದ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅಧಿಕಾರ ಬಳಸಿಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳಲ್ಲಿರುವ ನಿಶಾದ್ ನಾಯಕರು ಆರೋಪಿಸುತ್ತಲೇ ಬಂದಿದ್ದಾರೆ.
ಅವರ ಕಿರಿಯ ಮಗ ಸರ್ವನ್ ನಿಶಾದ್ ಗೋರಖ್ಪುರದ ಚೌರಿ ಚೌರಾದಿಂದ BJPಯ ಶಾಸಕರಾಗಿದ್ದಾರೆ. ಹಿರಿಯ ಮಗ ಪ್ರವೀಣ್ ನಿಶಾದ್ 2019ರಲ್ಲಿ ಸಂತ ಕಬೀರ್ ನಗರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಾದರೂ, 2024ರಲ್ಲಿ ಸಮಾಜವಾದಿ ಪಾರ್ಟಿಯ ಅಭ್ಯರ್ಥಿ ಲಕ್ಷ್ಮೀಕಾಂತ್ “ಪಪ್ಪು” ನಿಶಾದ್ ವಿರುದ್ಧ ಸೋಲನುಭವಿಸಿದರು. ಆ ಸೀಟನ್ನು ಗೆದ್ದಂದಿನಿಂದ ಲಕ್ಷ್ಮೀಕಾಂತ್ ನಿಶಾದ್ ಸಂಸತ್ತಿನಲ್ಲಿ ನಿಶಾದ್ ಮೀಸಲಾತಿ ಬೇಡಿಕೆಯನ್ನು ಪದೇ ಪದೇ ಎತ್ತುತ್ತಿದ್ದಾರೆ. ಈ ವಿಷಯವು ಸಮಾಜವಾದಿ ಪಾರ್ಟಿಯ ಪಿಡಿಎ (ಪಿಛ್ಡಾ, ದಲಿತ್, ಅಲ್ಪಸಂಖ್ಯಾಕ್) ರಾಜಕೀಯ ತಂತ್ರದ ಪ್ರಮುಖ ಭಾಗವಲ್ಲದಿದ್ದರೂ ಅವರು ಈ ಧ್ವನಿ ಎತ್ತುತ್ತಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ BJPಯ ಸ್ಥಾನಗಳು ಕಡಿಮೆಯಾದ ನಂತರ, ಸಂಜಯ್ ನಿಶಾದ್ ಸ್ವತಃ BJPಗೆ ಈ ಈಡೇರದ ಮೀಸಲಾತಿ ಭರವಸೆಯನ್ನು ನೆನಪಿಸಿದ್ದರು. ಸಮ್ಮಿಶ್ರ ಕೂಟವು ಸ್ಥಾನಗಳನ್ನು ಮತ್ತು ಮತಗಳ ಪಾಲನ್ನು ಕಳೆದುಕೊಳ್ಳಲು ನಿಶಾದ್ ಮತದಾರರ ಅಸಮಾಧಾನವೇ ಕಾರಣ ಎಂದು ಹೇಳಿದ್ದರು.
ಸಂಜಯ್ ನಿಶಾದ್ 2022ರಲ್ಲಿ ಅಧಿಕೃತವಾಗಿ ರಾಜ್ಯ ಸರ್ಕಾರವನ್ನು ಸೇರಿಕೊಂಡಿದ್ದರೂ, BJP ಕೇಂದ್ರದಲ್ಲಿ 2014ರಿಂದ ಮತ್ತು ಯುಪಿಯಲ್ಲಿ 2017ರಿಂದ ಅಧಿಕಾರದಲ್ಲಿದೆ. ಹೀಗಾಗಿ, ಮೈತ್ರಿಪಕ್ಷಗಳು ಸಹಕರಿಸುತ್ತಿಲ್ಲ ಎಂದು ನೆಪ ಹೇಳುವ ಅವಕಾಶ ಸಂಜಯ್ ನಿಶಾದ್ ಹಾಗೂ ಆಡಳಿತಾರೂಢ BJPಗೆ ಇಲ್ಲದಂತಾಗಿದೆ.
ನಿಶಾದ್ ಸಮುದಾಯವನ್ನು ಒಲಿಸಿಕೊಳ್ಳಲು ಯುಪಿ ಸರ್ಕಾರದ ಯತ್ನಗಳು
ನಿಶಾದ್ ಸಮುದಾಯವನ್ನು ತನ್ನತ್ತ ಸೆಳೆಯಲು BJP ಇದುವರೆಗೆ ಕಲ್ಯಾಣ ಯೋಜನೆಗಳು, ಧಾರ್ಮಿಕ ಸಂಕೇತಗಳು ಮತ್ತು ರಾಜಕೀಯ ಪ್ರಾತಿನಿಧ್ಯದ ಸುಪರಿಚಿತ ತಂತ್ರಗಳನ್ನು ನೆಚ್ಚಿಕೊಂಡಿದೆ. ಸರ್ಕಾರವು ನಿಶಾದರಾಜನ ಪ್ರತಿಮೆ ಮತ್ತು ಉದ್ಯಾನವನ ನಿರ್ಮಾಣ ಸೇರಿದಂತೆ ಆತನನ್ನು ಸಾಂಸ್ಕೃತಿಕ ನಾಯಕನನ್ನಾಗಿ ಬಿಂಬಿಸಿದೆ. ಈ ವರ್ಷದ ಆರಂಭದಲ್ಲಿ, 2024ರ ಚುನಾವಣೆಯಲ್ಲಿ ಸೋತಿದ್ದ ಮಾಜಿ BJP ಸಂಸದೆ ಹಾಗೂ ಪ್ರಮುಖ ನಿಶಾದ್ ನಾಯಕಿ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಆದರೆ, ನಿಶಾದ್ ಮೀಸಲಾತಿಗೆ ಸಂಬಂಧಿಸಿದಂತೆ ಯಾವುದೇ ಶಾಸನಬದ್ಧ ಕ್ರಮಗಳನ್ನು ಕೈಗೊಳ್ಳಲು ಪಕ್ಷವು ಹಿಂದೇಟು ಹಾಕುತ್ತಿದೆ.
ಆಗಸ್ಟ್ 16ರಂದು ಸಂಜಯ್ ನಿಶಾದ್ ತಮ್ಮ ಶಕ್ತಿ ಪ್ರದರ್ಶನ ನಡೆಸಿದ ನಂತರ, BJPಯ ಪ್ರತಿಕ್ರಿಯೆಯು ಮೀಸಲಾತಿ ಪ್ರಶ್ನೆಯನ್ನು ಬಗೆಹರಿಸುವುದಕ್ಕಿಂತ ಹೆಚ್ಚಾಗಿ ಮೈತ್ರಿಪಕ್ಷದ ರಾಜಕೀಯ ನಿರ್ವಹಣೆಯ ಮೇಲೆಯೇ ಕೇಂದ್ರೀಕೃತವಾಗಿದ್ದು ಆಶ್ಚರ್ಯವೇನಲ್ಲ. ಯುಪಿಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಅದೇ ಜಾತಿ ಸಮೂಹಕ್ಕೆ ಸೇರಿದ BJP ನಾಯಕ ನರೇಂದ್ರ ಕುಮಾರ್ ಕಶ್ಯಪ್, ಸಂಜಯ್ ನಿಶಾದ್ ಅವರ ಈ ಬಹಿರಂಗ ನಿಲುವು ಕೇವಲ ಕಳೆದುಕೊಂಡ ನೆಲೆಯನ್ನು ಮರಳಿ ಪಡೆಯುವ ಪ್ರಯತ್ನವಷ್ಟೇ ಎಂದು ಸುಳಿವು ನೀಡಿದ್ದಾರೆ.
“ಸಂತ ಕಬೀರ್ ನಗರದಿಂದ ಅವರ ಮಗ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರಿಂದ ಮತ್ತು ಜನರು ಅವರನ್ನು ಬೆಂಬಲಿಸದ ಕಾರಣ ಅವರು ನಿರಾಶೆಗೊಂಡಿರಬಹುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳು ಗೆಲ್ಲದಿರಬಹುದು ಎಂಬ ಆತಂಕವೂ ಅವರಲ್ಲಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ನಾಯಕನು ಜನರ ಬೆಂಬಲ ಪಡೆಯಲು ಅವರ ಬಳಿಗೆ ಹೋಗಲು ಯತ್ನಿಸುತ್ತಾನೆ” ಎಂದು ಕಶ್ಯಪ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಈ 17 ಜಾತಿಗಳನ್ನು ಪರಿಶಿಷ್ಟ ಜಾತಿಗಳಾಗಿ ಮರುವರ್ಗೀಕರಣ ಮಾಡುವುದು ಸರ್ಕಾರಕ್ಕೆ ಹೊಸ ಸಂಕಷ್ಟಗಳನ್ನು ತಂದೊಡ್ಡಬಹುದು. ಇತರ ಹಿಂದುಳಿದ ಸಮುದಾಯಗಳು ಸಹ ಇದೇ ರೀತಿಯ ಸ್ಪರ್ಧಾತ್ಮಕ ಬೇಡಿಕೆಗಳನ್ನು ಇಡಲು ಪ್ರಾರಂಭಿಸಬಹುದು. ಪೂರ್ವ ಯುಪಿಯ ರಾಜ್ಭಾರ್ಗಳು ‘ಜಾಗೋ ರಾಜ್ಭಾರ್ ಜಾಗೋ’ ಬ್ಯಾನರ್ ಅಡಿಯಲ್ಲಿ ಈಗಾಗಲೇ ಎಸ್ಟಿ ಸ್ಥಾನಮಾನಕ್ಕೆ ಆಗ್ರಹಿಸುತ್ತಿದ್ದಾರೆ.
ಇನ್ನು ಮುಖ್ಯವಾಗಿ, ಇಂತಹ ಯಾವುದೇ ನಡೆಯು ಹಾಲಿ ಇರುವ ದಲಿತ ಸಮುದಾಯಗಳಿಂದ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ. ಇದು ಹಿಂದುತ್ವದಡಿ ಶೋಷಿತ ಮತ್ತು ಮೇಲ್ವರ್ಗದ ಹಿಂದೂ ಮತದಾರರನ್ನು ಒಗ್ಗೂಡಿಸುವ BJPಯ ಪ್ರಯತ್ನಕ್ಕೆ ಬೆದರಿಕೆಯೊಡ್ಡುತ್ತದೆ.
ಉತ್ತರ ಪ್ರದೇಶವು 66 ಮಾನ್ಯತೆ ಪಡೆದ ದಲಿತ ಜಾತಿಗಳಿಗೆ ನೆಲೆಯಾಗಿದೆ. ಜಾತವ್/ಚಮಾರ್, ಪಾಸಿ, ವಾಲ್ಮೀಕಿ, ಖಟಿಕ್, ಧೋಬಿ, ಕೋರಿ ಮತ್ತು ಧನುಕ್ ಸಮುದಾಯಗಳು SC ಜನಸಂಖ್ಯೆಯ ಹೆಚ್ಚಿನ ಭಾಗವನ್ನು ಹೊಂದಿವೆ. ಬಹುಜನ ಸಮಾಜ ಪಾರ್ಟಿ (BSP) ಮುಖ್ಯಸ್ಥೆ ಮಾಯಾವತಿ ಸೇರಿದಂತೆ ದಲಿತ ನಾಯಕರು, SC ಪಟ್ಟಿಗೆ ಹೊಸ ಸಮುದಾಯಗಳನ್ನು ಸೇರಿಸಿದರೆ ಹಾಲಿ ದಲಿತ ಗುಂಪುಗಳ ಹಕ್ಕುಗಳು ಕಸಿದುಕೊಳ್ಳುವುದನ್ನು ತಡೆಯಲು ಒಟ್ಟು SC ಕೋಟಾವನ್ನು ಅನುಪಾತಕ್ಕೆ ತಕ್ಕಂತೆ ಹೆಚ್ಚಿಸಬೇಕು ಎಂದು ನಿರಂತರವಾಗಿ ಪ್ರತಿಪಾದಿಸುತ್ತಿದ್ದಾರೆ.
ಯುಪಿಯ ಸಂಕೀರ್ಣ ಜಾತಿ ರಾಜಕೀಯದಲ್ಲಿ ನಿಶಾದ್ ನಾಯಕರು ತಮ್ಮ ಸಮುದಾಯವನ್ನು ಪ್ರಮುಖ ‘ನಿರ್ಣಾಯಕ ಮತ ಬ್ಯಾಂಕ್’ ಎಂದು ಬಿಂಬಿಸುತ್ತಾರೆ. ಏಕೆಂದರೆ ಇಲ್ಲಿ ಕೆಲವು ಗುಂಪುಗಳು ನಿರ್ದಿಷ್ಟ ರಾಜಕೀಯ ಪಕ್ಷಗಳೊಂದಿಗೆ ದೃಢವಾಗಿ ಗುರುತಿಸಿಕೊಂಡಿದ್ದರೆ, ಇತರರು ಬದಲಾಗುತ್ತಿರುತ್ತಾರೆ. ಈ ನದಿ ಪಾತ್ರದ ಸಮುದಾಯಗಳು ನೀಡುವ ಅಸ್ಥಿರ ಬೆಂಬಲವು ಯಾವುದೇ ಪಕ್ಷದ ಪರವಾಗಿ ತೂಕವನ್ನು ಹೆಚ್ಚಿಸುತ್ತದೆ. “ನಿಶಾದ್ ಜಿದರ್, ಸತ್ತಾ ಉದರ್” (ನಿಶಾದರು ಯಾರಿಗೆ ಮತ ಹಾಕುತ್ತಾರೋ, ಅಧಿಕಾರ ಅತ್ತ ಒಲಿಯುತ್ತದೆ) ಎನ್ನುತ್ತಾರೆ ಸಮಾಜವಾದಿ ಪಾರ್ಟಿಯ ನಾಯಕ ಹಾಗೂ ಯುಪಿ ಹಿಂದುಳಿದ ವರ್ಗಗಳ ವಿಭಾಗದ ಮಾಜಿ ಮುಖ್ಯಸ್ಥ ಲೌತಾನ್ ರಾಮ್ ನಿಶಾದ್.
BJP ಮತಗಳನ್ನು ಪಡೆದರೂ ಕೊಟ್ಟ ಭರವಸೆಯನ್ನು ಈಡೇರಿಸಲಿಲ್ಲ
ಲೌತಾನ್ ರಾಮ್ ಅವರು ಸಂಜಯ್ ನಿಶಾದ್ ಅವರ ಇತ್ತೀಚಿನ ಹೇಳಿಕೆಗಳನ್ನು ರಾಜಕೀಯ ನಾಟಕ ಎಂದು ತಳ್ಳಿಹಾಕಿದ್ದಾರೆ. ಆಡಳಿತಾರೂಢ ಮೈತ್ರಿಕೂಟದಲ್ಲಿ ತಮ್ಮ ಪ್ರಭಾವವನ್ನು ಉಳಿಸಿಕೊಳ್ಳಲು ಮತ್ತು BJPಯ ಮೇಲಿದ್ದ ಸಮುದಾಯದ ಆಕ್ರೋಶವನ್ನು ಬೇರೆಡೆಗೆ ತಿರುಗಿಸಲು ಈ ರೀತಿ ಮಾಡುತ್ತಿದ್ದಾರೆ ಎಂದಿದ್ದಾರೆ. ಸಂಜಯ್ ನಿಶಾದ್ ಅವರು ವರ್ಷಗಳಿಂದ ಇದೇ ಬೇಡಿಕೆಗಳನ್ನು ಎತ್ತುತ್ತಿದ್ದರೂ ಲಕ್ನೋ ಅಥವಾ ದಿಲ್ಲಿಯ BJP ಸರ್ಕಾರಗಳಿಂದ ಯಾವುದೇ ನಿಖರ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ನೆನಪಿಸಿದ್ದಾರೆ.
“BJP ಅವರ ಮತಗಳನ್ನು ಪಡೆದುಕೊಂಡಿತಾದರೂ ಕೊಟ್ಟ ಭರವಸೆಯನ್ನು ಈಡೇರಿಸಲಿಲ್ಲ. ಚುನಾವಣೆ ಹತ್ತಿರವಾದಾಗ ಸಂಜಯ್ ನಿಶಾದ್ ತಮ್ಮನ್ನು ಸಮುದಾಯದ ರಾಜಕೀಯ ಮಾರ್ಗದರ್ಶಿ ಎಂದು ಬಿಂಬಿಸಿಕೊಳ್ಳುತ್ತಾರೆ ಮತ್ತು ಮೀಸಲಾತಿಯ ಕಿಚ್ಚನ್ನು ಹೊತ್ತಿಸುತ್ತಾರೆ. ಈಗ 2027ರ ಚುನಾವಣೆ ಹತ್ತಿರವಾಗುತ್ತಿರುವುದರಿಂದ, ಅವರು BJPಯ ನಿರ್ದೇಶನದಂತೆ ಗಿಮಿಕ್ ಮಾಡುತ್ತಿದ್ದಾರೆ. ನಿಶಾದ್ ಸಮುದಾಯ ತೀವ್ರ ಆಕ್ರೋಶಗೊಂಡಿದ್ದು ಸಮಾಜವಾದಿ ಪಾರ್ಟಿಯತ್ತ ವಾಲುತ್ತಿರುವುದರಿಂದ BJP ಕಂಗಾಲಾಗಿದೆ” ಎಂದು ಲೌತಾನ್ ರಾಮ್ ಹೇಳಿರುವುದಾಗಿ ‘ದಿ ವೈರ್’ ವರದಿ ಉಲ್ಲೇಖಿಸಿದೆ.
2017 ಮತ್ತು 2022ರಲ್ಲಿ ನದಿ ಪಾತ್ರದ ಮತದಾರರು BJPಯನ್ನು ಬೆಂಬಲಿಸಿದ್ದರೂ, ಸಂಜಯ್ ನಿಶಾದ್ ಈಗ ಸಮುದಾಯದ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು. “ಅವರು ಮತ್ತೆ ನಿಶಾದ್ಗಳ ದಾರಿ ತಪ್ಪಿಸಲು ಸಾಧ್ಯವಿಲ್ಲ. ಮರದ ಪಾತ್ರೆಯನ್ನು ಬೆಂಕಿಯ ಮೇಲಿಟ್ಟು ಒಂದೇ ಬಾರಿ ಅಡುಗೆ ಮಾಡಲು ಸಾಧ್ಯ (ಒಮ್ಮೆ ಮಾಡಿದ ಮೋಸ ಮತ್ತೆ ಮಾಡಲು ಸಾಧ್ಯವಿಲ್ಲ). BJPಯ ನಿಶಾದ್ ವಿರೋಧಿ ಮುಖ ಈಗ ಬಯಲಾಗಿದೆ” ಎಂದರು. ಸಮಾಜವಾದಿ ಪಾರ್ಟಿ ಇತ್ತೀಚೆಗೆ ಫೂಲನ್ ದೇವಿ ಅವರ ಸಹೋದರಿ ರುಕ್ಮಿಣಿ ದೇವಿ ಅವರನ್ನು ತನ್ನ ಮಹಿಳಾ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದೆ.
BJPಯ ಸಂಕಷ್ಟವನ್ನು ಹೆಚ್ಚಿಸುವಂತೆ, ನೆರೆಯ ಬಿಹಾರದ ಪ್ರಮುಖ ನಿಶಾದ್ ನಾಯಕ ಹಾಗೂ ಮಾಜಿ ಸಚಿವ, ವಿಕಾಸ್ಶೀಲ್ ಇನ್ಸಾನ್ ಪಾರ್ಟಿಯ ಮುಖ್ಯಸ್ಥ ಮುಕೇಶ್ ಸಾಹ್ನಿ ಪ್ರಸ್ತುತ ಯುಪಿಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. “ಆರಕ್ಷಣ್ ನಹೀ ತೋ ವೋಟ್ ನಹೀ” (ಮೀಸಲಾತಿ ಇಲ್ಲದಿದ್ದರೆ ಮತವಿಲ್ಲ) ಎಂಬ ಘೋಷಣೆಯೊಂದಿಗೆ ಮೀಸಲಾತಿಯನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ಇತ್ತೀಚೆಗೆ ಖುಶಿನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಾಹ್ನಿ, ಸಮುದಾಯದ ಸಂಘಟಿತ ಶಕ್ತಿಗೆ ಹೆದರಿದರೆ ಮಾತ್ರ ಸರ್ಕಾರ SC ಸ್ಥಾನಮಾನ ನೀಡುತ್ತದೆ ಎಂದು ವಾದಿಸಿದರು. ಗಂಗಾ ಜಲವನ್ನು ಕೈಯಲ್ಲಿ ಹಿಡಿದು ಪೂರ್ವಜರನ್ನು ಸ್ಮರಿಸಿದ ಸಾಹ್ನಿ ಮತ್ತು ಇತರರು, ರಾಜ್ಯದಲ್ಲಿ ಚುನಾವಣೆ ನಡೆಯುವ ಮುನ್ನ SC ಮೀಸಲಾತಿ ನೀಡದಿದ್ದರೆ BJPಗೆ ಮತ ಹಾಕುವುದಿಲ್ಲ ಎಂದು ಒಟ್ಟಾಗಿ ಪ್ರಮಾಣ ಮಾಡಿದರು. “ನೋಟಾಗೆ ಮತ ಹಾಕಿ ಅಥವಾ ನಿಮ್ಮದೇ ಸಹೋದರರನ್ನು ಬೆಂಬಲಿಸಿ, ಆದರೆ ಭರವಸೆ ತಪ್ಪಿದವರಿಗೆ ಮತ ಹಾಕಬೇಡಿ. ಅವರನ್ನು ಒಮ್ಮೆ ಸೋಲಿಸಿ, ಆಗ ಅವರು ನಿಮ್ಮ ಮಾತು ಕೇಳಲು ಬದ್ಧರಾಗುತ್ತಾರೆ” ಎಂದು ಸಾಹ್ನಿ ಹೇಳಿದರು.
SC ಸ್ಥಾನಮಾನ ನೀಡುವ ಹಾದಿಯಲ್ಲಿರುವ ಕಾನೂನು ಮತ್ತು ರಾಜಕೀಯ ತೊಡಕುಗಳನ್ನು ಗಮನಿಸಿದರೆ, ಒಟ್ಟು ಶೇಕಡಾ 27ರಷ್ಟು ಇರುವ OBC ಕೋಟಾವನ್ನು ಹೆಚ್ಚಿಸುವಂತೆ ಒತ್ತಾಯಿಸುವುದು ನಿಶಾದ್ ಸಮುದಾಯಕ್ಕೆ ಹೆಚ್ಚು ವಾಸ್ತವಿಕ ಹಾದಿಯಾಗಿದೆ ಎಂದು ಸಂಶೋಧಕ ರಮಾ ಶಂಕರ್ ಸಿಂಗ್ ಸಲಹೆ ನೀಡುತ್ತಾರೆ.
ಅಸಮಾಧಾನಗೊಂಡ ನದಿ ಪಾತ್ರದ ಮತದಾರರನ್ನು ಸೆಳೆಯಲು ವಿರೋಧ ಪಕ್ಷಗಳು ಸಕ್ರಿಯವಾಗಿ ಯತ್ನಿಸುತ್ತಿದ್ದರೆ, ಸಂಜಯ್ ನಿಶಾದ್ ಮೈತ್ರಿಪಕ್ಷದ ಮೇಲೆ ಆಂತರಿಕ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಮುಕೇಶ್ ಸಾಹ್ನಿ ಯುಪಿಯಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ನಿಶಾದ್ ಮೀಸಲಾತಿ ವಿಷಯವು 2027ರ ಚುನಾವಣೆಗೆ ಮುನ್ನ BJPಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಶಾಸನಬದ್ಧವಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಸಂಸತ್ತಿಗೆ ಮಾತ್ರ ಸಾಧ್ಯ. ನರೇಂದ್ರ ಮೋದಿ ನೇತೃತ್ವದ BJP ಕನಿಷ್ಠ 2029ರವರೆಗೆ ದಿಲ್ಲಿಯಲ್ಲಿ ಅಧಿಕಾರದಲ್ಲಿರುವುದರಿಂದ, ಕೇಂದ್ರದಲ್ಲಿ ಅಧಿಕಾರ ಬದಲಾಗದೆ ಈ ವಿಷಯದಲ್ಲಿ ಈಡೇರಿಸಲಾಗದ ಭರವಸೆಯನ್ನು ಮುಖ್ಯ ವಿರೋಧ ಪಕ್ಷವಾದ ಸಮಾಜವಾದಿ ಪಾರ್ಟಿ ನೀಡಲಿದೆಯೇ ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆಯಾಗಿದೆ.
ಸೌಜನ್ಯ: thewire.in