Photo Credit : hindustantimes.com

ಭಾರತದ ಉನ್ನತ ಕೇಂದ್ರ ಶಿಕ್ಷಣ ಸಂಸ್ಥೆಗಳು ಉನ್ನತ ಹುದ್ದೆಗಳಲ್ಲಿ ಗಂಭೀರ ಕೊರತೆಯನ್ನು ಎದುರಿಸುತ್ತಿವೆ. ‘ಹಿಂದೂಸ್ತಾನ್ ಟೈಮ್ಸ್’ ವಿಶ್ಲೇಷಣೆ ಪ್ರಕಾರ, ರಾಷ್ಟ್ರೀಯ ಪ್ರಾಮುಖ್ಯತೆಯ 155 ಸಂಸ್ಥೆಗಳಲ್ಲಿ (INIs) 37 ಕಡೆ, ಅಂದರೆ ಶೇ 23.9ರಷ್ಟು ಸಂಸ್ಥೆಗಳು ಪ್ರಭಾರ, ತಾತ್ಕಾಲಿಕ ಅಥವಾ ಹಂಗಾಮಿ ಕುಲಪತಿಗಳು, ನಿರ್ದೇಶಕರು ಅಥವಾ ಹೆಚ್ಚುವರಿ ಜವಾಬ್ದಾರಿ ಮತ್ತು ವಿಸ್ತರಣಾ ಅವಧಿಯಲ್ಲಿರುವ ಮುಖ್ಯಸ್ಥರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೇಂದ್ರೀಯ ಶಿಕ್ಷಣ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ 48 ಸೆಂಟ್ರಲ್ ಯುನಿವರ್ಸಿಟಿಗಳು, 23 ಐಐಟಿಗಳು, 31 ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು, 25 ಐಐಐಟಿಗಳು, 21 ಐಐಎಂಗಳು ಮತ್ತು ಏಳು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು (IISER) ಈ ವಿಶ್ಲೇಷಣೆಯು ಒಳಗೊಂಡಿದೆ. ವಿಸಿಗಳು ಮತ್ತು ನಿರ್ದೇಶಕರು ಈ ಸಂಸ್ಥೆಗಳ ಅತ್ಯುನ್ನತ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅಧಿಕಾರಿಗಳಾಗಿದ್ದು, ಶೈಕ್ಷಣಿಕ ಕಾರ್ಯಕ್ರಮಗಳು, ಅಧ್ಯಾಪಕರ ನೇಮಕಾತಿ, ಹಣಕಾಸು, ಮೂಲಸೌಕರ್ಯ ಮತ್ತು ದೀರ್ಘಕಾಲೀನ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಬಹುತೇಕ ಕಾಲು ಭಾಗದಷ್ಟು ಪ್ರಮುಖ ಸಂಸ್ಥೆಗಳಲ್ಲಿ ದೀರ್ಘಕಾಲಿಕ ಹಂಗಾಮಿ ಅಥವಾ ಪ್ರಭಾರ ವ್ಯವಸ್ಥೆ ಇರುವುದು ಆ ಸಂಸ್ಥೆಗಳನ್ನು ‘ಸ್ಟ್ಯಾಂಡ್‌ಬೈ ಮೋಡ್‌ ಗೆ’ ತಳ್ಳಬಹುದು. ಪ್ರಮುಖ ನಿರ್ಧಾರಗಳನ್ನು ನಿಧಾನಗೊಳಿಸಬಹುದು ಮತ್ತು ಹೊಣೆಗಾರಿಕೆ ಹಾಗೂ ದೀರ್ಘಕಾಲೀನ ಯೋಜನೆಯನ್ನು ದುರ್ಬಲಗೊಳಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಈ ಸಂಸ್ಥೆಗಳ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರಣದಿಂದ ಸಂಸತ್ತು ಕಾಯ್ದೆಯ ಮೂಲಕ ಇವುಗಳಿಗೆ ಈ ಸ್ಥಾನಮಾನವನ್ನು ನೀಡಿದೆ.

ಈ ಸಮಸ್ಯೆಯು ಸೆಂಟ್ರಲ್ ಯುನಿವರ್ಸಿಟಿಗಳು ಮತ್ತು ಐಐಐಟಿಗಳಲ್ಲಿ ಅತ್ಯಂತ ತೀವ್ರವಾಗಿದೆ. 48 ಸೆಂಟ್ರಲ್ ಯುನಿವರ್ಸಿಟಿಗಳ ಪೈಕಿ 20 (ಶೇ 41.7) ವಿಶ್ವವಿದ್ಯಾಲಯಗಳು ಪ್ರಭಾರ ಅಥವಾ ಹಂಗಾಮಿ ಮುಖ್ಯಸ್ಥರನ್ನು ಹೊಂದಿವೆ ಅಥವಾ ವಿಸ್ತರಣಾ ಅವಧಿಯಲ್ಲಿ ಮುಂದುವರಿಯುತ್ತಿರುವ ವಿಸಿಗಳನ್ನು ಹೊಂದಿವೆ. ಇವುಗಳಲ್ಲಿ 11 ಕಡೆಗಳಲ್ಲಿ ಕಾಯಂ ವಿಸಿಗಳಿಲ್ಲ, ಒಂಭತ್ತು ಕಡೆಗಳಲ್ಲಿ ವಿಸಿಗಳು ವಿಸ್ತರಣಾ ಅವಧಿ ಅಥವಾ ಇತರ ವ್ಯವಸ್ಥೆಗಳ ಮೂಲಕ ಮುಂದುವರಿಯುತ್ತಿದ್ದಾರೆ. 25 ಐಐಐಟಿಗಳ ಪೈಕಿ 10 (ಶೇ 40) ಸಂಸ್ಥೆಗಳಲ್ಲಿ ಪೂರ್ಣಾವಧಿಯ ಕಾಯಂ ನಿರ್ದೇಶಕರಿಲ್ಲ.

ಈ ಪರಿಸ್ಥಿತಿಯು 21 ಐಐಎಂಗಳಲ್ಲಿ ಮೂರು, 31 ಎನ್‌ಐಟಿಗಳಲ್ಲಿ ಮೂರು ಮತ್ತು ಏಳು ಐಐಎಸ್‌ಇಆರ್‌ಗಳಲ್ಲಿ ಒಂದಕ್ಕೆ ವಿಸ್ತರಿಸಿದೆ. ಸದ್ಯಕ್ಕೆ ಎಲ್ಲಾ 23 ಐಐಟಿಗಳು ಕಾಯಂ ನಿರ್ದೇಶಕರನ್ನು ಹೊಂದಿವೆ.

ನಾಯಕತ್ವದ ಕೊರತೆಯು ಯಾವಾಗಲೂ ಹಠಾತ್ತಾಗಿ ಉದ್ಭವಿಸುವುದಿಲ್ಲ ಎಂಬುದನ್ನು ಈ ಸಂಶೋಧನೆಗಳು ಸೂಚಿಸುತ್ತಿವೆ. ಕೆಲವು ಸಂದರ್ಭಗಳಲ್ಲಿ, ಅಧಿಕಾರಾವಧಿಯು ಮುಗಿಯುವ ವರ್ಷಗಳ ಮುಂಚೆಯೇ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದರೂ ಉತ್ತರಾಧಿಕಾರಿಯನ್ನು ನೇಮಿಸಲಾಗಿಲ್ಲ.

ಐಐಟಿ ಪಾಟ್ನಾದಲ್ಲಿ, 2021ರ ಸೆಪ್ಟೆಂಬರ್ 10ರಂದು ಅಧಿಕಾರ ಸ್ವೀಕರಿಸಿದ್ದ ನಿರ್ದೇಶಕ ಪ್ರೊ. ಟಿ.ಎನ್. ಸಿಂಗ್ ಅವರ ಐದು ವರ್ಷಗಳ ಅಧಿಕಾರಾವಧಿಯು 2026ರ ಸೆಪ್ಟೆಂಬರ್ 9ರಂದು ಪೂರ್ಣಗೊಂಡಿತು. ಅವರ ಅಧಿಕಾರಾವಧಿ ಮುಗಿಯಲು ಸುಮಾರು 10 ತಿಂಗಳ ಮುಂಚಿತವಾಗಿ, ಅಂದರೆ 2025ರ ನವೆಂಬರ್ 20ರಂದು ಐಐಟಿ ಪಾಟ್ನಾದಿಂದ ಈ ಹುದ್ದೆಗೆ ಜಾಹೀರಾತು ನೀಡಲಾಗಿತ್ತು. ಸೆಪ್ಟೆಂಬರ್ 9ರವರೆಗೆ ಯಾವುದೇ ಉತ್ತರಾಧಿಕಾರಿಯನ್ನು ಘೋಷಿಸಿರಲಿಲ್ಲ. ಹೊಸ ನಿರ್ದೇಶಕರ ನೇಮಕವಾಗುವವರೆಗೆ ಅಥವಾ ಒಂದು ವರ್ಷದವರೆಗೆ ಸಿಂಗ್ ಅವರಿಗೆ “ವಿಸ್ತರಣೆ ಸಿಗುವ ಸಾಧ್ಯತೆಯಿದೆ” ಎಂದು ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಸೆಂಟ್ರಲ್ ಯುನಿವರ್ಸಿಟಿಗಳ ಕಥೆಯೂ ಇದೇ ಆಗಿದೆ. ಆಂಧ್ರಪ್ರದೇಶದ ಸೆಂಟ್ರಲ್ ಯುನಿವರ್ಸಿಟಿಯಲ್ಲಿ, ಪ್ರೊ. ಎಸ್.ಎ. ಕೋರಿ ಅವರ ವಿಸ್ತೃತ ಅಧಿಕಾರಾವಧಿಯು ಮುಕ್ತಾಯಗೊಂಡ ಬಳಿಕ ಆಗಸ್ಟ್ 19ರಂದು ಪ್ರೊ. ಸಿ. ಶೀಲಾ ರೆಡ್ಡಿ ಅವರು ಪ್ರಭಾರ ವಿಸಿಯಾಗಿ ನೇಮಕಗೊಂಡರು. ಈ ಹುದ್ದೆಗೆ 2025ರ ಮೇ ತಿಂಗಳಲ್ಲಿ ಜಾಹೀರಾತು ನೀಡಲಾಗಿತ್ತು.

ನಾರ್ಥ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಲ್ಲಿ (NEHU, ಶಿಲ್ಲಾಂಗ್), ಕಾಯಂ ವಿಸಿ ಪ್ರೊ. ಪ್ರಭಾ ಶಂಕರ್ ಶುಕ್ಲಾ ಅವರ ಐದು ವರ್ಷಗಳ ಅಧಿಕಾರಾವಧಿ ಮುಗಿದ ಮರುದಿನವೇ, ಅಂದರೆ ಜುಲೈ 27ರಂದು ಪ್ರೊ. ಸರೋಜ್ ಕಾಂತ ಬಾರಿಕ್ ಅವರು ಪ್ರಭಾರ ವಿಸಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಹುದ್ದೆಗೆ 2026ರ ಮೇ ತಿಂಗಳಲ್ಲಿ ಜಾಹೀರಾತು ನೀಡಲಾಗಿತ್ತು. ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ, ಪ್ರೊ. ಬಿ.ಜೆ. ರಾವ್ ಅವರು ಹುದ್ದೆಯಿಂದ ಕೆಳಗಿಳಿದ ಬಳಿಕ ಮಾರ್ಚ್ 12ರಂದು ಪ್ರೊ. ಜೆ. ಅನುರಾಧ ಅವರು ಪ್ರಭಾರ ವಿಸಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಹುದ್ದೆಗೆ 2026ರ ಫೆಬ್ರುವರಿಯಲ್ಲಿ ಜಾಹೀರಾತು ನೀಡಲಾಗಿತ್ತು.

ಹಂಗಾಮಿ ವ್ಯವಸ್ಥೆಗಳು ದೀರ್ಘಕಾಲದವರೆಗೆ ಮುಂದುವರಿಯಬಹುದು

ಅಮರಕಂಟಕದಲ್ಲಿರುವ ಇಂದಿರಾಗಾಂಧಿ ನ್ಯಾಷನಲ್ ಟ್ರೈಬಲ್ ಯುನಿವರ್ಸಿಟಿ (IGNTU) ಅತಿ ಹೆಚ್ಚು ಕಾಲದಿಂದ ಕಾಯಂ ವಿಸಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ಪ್ರೊ. ಪ್ರಕಾಶ್ ಮಣಿ ತ್ರಿಪಾಠಿ ಅವರ ಐದು ವರ್ಷಗಳ ಕಾಯಂ ವಿಸಿ ಅವಧಿಯು 2024ರ ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡಿತು. ಆ ಬಳಿಕ ವಿಶ್ವವಿದ್ಯಾಲಯವು ಹಂಗಾಮಿ ಅಥವಾ ಪ್ರಭಾರ ವ್ಯವಸ್ಥೆಯ ಅಡಿಯಲ್ಲಿ ನಡೆಯುತ್ತಿದೆ. ಇಲ್ಲಿ ಪ್ರೊ. ಬ್ಯೋಮಕೇಶ್ ತ್ರಿಪಾಠಿ ಅವರು ಪ್ರಭಾರ ವಿಸಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2026ರ ಏಪ್ರಿಲ್ 20ರಂದು ಪ್ರೊ. ಅವಧೇಶ್ ಕುಮಾರ್ ಶುಕ್ಲಾ ಅವರು ಪ್ರಭಾರ ವಿಸಿಯಾಗಿ ಅಧಿಕಾರ ವಹಿಸಿಕೊಂಡರು. ಈ ವಿಶ್ವವಿದ್ಯಾಲಯವು ಸುಮಾರು 21 ತಿಂಗಳಿಂದ ಕಾಯಂ ವಿಸಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಈ ಹುದ್ದೆಗೆ ಮೊದಲ ಬಾರಿಗೆ 2024ರ ಜೂನ್‌ನಲ್ಲಿ ಮತ್ತು 2026ರ ಮಾರ್ಚ್‌ನಲ್ಲಿ ಮರುಜಾಹೀರಾತು ನೀಡಲಾಗಿತ್ತು.

ಸಾಗರ್‌ ನಲ್ಲಿರುವ ಡಾ. ಹರಿಸಿಂಗ್ ಗೌರ್ ವಿಶ್ವವಿದ್ಯಾಲಯವು ಅತ್ಯಂತ ದೀರ್ಘಕಾಲದ ಹಂಗಾಮಿ ವ್ಯವಸ್ಥೆಗಳಲ್ಲಿ ಒಂದನ್ನು ಹೊಂದಿದೆ. ಕಾಯಂ ವಿಸಿಯಾಗಿದ್ದ ಪ್ರೊ. ನೀಲಿಮಾ ಗುಪ್ತಾ ಅವರು 70 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ನಿರ್ಗಮಿಸಿದ ಬಳಿಕ, 2025ರ ಜುಲೈನಿಂದ ಪ್ರೊ. ಯಶವಂತ್ ಸಿಂಗ್ ಠಾಕೂರ್ ಅವರು ಪ್ರಭಾರ ವಿಸಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2025ರ ಮೇ ತಿಂಗಳಲ್ಲಿ ಈ ಹುದ್ದೆಗೆ ಜಾಹೀರಾತು ನೀಡಲಾಗಿದ್ದರೂ, ವಿಶ್ವವಿದ್ಯಾಲಯವು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಹಂಗಾಮಿ ಮುಖ್ಯಸ್ಥರ ಅಡಿಯಲ್ಲಿಯೇ ಮುನ್ನಡೆಯುತ್ತಿದೆ.

ಕೆಲವು ಸಂದರ್ಭಗಳಲ್ಲಿ ವಿಸ್ತರಣಾ ಅವಧಿಯು ಅಧಿಕೃತ ಖಾಲಿ ಹುದ್ದೆ ಸೃಷ್ಟಿಯಾಗುವುದನ್ನು ತಡೆದಿದೆ. ಉದಾಹರಣೆಗೆ, ದಕ್ಷಿಣ ಬಿಹಾರ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಗಳ ವಿಸಿಗಳು ತಮ್ಮ ಅಧಿಕಾರಾವಧಿ ಮುಗಿಯುವ ಕೆಲವೇ ದಿನಗಳ ಮೊದಲು, ಅಂದರೆ ಜುಲೈ 6ರಂದು ಒಂದು ವರ್ಷದ ವಿಸ್ತರಣೆಯನ್ನು ಪಡೆದರು. ಜುಲೈ 20 ಮತ್ತು 22ರ ನಡುವೆ ಗುರುಘಾಸಿದಾಸ್ ವಿಶ್ವವಿದ್ಯಾಲಯ, ಹರಿಯಾಣ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಹಿಮಾಚಲ ಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲೂ ಇದೇ ರೀತಿಯ ವಿಸ್ತರಣೆಗಳು ನಡೆದವು.

ಐಐಐಟಿಗಳು ಹೆಚ್ಚಾಗಿ ಎರಡು ಕಡೆಗಳ ಜವಾಬ್ದಾರಿಯ ವ್ಯವಸ್ಥೆಯನ್ನು ಅವಲಂಬಿಸಿವೆ. ಐಐಟಿ ಖರಗ್‌ಪುರ, ಐಐಟಿ ಹೈದರಾಬಾದ್, ಎಂಎನ್‌ಐಟಿ ಜೈಪುರ, ಎನ್‌ಐಟಿ ಕಲ್ಲಿಕೋಟೆ ಮತ್ತು ವಿಎನ್‌ಐಟಿ ನಾಗ್ಪುರ ಸೇರಿದಂತೆ ವಿವಿಧ ಸಂಸ್ಥೆಗಳ ನಿರ್ದೇಶಕರು ಏಕಕಾಲದಲ್ಲಿ ಬೇರೆಡೆ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

“ಒಂದು ಸಂಸ್ಥೆಯನ್ನು ಮುನ್ನಡೆಸುವುದು ಅಥವಾ ನಿರ್ವಹಿಸುವುದೇ ಕಷ್ಟಕರವಾದ ಕೆಲಸ. ಇಂತಹದ್ದರಲ್ಲಿ ಎರಡನ್ನು ಮುನ್ನಡೆಸುವುದು ಬಹುಶಃ ಅಸಾಧ್ಯ. ಇದರಿಂದ ಯಾವುದಾದರೂ ಒಂದಕ್ಕೆ ನೀವು ನ್ಯಾಯ ಒದಗಿಸಲು ವಿಫಲರಾಗುತ್ತೀರಿ” ಎಂದು ಐಐಐಟಿ-ದಿಲ್ಲಿಯ ಸಂಸ್ಥಾಪಕ ನಿರ್ದೇಶಕ ಹಾಗೂ ಎಮೆರಿಟಸ್ ಪ್ರೊಫೆಸರ್ ಪಂಕಜ್ ಜಲೋಟೆ ತಿಳಿಸಿದ್ದಾರೆ. “ಎರಡು ಕಡೆಗಳ ಜವಾಬ್ದಾರಿಯು ರಾಜಿ ಮಾಡಿಕೊಳ್ಳುವಂತೆ ಮಾಡುತ್ತದೆ” ಎಂದು ಅವರು ಹೇಳಿದ್ದು, ಹೆಚ್ಚುವರಿ ಜವಾಬ್ದಾರಿ ಹೊತ್ತಿರುವ ಸಂಸ್ಥೆಗೆ ಕಡಿಮೆ ಗಮನ ಸಿಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ರಾಯ್‌ಪುರ ಮತ್ತು ತಿರುಚಿರಾಪಳ್ಳಿಯ ಮೂರು ಐಐಎಂಗಳು ಪ್ರಭಾರ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರೊ. ಋಷಿಕೇಶ ಟಿ. ಕೃಷ್ಣನ್ ಅವರ ಅಧಿಕಾರಾವಧಿಯು 2025ರ ಜುಲೈನಲ್ಲಿ ಮುಕ್ತಾಯಗೊಂಡ ಬಳಿಕ ಐಐಎಂ ಬೆಂಗಳೂರಿನಲ್ಲಿ ಪ್ರೊ. ಯು. ದಿನೇಶ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡರು. ಐಐಎಂ ರಾಯ್‌ಪುರದಲ್ಲಿ ಪ್ರೊ. ರಾಮ್ ಕುಮಾರ್ ಕಕಾನಿ ನಿರ್ಗಮಿಸಿದ ಬಳಿಕ ಪ್ರೊ. ಸಂಜೀವ್ ಪ್ರಶಾರ್ ಅವರು ಪ್ರಭಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐಐಎಂ ತಿರುಚಿರಾಪಳ್ಳಿಯಲ್ಲಿ ಪ್ರೊ. ಪವನ್ ಕುಮಾರ್ ಸಿಂಗ್ ಅವರ ಅಧಿಕಾರಾವಧಿ ಮುಗಿದ ಬಳಿಕ ಪ್ರೊ. ಗಾಡ್ವಿನ್ ಟೆನ್ನಿಸನ್ ಅವರು ಅಧಿಕಾರ ಸ್ವೀಕರಿಸಿದರು.

ಐಐಎಸ್‌ಇಆರ್ ವ್ಯವಸ್ಥೆಯು ತುಸು ಸ್ಥಿರವಾಗಿದ್ದು, ಐಐಎಸ್‌ಇಆರ್ ಭೋಪಾಲ್ ಮಾತ್ರ ಕಾಯಂ ನಿರ್ದೇಶಕರಿಲ್ಲದ ಏಕೈಕ ಸಂಸ್ಥೆಯಾಗಿದೆ. ಇದರ ಹಿಂದಿನ ನಿರ್ದೇಶಕರ ಅಧಿಕಾರಾವಧಿಯು 2026ರ ಜೂನ್‌ನಲ್ಲಿ ಪೂರ್ಣಗೊಂಡಿತು ಮತ್ತು ಬಳಿಕ ಹೆಚ್ಚುವರಿ ಜವಾಬ್ದಾರಿಯ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಕಾಯಂ ಹುದ್ದೆಗಾಗಿ ಜುಲೈ 24ರಿಂದ ಆಗಸ್ಟ್ 23ರ ನಡುವೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಹೆಸರು ಬಹಿರಪಡಿಸಲು ಬಯಸದ ಮಾಜಿ ಐಐಟಿ ನಿರ್ದೇಶಕರೊಬ್ಬರು ಮಾತನಾಡಿ, ದೀರ್ಘಕಾಲದ ಹಂಗಾಮಿ ನಾಯಕತ್ವವು ಸಂಸ್ಥೆಗಳನ್ನು “ಸ್ಟ್ಯಾಂಡ್‌ಬೈ ಮೋಡ್‌ಗೆ” ತಳ್ಳಬಹುದು. ಇದು ಅಧ್ಯಾಪಕರ ನೇಮಕಾತಿ, ಹೊಸ ಶೈಕ್ಷಣಿಕ ಕಾರ್ಯಕ್ರಮಗಳು, ಮೂಲಸೌಕರ್ಯ ಯೋಜನೆಗಳು, ಅಂತರರಾಷ್ಟ್ರೀಯ ಸಹಭಾಗಿತ್ವಗಳು ಮತ್ತು ದೀರ್ಘಕಾಲೀನ ಹಣಕಾಸು ಬದ್ಧತೆಗಳನ್ನು ವಿಳಂಬಗೊಳಿಸಬಹುದು ಎಂದು ತಿಳಿಸಿದ್ದಾರೆ. ಈ ಪ್ರಕ್ರಿಯೆಯು ನಿರೀಕ್ಷಿತ, ವೃತ್ತಿಪರ ಮತ್ತು ಕಾಲಮಿತಿಯೊಳಗೆ ಆಗುವಂತೆ ಬದಲಾಗಬೇಕು. ಅಧಿಕಾರಾವಧಿ ಮುಗಿಯುವುದಕ್ಕೆ ಕನಿಷ್ಠ ಆರು ತಿಂಗಳ ಮೊದಲು ಹುಡುಕಾಟ ಪ್ರಕ್ರಿಯೆ ಪ್ರಾರಂಭವಾಗಬೇಕು ಎಂದಿದ್ದಾರೆ.

ಸೆಂಟ್ರಲ್ ಯುನಿವರ್ಸಿಟಿಯ ಮಾಜಿ ವಿಸಿ ಒಬ್ಬರು ಮಾತನಾಡಿ, ವಿಸಿ ಮತ್ತು ನಿರ್ದೇಶಕರ ನೇಮಕಾತಿಗೆ ಸಂಬಂಧಿಸಿದ ಕಡತಗಳಿಗೆ ಶಿಕ್ಷಣ ಸಚಿವಾಲಯವು ಅಧಿಸೂಚನೆ ಹೊರಡಿಸುವ ಮೊದಲು ಪ್ರಧಾನಮಂತ್ರಿ ಕಚೇರಿ ಅನುಮೋದನೆ ನೀಡುತ್ತದೆ, ಇದು ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಿಎಂಒ ಮತ್ತು ಶಿಕ್ಷಣ ಸಚಿವಾಲಯವು ‘ಹಿಂದೂಸ್ತಾನ್ ಟೈಮ್ಸ್’ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿಲ್ಲ.

ಹೆಸರು ಹೇಳಲಿಚ್ಛಿಸದ ಉನ್ನತ ಶಿಕ್ಷಣ ಸಚಿವಾಲಯದ ಮಾಜಿ ಅಧಿಕಾರಿಯೊಬ್ಬರು ಮಾತನಾಡಿ, ಹುದ್ದೆಗೆ ಜಾಹೀರಾತು ನೀಡಿದ ಬಳಿಕ ಸಚಿವಾಲಯವು ಹುಡುಕಾಟ ಮತ್ತು ಆಯ್ಕೆ ಸಮಿತಿಯನ್ನು ರಚಿಸುತ್ತದೆ, ಅರ್ಜಿಗಳನ್ನು ಪರಿಶೀಲಿಸುತ್ತದೆ ಮತ್ತು ಅರ್ಹ ಅಭ್ಯರ್ಥಿಗಳನ್ನು ಸಮಿತಿಗೆ ಕಳುಹಿಸುತ್ತದೆ. ಬಳಿಕ ಸಮಿತಿಯು ಮೂರು ಹೆಸರುಗಳನ್ನು ಶಿಫಾರಸು ಮಾಡುತ್ತದೆ. ಅದರಲ್ಲಿ ಸಚಿವರು ಒಬ್ಬರನ್ನು ಆಯ್ಕೆ ಮಾಡಿ ನೇಮಕಾತಿಗಾಗಿ ವಿಸಿಟರ್‌ಗೆ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ. ಭಾರತದ ರಾಷ್ಟ್ರಪತಿಯವರು ಈ INI ಸಂಸ್ಥೆಗಳ ವಿಸಿಟರ್ ಆಗಿರುತ್ತಾರೆ.

ಸೌಜನ್ಯ: HindustanTimes

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor