ಡೊನಾಲ್ಡ್ ಟ್ರಂಪ್  | Photo Credit : PTI 

ಸ್ನೇಹಿತ ಹಾಗೂ ಶತ್ರು ರಾಷ್ಟ್ರಗಳೆರಡಕ್ಕೂ ಸುಂಕದ ಬಿಸಿ ಮುಟ್ಟಿಸಿ, ಏಕಪಕ್ಷೀಯ ವ್ಯಾಪಾರ ಒಪ್ಪಂದಗಳಿಗೆ ಮಣಿಯುವಂತೆ ತಿಂಗಳುಗಟ್ಟಲೆ ಬೆದರಿಕೆ ಹಾಕಿದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರಾಂತ್ಯದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಬಡ್ಡಿ ದರಗಳನ್ನು ಕಡಿತಗೊಳಿಸುವಂತೆ ಫೆಡರಲ್ ರಿಸರ್ವ್‌ ಗೆ (Fed) ಬೆದರಿಕೆ ನೀಡಿದ್ದಾರೆ. ಇಲ್ಲದಿದ್ದರೆ ಅಮೆರಿಕವು ತನ್ನೊಂದಿಗೆ ವ್ಯಾಪಾರ ಕೊರತೆ ಹೊಂದಿರುವ ದೇಶಗಳೊಂದಿಗಿನ ವ್ಯಾಪಾರವನ್ನು ನಿಲ್ಲಿಸುವುದಾಗಿ ಎಚ್ಚರಿಸಿದ್ದಾರೆ.

ಫೆಡರಲ್ ರಿಸರ್ವ್ ಮೇಲಿನ ಟ್ರಂಪ್ ಅವರ ಈ ಬೆದರಿಕೆಯು ಜಾಗತಿಕ ನೀತಿ ವಲಯಗಳಲ್ಲಿ ಹುಬ್ಬೇರಿಸುವಂತೆ ಮಾಡಿದ್ದರೂ, ಬಡ್ಡಿ ದರಗಳನ್ನು ತಗ್ಗಿಸುವಂತೆ ಫೆಡ್ ಮೇಲೆ ಒತ್ತಡ ಹೇರಲು ಟ್ರಂಪ್ ಇಂತಹ ವಿಪರೀತ ಕ್ರಮಗಳನ್ನು ಸೂಚಿಸುತ್ತಿರುವುದು ಇದೇ ಮೊದಲೇನಲ್ಲ. ತಮ್ಮ ಮೊದಲ ಅವಧಿಯಲ್ಲೂ ಟ್ರಂಪ್ ಬಡ್ಡಿ ದರಗಳನ್ನು ಕಡಿಮೆ ಮಾಡುವಂತೆ ನಿರಂತರವಾಗಿ ಒತ್ತಾಯಿಸಿದ್ದರು. ಅಮೆರಿಕವು ತನ್ನ ಸಾಲದ ಮರುಹೊಂದಾಣಿಕೆ ಪ್ರಕ್ರಿಯೆಯನ್ನು ಆರಂಭಿಸಲು ಅನುಕೂಲವಾಗುವಂತೆ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ‘ಶೂನ್ಯ ಅಥವಾ ಅದಕ್ಕಿಂತ ಕಡಿಮೆ ಮಟ್ಟಕ್ಕೆ’ ತರಬೇಕು ಎಂದು 2019ರ ಸೆಪ್ಟೆಂಬರ್‌ನಲ್ಲಿ ಅವರು ಸಲಹೆ ನೀಡಿದ್ದರು.

ಅಮೆರಿಕದ ಸಾಲ ಮತ್ತು ವ್ಯಾಪಾರ ಕೊರತೆಯ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ ಟ್ರಂಪ್ ಅವರ ಎಚ್ಚರಿಕೆಗಳು ದಿನದಿಂದ ದಿನಕ್ಕೆ ಹೆಚ್ಚು ಆಕ್ರಮಣಕಾರಿಯಾಗುತ್ತಿವೆ. ಇತ್ತೀಚಿನ ದತ್ತಾಂಶಗಳ ಪ್ರಕಾರ, ವ್ಯಾಪಾರ ಪಾಲುದಾರರ ಮೇಲೆ ಹಲವು ಸುಂಕಗಳನ್ನು ವಿಧಿಸಿದರೂ ಅಮೆರಿಕದ ಸಾಲವು ದಾಖಲೆಯ 40 ಟ್ರಿಲಿಯನ್ ಡಾಲರ್ ಗಡಿ ದಾಟಿದೆ ಮತ್ತು ವ್ಯಾಪಾರ ಕೊರತೆಯೂ ಹೆಚ್ಚಾಗಿದೆ. ಯುಎಸ್–ಇರಾನ್ ಯುದ್ಧದ ಕಾರಣದಿಂದ ತೈಲ ಬೆಲೆ ಏರಿಕೆಯಾಗುತ್ತಿರುವುದು ಮತ್ತು ಹೆಚ್ಚಿನ ಸಾಲದ ಅಂಕಿಅಂಶಗಳು ಹೂಡಿಕೆದಾರರಲ್ಲಿ ಆತಂಕವನ್ನು ಹೆಚ್ಚಿಸುತ್ತಿವೆ. ಇದು ಜಾಗತಿಕ ಸಾಲ ವೆಚ್ಚದ ಮಾನದಂಡವಾಗಿರುವ ಅಮೆರಿಕದ 10 ವರ್ಷಗಳ ಬಾಂಡ್ ಇಳುವರಿಯನ್ನು ಶೇಕಡಾ 5ರ ಹತ್ತಿರಕ್ಕೆ ತಳ್ಳುತ್ತಿದೆ.

ಅಂತರರಾಷ್ಟ್ರೀಯ ಥಿಂಕ್ ಟ್ಯಾಂಕ್‌ ಗಳ ಅಂದಾಜಿನ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಅಮೆರಿಕ ಸರ್ಕಾರವು ತನ್ನ ಸಾಲದ ಮೇಲಿನ ಬಡ್ಡಿ ಪಾವತಿಗಾಗಿ ಸುಮಾರು 1 ಟ್ರಿಲಿಯನ್ ಡಾಲರ್‌ ಗಿಂತ ಸ್ವಲ್ಪ ಹೆಚ್ಚು ಖರ್ಚು ಮಾಡಲಿದೆ. ಇದು ದೇಶದ ರಾಷ್ಟ್ರೀಯ ರಕ್ಷಣಾ ವೆಚ್ಚಕ್ಕೆ ಸಮನಾಗಿದೆ. ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ಪ್ರಕಾರ, ಅಮೆರಿಕದ ಸಾಲ–ಜಿಡಿಪಿ ಅನುಪಾತವು ಈಗ ಶೇಕಡಾ 125ಕ್ಕೆ ತಲುಪಿದೆ. ಎರಡನೇ ಮಹಾಯುದ್ಧದಲ್ಲಿ ಯುಎಸ್ ತನ್ನ ಪ್ರಯತ್ನಗಳಿಗೆ ಹಣಕಾಸು ಒದಗಿಸಲು ಮಾಡಿದ ಸಾಲವು ಅಂದಿನ ಜಿಡಿಪಿ ಅನುಪಾತವನ್ನು ಶೇಕಡಾ 106ಕ್ಕೆ ಮಾತ್ರ ಏರಿಸಿತ್ತು ಎಂದು ಅದು ತಿಳಿಸಿದೆ.

ಭಾರತ ಹಾಗೂ ಇತರ ವ್ಯಾಪಾರ ಪಾಲುದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ?

ವ್ಯಾಪಾರ ಕೊರತೆಯನ್ನು ನೀಗಿಸಲು ಟ್ರಂಪ್ ಅವರು ಅತ್ಯಂತ ನಿಕಟ ವ್ಯಾಪಾರ ಪಾಲುದಾರರ ಮೇಲೂ ಏಕೆ ಒತ್ತಡ ಹೇರುತ್ತಿದ್ದಾರೆ ಮತ್ತು ಏಕಕಾಲದಲ್ಲಿ ಬಡ್ಡಿ ದರಗಳನ್ನು ತಗ್ಗಿಸುವಂತೆ ಏಕೆ ಒತ್ತಾಯಿಸುತ್ತಿದ್ದಾರೆ ಎಂಬುದನ್ನು ಆತಂಕಕಾರಿ ಸಾಲ ಹಾಗೂ ಕೊರತೆಯ ಅಂಕಿಅಂಶಗಳು ವಿವರಿಸುತ್ತವೆ. ಚೀನಾದೊಂದಿಗೆ ತನ್ನ ವ್ಯಾಪಾರ ಕೊರತೆಯನ್ನು ಕಳೆದ ಎರಡು ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಯುಎಸ್ ಆಕ್ರಮಣಕಾರಿಯಾಗಿ ತಗ್ಗಿಸುತ್ತಿರುವಂತೆ, ಭಾರತದಂತಹ ವ್ಯಾಪಾರ ಪಾಲುದಾರರ ಮೇಲೂ ಅದೇ ರೀತಿ ಮಾಡಲು ವಾಷಿಂಗ್ಟನ್ ಒತ್ತಡ ಹೇರಲು ಆರಂಭಿಸಿದೆ.

ಭಾರತಕ್ಕೆ ಸಂಬಂಧಿಸಿದಂತೆ ಅಮೆರಿಕದ ಒತ್ತಡಗಳು ಮೂರು ರೀತಿಯಲ್ಲಿ ಪರಿಣಾಮ ಬೀರುತ್ತಿವೆ. ಮೊದಲನೆಯದು, ವ್ಯಾಪಾರ ಒಪ್ಪಂದಗಳ ಅಡಿಯಲ್ಲಿ ಮಾರುಕಟ್ಟೆ ಪ್ರವೇಶಕ್ಕಾಗಿ ವಿಧಿಸಲಾಗುತ್ತಿರುವ ಕಠಿಣ ಬೇಡಿಕೆಗಳು; ಎರಡನೆಯದು, ಭಾರತದಿಂದ ಯುಎಸ್‌ಗೆ ಬಂಡವಾಳದ ಹೊರಹರಿವು; ಮತ್ತು ಮೂರನೆಯದು, ಚೀನಾದಿಂದ ಬರುವ ಕಚ್ಚಾ ವಸ್ತುಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವಂತೆ ಒತ್ತಡ ಹೇರುತ್ತಿರುವುದು. ಚೀನಾವು ಅಕ್ರಮ ಸರಕು ಸಾಗಣೆ ಜಾಲವನ್ನು ನಿರ್ವಹಿಸುತ್ತಿದೆ ಎಂದು ಯುಎಸ್ ನಂಬಿದೆ. ಇದು ಅಂತಿಮವಾಗಿ ಬೀಜಿಂಗ್ ತನ್ನ ಪರಿಣಾಮಕಾರಿ ವ್ಯಾಪಾರ ಕೊರತೆಯನ್ನು ವಿಸ್ತರಿಸಲು, ದೇಶೀಯ ಉತ್ಪಾದನೆಯನ್ನು ಕುಂಠಿತಗೊಳಿಸಲು, ಜಿಡಿಪಿ ಬೆಳವಣಿಗೆಯನ್ನು ತಗ್ಗಿಸಲು ಮತ್ತು ಯುಎಸ್‌ ನಲ್ಲಿ ಅದಕ್ಕೆ ಅನುಗುಣವಾದ ಫೆಡರಲ್ ತೆರಿಗೆ ಆದಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಮೆರಿಕ ಭಾವಿಸಿದೆ.

ಭಾರತ ಮತ್ತು ಅಮೆರಿಕ 2025ರ ಫೆಬ್ರವರಿಯಿಂದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ನಡೆಸುತ್ತಿವೆ. ಈ ವರ್ಷದ ಫೆಬ್ರವರಿಯಲ್ಲಿ ಎರಡೂ ದೇಶಗಳು ಮಧ್ಯಂತರ ಒಪ್ಪಂದದ ಚೌಕಟ್ಟನ್ನು ಘೋಷಿಸಿದ್ದವು. ಈ ಚೌಕಟ್ಟು ಒಪ್ಪಂದವು ಈಗಾಗಲೇ ಗಣನೀಯ ಉದ್ವಿಗ್ನತೆಗೆ ಕಾರಣವಾಗಿದೆ, ವಿಶೇಷವಾಗಿ ರೈತರಲ್ಲಿ ಆತಂಕ ಮೂಡಿಸಿದೆ. ಯುಎಸ್ ಆಮದುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಭಾರತವು ಕಡಿಮೆ ಮಾಡಿದರೆ, ಸೇಬು, ಹತ್ತಿ, ದ್ರಾಕ್ಷಿ, ಕಿತ್ತಳೆ, ಸೋಯಾಬಿನ್, ಅಡಿಕೆ ಮತ್ತು ಇತರೆ ಕೆಲವು ಕೃಷಿ ಉತ್ಪನ್ನಗಳನ್ನು ಬೆಳೆಯುವ ಭಾರತೀಯ ರೈತರ ಜೀವನೋಪಾಯವು ನೇರ ಒತ್ತಡವನ್ನು ಎದುರಿಸಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ತಜ್ಞರು ಎಚ್ಚರಿಸಿದ್ದಾರೆ.

ಅಕ್ಕಿ ಮತ್ತು ಗೋಧಿಯ ಮೇಲಿನ ಭಾರತದ ಕನಿಷ್ಠ ಬೆಂಬಲ ಬೆಲೆಯನ್ನು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಅಮೆರಿಕವು ವರ್ಷಗಳಿಂದ ವಿರೋಧಿಸುತ್ತ ಬಂದಿರುವುದರಿಂದ ಈ ಆತಂಕಗಳು ಮತ್ತಷ್ಟು ಹೆಚ್ಚಾಗಿವೆ.

ಹೆಸರು ಬಹಿರಂಗಪಡಿಸಲು ಬಯಸದ ತಜ್ಞರೊಬ್ಬರು ‘ಇಂಡಿಯನ್ ಎಕ್ಸ್‌ಪ್ರೆಸ್’ ಜತೆ ಮಾತನಾಡಿದ್ದು, “ಅಮೆರಿಕದ ಅಧಿಕೃತ ಪ್ರಾಧಿಕಾರಗಳ ಪ್ರಮಾಣಪತ್ರಗಳೊಂದಿಗೆ ಸರಕುಗಳು ಬಂದಾಗ, ಭಾರತವು ತನ್ನದೇ ಆದ ದೇಶೀಯ ಕಾನೂನುಗಳು ಮತ್ತು ನಿಯಮಗಳನ್ನು ಬದಿಗಿಟ್ಟು ಅಮೆರಿಕದಿಂದ ಆಮದು ಮಾಡಿಕೊಳ್ಳುವುದನ್ನು ಕಡ್ಡಾಯವಾಗಿ ಅನುಮತಿಸುವಂತೆ ಮಧ್ಯಂತರ ಒಪ್ಪಂದದ ನಿಯಮಗಳು ಒತ್ತಾಯಿಸಬಹುದು ಎಂಬ ಆತಂಕವೂ ಇದೆ. ಇದು ಅಮೆರಿಕದಿಂದ ತಳೀಯವಾಗಿ ಮಾರ್ಪಡಿಸಿದ ಉತ್ಪನ್ನಗಳ (genetically modified products) ಆಮದಿಗೆ ಹಿಂಬಾಗಿಲಿನಿಂದ ದಾರಿ ಮಾಡಿಕೊಡುತ್ತದೆ” ಎಂದಿದ್ದಾರೆ.

ಭಾರತದ ಮೇಲೆ ಪರಿಣಾಮ

ಸುಂಕಗಳ ಬಗ್ಗೆ ಇರುವ ಕಳವಳಗಳ ನಡುವೆಯೂ ಭಾರತವು ಅಮೆರಿಕದ ಬೇಡಿಕೆಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತಿದೆ. ಬೈಕ್‌ ಗಳಿಂದ ಹಿಡಿದು ವಿಸ್ಕಿಯವರೆಗೆ ಅಮೆರಿಕಕ್ಕೆ ಆಸಕ್ತಿಯಿರುವ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವುದು, ಇಂಧನ ಆಮದನ್ನು ಹೆಚ್ಚಿಸುವುದು, ಡೇಟಾ ಸೆಂಟರ್‌ಗಳಿಗೆ ತೆರಿಗೆ ವಿನಾಯಿತಿ ಹಾಗೂ ಭಾರತದಲ್ಲಿ ಪರಮಾಣು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಿರುವ ವಸ್ತುಗಳ ಮೇಲಿನ ಸುಂಕ ಕಡಿತದಂತಹ ವಿವಿಧ ಕ್ರಮಗಳನ್ನು ಭಾರತ ಈಗಾಗಲೇ ಕೈಗೊಂಡಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಕಳೆದ ಆರು ತಿಂಗಳಲ್ಲಿ ಭಾರತದ ಎಲ್‌ಪಿಜಿ ಆಮದಿನಲ್ಲಿ ಅಮೆರಿಕದ ಪಾಲು ಶೇಕಡಾ 50ಕ್ಕಿಂತ ಹೆಚ್ಚಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಮಂಗಳವಾರ ವರದಿ ಮಾಡಿದೆ. ಮುಂಚಿನ ಆರು ತಿಂಗಳಲ್ಲಿ ಈ ಪ್ರಮಾಣ ಶೇಕಡಾ 10ಕ್ಕಿಂತ ಕಡಿಮೆಯಿತ್ತು. ಪಶ್ಚಿಮ ಏಷ್ಯಾ ಯುದ್ಧಕ್ಕೂ ಮುನ್ನ, ಭಾರತದ ಎಲ್‌ಪಿಜಿ ಆಮದು ಮಾರುಕಟ್ಟೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್, ಖತರ್, ಕುವೈತ್ ಮತ್ತು ಸೌದಿ ಅರೇಬಿಯಾದಂತಹ ಗಲ್ಫ್ ದೇಶಗಳೇ ಪ್ರಾಬಲ್ಯ ಹೊಂದಿದ್ದವು.

ಅಮೆರಿಕವು ಬಲವಂತದ ಕಾರ್ಮಿಕರಿಗೆ ಸಂಬಂಧಿಸಿದ ಸೆಕ್ಷನ್ 301 ಸುಂಕಗಳನ್ನು ಜಾರಿಗೆ ತಂದ ನಂತರ, ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯವು (DGFT) ಬಲವಂತದ ಕಾರ್ಮಿಕರನ್ನು ಬಳಸಿ ಉತ್ಪಾದಿಸುವ ಸರಕುಗಳ ಆಮದನ್ನು ಸ್ಪಷ್ಟವಾಗಿ ನಿಷೇಧಿಸಿದೆ. ಅಮೆರಿಕದ ತನಿಖೆಯ ಭೀತಿಯು ಹತ್ತಿ ಬೆಲೆಯನ್ನು ಹೆಚ್ಚಿಸುತ್ತಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಚೀನಾದ ಉಯಿಘರ್ ಪ್ರದೇಶದ ಹತ್ತಿ ಬಳಕೆಯ ಮೇಲೆ ಅಮೆರಿಕವು ನಿರ್ಬಂಧಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ, ಬೆಲೆಯಲ್ಲಿ ತೀವ್ರ ಏರಿಕೆಯನ್ನು ತಡೆಯಲು ಹತ್ತಿ ನೂಲು ರಫ್ತನ್ನು ನಿಯಂತ್ರಿಸುವಂತೆ ಕೋರಿ ಭಾರತೀಯ ಬಟ್ಟೆ ರಫ್ತುದಾರರು ಕಳೆದ ತಿಂಗಳು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಾಗೂ ಜವಳಿ ಸಚಿವಾಲಯವನ್ನು ಸಂಪರ್ಕಿಸಿದ್ದರು.

ಅಪರಲ್ ಎಕ್ಸ್‌ಪೋರ್ಟ್ ಪ್ರೊಮೋಷನ್ ಕೌನ್ಸಿಲ್ (AEPC) ಪ್ರಕಾರ, ಹತ್ತಿ ನೂಲಿನ ಬೆಲೆಯು 2026ರ ಆರಂಭದಲ್ಲಿದ್ದ ಪ್ರತಿ ಕೆಜಿಗೆ ಸುಮಾರು 250 ರೂ.ವಿನಿಂದ ಪ್ರಸ್ತುತ ಸುಮಾರು 400 ರೂ. ಕ್ಕೆ, ಅಂದರೆ ಶೇಕಡಾ 60ರಷ್ಟು ಹೆಚ್ಚಾಗಿದೆ. ಇದು ಬಟ್ಟೆ ಉತ್ಪಾದನಾ ಮೌಲ್ಯ ಸರಪಳಿಯ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿದೆ. ಸಚಿವಾಲಯಗಳಿಗೆ ಬರೆದ ಪತ್ರದಲ್ಲಿ ಕೌನ್ಸಿಲ್, “ಹತ್ತಿ ನೂಲು, ನಿರ್ದಿಷ್ಟವಾಗಿ 20ರ ಕೌಂಟ್ (ಮಧ್ಯಮ ದಪ್ಪದ ನೂಲು) ಮತ್ತು ಅದಕ್ಕಿಂತ ಹೆಚ್ಚಿನ ನೂಲಿನ ರಫ್ತನ್ನು ನಿಯಂತ್ರಿಸಲು” ಮತ್ತು ಬಟ್ಟೆ ಉತ್ಪಾದನೆ ಹಾಗೂ ರಫ್ತು ಘಟಕಗಳಿಗೆ ಹತ್ತಿ ನೂಲು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಾಗುವಂತೆ ಬೆಲೆಯನ್ನು ಸ್ಥಿರಗೊಳಿಸಲು ಕ್ರಮಗಳನ್ನು ಕೋರಿದೆ.

ಈ ವರ್ಷದ ಆರಂಭದಲ್ಲಿ, ಭಾರತದ ಉನ್ನತ ರಫ್ತು ಉತ್ತೇಜನ ಮಂಡಳಿಯಾದ ಫೆಡರೇಷನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಷನ್ಸ್ (FIEO) ಕೂಡ ರಫ್ತುದಾರರಿಗೆ ವೇತನ ದಾಖಲೆಗಳು, ವಯಸ್ಸಿನ ಪರಿಶೀಲನೆ ಮತ್ತು ಪೂರೈಕೆದಾರರ ಘೋಷಣೆಗಳಂತಹ ವಿವರವಾದ ಉದ್ಯೋಗಿ ದತ್ತಾಂಶವನ್ನು ನಿರ್ವಹಿಸುವಂತೆ ಸಲಹೆ ನೀಡಿತ್ತು. ಏಕೆಂದರೆ ಅಮೆರಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿರುವ ರಫ್ತುದಾರರಿಗೆ ಬಲವಾದ ಕಾರ್ಮಿಕ ಮತ್ತು ಪೂರೈಕೆ ಸರಪಳಿ ದಾಖಲಾತಿಯು “ವಾಣಿಜ್ಯ ಅವಶ್ಯಕತೆಯಾಗಲಿದೆ” ಎಂದು ತಿಳಿಸಿತ್ತು.

“ಹತ್ತಿ, ಪಾಲಿಥಿಲಿನ್, ಖನಿಜಗಳು ಮತ್ತು ಇತರ ಸೂಕ್ಷ್ಮ ಸಾಮಗ್ರಿಗಳ ನಮೂನೆಗಳಂತಹ ಹೆಚ್ಚಿನ ಅಪಾಯದ ಇನ್‌ಪುಟ್‌ಗಳಿಗೆ ಪತ್ತೆಹಚ್ಚುವಿಕೆ ಅಗತ್ಯವಿರುತ್ತದೆ. ಯಾವುದೇ ಬೆಂಬಲವಿಲ್ಲದ ಸಾಮಾನ್ಯ ಘೋಷಣೆಗಳನ್ನು ತಪ್ಪಿಸಬೇಕು ಮತ್ತು ಯಾವುದೇ ವಿನಾಯಿತಿ ಹೇಳಿಕೆಯು ನಿಖರವಾದ ಹಾರ್ಮೋನೈಸ್ಡ್ ಟ್ಯಾರಿಫ್ ಶೆಡ್ಯೂಲ್ (HTS) ಅನ್ನು ಉಲ್ಲೇಖಿಸಬೇಕು” ಎಂದು ರಫ್ತು ಉತ್ತೇಜನ ಮಂಡಳಿಯು ಸುಂಕಗಳನ್ನು ಮೀರಿದ ಅನುಸರಣೆ ಬಗ್ಗೆ ರಫ್ತುದಾರರಿಗೆ ಸಲಹೆ ನೀಡಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor