ಮಣಿಪುರದ ತೇಲುವ ಫುಮ್ಡಿಗಳಿಂದ ಹಿಡಿದು ಕಾಶ್ಮೀರದ ದಲ್ ಸರೋವರದವರಗಿನ ಭಾರತದ ಕೆಲವು ತಾಣಗಳು ನೀರಿನಿಂದಲೇ ರೂಪುಗೊಂಡ ಜೀವನಶೈಲಿಯ ನೋಟವನ್ನು ಒದಗಿಸುತ್ತವೆ.

ಭಾರತದ ವೈವಿಧ್ಯಮಯ ಭೂದೃಶ್ಯದಲ್ಲಿ ಕೆಲವು ತಾಣಗಳಿವೆ. ತೇಲುವ ತೋಟಗಳಿಂದ ತೊಡಗಿ ದೋಣಿ ಆಧಾರಿತ ಜೀವನೋಪಾಯದವರೆಗೆ ಸರೋವರಗಳು, ನದಿಗಳು ಮತ್ತು ಉಬ್ಬರವಿಳಿತದ ಜಲಮಾರ್ಗಗಳ ಪರಿಸರಕ್ಕೆ ಸಮುದಾಯಗಳು ಹೇಗೆ ಹೊಂದಿಕೊಂಡಿವೆ ಎಂಬುದನ್ನು ತೋರಿಸುವ ಬಾರತೀಯ ನೆಲೆಗಳಿವು. ಅಲ್ಲಿ ನೀರು ಕೇವಲ ಸುಂದರ ಹಿನ್ನೆಲೆಯಾಗಿರದೆ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಕೆಲವು ಸಮುದಾಯಗಳಿಗೆ ಸರೋವರಗಳು ಮತ್ತು ನದಿಗಳು ಸಂಚಾರ ಮಾರ್ಗಗಳು, ಕೆಲಸದ ಸ್ಥಳಗಳು ಮತ್ತು ಆಹಾರದ ಮೂಲಗಳಾಗಿವೆ. ನಿರಂತರವಾಗಿ ಬದಲಾಗುವ ನೀರಿನ ಮಟ್ಟಕ್ಕೆ ಅನುಗುಣವಾಗಿ ಮನೆಗಳು ಮತ್ತು ಕೃಷಿ ಭೂಮಿಗಳು ರೂಪುಗೊಂಡಿವೆ. ಮಣಿಪುರದ ತೇಲುವ ಫುಮ್ಡಿಗಳಿಂದ ಹಿಡಿದು ಕಾಶ್ಮೀರದ ದಲ್ ಸರೋವರದವರಗೆ ಈ ನೆಲೆಗಳು ನೀರಿನಿಂದಲೇ ರೂಪುಗೊಂಡ ಜೀವನಶೈಲಿಯ ನೋಟವನ್ನು ಒದಗಿಸುತ್ತವೆ.

►ಮಣಿಪುರದ ಲೋಕ್ಟಕ್ ಸರೋವರ

ಭಾರತದಲ್ಲಿ ಯಾವುದಾದರೂ ಒಂದು ಭೂದೃಶ್ಯವು ‘ತೇಲುವ ಜಗತ್ತಿನಂತೆ’ ಭಾಸವಾಗುತ್ತವೆ ಎಂದರೆ ಅದು ಮಣಿಪುರದ ಲೋಕ್ಟಕ್ ಸರೋವರ. ಈ ಸರೋವರವು ಸಸ್ಯವರ್ಗ, ಮಣ್ಣು ಮತ್ತು ಸಾವಯವ ವಸ್ತುಗಳ ತೇಲುವ ರಾಶಿ ಅಥವಾ ಫುಮ್ಡಿಗಳಿಗೆ ಹೆಸರುವಾಸಿಯಾಗಿದೆ. ಮೀನುಗಾರಿಕೆ ಸಮುದಾಯಗಳು ಸಾಂಪ್ರದಾಯಿಕವಾಗಿ ತಮ್ಮ ಜೀವನೋಪಾಯಕ್ಕಾಗಿ ಈ ಜಲರಾಶಿಯನ್ನೇ ಅವಲಂಬಿಸಿದ್ದಾರೆ. ಸರೋವರದ ವಿವಿಧ ಭಾಗಗಳಲ್ಲಿ ಸಣ್ಣ ಗುಡಿಸಲುಗಳು ಮತ್ತು ದೋಣಿಗಳನ್ನು ಕಾಣಬಹುದು. ಲೋಕ್ಟಕ್ ಸರೋವರವು ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವಾದ ಕೈಬೂಲ್ ಲಮ್ಜಾವೋ ನ್ಯಾಷನಲ್ ಪಾರ್ಕ್ನಲ್ಲಿದೆ. ಈ ಪ್ರದೇಶವು ಅಳಿವಿನಂಚಿನಲ್ಲಿರುವ ‘ಸಾಂಗೈ’ ಪ್ರಾಣಿಗೆ ಪ್ರಸಿದ್ಧವಾಗಿದೆ.

►ಶ್ರೀನಗರದ ದಲ್ ಸರೋವರ

ಶ್ರೀನಗರದ ಸರೋವರವು ತನ್ನ ಹೌಸ್ಬೋಟ್ಗಳು ಮತ್ತು ಶಿಕಾರಾಗಳಿಗೆ ಹೆಸರುವಾಸಿ. ಆದರೆ ಸರೋವರವು ನೀರಿನ ಮೇಲೆ ಮತ್ತು ಸುತ್ತಮುತ್ತ ಸಾಸಿಸುವ ಮತ್ತು ಕೆಲಸ ಮಾಡುವ ಸಮುದಾಯಗಳ ಜೀವನದೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ತೇಲುವ ತೋಟಗಳಲ್ಲಿ ತರಕಾರಿ ಬೆಳೆಯಲಾಗುತ್ತದೆ. ದೋಣಿಗಳ ಮೂಲಕ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಸರೋವರದ ಮೇಲೆ ನಡೆಯುವ ಮುಂಜಾನೆಯ ತರಕಾರಿ ಮಾರುಕಟ್ಟೆಗಳು ಪ್ರವಾಸಿಗರಿಗೆ ಅತ್ಯಂತ ವಿಶಿಷ್ಟ ಅನುಭವ ಕೊಡುತ್ತವೆ. ಹೌಸ್ ಬೋಟ್ಗಳು, ಶಿಕಾರಾ, ಮೀನುಗಾರಿಕೆ ಮತ್ತು ಕೃಷಿ ಸೇರಿದಂತೆ ವಿಶೇಷ ಜೀವನಶೈಲಿಯನ್ನು ಸೃಷ್ಟಿಸಿದೆ.

►ಅಸ್ಸಾಂನ ಮಜುಲಿ

ಅಸ್ಸಾಂನ ಮಜುಲಿ ಒಂದು ನದಿದ್ವೀಪವಾಗಿದೆ. ಆದರೆ ಇದರ ಅಸ್ತಿತ್ವವು ಬ್ರಹ್ಮಪುತ್ರ ನದಿ ಜೊತೆಗೆ ಆಳವಾಗಿ ಬೆಸೆದುಕೊಂಡಿದೆ. ಅಸ್ಸಾಂನಲ್ಲಿರುವ ಈ ದ್ವೀಪವು ದೀರ್ಘಕಾಲದಿಂದಲೂ ವಿವಿಧ ಸಮುದಾಯಗಳಿಗೆ ನೆಲೆಯಾಗಿದೆ. ಇವರ ಜೀವನವು ನದಿಯ ಪ್ರವಾಹ, ಮಣ್ಣಿನ ಸವಕಳಿ ಮತ್ತು ಬದಲಾಗುವ ನದಿ ಮಾರ್ಗಗಳಿಗೆ ಹೊಂದಿಕೊಂಡಿದೆ. ಕೃಷಿ, ಮೀನುಗಾರಿಕೆ ಮತ್ತು ದೋಣಿಯ ಸಾರಿಗೆ ಇಲ್ಲಿನ ಜೀವನದ ಪ್ರಮುಖ ಭಾಗಗಳಾಗಿವೆ.

►ಪಶ್ಚಿಮ ಬಂಗಾಳದ ಸುಂದರ್ಬನ್ಸ್

ಸುಂದರ್ಬನ್ಸ್ ನಲ್ಲಿ ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಡೆಲ್ಟಾ (ಕಡಲಂಚಿನ ಜೌಗು ಅರಣ್ಯ ಪ್ರದೇಶ) ವ್ಯವಸ್ಥೆಯೊಂದರ ನಡುವೆ ಹಳ್ಳಿಗಳು ನೆಲೆಗೊಂಡಿವೆ. ಇಲ್ಲಿ ನದಿಗಳು, ತೊರೆಗಳು ಮತ್ತು ಉಬ್ಬರ ವಿಳಿತದ ಕಾಲುವೆಗಳು ಭೂದೃಶ್ಯದ ಪ್ರಮುಖ ಲಕ್ಷಣಗಳಾಗಿವೆ. ಅಕ್ಷರಶಃ ಇವು ನೀರಿನ ಮೇಲೆ ತೇಲುವ ಹಳ್ಳಿಯಲ್ಲ. ಬದಲಾಗಿ ಭೂಮಿ ಮತ್ತು ನೀರಿನ ನಡುವಿನ ಗಡಿ ನಿರಂತರವಾಗಿ ಬದಲಾಗುವಂತಹ ಭೌಗೋಳಿಕ ಪರಿಸರಕ್ಕೆ ಅಲ್ಲಿನ ಸಮುದಾಯಗಳು ಹೇಗೆ ಹೊಂದಿಕೊಂಡಿವೆ ಎಂಬುದನ್ನು ತೋರಿಸುತ್ತವೆ.

ಈ ಪ್ರದೇಶದ ಅನೇಕ ಭಾಗಗಳಲ್ಲಿ ದೋಣಿಗಳು ಸಾರಿಗೆಯ ಪ್ರಮುಖ ಸಾಧನಗಳಾಗಿವೆ. ಹಾಗೆಯೇ ಮೀನುಗಾರಿಕೆ, ಏಡಿಗಳ ಸಂಗ್ರಹಣೆ, ಜೇನು ಸಂಗ್ರಹಣೆ ಮತ್ತು ಕೃಷಿಯ ಸ್ಥಳೀಯ ಸಮುದಾಯಗಳ ಜೀವನೋಪಾಯಕ್ಕೆ ಅಧಾರವಾಗಿದೆ. ಉಬ್ಬರವಿಳಿತದ ಪ್ರಭಾವಕ್ಕೆ ಒಳಗಾಗುವಂತಹ ಪ್ರದೇಶಗಳಲ್ಲಿ ವಾಸಿಸುವುದರಿಂದ ಉಂಟಾಗುವ ಸವಾಲುಗಳು ಅಲ್ಲಿನ ಜನರ ಜೀವನಶೈಲಿಯನ್ನೂ ರೂಪಿಸುತ್ತವೆ. ಆದರೆ ಚಂಡಮಾರುಗಳು, ಪ್ರವಾಹ, ಮಣ್ಣಿನ ಸವಕಳಿ ಮತ್ತು ನೀರಿನಲ್ಲಿ ಹೆಚ್ಚುತ್ತಿರುವ ಲವಣಾಂಶಗಳು ಇವರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor