Photo Credit: firstpost

ಭಾರತದ ಅತ್ಯಂತ ದೊಡ್ಡ ಮತ್ತು ಹೆಸರಾಂತ ಸಂಸ್ಥೆಗಳಲ್ಲಿ ಒಂದಾದ ಟಾಟಾದಲ್ಲಿ ಉನ್ನತ ಮಟ್ಟದ ಸಮರ ಭುಗಿಲೆದ್ದಿದೆ. ತಮ್ಮ ಅಧಿಕಾರಾವಧಿಯು ಫೆಬ್ರವರಿಯಲ್ಲಿ ಮುಕ್ತಾಯಗೊಂಡ ಬಳಿಕ ತಾವು ಮರುನೇಮಕ ಬಯಸುವುದಿಲ್ಲ ಎಂದು ಆಗಸ್ಟ್ ನಲ್ಲಿ ಘೋಷಿಸಿದ್ದ ಎನ್. ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಸಲು ಟಾಟಾ ಸನ್ಸ್ ಮಂಡಳಿಯು ಗುರುವಾರ ಮುಂಬೈನ ಬಾಂಬೆ ಹೌಸ್ನಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ ಅನುಮೋದನೆ ನೀಡಿದೆ.

ಟಾಟಾ ಸನ್ಸ್ ಅನ್ನು ಲಿಸ್ಟಿಂಗ್ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಸಹ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದ್ದು, ಈ ಬೆಳವಣಿಗೆ ನಡೆದು ಕೆಲವೇ ಗಂಟೆಗಳಲ್ಲಿ ಟಾಟಾ ಟ್ರಸ್ಟ್ಸ್ ಅಧ್ಯಕ್ಷರಾದ ನೋಯೆಲ್ ಟಾಟಾ ಅವರು ಈ ಎರಡೂ ನಿರ್ಧಾರಗಳನ್ನು ವಿರೋಧಿಸಿದ್ದು, ತೆಗೆದುಕೊಂಡ ನಿರ್ಣಯಗಳು "ಕಾನೂನುಬಾಹಿರ" ಎಂದಿದ್ದಾರೆ.

►ಟಾಟಾ ಸನ್ಸ್ ಮಂಡಳಿ ಸಭೆಯಲ್ಲಿ ನಡೆದಿದ್ದೇನು?

ಗುರುವಾರದಂದು (ಸೆಪ್ಟೆಂಬರ್ 17) ಮುಂಬೈನ ಬಾಂಬೆ ಹೌಸ್ ನಲ್ಲಿ ಟಾಟಾ ಸನ್ಸ್ ನ ಮಂಡಳಿ ಸಭೆ ನಡೆಯಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ, ಹೋಲ್ಡಿಂಗ್ ಕಂಪೆನಿಯಾದ ಟಾಟಾ ಸನ್ಸ್ ನ ಭವಿಷ್ಯದ ಮೇಲೆ ಪ್ರಭಾವ ಬೀರುವ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಒಂದು ಟಾಟಾ ಸನ್ಸ್ ನ ಕಡ್ಡಾಯ ಲಿಸ್ಟಿಂಗ್‌ ಗೆ ಸಂಬಂಧಿಸಿದ್ದರೆ, ಮತ್ತೊಂದು ಕಂಪೆನಿಯ ಉನ್ನತ ನಾಯಕತ್ವದ ನೇಮಕಾತಿಗೆ ಸಂಬಂಧಿಸಿದ್ದಾಗಿದೆ.

4-1 ಮತಗಳ ಬಹುಮತದ ಮೂಲಕ ಕಾರ್ಯನಿರ್ವಾಹಕ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಅವರಿಗೆ ಮೂರನೇ ಬಾರಿಗೆ ಐದು ವರ್ಷಗಳ ಅವಧಿಯನ್ನು ವಿಸ್ತರಿಸುವ ನಿರ್ಣಯವನ್ನು ಮಂಡಳಿಯು ಅನುಮೋದಿಸಿತು. ಈ ಹಿಂದೆ ಆಗಸ್ಟ್ ನಲ್ಲಿ, ತಮ್ಮ ಅಧಿಕಾರಾವಧಿಯು 2027ರ ಫೆಬ್ರವರಿಯಲ್ಲಿ ಮುಕ್ತಾಯಗೊಳ್ಳಲಿದ್ದು, ಅದರ ನಂತರ ತಾವು ಮರುನೇಮಕ ಬಯಸುವುದಿಲ್ಲ ಎಂದು 63 ವರ್ಷ ವಯಸ್ಸಿನ ಚಂದ್ರಶೇಖರನ್ ಘೋಷಿಸುವ ಮೂಲಕ ಹಲವರಿಗೆ ಆಶ್ಚರ್ಯ ಮೂಡಿಸಿದ್ದರು. ಕಂಪೆನಿಯ ಮಂಡಳಿಯು ಅವರ ವಿಸ್ತರಣೆಯ ವಿವಾದವನ್ನು ಬಗೆಹರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಟಾಟಾ ಸನ್ಸ್ ಪ್ರಕಾರ, "ಮಂಡಳಿಯ ಮನವಿಯನ್ನು ಪುನರ್ವಿಮರ್ಶಿಸಲು ಚಂದ್ರಶೇಖರನ್ ಒಪ್ಪಿಕೊಂಡರು," ಮತ್ತು "ಪ್ರಸ್ತುತ ಅವಧಿ ಮುಕ್ತಾಯಗೊಂಡ ನಂತರ ಅವರನ್ನು ಮತ್ತೊಂದು ಐದು ವರ್ಷಗಳ ಅವಧಿಗೆ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮರುನೇಮಕ ಮಾಡಲು ಮಂಡಳಿಯು ಬಹುಮತದ ಮತದಾನದ ಮೂಲಕ ನಿರ್ಧರಿಸಿತು" ಎಂದು ತಿಳಿಸಿದೆ.

ಸರಳವಾಗಿ ಹೇಳುವುದಾದರೆ, 2027ರ ಫೆಬ್ರವರಿ 20ರಂದು ತಮ್ಮ ಅಧಿಕಾರಾವಧಿ ಪೂರ್ಣಗೊಂಡ ನಂತರ, ಚಂದ್ರಶೇಖರನ್ ಅವರು ಮತ್ತೊಮ್ಮೆ ಐದು ವರ್ಷಗಳ ಕಾಲ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮರುನೇಮಕಗೊಳ್ಳಲಿದ್ದಾರೆ.

ಚಂದ್ರಶೇಖರನ್ ಅವರ ನಾಯಕತ್ವವನ್ನು ಮಂಡಳಿಯು ಬಯಸಲು ಪ್ರಮುಖ ಕಾರಣವೆಂದರೆ, ಗುರುವಾರದ ಸಭೆಯಲ್ಲಿ ಚರ್ಚಿಸಲಾದ ಲಿಸ್ಟಿಂಗ್ ಪ್ರಕ್ರಿಯೆಯಲ್ಲಿ ಅವರು ಕಂಪೆನಿಯನ್ನು ಮುನ್ನಡೆಸಬಲ್ಲರು ಎಂಬ ವಿಶ್ವಾಸವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಇತ್ತೀಚಿನ ನಿರ್ದೇಶನದಂತೆ ಕಂಪೆನಿಯನ್ನು ಕಡ್ಡಾಯವಾಗಿ ಲಿಸ್ಟಿಂಗ್ ಮಾಡಲು ಟಾಟಾ ಸನ್ಸ್ ಒಪ್ಪಿಕೊಂಡಿದೆ. ಈ ಹಿಂದೆ ಈ ಕ್ರಮವನ್ನು ಗುಂಪು ವಿರೋಧಿಸುತ್ತ ಬಂದಿತ್ತು.

ಈ ವಾರದ ಆರಂಭದಲ್ಲಿ ಬ್ಯಾಂಕೇತರ ಹಣಕಾಸು ಕಂಪೆನಿ (NBFC) ಸ್ಥಾನದಿಂದ ಹೊರಬರಲು ಟಾಟಾ ಗುಂಪು ಸಲ್ಲಿಸಿದ್ದ ಅರ್ಜಿಯನ್ನು RBI ತಿರಸ್ಕರಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ.

►ನೋಯೆಲ್ ಟಾಟಾ ಈ ಎರಡೂ ಕ್ರಮಗಳನ್ನು ವಿರೋಧಿಸಿದ್ದೇಕೆ?

ಟಾಟಾ ಸನ್ಸ್ ನ ಶೇಕಡಾ 66ರಷ್ಟು ಷೇರುಗಳನ್ನು ಹೊಂದಿರುವ ಟಾಟಾ ಟ್ರಸ್ಟ್ಸ್ನ ಅಧ್ಯಕ್ಷರಾದ ನೋಯೆಲ್ ಟಾಟಾ, ಈ ಮರುನೇಮಕವನ್ನು "ಕಾನೂನುಬಾಹಿರ" ಎಂದು ಕರೆದಿದ್ದಾರೆ ಹಾಗೂ IPO ಕ್ರಮವನ್ನು ವಿರೋಧಿಸಿದ್ದಾರೆ.

ಚಂದ್ರಶೇಖರನ್ ಅವರ ನೇಮಕಾತಿ ವಿಷಯದ ಕುರಿತು ಹೇಳಿಕೆ ನೀಡಿರುವ ನೋಯೆಲ್ ಟಾಟಾ ಎರಡು ಪ್ರಮುಖ ಅಂಶಗಳನ್ನು ಗಮನಸೆಳೆದಿದ್ದಾರೆ. "ಆಗಸ್ಟ್ 12, 2026ರಂದು ಅಧ್ಯಕ್ಷರು ಈ ಮಂಡಳಿಗೆ ಪತ್ರ ಬರೆಯುತ್ತಾ, 2027ರ ಫೆಬ್ರವರಿ 20ರಂದು ತಮ್ಮ ಪ್ರಸ್ತುತ ಅಧಿಕಾರಾವಧಿ ಮುಕ್ತಾಯಗೊಂಡ ಬಳಿಕ ಮತ್ತೊಂದು ಅವಧಿಗೆ ತಾವು ಮುಂದುವರಿಯುವುದಿಲ್ಲ ಎಂದು ತಿಳಿಸಿದ್ದರು. ಅದು ಅವರ ಸ್ವಂತ ನಿರ್ಧಾರವಾಗಿತ್ತು. ಅದನ್ನು ಮುಕ್ತವಾಗಿ ತೆಗೆದುಕೊಳ್ಳಲಾಗಿತ್ತು ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಲಾಗಿತ್ತು. ಈ ಮಂಡಳಿಯು ಅದನ್ನು ಕೇಳಿರಲಿಲ್ಲ, ಇದು ನಮ್ಮ ಮಂಡಳಿಯ ಯಾವುದೇ ನಿರ್ಣಯದ ವಿಷಯವಾಗಿರಲಿಲ್ಲ ಮತ್ತು ಯಾವುದೇ ಪರಿಶೀಲನಾ ಪ್ರಕ್ರಿಯೆಯ ಫಲಿತಾಂಶವೂ ಆಗಿರಲಿಲ್ಲ" ಎಂದು ನೋಯೆಲ್ ಹೇಳಿದ್ದಾರೆ.

"ಆ ಪತ್ರವನ್ನು ಬಳಿಕ ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಂಪೆನಿಯ ಷೇರುದಾರರೊಂದಿಗೆ, ವಿಶೇಷವಾಗಿ ಇದರ ಶೇಕಡಾ 66ರಷ್ಟು ಷೇರುಗಳನ್ನು ಹೊಂದಿರುವ ಟಾಟಾ ಟ್ರಸ್ಟ್ಸ್ನೊಂದಿಗೆ ಯಾವುದೇ ಪೂರ್ವ ಚರ್ಚೆ ನಡೆಸದೆ ಅದನ್ನು ಬಿಡುಗಡೆ ಮಾಡಲಾಯಿತು" ಎಂದಿದ್ದಾರೆ.

ಸಮೂಹದ ಉದ್ಯೋಗಿಗಳು, ಇದರ ಸಾಲದಾತರು, ವ್ಯವಹಾರ ಪಾಲುದಾರರು ಮತ್ತು ಮಾರುಕಟ್ಟೆ ಎಲ್ಲವೂ ಆ ನಿರ್ಧಾರದ ಮೇಲೆಯೇ ಮುಂದಡಿ ಇಟ್ಟಿವೆ. ಬಹುಪಾಲು ಷೇರುದಾರರೂ ಕೂಡ ಹಾಗೆಯೇ ಮಾಡಿದ್ದಾರೆ. ಆ ಅಧ್ಯಾಯ ಮುಗಿದು ಹೋಗಿದೆ ಎಂದು ಅವರು ತಿಳಿಸಿದ್ದಾರೆ.

ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಗೆ ಟಾಟಾ ಸನ್ಸ್ ಮಂಡಳಿಯಲ್ಲಿರುವ ಟಾಟಾ ಟ್ರಸ್ಟ್ಸ್ನ ನಾಮಿನಿ ನಿರ್ದೇಶಕರು ನಿರ್ಣಯದ ಪರವಾಗಿ ಬಹುಮತದಿಂದ ಮತ ಚಲಾಯಿಸುವುದು ಅಗತ್ಯವಾಗಿರುತ್ತದೆ ಎಂದಿದ್ದಾರೆ ಅವರು. "ಟ್ರಸ್ಟ್ ನಾಮಿನಿ ನಿರ್ದೇಶಕರಲ್ಲಿ ಒಬ್ಬರಾದ ನೋಯೆಲ್ ಟಾಟಾ ಅವರು ಈ ಪ್ರಸ್ತಾವನೆಯ ವಿರುದ್ಧ ಮತ ಚಲಾಯಿಸಿರುವುದರಿಂದ, ಇದು ಕಾನೂನುಬದ್ಧವಾಗಿ ಶೂನ್ಯವಾಗಿದೆ ಮತ್ತು ಯಾವುದೇ ಆಧಾರವಿಲ್ಲದಂತಾಗಿದೆ" ಎಂದು ಟಾಟಾ ಟ್ರಸ್ಟ್ಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮನಿ ಕಂಟ್ರೋಲ್ಗೆ ನೀಡಿದ ಸಂದರ್ಶನದಲ್ಲಿ, ಎನ್. ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡುವ ಟಾಟಾ ಸನ್ಸ್ ಮಂಡಳಿಯ ನಿರ್ಧಾರವು "ಕಾನೂನುಬಾಹಿರ" ಎಂದು ನೋಯೆಲ್ ಟಾಟಾ ಹೇಳಿದ್ದಾರೆ. "ಚಂದ್ರಶೇಖರನ್ ಅವರ ನೇಮಕಾತಿಯನ್ನು ನಾನು ವಿರೋಧಿಸಿ ಮತ ಹಾಕಿದೆ. ಕಾನೂನು ಅಭಿಪ್ರಾಯದ ಆಧಾರದ ಮೇಲೆ ನನ್ನ ವೀಟೋ ಅಧಿಕಾರವನ್ನು ತಪ್ಪಾಗಿ ಕಡೆಗಣಿಸಲಾಗಿದೆ. ಈ ನಿರ್ಧಾರವು ಕಾನೂನುಬಾಹಿರ. ನಾನು ನನ್ನ ಅಸಮಾಧಾನವನ್ನು ದಾಖಲಿಸಿದ್ದೇನೆ" ಎಂದು ಟಾಟಾ ತಿಳಿಸಿದ್ದಾರೆ.

ಆದರೆ ಇದು ಒಂದೇ ಸಮಸ್ಯೆಯಾಗಿರಲಿಲ್ಲ. ಕಂಪೆನಿಯ ಲಿಸ್ಟಿಂಗ್ ನಿರ್ಧಾರವನ್ನೂ ಸಹ ನೋಯೆಲ್ ಟಾಟಾ ವಿರೋಧಿಸಿದ್ದಾರೆ.

ಅವರು ಹೇಳುವಂತೆ, "ಈ ಮಂಡಳಿಯು ಈ ಹಿಂದೆ ಈ ಪ್ರಶ್ನೆಯನ್ನು ಪರಿಗಣಿಸಿ ಒಂದು ತೀರ್ಮಾನಕ್ಕೆ ಬಂದಿದೆ. 2024ರ ಮಾರ್ಚ್ನಲ್ಲಿ ದಿವಂಗತ ರತನ್ ಟಾಟಾ ಅವರ ಮಾರ್ಗದರ್ಶನದಲ್ಲಿ, ಕಂಪೆನಿಯು ಲಿಸ್ಟಿಂಗ್ ಆಗದೆ ಹಾಗೇ ಉಳಿಯಬೇಕು ಎಂದು ಸರ್ವಾನುಮತದಿಂದ ನಿರ್ಧರಿಸಲಾಗಿತ್ತು. ಸೆಪ್ಟೆಂಬರ್ 11, 2026ರ RBI ಸಂವಹನವು ನೋಂದಣಿಯನ್ನು ಸ್ವಯಂಪ್ರೇರಿತವಾಗಿ ಹಿಂತೆಗೆದುಕೊಳ್ಳುವ ಅರ್ಜಿಯನ್ನು ತಿರಸ್ಕರಿಸಿದೆ. ನನ್ನ ಪ್ರಕಾರ, ಲಿಸ್ಟಿಂಗ್ ಮಾಡುವುದೇ ಏಕೈಕ ಆಯ್ಕೆ ಎಂದು ಅದು ಹೇಳುವುದಿಲ್ಲ. ಸಾಕಷ್ಟು ಅವಕಾಶವಿದೆ ಮತ್ತು ಈ ಮಂಡಳಿಯು ಅದನ್ನು ಬಿಟ್ಟುಕೊಡುವ ಬದಲು ಆ ಅವಕಾಶವನ್ನು ಬಳಸಿಕೊಳ್ಳಬೇಕು" ಎಂದಿದ್ದಾರೆ.

ಟಾಟಾ ಸನ್ಸ್ ಕಂಪೆನಿಯು ಖಾಸಗಿ ಸ್ವಾಮ್ಯದಲ್ಲೇ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು RBI ಜೊತೆ ಮತ್ತಷ್ಟು ಚರ್ಚೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ಅವರ ಪ್ರಕಾರ, ಯಾವುದೇ ಅನುಸರಣಾ ಕ್ರಮಕ್ಕಾಗಿ ಟಾಟಾ ಸನ್ಸ್ ನಿಯಂತ್ರಕ ಸಂಸ್ಥೆಯನ್ನು ಸೆಪ್ಟೆಂಬರ್ 2029ರವರೆಗೆ ಇನ್ನೂ ಮೂರು ವರ್ಷಗಳ ಕಾಲಾವಕಾಶ ಕೇಳಬೇಕು.

►ಟಾಟಾ ಗುಂಪಿನ ಮುಂದಿನ ಹೆಜ್ಜೆ ಏನು?

ಈಗ ಟಾಟಾ ಸನ್ಸ್ ನಾಯಕತ್ವ ಮತ್ತು ಅದರ ಲಿಸ್ಟಿಂಗ್‌ ಗೆ ಸಂಬಂಧಿಸಿದ ಈ ಸಮರವು ಕಂಪೆನಿಯ ವಾರ್ಷಿಕ ಮಹಾಸಭೆಯತ್ತ ಸಾಗಿದೆ.

ಚಂದ್ರಶೇಖರನ್ ಅವರು ಅಧ್ಯಕ್ಷರಾಗಿ ಮುಂದುವರಿಯಲು, ವಾರ್ಷಿಕ ಸಭೆಯಲ್ಲಿ ಅವರು ಮರುನೇಮಕಗೊಳ್ಳಬೇಕಾಗುತ್ತದೆ. ಅಲ್ಲಿ ಬಹುಪಾಲು ಷೇರುಗಳನ್ನು ಹೊಂದಿರುವ ಟಾಟಾ ಟ್ರಸ್ಟ್ಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಮನಿಕಂಟ್ರೋಲ್ ವರದಿಯ ಪ್ರಕಾರ, ಡಿಸೆಂಬರ್ 31ರೊಳಗೆ ನಡೆಯಲಿರುವ ಟಾಟಾ ಟ್ರಸ್ಟ್ಸ್ನ ಮುಂದಿನ ವಾರ್ಷಿಕ ಸಭೆಯಲ್ಲಿ ಚಂದ್ರಶೇಖರನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ನೋಯೆಲ್ ಯೋಜನೆ ರೂಪಿಸುತ್ತಿದ್ದಾರೆ.

ʼಹಿಂದೂ ಬಿಸಿನೆಸ್ ಲೈನ್ʼ ಜತೆಗೆ ಮಾತನಾಡಿದ ಕೈಜೆನ್ ಲಾ ಸಂಸ್ಥೆಯ ಸ್ಥಾಪಕ ಪಾಲುದಾರ ಹರ್ಷ್ ಕುಮಾರ್, "ಚಂದ್ರಶೇಖರನ್ ಅವರು ಅಧ್ಯಕ್ಷರಾಗಿ ಮುಂದುವರಿಯಲು ಟಾಟಾ ಸನ್ಸ್ ಮಂಡಳಿಯ ಅನುಮೋದನೆ ಮಾತ್ರವೇ ಸಾಕಾಗುವುದಿಲ್ಲ. ಅವರಿಗೆ ಹೊಸದಾಗಿ ಐದು ವರ್ಷಗಳ ಅವಧಿ ಸಿಗಬೇಕಾದರೆ ಅವರು ಟಾಟಾ ಸನ್ಸ್ ನ ನಿರ್ದೇಶಕರಾಗಿಯೂ ಮುಂದುವರಿಯಬೇಕು, ಇದು ಷೇರುದಾರರ ಅಥವಾ ವಾರ್ಷಿಕ ಸಭೆಯ ಹಂತದಲ್ಲಿ ಪರೀಕ್ಷೆಗೆ ಒಳಪಡುತ್ತದೆ. ನಿಯಂತ್ರಕ ಷೇರುಗಳನ್ನು ಹೊಂದಿರುವ ಟಾಟಾ ಟ್ರಸ್ಟ್ಸ್, ನಿರ್ದೇಶಕರಾಗಿ ಅವರ ಮರುನೇಮಕದ ವಿರುದ್ಧ ಮತ ಚಲಾಯಿಸಿದರೆ, ಅವರಿಗೆ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.

ಈ ವಿವಾದವು ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ಸ್ ನಡುವಿನ ದೊಡ್ಡ ಬಿರುಕನ್ನು ಬಹಿರಂಗಪಡಿಸಿದೆ. ಟಾಟಾ ಸನ್ಸ್ ಮತ್ತು ಟಾಟಾ ಗುಂಪಿನ ಗೌರವಾನ್ವಿತ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರು 2024ರ ಅಕ್ಟೋಬರ್ನಲ್ಲಿ ನಿಧನರಾದ ನಂತರ, ಈ ಮಹಾಸಮೂಹವು ಆಂತರಿಕ ಕಲಹದ ಸುಳಿಯಲ್ಲಿ ಸಿಲುಕಿದೆ.

2016ರಲ್ಲಿ ಟಾಟಾ ಸನ್ಸ್ ಮಂಡಳಿಯು ಸೈರಸ್ ಮಿಸ್ಟ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದಾಗ ನಡೆದಂತೆ, ಈ ಸಂಘರ್ಷ ಇಲ್ಲಿಗೆ ನಿಲ್ಲುತ್ತದೆಯೋ ಅಥವಾ ಕೋರ್ಟ್ ಮೆಟ್ಟಿಲೇರುತ್ತದೆಯೋ ಎಂಬ ಕುತೂಹಲ ಮೂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor