2024ರ ಪ್ರಮುಖ ಭರವಸೆಗೆ 99% ಹಿನ್ನಡೆ: ಇಂಟರ್ನ್ ಗಳಿಗಿಂತ PM ಇಂಟರ್ನ್ ಶಿಪ್ ಯೋಜನೆಯ ಜಾಹೀರಾತಿಗೇ ಹೆಚ್ಚು ವೆಚ್ಚ!
ಇಂದುಲೇಖಾ ಅರವಿಂದ್ - newslaundry. com ವರದಿ
Photo Credit : newslaundry.com
ಅದು 2025ರ ಬೇಸಿಗೆಯ ಸಮಯ. ನರೇಂದ್ರ ಮೋದಿ ಸರ್ಕಾರದ ಹೊಸ ಇಂಟರ್ನ್ ಶಿಪ್ ಯೋಜನೆಯ ಜಾಹೀರಾತುಗಳು ದಿನಪತ್ರಿಕೆಗಳು, ಟಿವಿ ಚಾನೆಲ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತವಾಗಿ ಪ್ರಸಾರವಾಗುತ್ತಿದ್ದವು. ಛತ್ತೀಸ್ ಗಢದ ಭಿಲಾಯ್ ನಿವಾಸಿಯಾದ 22 ವರ್ಷದ ಪಿ. ಆದರ್ಶ್* ಎಂಬ ಯುವಕನಿಗೂ ಲಕ್ಷಾಂತರ ಜನರಂತೆ ಈ ಜಾಹೀರಾತುಗಳು ಕಣ್ಣಿಗೆ ಬಿದ್ದವು. ಕೃಷಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಆದರ್ಶ್, ತನ್ನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು, ಸ್ವಲ್ಪ ಹಣ ಗಳಿಸಲು ಹಾಗೂ ಬ್ಯಾಂಕ್ ಪರೀಕ್ಷೆಯ ತಯಾರಿಗೆ ಸಂಜೆ ವೇಳೆ ಸಮಯ ಸಿಗುವಂತಹ ಇಂಟರ್ನ್ ಶಿಪ್ ಹುಡುಕಾಟದಲ್ಲಿದ್ದರು.
ಹೀಗಾಗಿ, ಪ್ರಧಾನಮಂತ್ರಿ ಇಂಟರ್ನ್ ಶಿಪ್ ಯೋಜನೆ (PMIS) ಪೋರ್ಟಲ್ ಮೂಲಕ ಅವರು ಅರ್ಜಿ ಸಲ್ಲಿಸಿ, ತಮ್ಮ ಆದ್ಯತೆಗಳನ್ನು ನಮೂದಿಸಿದರು. ಕೆಲವೇ ದಿನಗಳಲ್ಲಿ ಅವರಿಗೆ ಇಂಟರ್ನ್ ಶಿಪ್ ಗೆ ಆಯ್ಕೆಯಾಗಿರುವ ಬಗ್ಗೆ ಇಮೇಲ್ ಬಂದಿತು. ರಾಜ್ಯದ ರಾಜಧಾನಿ ರಾಯ್ ಪುರದಲ್ಲಿರುವ ಭಾರತ್ ಪೆಟ್ರೋಲಿಯಂ (BPCL) ಎಂಬ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತು.
ಆದರೆ, ಅವರು ಈ ಅವಕಾಶವನ್ನು ಸ್ವೀಕರಿಸಲಿಲ್ಲ.
ಬದಲಾಗಿ, ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ತರಬೇತಿ ಯೋಜನೆ (NATS) ಮೂಲಕ ಆಯ್ಕೆಯಾಗಿದ್ದ ಮತ್ತೊಂದು ಇಂಟರ್ನ್ ಶಿಪ್ ಗಾಗಿ ಆಂಧ್ರಪ್ರದೇಶದ ಅನಂತಪುರದಲ್ಲಿರುವ ದಕ್ಷಿಣ ವಲಯ ಕೃಷಿ ಯಂತ್ರೋಪಕರಣಗಳ ತರಬೇತಿ ಮತ್ತು ಪರೀಕ್ಷಾ ಸಂಸ್ಥೆಗೆ ತೆರಳಿದರು. ‘ನ್ಯೂಸ್ಲಾಂಡ್ರಿ’ ಜತೆ ದೂರವಾಣಿ ಮೂಲಕ ಮಾತನಾಡಿದ ಆದರ್ಶ್, "ಆ ಸಮಯದಲ್ಲಿ ನನಗೆ ಕೆಲಸದ ತುರ್ತು ಅಗತ್ಯವಿದ್ದಿದ್ದರಿಂದ ಹಲವು ಇಂಟರ್ನ್ ಶಿಪ್ಗಳಿಗೆ ಅರ್ಜಿ ಸಲ್ಲಿಸಿದ್ದೆ" ಎಂದು ಹೇಳಿದ್ದಾರೆ.
BPCL ಸಂಸ್ಥೆಯಲ್ಲಿ ಇಂಟರ್ನ್ ಶಿಪ್ ಗೆ ಸೇರಿದ್ದರೆ ದಿನಕ್ಕೆ 60 ಕಿ.ಮೀ ಪ್ರಯಾಣಿಸಬೇಕಿತ್ತು. PMIS ಯೋಜನೆಯಲ್ಲಿ ಸಿಗುತ್ತಿದ್ದ ತಿಂಗಳಿಗೆ 5,000 ರೂಪಾಯಿ ಭತ್ಯೆಯಲ್ಲೇ ಆ ಪ್ರಯಾಣದ ವೆಚ್ಚ ಭರಿಸಬೇಕಿತ್ತು. ಇದಕ್ಕೆ ಭಿನ್ನವಾಗಿ, ಅನಂತಪುರದಲ್ಲಿದ್ದರೆ ಸರ್ಕಾರಿ ಸಂಸ್ಥೆಯ ಹಾಸ್ಟೆಲ್ ನಲ್ಲಿ ಉಚಿತ ವಸತಿ ಸಿಗುತ್ತಿತ್ತು. ಊಟಕ್ಕಾಗಿ ತಿಂಗಳಿಗೆ 3,000 ರೂಪಾಯಿ ಖರ್ಚಾಗುತ್ತಿತ್ತಾದರೂ, ಅಲ್ಲಿ ಸಿಗುತ್ತಿದ್ದ 12,300 ರೂಪಾಯಿ ಭತ್ಯೆಯಲ್ಲಿ ಅದನ್ನು ಸುಲಭವಾಗಿ ಭರಿಸಬಹುದಿತ್ತು. ಜೊತೆಗೆ, ಇದು ಅವರು ಓದಿದ ವಿಷಯಕ್ಕೆ ಸಂಬಂಧಿಸಿದ ಕ್ಷೇತ್ರವಾಗಿತ್ತು. ಆದರೆ PMIS ಇಂಟರ್ನ್ ಶಿಪ್ ಅವರ ಅಧ್ಯಯನಕ್ಕೆ ಸಂಬಂಧಿಸದ ಕ್ಷೇತ್ರದಲ್ಲಿತ್ತು. ಅವರ ಈ ಅನುಭವ ಒಂದು ಉದಾಹರಣೆಯಷ್ಟೇ ಅಲ್ಲ, ಇದು ವ್ಯವಸ್ಥೆಯ ಲೋಪವನ್ನು ಎತ್ತಿಹಿಡಿಯುತ್ತದೆ.
ಪ್ರಧಾನಮಂತ್ರಿ ಇಂಟರ್ನ್ ಶಿಪ್ ಯೋಜನೆಯನ್ನು 2024ರ ಉದ್ಯೋಗ ಬಿಕ್ಕಟ್ಟಿಗೆ ಮೋದಿ ಸರ್ಕಾರ ನೀಡಿದ ಉತ್ತರ ಎಂದೇ ಭಾವಿಸಲಾಗಿತ್ತು. ಲೋಕಸಭಾ ಚುನಾವಣೆ ಫಲಿತಾಂಶದ ನಂತರದ ಮೊದಲ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ಘೋಷಿಸಿದ್ದರು. ಐದು ವರ್ಷಗಳಲ್ಲಿ 500 ಪ್ರಮುಖ ಕಂಪೆನಿಗಳಲ್ಲಿ 1 ಕೋಟಿ ಯುವಕರಿಗೆ ಹಾಗೂ ಮೊದಲ ಎರಡು ವರ್ಷಗಳಲ್ಲಿ 30 ಲಕ್ಷ ಯುವಕರಿಗೆ ಇಂಟರ್ನ್ ಶಿಪ್ ನೀಡುವುದು ಇದರ ಗುರಿಯಾಗಿತ್ತು. ಆದರೆ ಎರಡು ವರ್ಷಗಳ ನಂತರ, ಸರ್ಕಾರ ನೀಡುತ್ತಿರುವ ವಾಸ್ತವಿಕ ಅಂಕಿ-ಅಂಶಗಳು ಈ ಗುರಿಯಿಂದ ಬಹುದೂರ ಉಳಿದಿವೆ.
ಈ ಯೋಜನೆಯನ್ನು ನಿರ್ವಹಿಸುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು (RTI) ಅರ್ಜಿಗೆ ಲಭಿಸಿದ ಉತ್ತರಗಳ ಪ್ರಕಾರ, 2026ರ ಏಪ್ರಿಲ್ 30ರ ವೇಳೆಗೆ ಕಂಪೆನಿಗಳು 2.97 ಲಕ್ಷ ಇಂಟರ್ನ್ ಶಿಪ್ ಅವಕಾಶಗಳನ್ನು ಮಾತ್ರ ಪ್ರಕಟಿಸಿದ್ದವು. ಇದು ಮೊದಲ ಎರಡು ವರ್ಷಗಳ ಗುರಿಯ ಶೇಕಡಾ 10ರಷ್ಟು ಮಾತ್ರ. ಇನ್ನು ಆಳವಾಗಿ ಪರಿಶೀಲಿಸಿದರೆ ಪರಿಸ್ಥಿತಿ ಮತ್ತಷ್ಟು ಕಳವಳಕಾರಿಯಾಗಿದೆ. ಈ ಅವಕಾಶಗಳಲ್ಲಿ ನಿಜವಾಗಿ ಸಿಕ್ಕ ಆಫರ್ಗಳ ಸಂಖ್ಯೆ 1.73 ಲಕ್ಷಕ್ಕೆ ಕುಸಿಯಿತು. ಆಫರ್ ಪಡೆದವರಲ್ಲಿ ಕೇವಲ 18,000 ಜನರು ಕೆಲಸಕ್ಕೆ ಹಾಜರಾದರು. ಅಂತಿಮವಾಗಿ ಇಂಟರ್ನ್ ಶಿಪ್ ಪೂರ್ಣಗೊಳಿಸಿದವರು ಸುಮಾರು 5,200 ಜನರು ಮಾತ್ರ. ಇವೆಲ್ಲವೂ PMIS ಮೂಲಕ ಬಂದ ಒಟ್ಟು 12 ಲಕ್ಷ ಅರ್ಜಿಗಳಲ್ಲಿ ನಡೆದಿದೆ.
ಆರ್ಥಿಕ ವೆಚ್ಚದಲ್ಲೂ ಇದೇ ನಿರಾಶಾದಾಯಕ ಚಿತ್ರಣ ಕಂಡುಬಂದಿದೆ. ಐದು ವರ್ಷಗಳ ಕಾಲ PMISಗಾಗಿ ಆರಂಭದಲ್ಲಿ ಘೋಷಿಸಲಾದ 63,000 ಕೋಟಿ ರೂಪಾಯಿಗಳಲ್ಲಿ, 2026ರ ಮಾರ್ಚ್ 15ರ ವೇಳೆಗೆ ಕೇವಲ 123.7 ಕೋಟಿ ರೂಪಾಯಿ ಮಾತ್ರ ವೆಚ್ಚವಾಗಿದೆ. ಅಂದರೆ, ಒಟ್ಟು ಮೊತ್ತದ ಶೇಕಡಾ 0.2ಕ್ಕಿಂತ ಕಡಿಮೆ. ಈ ಸಣ್ಣ ಮೊತ್ತದಲ್ಲೂ ಸರ್ಕಾರ ಪ್ರಚಾರ ಮತ್ತು ಜಾಹೀರಾತುಗಳಿಗಾಗಿಯೇ 46.7 ಕೋಟಿ ರೂಪಾಯಿ ಖರ್ಚು ಮಾಡಿದೆ. ಆದರೆ ಇಂಟರ್ನ್ಗಳಿಗೆ ಭತ್ಯೆಯಾಗಿ ನೀಡಿದ ಹಣ 54.3 ಕೋಟಿ ರೂಪಾಯಿ ಮಾತ್ರ. ಇನ್ನುಳಿದ ಹಣ ಇತರ ವೆಚ್ಚಗಳಿಗೆ ಬಳಕೆಯಾಗಿದ್ದು, ದಾಖಲೆಗಳಲ್ಲಿ ಅದರ ಸ್ಪಷ್ಟ ವಿವರಗಳಿಲ್ಲ.
ನೈಜ ಸಮಸ್ಯೆಯೊಂದನ್ನು ಪರಿಹರಿಸಲು ಹೊರಟ, ಮತ್ತು ಅದಕ್ಕೆ ಅಗತ್ಯವಿರುವ ಸಂಪನ್ಮೂಲ ಹೊಂದಿದ್ದ ಯೋಜನೆಯೊಂದು ಅಭ್ಯರ್ಥಿಗಳನ್ನು ತಲುಪುವಲ್ಲಿ ಏಕೆ ವಿಫಲವಾಯಿತು?
RTI ಉತ್ತರಗಳು, ಸಂಸತ್ತಿನಲ್ಲಿ ಮಂಡಿಸಲಾದ ಅಂಕಿ-ಅಂಶಗಳು, ಮಾಜಿ ಇಂಟರ್ನ್ಗಳು, ಕಂಪೆನಿಗಳು ಮತ್ತು ಅರ್ಥಶಾಸ್ತ್ರಜ್ಞರ ಸಂದರ್ಶನಗಳನ್ನು ಗಮನಿಸಿದಾಗ, ಯೋಜನೆ ನಿರೀಕ್ಷಿತ ಯಶಸ್ಸು ಕಾಣದಿರಲು ಹಲವು ಕಾರಣಗಳು ಕಂಡುಬಂದಿವೆ. ಇವುಗಳಲ್ಲಿ ಕೆಲವನ್ನು ಸ್ವತಃ ಸರ್ಕಾರದ ಮೌಲ್ಯಮಾಪಕರೇ ದಾಖಲಿಸಿದ್ದಾರೆ. ಇದರ ಜೊತೆಗೆ, ಸ್ಪಷ್ಟ ಯೋಜನೆಯಿಲ್ಲದೆ ಬೃಹತ್ ಗುರಿಗಳನ್ನು ಘೋಷಿಸುವ ಕ್ರಮದ ಮೇಲೆಯೂ ಇದು ಪ್ರಶ್ನೆಗಳನ್ನು ಎತ್ತುತ್ತದೆ.
►ತೀವ್ರವಾದ ಬಿಕ್ಕಟ್ಟು
ಮತ್ತೊಮ್ಮೆ ಅಧಿಕಾರಕ್ಕೇರಿದ ಎನ್ಡಿಎ ಸರ್ಕಾರದ ಬಜೆಟ್ ನಲ್ಲಿ 2024ರ ಜುಲೈ 23ರಂದು PMIS ಯೋಜನೆಯನ್ನು ಘೋಷಿಸಲಾಯಿತು. "ಐದು ವರ್ಷಗಳಲ್ಲಿ 1 ಕೋಟಿ ಯುವಕರಿಗೆ 500 ಪ್ರಮುಖ ಕಂಪೆನಿಗಳಲ್ಲಿ ಇಂಟರ್ನ್ ಶಿಪ್ ಅವಕಾಶಗಳನ್ನು ಒದಗಿಸಲು ನಮ್ಮ ಸರ್ಕಾರ ಸಮಗ್ರ ಯೋಜನೆಯನ್ನು ಪ್ರಾರಂಭಿಸಲಿದೆ. ಅವರು 12 ತಿಂಗಳ ಕಾಲ ನೈಜ ವ್ಯಾಪಾರ ವಾತಾವರಣ, ವಿವಿಧ ವೃತ್ತಿಗಳು ಮತ್ತು ಉದ್ಯೋಗಾವಕಾಶಗಳ ಅನುಭವವನ್ನು ಪಡೆಯಲಿದ್ದಾರೆ" ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು. ಯುವಕರ ಕೌಶಲ್ಯ ಮತ್ತು ಉದ್ಯೋಗಕ್ಕಾಗಿ ಒಟ್ಟು 2 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಅಂದು ಘೋಷಿಸಲಾದ ಐದು ಯೋಜನೆಗಳಲ್ಲಿ ಇದೂ ಒಂದಾಗಿತ್ತು.
ಎನ್ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿತ್ತಾದರೂ, ಬಿಜೆಪಿಯ ಸೀಟುಗಳ ಸಂಖ್ಯೆ 303ರಿಂದ 240ಕ್ಕೆ ಕುಸಿದಿತ್ತು. ಪಕ್ಷವು ಹೊಸ ಮತದಾರರನ್ನು ಮತ್ತು ಯುವಕರನ್ನು ಸೆಳೆಯಲು ಶ್ರಮಿಸಿತ್ತು. ಹಲವು ಸಮೀಕ್ಷೆಗಳ ಪ್ರಕಾರ, ಈ ವರ್ಗಕ್ಕೆ ಉದ್ಯೋಗವೇ ಪ್ರಮುಖ ವಿಷಯವಾಗಿತ್ತು. ಬಜೆಟ್ ಮಂಡನೆಯ ಮರುದಿನದ ಪತ್ರಿಕಾ ವರದಿಗಳು ಸರ್ಕಾರ ಹಿಂದೆ ಸರಿದಿರುವುದನ್ನು ಗಮನಿಸಿದ್ದವು. "ಬಜೆಟ್ ದೊಡ್ಡ ಆಲೋಚನೆಗಳು ಅಥವಾ ದಿಟ್ಟ ಸುಧಾರಣೆಗಳಿಗಿಂತ ಹೆಚ್ಚಾಗಿ ಒಕ್ಕೂಟ ರಾಜಕೀಯದ ಒತ್ತಡಗಳಿಗೆ ಒಗ್ಗಿಕೊಳ್ಳುವುದು ಮತ್ತು ಉದ್ಯೋಗಗಳ ಕುರಿತಾದ ಅಸಮಾಧಾನವನ್ನು ಶಮನಗೊಳಿಸುವುದಕ್ಕೇ ಸೀಮಿತವಾಗಿತ್ತು" ಎಂದು ಸಂಪಾದಕೀಯವೊಂದು ಉಲ್ಲೇಖಿಸಿತ್ತು.
ಭಾರತವು ತನ್ನ ಬೃಹತ್ ಯುವ ಜನಸಂಖ್ಯೆಗೆ (15ರಿಂದ 29 ವರ್ಷ ವಯಸ್ಸಿನ 36.7 ಕೋಟಿ ಎಂದು ಅಂದಾಜಿಸಲಾಗಿದೆ) ಪೂರಕವಾಗಿ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲು ವರ್ಷಗಳಿಂದ ಹೆಣಗಾಡುತ್ತಿದೆ. ಇದರಲ್ಲಿ ಶಿಕ್ಷಣ ಪಡೆಯದ 26.3 ಕೋಟಿ ಯುವಕರು ಸಂಭಾವ್ಯ ಶ್ರಮಿಕ ವರ್ಗವಾಗಿದ್ದಾರೆ.
ವರ್ಷಗಳು ಕಳೆದಂತೆ ಶಿಕ್ಷಣದ ಮಟ್ಟ ಗಣನೀಯವಾಗಿ ಹೆಚ್ಚಾಗಿದ್ದು, ದೇಶದಲ್ಲಿ ಈಗ ವರ್ಷಕ್ಕೆ 50 ಲಕ್ಷ ಪದವೀಧರರು ಹೊರಬರುತ್ತಿದ್ದಾರೆ. ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ 'ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2026' ವರದಿಯ ಪ್ರಕಾರ, 15ರಿಂದ 25 ವರ್ಷ ವಯಸ್ಸಿನವರಲ್ಲಿ ಪದವೀಧರ ನಿರುದ್ಯೋಗ ದರವು ಶೇಕಡಾ 40ಕ್ಕೆ ಹತ್ತಿರದಲ್ಲಿದೆ. 50 ಲಕ್ಷ ಪದವೀಧರರಲ್ಲಿ ಪ್ರತಿವರ್ಷ ಸುಮಾರು 28 ಲಕ್ಷ ಜನರಿಗೆ ಮಾತ್ರ ಉದ್ಯೋಗ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ಇದು 2004-05ರಿಂದಲೂ ಕಂಡುಬರುತ್ತಿರುವ ಪ್ರವೃತ್ತಿಯಾಗಿದೆ. ಇದರಲ್ಲಿ ಮತ್ತಷ್ಟು ಕಡಿಮೆ ಪ್ರಮಾಣದ ಜನರು ಮಾತ್ರ ಪದವಿ ಮುಗಿಸಿದ ಒಂದು ವರ್ಷದೊಳಗೆ ಸ್ಥಿರ, ವೇತನಸಹಿತ ಉದ್ಯೋಗಗಳನ್ನು ಪಡೆಯಲು ಸಮರ್ಥರಾಗಿದ್ದಾರೆ ಎಂದು ವರದಿ ತೋರಿಸಿದೆ.
2011ರಲ್ಲಿ ದೇಶದಲ್ಲಿದ್ದ ಒಟ್ಟು ನಿರುದ್ಯೋಗಿ ಯುವಕರಲ್ಲಿ ಪದವೀಧರರ ಪಾಲು ಶೇಕಡಾ 44ರಷ್ಟಿತ್ತು. 2023ರ ವೇಳೆಗೆ ಈ ಸಂಖ್ಯೆ ಶೇಕಡಾ 70ಕ್ಕೆ (ಸುಮಾರು 1.1 ಕೋಟಿ) ಏರಿಕೆಯಾಗಿದೆ. ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (Periodic Labour Force Survey) ಪ್ರಕಾರ, ಮೇ ತಿಂಗಳಿನಲ್ಲಿ 15ರಿಂದ 29 ವರ್ಷದೊಳಗಿನವರ ನಿರುದ್ಯೋಗ ದರವು ಶೇಕಡಾ 15.9ರಷ್ಟಿತ್ತು. ಇದು 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ನಿರುದ್ಯೋಗ ಅಂಕಿ ಅಂಶಕ್ಕಿಂತ (ಶೇಕಡಾ 5.5) ಸುಮಾರು ಮೂರು ಪಟ್ಟು ಹೆಚ್ಚು.
ಅಸ್ತವ್ಯಸ್ತಗೊಂಡ ನೇಮಕಾತಿ ಪರೀಕ್ಷೆಗಳ ವಿರುದ್ಧದ ಪ್ರತಿಭಟನೆಗಳು, ಕೆಲವು ಸಾವಿರ ಖಾಲಿ ಹುದ್ದೆಗಳಿಗೆ ಲಕ್ಷಾಂತರ ಯುವಕರು ಸರತಿ ಸಾಲಿನಲ್ಲಿ ನಿಲ್ಲುವುದು—ಈ ಎಲ್ಲ ಬಿಕ್ಕಟ್ಟುಗಳು ಇಲ್ಲಿ ವ್ಯಕ್ತವಾಗುತ್ತಿವೆ. ಇತ್ತೀಚೆಗೆ ಕಾಕ್ರೋಚ್ ಜನತಾ ಪಾರ್ಟಿಯ ಬೆಳವಣಿಗೆಗೂ ಇದುವೇ ಪ್ರಮುಖ ಕಾರಣ ಎಂದು ವಿಶ್ಲೇಷಕರು ಭಾವಿಸುತ್ತಾರೆ.
ಇನ್ನೊಂದೆಡೆ, ಭಾರತೀಯ ಉದ್ಯಮ ರಂಗವು ಪದವೀಧರರಲ್ಲಿ ಉದ್ಯೋಗಾರ್ಹತೆಯ ಕೊರತೆಯಿದೆ ಎಂದು ದೂರುತ್ತಿದೆ. 2018ರಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು ಭಾರತದ ಶೇಕಡಾ 80ರಷ್ಟು ಯುವಕರು "ಯಾವುದೇ ಉದ್ಯೋಗಕ್ಕೂ ಸೂಕ್ತವಾದ ತರಬೇತಿ ಪಡೆದಿಲ್ಲ" ಎಂದು ಹೇಳಿದ್ದರು. ಟೆಕ್ ಮಹೀಂದ್ರಾ ಮುಖ್ಯಸ್ಥ ಸಿ.ಪಿ. ಗುರ್ನಾನಿ ಅವರು ಶೇಕಡಾ 94ರಷ್ಟು ಇಂಜಿನಿಯರಿಂಗ್ ಪದವೀಧರರು ಉದ್ಯೋಗಕ್ಕೆ ಅರ್ಹರಲ್ಲ ಎಂದು ತಿಳಿಸಿದ್ದರು. ಇತ್ತೀಚಿನ 'ಇಂಡಿಯಾ ಸ್ಕಿಲ್ಸ್ ರಿಪೋರ್ಟ್' ಪ್ರಕಾರ, ಭಾರತದಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚಿನ ಪದವೀಧರರು ಮಾತ್ರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ. ಇದು ಒಂದು ದಶಕದ ಹಿಂದಿನ ಮೂರನೇ ಒಂದು ಭಾಗಕ್ಕೆ ಹೋಲಿಸಿದರೆ ಸುಧಾರಣೆಯಾಗಿದ್ದರೂ, ಇಂದಿಗೂ ದೊಡ್ಡ ಪ್ರಮಾಣದ ಕೊರತೆಯನ್ನು ತೋರಿಸುತ್ತದೆ.
ಸರ್ಕಾರದ ಹೇಳಿಕೆಗಳ ಪ್ರಕಾರ, "ಶೈಕ್ಷಣಿಕ ಕಲಿಕೆ ಮತ್ತು ಉದ್ಯಮದ ಅಗತ್ಯಗಳ ನಡುವಿನ ಈ ಅಂತರವನ್ನು" ಭರ್ತಿ ಮಾಡಲು PMIS ಯೋಜನೆಯನ್ನು ಪ್ರಾರಂಭಿಸಲಾಗಿತ್ತು.
ಮೂಲ ಯೋಜನೆಯ ಪ್ರಕಾರ, ಮೂರು ವರ್ಷಗಳ ಸರಾಸರಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ವೆಚ್ಚದ ಆಧಾರದ ಮೇಲೆ ಆಯ್ಕೆ ಮಾಡಲಾದ ಭಾರತದ ಅಗ್ರ 500 ಕಂಪೆನಿಗಳಲ್ಲಿ 12 ತಿಂಗಳ ಇಂಟರ್ನ್ ಶಿಪ್ ನೀಡಲು ನಿರ್ಧರಿಸಲಾಗಿತ್ತು. 21ರಿಂದ 24 ವರ್ಷ ವಯಸ್ಸಿನ, ಪೂರ್ಣಾವಧಿ ಶಿಕ್ಷಣ ಪಡೆಯದ, ಉದ್ಯೋಗದಲ್ಲಿರದ ಹಾಗೂ ಪ್ರೌಢಶಿಕ್ಷಣ ಪೂರ್ಣಗೊಳಿಸಿದ ಯುವಕರು ಇದಕ್ಕೆ ಅರ್ಹರಾಗಿದ್ದರು. ಕಂಪೆನಿಗಳ ಭಾಗವಹಿಸುವಿಕೆ ಐಚ್ಛಿಕವಾಗಿತ್ತು. ಆಯ್ಕೆಯಾದ ಇಂಟರ್ನ್ಗಳಿಗೆ ಕೆಲಸಕ್ಕೆ ಸೇರಿದಾಗ 6,000 ರೂಪಾಯಿ, ಸರ್ಕಾರಿ ಯೋಜನೆಗಳ ಮೂಲಕ ವಿಮೆ ಹಾಗೂ ತಿಂಗಳಿಗೆ 5,000 ರೂಪಾಯಿ ಭತ್ಯೆ ನಿಗದಿಪಡಿಸಲಾಗಿತ್ತು. ಈ ಮಾಸಿಕ ಭತ್ಯೆಯಲ್ಲಿ ಶೇಕಡಾ 10ರಷ್ಟನ್ನು (500 ರೂಪಾಯಿ) ಕಂಪೆನಿಗಳು ತಮ್ಮ CSR ನಿಧಿಯಿಂದ ಭರಿಸಬೇಕಿತ್ತು. ಉಳಿದ 4,500 ರೂಪಾಯಿಗಳನ್ನು ಸರ್ಕಾರ ನೀಡುತ್ತಿತ್ತು. ತರಬೇತಿ ವೆಚ್ಚವನ್ನು ಕಂಪೆನಿಗಳೇ ವಹಿಸಿಕೊಳ್ಳಬೇಕಿತ್ತು. ಪ್ರಾಯೋಗಿಕ ಯೋಜನೆಯ ಮೊದಲ ಎರಡು ಹಂತಗಳಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗಿತ್ತು. ನಂತರದ ದಿನಗಳಲ್ಲಿ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು.
ಸಂಸತ್ತಿನಲ್ಲಿ ಮಂಡಿಸಲಾದ ಸಚಿವಾಲಯದ ಸ್ಥಾಯಿ ಸಮಿತಿ ವರದಿಗಳ ಪ್ರಕಾರ, ಪೈಲಟ್ ಯೋಜನೆಯ ಮೊದಲ ಹಂತವು 2024ರ ಅಕ್ಟೋಬರ್ 3ರಂದು ಪ್ರಾರಂಭವಾಯಿತು. ಆರಂಭದಲ್ಲಿ 1.8 ಲಕ್ಷ ಅಭ್ಯರ್ಥಿಗಳು 6.21 ಲಕ್ಷ ಅರ್ಜಿಗಳನ್ನು ಸಲ್ಲಿಸಿದ್ದರು. 280 ಕಂಪೆನಿಗಳು 1.27 ಲಕ್ಷ ಇಂಟರ್ನ್ ಶಿಪ್ಗಳನ್ನು ಪ್ರಕಟಿಸಿದ್ದವು. 2025ರ ಆರಂಭದಲ್ಲಿ ಪ್ರಾರಂಭವಾದ ಎರಡನೇ ಹಂತದಲ್ಲಿ, ಭಾಗವಹಿಸಿದ ಕಂಪೆನಿಗಳ ಸಂಖ್ಯೆ 327ಕ್ಕೆ ಏರಿದರೂ, ಪ್ರಕಟಿಸಲಾದ ಇಂಟರ್ನ್ ಶಿಪ್ ಅವಕಾಶಗಳ ಸಂಖ್ಯೆ 1.18 ಲಕ್ಷಕ್ಕೆ ಕುಸಿಯಿತು. ಮಾರ್ಚ್ನಲ್ಲಿ ಆರಂಭವಾದ ಮೂರನೇ ಹಂತದ ಪೈಲಟ್ ಯೋಜನೆ ಪ್ರಸ್ತುತ ಚಾಲನೆಯಲ್ಲಿದೆ. RTI ಉತ್ತರಗಳ ಪ್ರಕಾರ, ಏಪ್ರಿಲ್ 30ರ ವೇಳೆಗೆ ಒಟ್ಟಾರೆಯಾಗಿ 12 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಕಂಪೆನಿಗಳು ಸುಮಾರು 3 ಲಕ್ಷ ಅವಕಾಶಗಳನ್ನು ಪ್ರಕಟಿಸಿವೆ. ಅಭ್ಯರ್ಥಿಗಳಿಗೆ 1.73 ಲಕ್ಷ ಇಂಟರ್ನ್ ಶಿಪ್ ಆಫರ್ಗಳನ್ನು ನೀಡಲಾಗಿದೆ.
ಆದರೆ, ಈ ಎಲ್ಲಾ ಆಫರ್ಗಳ ಪೈಕಿ ಕೇವಲ 18,000 ಇಂಟರ್ನ್ಗಳು ಮಾತ್ರ ಕೆಲಸಕ್ಕೆ ಹಾಜರಾಗಿದ್ದು, ಅಂತಿಮವಾಗಿ ಇಂಟರ್ನ್ ಶಿಪ್ ಪೂರ್ಣಗೊಳಿಸಿದವರು ಕೇವಲ 5,200 ಜನರು.
ಮೊದಲ ಹಂತದಲ್ಲಿ ಸೇರಿದ ಅಭ್ಯರ್ಥಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮಧ್ಯದಲ್ಲೇ ಇಂಟರ್ನ್ ಶಿಪ್ ತೊರೆದಿದ್ದಾರೆ. ಎರಡನೇ ಹಂತದಲ್ಲಿ ಈ ಪ್ರಮಾಣ ಶೇಕಡಾ 33ಕ್ಕೆ ಇಳಿಕೆಯಾಯಿತಾದರೂ, ಕೆಲಸಕ್ಕೆ ಸೇರಿದ ಇಂಟರ್ನ್ಗಳ ಸಂಖ್ಯೆ ಮೊದಲ ಹಂತಕ್ಕಿಂತ ಸುಮಾರು 1,500ರಷ್ಟು ಕಡಿಮೆಯಾಗಿತ್ತು. ಸಚಿವಾಲಯದ RTI ಉತ್ತರದ ಪ್ರಕಾರ, ಒಟ್ಟು 7,600ಕ್ಕೂ ಹೆಚ್ಚು ಅಭ್ಯರ್ಥಿಗಳು ಇಂಟರ್ನ್ ಶಿಪ್ ತೊರೆದಿದ್ದಾರೆ. ಕೇವಲ 5,000 ಜನರು ಮಾತ್ರ ಒಂದು ವರ್ಷದ ಅವಧಿಯನ್ನು ಪೂರ್ಣಗೊಳಿಸಿರುವುದನ್ನು ಗಮನಿಸಿದರೆ, ಇಂಟರ್ನ್ ಶಿಪ್ ತೊರೆದವರ ಸಂಖ್ಯೆ ಇನ್ನಷ್ಟು ಹೆಚ್ಚಿರಬೇಕು. ಆದರೆ ಈ ವ್ಯತ್ಯಾಸಕ್ಕೆ ಸಚಿವಾಲಯ ಸ್ಪಷ್ಟನೆ ನೀಡಿಲ್ಲ. ಇನ್ನು ಕೆಲಸಕ್ಕೆ ಸೇರಿದವರಲ್ಲಿ ಲಿಂಗಾನುಪಾತವೂ ತೀವ್ರ ವ್ಯತ್ಯಾಸದಿಂದ ಕೂಡಿದ್ದು, ಮೊದಲ ಎರಡು ಹಂತಗಳಲ್ಲಿ 11,000ಕ್ಕೂ ಹೆಚ್ಚು ಪುರುಷರು ಮತ್ತು 5,000 ಮಹಿಳಾ ಅಭ್ಯರ್ಥಿಗಳು ಇದ್ದರು.
ಆಯವ್ಯಯದ ಹಂಚಿಕೆ ಮತ್ತು ವೆಚ್ಚದ ವಿವರಗಳು ಸಹ ಯೋಜನೆಯ ನಿರೀಕ್ಷೆ ಮತ್ತು ವಾಸ್ತವದ ನಡುವಿನ ಅಂತರವನ್ನು ಎತ್ತಿಹಿಡಿಯುತ್ತವೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ 2025-26ರ ಅನುದಾನ ಬೇಡಿಕೆಗಳ ಕುರಿತ ಹಣಕಾಸು ಸ್ಥಾಯಿ ಸಮಿತಿಯ ವರದಿಯ ಪ್ರಕಾರ, 2024-25ರ ಬಜೆಟ್ನಲ್ಲಿ PMISಗಾಗಿ ಐದು ವರ್ಷಗಳಲ್ಲಿ ಒಟ್ಟು 63,000 ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿತ್ತು. 1 ಕೋಟಿ ಇಂಟರ್ನ್ ಶಿಪ್ಗಳ ಗುರಿ ತಲುಪಲು, ಮೊದಲ ಎರಡು ವರ್ಷಗಳಲ್ಲಿ 30 ಲಕ್ಷ ಇಂಟರ್ನ್ ಶಿಪ್ಗಳಿಗಾಗಿ 19,000 ಕೋಟಿ ರೂಪಾಯಿ ಹಾಗೂ ಮುಂದಿನ ಮೂರು ವರ್ಷಗಳಲ್ಲಿ 70 ಲಕ್ಷ ಇಂಟರ್ನ್ ಶಿಪ್ಗಳಿಗಾಗಿ 44,000 ಕೋಟಿ ರೂಪಾಯಿ ಹಂಚಿಕೆ ಮಾಡಲು ಯೋಜಿಸಲಾಗಿತ್ತು. ಆದರೆ ಪ್ರಸ್ತುತ ವೆಚ್ಚವು ಈ ಗುರಿಗಿಂತ ಬಹುದೂರ ಉಳಿದಿದೆ.
ಯೋಜನೆ ಪ್ರಾರಂಭವಾದ 2024-25ರ ಆರ್ಥಿಕ ವರ್ಷದಲ್ಲಿ 2,000 ಕೋಟಿ ರೂಪಾಯಿ ಕಾಯ್ದಿರಿಸಲಾಗಿತ್ತು. ನಂತರ ಪರಿಷ್ಕೃತ ಅಂದಾಜಿನಲ್ಲಿ ಇದನ್ನು 380 ಕೋಟಿ ರೂಪಾಯಿಗೆ ಇಳಿಸಲಾಯಿತು. ಇದರಲ್ಲಿ ವಾಸ್ತವವಾಗಿ ವೆಚ್ಚವಾಗಿದ್ದು ಕೇವಲ 29.29 ಕೋಟಿ ರೂಪಾಯಿ ಮಾತ್ರ. ಮುಂದಿನ ಆರ್ಥಿಕ ವರ್ಷವಾದ 2025-26ಕ್ಕೆ 10,831 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಮೀಸಲಿಡಲಾಗಿತ್ತು. ಪರಿಷ್ಕೃತ ಅಂದಾಜಿನಲ್ಲಿ ಇದು 526 ಕೋಟಿ ರೂಪಾಯಿಗೆ ಕುಸಿಯಿತು. 2026ರ ಮಾರ್ಚ್ 30ರ ವೇಳೆಗೆ ಆದ ನೈಜ ವೆಚ್ಚ ಕೇವಲ 94.48 ಕೋಟಿ ರೂಪಾಯಿ. ಮುಖ್ಯ ಯೋಜನೆ ಇನ್ನೂ ಪ್ರಾರಂಭವಾಗದಿರುವುದು ಮತ್ತು ಪ್ರಾಯೋಗಿಕ ಯೋಜನೆ ಮಾತ್ರ ಚಾಲನೆಯಲ್ಲಿರುವುದು ಈ ವ್ಯತ್ಯಾಸಕ್ಕೆ ಕಾರಣ ಎಂದು ಸ್ಥಾಯಿ ಸಮಿತಿ ವರದಿಯಲ್ಲಿ ಸಚಿವಾಲಯ ತಿಳಿಸಿದೆ.
ಈ ಕುರಿತು ಸಚಿವಾಲಯದ ಪ್ರತಿಕ್ರಿಯೆ ಪಡೆಯಲು ಇಮೇಲ್ ಮೂಲಕ ಪ್ರಶ್ನೆಗಳನ್ನು ಕಳುಹಿಸಲಾಗಿತ್ತು. ಹಲವು ಬಾರಿ ಸಂಪರ್ಕಿಸಿದರೂ ಸಚಿವಾಲಯದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ನ್ಯೂಸ್ಲಾಂಡ್ರಿ ವರದಿ ಹೇಳಿದೆ.
►ಕಲ್ಪನೆ vs ಅನುಷ್ಠಾನ
ಸಂದರ್ಶನದಲ್ಲಿ ಮಾತನಾಡಿದ ಹಲವು ತಜ್ಞರು ಮತ್ತು ಇಂಟರ್ನ್ ಗಳ ಪ್ರಕಾರ, ಸೈದ್ಧಾಂತಿಕವಾಗಿ ಇದು ಅತ್ಯುತ್ತಮ ಯೋಜನೆಯಾಗಿತ್ತು. ವಿಶೇಷವಾಗಿ ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಕಾಲಿಡುವ ಹಂತವನ್ನು ಸುಲಭಗೊಳಿಸಲು ಇದು ಸೂಕ್ತವಾಗಿತ್ತು. "ಸಂಸ್ಥೆಗಳಲ್ಲಿ ತರಬೇತಿ ಮೂಲಸೌಕರ್ಯಗಳಿದ್ದರೂ, ಉದ್ಯಮಗಳು ತರಬೇತಿ ನೀಡದ ಹೊರತು ವಿದ್ಯಾರ್ಥಿಗಳಿಗೆ ನೈಜ ಅನುಭವ ಸಿಗುವುದಿಲ್ಲ" ಎಂದು ಈ ಯೋಜನೆಯ ಪಾಲುದಾರ ಸಂಸ್ಥೆಯಾದ 'ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ' (CII) ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಐಐ–ರಾಹುಲ್ ಬಜಾಜ್ ಕೌಶಲ್ಯ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥ ಸೌಗತ ರಾಯ್ ಚೌಧರಿ ಹೇಳುತ್ತಾರೆ. "ನಾವು ಅಪ್ರೆಂಟಿಸ್ಶಿಪ್ ಮಾದರಿಯನ್ನು ವಿಸ್ತರಿಸಲು ಹಾಗೂ CSR ನಿಧಿಯನ್ನು ಬಳಸಿಕೊಳ್ಳುವ ಹೆಚ್ಚು ನಮ್ಯತೆ ಇರುವ ವ್ಯವಸ್ಥೆಗಾಗಿ ಒತ್ತಾಯಿಸುತ್ತಿದ್ದೆವು" ಎಂದು ಅವರು ಹೇಳಿದ್ದಾರೆ.
ಕೌಶಲ್ಯ ಮತ್ತು ಉದ್ಯೋಗಾರ್ಹತೆ ಪರಿಹಾರಗಳನ್ನು ಒದಗಿಸುವ 'ಟೀಮ್ಲೀಸ್ ಎಡ್ಟೆಕ್' ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಶಂತನು ರೂಜ್ ಅವರ ಪ್ರಕಾರ, ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಇಂಟರ್ನ್ ಶಿಪ್ ಅನ್ನು ಒಂದು ಮಾರ್ಗವಾಗಿ ಒದಗಿಸುವುದು ಯೋಜನಾ ದೃಷ್ಟಿಕೋನದಿಂದ ಉತ್ತಮವಾಗಿತ್ತು. ಆದರೆ ಬರೀ ಒಳ್ಳೆಯ ಉದ್ದೇಶಗಳು ಯೋಜನೆಯ ವಿನ್ಯಾಸ ಮತ್ತು ಜಾರಿಯಲ್ಲಿನ ಲೋಪಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಯುವಕರಿಗೆ ಖಾಲಿ ಇರುವ ಹುದ್ದೆಗಳ ಮಾಹಿತಿ ಸಿಕ್ಕರೆ ಸಾಕು, ಸಮಸ್ಯೆ ಪರಿಹಾರವಾಗುತ್ತದೆ ಎಂದು ಕೆಲವು ನೀತಿ ನಿರೂಪಕರು ಭಾವಿಸಿದಂತಿದೆ. ಪ್ರಮುಖ ಸವಾಲುಗಳು ಯೋಜನೆಯ ಕಲ್ಪನೆಯಿಂದ ಬಂದಿಲ್ಲ; ಬದಲಾಗಿ, ಅದನ್ನು ಜಾರಿಗೆ ತಂದ ರೀತಿಯಲ್ಲಿನ ಲೋಪಗಳಿಂದ ಉಂಟಾಗಿವೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಅವರ ಪ್ರಕಾರ, PMIS ಯೋಜನೆ ಎರಡು ಕಾರ್ಯಗಳನ್ನು ಮಾಡಿತು. ಇದು ಇಂಟರ್ನ್ ಶಿಪ್ ಹುಡುಕಾಟವನ್ನು ಸುಲಭಗೊಳಿಸಿತು ಮತ್ತು ಆರ್ಥಿಕ ಪ್ರೋತ್ಸಾಹವನ್ನೂ ನೀಡಿತು. ಆದರೆ, ಇವೆರಡೂ ಹೊಸ ಸವಾಲುಗಳನ್ನು ತಂದೊಡ್ಡಿದವು.
ಮೊದಲನೆಯದಾಗಿ, ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದರೂ, ಉದ್ಯೋಗದಾತ ಕಂಪೆನಿಗಳ ಸಂಖ್ಯೆಯನ್ನು 500ಕ್ಕೆ ಸೀಮಿತಗೊಳಿಸಿದ್ದರಿಂದ ಬಹುತೇಕ ಅವಕಾಶಗಳು ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಮೆಟ್ರೊ ನಗರಗಳಲ್ಲಿ ಕೇಂದ್ರೀಕೃತಗೊಂಡವು. ಬೇರೆ ಊರುಗಳಿಂದ ಬರುವ ಅಭ್ಯರ್ಥಿಗಳಿಗೆ ಆ ನಗರಗಳಲ್ಲಿ ಉಳಿದುಕೊಳ್ಳುವ ವೆಚ್ಚವನ್ನು ಇದೇ ಭತ್ಯೆಯಲ್ಲೇ ಭರಿಸಬೇಕಾದ ಸ್ಥಿತಿ ಇತ್ತು. ಇನ್ನು ಸರ್ಕಾರ ತಿಂಗಳಿಗೆ 4,500 ರೂಪಾಯಿ ನೀಡುವುದು ಒಳ್ಳೆಯ ಆಲೋಚನೆಯಾಗಿದ್ದರೂ, ಹಣ ತಲುಪುವಲ್ಲಿ ಆದ ವಿಳಂಬ ಅಭ್ಯರ್ಥಿಗಳಲ್ಲಿ ನಿರಾಶೆ ಮೂಡಿಸಿತು.
"ಉದಾಹರಣೆಗೆ, ಅಭ್ಯರ್ಥಿಯೊಬ್ಬ ಇಂಟರ್ನ್ ಶಿಪ್ ಗಾಗಿ ಬೆಂಗಳೂರಿಗೆ ಬರುತ್ತಾನೆ. ಆದರೆ ಆತನಿಗೆ ಭತ್ಯೆಯ ಹಣ ತಿಂಗಳ ಮೊದಲ ದಿನ ಅಥವಾ ಏಳನೇ ದಿನದೊಳಗೂ ಬರುವುದಿಲ್ಲ ಎಂದಾದರೆ ಆತ ಬಾಡಿಗೆ ಹೇಗೆ ಪಾವತಿಸುತ್ತಾನೆ? ಆತ ಅದನ್ನು ಬಿಟ್ಟು ಹೋಗುತ್ತಾನೆ ಅಷ್ಟೇ" ಎಂದು ಶಂತನು ಹೇಳುತ್ತಾರೆ.
ಪುಣೆಯ ಫ್ಯುಯೆಲ್ ಕಾಲೇಜಿನ ಬಿಬಿಎ ಪದವೀಧರೆ ಆಕೃತಿ ಸಕ್ಸೇನಾ, PMIS ಮೊದಲ ಪೈಲಟ್ ಹಂತದಲ್ಲಿ 'ಲೆಮನ್ ಟ್ರೀ ಹೋಟೆಲ್ಸ್'ನಲ್ಲಿ ಇಂಟರ್ನ್ ಶಿಪ್ ಪೂರ್ಣಗೊಳಿಸಿದವರು. ಅವರು ಈ ಸಮಸ್ಯೆಯನ್ನು ನೇರವಾಗಿ ಅನುಭವಿಸಿದ್ದಾರೆ. ಪೋರ್ಟಲ್ ಮಂದಗತಿಯಲ್ಲಿದ್ದ ಕಾರಣ ಮತ್ತು ಕಂಪೆನಿಯು ತನ್ನ ಪಾಲಿನ ಹಣ ಬಿಡುಗಡೆ ಮಾಡಿದ್ದನ್ನು ಪೋರ್ಟಲ್ ತಕ್ಷಣ ತೋರಿಸದ ಕಾರಣ ಸರ್ಕಾರದ ಭತ್ಯೆ ವಿಳಂಬವಾಗುತ್ತಿತ್ತು ಎಂದು ಅವರು ಹೇಳುತ್ತಾರೆ. 23 ವರ್ಷದ ಆಕೃತಿ, ಕಂಪೆನಿಯು ಅವರ ಭತ್ಯೆಯನ್ನು ಹೆಚ್ಚುವರಿಯಾಗಿ 3,500 ರೂಪಾಯಿ ಹೆಚ್ಚಿಸಿದ್ದರಿಂದ ಮತ್ತು ಕಾಲೇಜಿನ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಯಿತು. "ಆದರೆ ಬೇರೆ ನಗರಗಳಲ್ಲಿ ಇಂಟರ್ನ್ ಶಿಪ್ ಸಿಕ್ಕವರಿಗೆ 5,000 ರೂಪಾಯಿ ತೀರಾ ಕಡಿಮೆಯಾಗುತ್ತದೆ" ಎಂದು ಅವರು ಅಭಿಪ್ರಾಯಪಡುತ್ತಾರೆ.
ಗ್ರಾಮೀಣ ಭಾಗದ ಶೋಷಿತ ಯುವಕರಿಗೆ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ನೀಡುವ 'ಉನ್ನತಿ ಫೌಂಡೇಶನ್'ನ ನಿರ್ದೇಶಕ ರಮೇಶ್ ಸ್ವಾಮಿ, PMIS ಯೋಜನೆಯ ಕಲ್ಪನೆಯನ್ನು ಮೆಚ್ಚುತ್ತಲೇ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. "ಪೋರ್ಟಲ್ ಒಂದನ್ನು ರಚಿಸಿದರೆ ಸಾಕು, ಎಲ್ಲವೂ ತಾನಾಗಿಯೇ ನಡೆಯುತ್ತದೆ ಎಂದು ಸರ್ಕಾರ ಭಾವಿಸಿತ್ತು. ಆದರೆ ಪ್ರಾಯೋಗಿಕವಾಗಿ ಅದು ಹಾಗಿರುವುದಿಲ್ಲವಲ್ಲವೇ?" ಎಂದು ಅವರು ಹೇಳುತ್ತಾರೆ.
ಸರ್ಕಾರದ ಯೋಜನೆ ಎಂದ ತಕ್ಷಣ ಜನರು ಅರ್ಜಿ ಸಲ್ಲಿಸುತ್ತಾರೆ. ಆದರೆ ಕೆಲಸ ಮಾಡುವ ಯುವಕರೊಂದಿಗೆ ಕೆಲಸ ಮಾಡಿದ ತಮ್ಮ ಅನುಭವದ ಪ್ರಕಾರ, ಇಂಟರ್ನ್ ಶಿಪ್ ಇರುವ ಸ್ಥಳವೇ ದೊಡ್ಡ ಸವಾಲು ಎಂದು ಅವರು ಹೇಳುತ್ತಾರೆ. "ಇಂಟರ್ನ್ ಶಿಪ್ ಗಾಗಿ ಬೇರೆ ಸ್ಥಳಕ್ಕೆ ವಲಸೆ ಹೋಗಲು ಸಿದ್ಧರಿರುವವರ ಪ್ರಮಾಣ ತೀರಾ ಕಡಿಮೆ. ಸಿಗುವ ಭತ್ಯೆಯಲ್ಲಿ ನಗರದ ಜೀವನ ವೆಚ್ಚವನ್ನು ನಿಭಾಯಿಸಲು ಸಾಧ್ಯವೇ ಎಂಬುದನ್ನು ಅವರು ಮೊದಲು ಯೋಚಿಸುತ್ತಾರೆ" ಎಂದಿದ್ದಾರೆ.
ತಮಗೆ ಸಿಕ್ಕ BPCL ಇಂಟರ್ನ್ ಶಿಪ್ ಅನ್ನು ತಿರಸ್ಕರಿಸಲು ಆದರ್ಶ್ ನೀಡಿದ ಕಾರಣಗಳಾದ ಭತ್ಯೆ ಸಾಲದೇ ಇರುವುದು, ದೂರದ ಸ್ಥಳ ಮತ್ತು ಓದಿಗೆ ಸಂಬಂಧಿಸದ ಹುದ್ದೆ ಎಂಬುದು ಬರೀ ಅವರೊಬ್ಬರ ಸಮಸ್ಯೆಯಾಗಿರಲಿಲ್ಲ. ಸಂಸತ್ತಿನಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವೂ ಇದನ್ನು ಒಪ್ಪಿಕೊಂಡಿದೆ. ಅಭ್ಯರ್ಥಿಗಳು 5ರಿಂದ 10 ಕಿ.ಮೀ ಪ್ರಯಾಣದ ಅಂತರವನ್ನು ಸೂಕ್ತವೆಂದು ಭಾವಿಸಿದ್ದಾರೆ. ಬೇರೆ ನಗರಗಳಲ್ಲಿ ಅಥವಾ ಒಂದೇ ನಗರದ ದೂರದ ಸ್ಥಳಗಳಲ್ಲಿ ಇಂಟರ್ನ್ ಶಿಪ್ ಸಿಕ್ಕವರಿಗೆ ಮಾಸಿಕ ಭತ್ಯೆಯು ಜೀವನ ವೆಚ್ಚ ಮತ್ತು ಪ್ರಯಾಣಕ್ಕೆ ಸಾಲುತ್ತಿಲ್ಲ ಎಂಬುದು ಸಚಿವಾಲಯದ ಸ್ವಂತ ಮೌಲ್ಯಮಾಪನದಲ್ಲೇ ಕಂಡುಬಂದಿದೆ.
ಇಂಟರ್ನ್ ಶಿಪ್ ಪೂರ್ಣಗೊಳಿಸಿದವರ ಅಭಿಪ್ರಾಯವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಪುಣೆಯಲ್ಲಿ ಆಕೃತಿಯ ಸಹಪಾಠಿಯಾಗಿದ್ದ ಬಿಬಿಎ ಪದವೀಧರೆ ದಿಯಾ ಸಿಂಗ್, 2024ರ ಡಿಸೆಂಬರ್ನಲ್ಲಿ HPCL ಸಂಸ್ಥೆಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗಕ್ಕೆ ಇಂಟರ್ನ್ ಆಗಿ ಸೇರಿದ್ದರು. "ನನ್ನ ಪಿಜಿಯಿಂದ ಕಚೇರಿಗೆ ತಲುಪಲು 2.5 ಗಂಟೆ ಬೇಕಾಗುತ್ತಿತ್ತು. ಪ್ರಯಾಣ ಮತ್ತು ವೆಚ್ಚಗಳನ್ನು ನಿಭಾಯಿಸುವುದು ಕಷ್ಟವಾಗಿತ್ತು" ಎಂದು 24 ವರ್ಷದ ದಿಯಾ ಹೇಳುತ್ತಾರೆ.
ರೈತ ಹಾಗೂ ಗೃಹಿಣಿಯ ಮಗಳಾದ, ಸರ್ಕಾರಿ ಶಾಲೆಯಲ್ಲಿ ಓದಿದ ದಿಯಾ ಅವರಿಗೆ ತಮ್ಮ ಓದಿಗೆ ನೇರ ಸಂಬಂಧವಿಲ್ಲದಿದ್ದರೂ, ಈ ಇಂಟರ್ನ್ ಶಿಪ್ ಕಾರ್ಪೊರೇಟ್ ಜಗತ್ತಿನ ಅನುಭವ ಪಡೆಯಲು ನೆರವಾಯಿತು. "ಕಚೇರಿಯಲ್ಲಿ ಕೆಲಸ ಮಾಡುವುದು ಹೇಗೆಂಬ ಅರಿವು ಸಿಕ್ಕಿತು. ಇದಕ್ಕಿಂತ ಮೊದಲು ನಾನು ಎಲ್ಲೂ ಒಬ್ಬಳೇ ಹೋಗಿರಲಿಲ್ಲ" ಎನ್ನುತ್ತಾರೆ.
ಒಂದು ವರ್ಷದ ಇಂಟರ್ನ್ ಶಿಪ್ ಅವಧಿ ತೀರಾ ದೀರ್ಘವಾಯಿತು ಎಂಬುದು ಹಲವರ ಅಭಿಪ್ರಾಯವಾಗಿತ್ತು. "ಇದು ಆರು ತಿಂಗಳ ಅವಧಿಯದ್ದಾಗಿರಬೇಕಿತ್ತು. ಆ ನಂತರ ಅವಧಿಯನ್ನು ವಿಸ್ತರಿಸಬೇಕೇ, ಬೇಡವೇ ಎಂಬುದನ್ನು ಕಂಪೆನಿ ತೀರ್ಮಾನಿಸಬಹುದಿತ್ತು" ಎಂದು ಹೋಟೆಲ್ನ ಬ್ಯಾಂಕ್ವೆಟ್ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡಿದ ಆಕೃತಿ ಹೇಳುತ್ತಾರೆ.
ಐಐಎಂ–ಬೆಂಗಳೂರು ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸೇರಿದಂತೆ ನಾಲ್ಕು ಸಂಸ್ಥೆಗಳ ಸಹಯೋಗದೊಂದಿಗೆ ಸಚಿವಾಲಯದ ಸಂಶೋಧನಾ ವಿಭಾಗವು ನಡೆಸಿದ ಮೊದಲ ಹಂತದ ಮೌಲ್ಯಮಾಪನದಲ್ಲಿ ಈ ಎಲ್ಲ ಕಾಳಜಿಗಳೂ ವ್ಯಕ್ತವಾಗಿದ್ದವು. ಅವಧಿಯಲ್ಲಿ ನಮ್ಯತೆ, ಆರ್ಥಿಕ ನೆರವು ಹೆಚ್ಚಳ ಮತ್ತು ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡುವ ಅಗತ್ಯವನ್ನು ಈ ವರದಿ ಪ್ರತಿಪಾದಿಸಿತ್ತು. 2025ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ದೂರವಾಣಿ ಸಮೀಕ್ಷೆ ಹಾಗೂ ಕಂಪೆನಿಗಳು ಮತ್ತು ಇಂಟರ್ನ್ಗಳೊಂದಿಗಿನ ಚರ್ಚೆಯ ಮೂಲಕ ಈ ಮಾಹಿತಿ ಸಂಗ್ರಹಿಸಲಾಗಿತ್ತು.
ಅಭ್ಯರ್ಥಿಗಳ ನಿರಾಸಕ್ತಿ, 21–24 ವರ್ಷಗಳ ವಯೋಮಿತಿ ನಿಗದಿಯಿಂದಾಗಿ 12ನೇ ತರಗತಿ ಮುಗಿಸಿದವರು ಹೊರಗುಳಿದಿರುವುದು ಹಾಗೂ ರಾಜ್ಯ ಮಟ್ಟದಲ್ಲಿ ಜಾಗೃತಿ ಮತ್ತು ಸಂಯೋಜನೆಗೆ ಸೂಕ್ತ ವ್ಯವಸ್ಥೆಯಿಲ್ಲದಿರುವುದು ಸಹ ಹಿನ್ನಡೆಗೆ ಕಾರಣ ಎಂದು ಸ್ಥಾಯಿ ಸಮಿತಿ ವರದಿ ತಿಳಿಸಿದೆ. ಕೆಲಸಕ್ಕೆ ಸೇರಿದ ತಕ್ಷಣ ಸಿಗುವ 6,000 ರೂಪಾಯಿಗಳ ಏಕಕಾಲಿಕ ಪ್ರೋತ್ಸಾಹಧನ ಪಡೆದ ತಕ್ಷಣವೇ ಬಹುತೇಕರು ಇಂಟರ್ನ್ ಶಿಪ್ ತೊರೆದಿದ್ದಾರೆ ಎಂದು ಸಚಿವಾಲಯ ತಿಳಿಸಿರುವುದಾಗಿ 2026ರ ಸ್ಥಾಯಿ ಸಮಿತಿ ವರದಿ ಉಲ್ಲೇಖಿಸಿದೆ.
ಸಚಿವಾಲಯವು ಈ ಕೆಲವು ಲೋಪಗಳನ್ನು ಒಪ್ಪಿಕೊಂಡು ಕೆಲವು ಬದಲಾವಣೆಗಳನ್ನು ಘೋಷಿಸಿತು. ಮೊದಲ ಹಂತದ ಅನುಭವದ ಆಧಾರದ ಮೇಲೆ, ಒಬ್ಬ ಅಭ್ಯರ್ಥಿ ಸಲ್ಲಿಸಬಹುದಾದ ಅರ್ಜಿಗಳ ಸಂಖ್ಯೆಯನ್ನು ಐದರಿಂದ ಮೂರಕ್ಕೆ ಇಳಿಸಲಾಯಿತು. ಕಂಪೆನಿಯ ಹೆಸರು ಮತ್ತು ಹೆಚ್ಚುವರಿ ಸೌಲಭ್ಯಗಳನ್ನು ಸ್ಪಷ್ಟವಾಗಿ ಕಾಣುವಂತೆ ಮಾಡಲಾಯಿತು ಹಾಗೂ ಪ್ರತ್ಯೇಕ PMIS ಸೆಲ್ ಸ್ಥಾಪಿಸಲು ಕಂಪೆನಿ ಮತ್ತು ರಾಜ್ಯಗಳಿಗೆ ಸೂಚಿಸಲಾಯಿತು. ಆದರೆ, ಒಂದು ವರ್ಷದ ಅವಧಿ ತೀರಾ ದೀರ್ಘ ಎಂಬಂತಹ ಪ್ರಮುಖ ದೂರುಗಳಿಗೆ ಪರಿಹಾರ ಸಿಗಲಿಲ್ಲ. ಎರಡನೇ ಹಂತದಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಿದ್ದರೂ, ಅಂತಿಮವಾಗಿ ಕೆಲಸಕ್ಕೆ ಸೇರಿದವರ ಸಂಖ್ಯೆ ಮೊದಲ ಹಂತಕ್ಕಿಂತ ಕಡಿಮೆಯಿತ್ತು.
ನಂತರ, ಈ ವರ್ಷದ ಮಾರ್ಚ್ನಲ್ಲಿ ಪ್ರಾರಂಭವಾದ ಮೂರನೇ ಪೈಲಟ್ ಹಂತದಿಂದ ಜಾರಿಗೆ ಬರುವಂತೆ ಮತ್ತಷ್ಟು ಬದಲಾವಣೆಗಳನ್ನು ಘೋಷಿಸಲಾಯಿತು. ಕಂಪೆನಿಯ ಅಗತ್ಯಕ್ಕೆ ತಕ್ಕಂತೆ ಇಂಟರ್ನ್ ಶಿಪ್ ಅವಧಿಯನ್ನು 6 ಅಥವಾ 9 ತಿಂಗಳಿಗೆ ಬದಲಾಯಿಸುವ ನಮ್ಯತೆ ನೀಡಲಾಯಿತು. ಮಾಸಿಕ ಭತ್ಯೆಯನ್ನು 9,000 ರೂಪಾಯಿಗೆ ಹೆಚ್ಚಿಸಲಾಯಿತು. ವಯೋಮಿತಿಯನ್ನು 21–24ರಿಂದ 18–25 ವರ್ಷಕ್ಕೆ ಸಡಿಲಿಸಲಾಯಿತು. ಭಾಗವಹಿಸುವ ಕಂಪೆನಿಗಳ ವ್ಯಾಪ್ತಿಯನ್ನು ಅಗ್ರ 500ರಿಂದ ಅಗ್ರ 2,000ಕ್ಕೆ ವಿಸ್ತರಿಸಲಾಯಿತು. 1,000 ಕೋಟಿ ರೂಪಾಯಿ ವಹಿವಾಟು ಅಥವಾ 500 ಕೋಟಿ ರೂಪಾಯಿ ನಿವ್ವಳ ಮೌಲ್ಯ ಹೊಂದಿರುವ ಸಂಸ್ಥೆಗಳಿಗೂ ಅವಕಾಶ ನೀಡಲಾಯಿತು. ಕಂಪೆನಿಗಳು ನಿರ್ದಿಷ್ಟ ಸಮಯಕ್ಕೆ ಕಾಯದೆ ನಿರಂತರವಾಗಿ ಖಾಲಿ ಹುದ್ದೆಗಳನ್ನು ಪ್ರಕಟಿಸಲು ಮತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಈ ವರ್ಷದ ಮೇ ಮಧ್ಯದಲ್ಲಿ ನಡೆದ ಉದ್ಯಮ ಶೃಂಗಸಭೆಯೊಂದರಲ್ಲಿ ಮಾತನಾಡಿದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದೀಪ್ತಿ ಗೌರ್ ಮುಖರ್ಜಿ, ಕಂಪೆನಿಗಳು ತಮ್ಮ CSR ಭಾಗವಾಗಿ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಜೊತೆಗೆ, ಸರ್ಕಾರವು ಎಲ್ಲಾ ಸಲಹೆಗಳನ್ನು ಸ್ವೀಕರಿಸಲು ಮುಕ್ತವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಈ ಬದಲಾವಣೆಗಳು ಉದ್ಯಮ ರಂಗಕ್ಕೆ ಹೆಚ್ಚು ಅನುಕೂಲಕರವಾಗಿವೆ ಮತ್ತು PMIS ಈಗ "ಅತ್ಯುತ್ತಮ ಯೋಜನೆ"ಯಾಗಿದೆ ಎಂದು CIIನ ಸೌಗತ ರಾಯ್ ಚೌಧರಿ ಹೇಳುತ್ತಾರೆ. "ಶ್ರೇಷ್ಠ ಸಂಸ್ಥೆಗಳಿಂದ ತರಬೇತಿ ಪಡೆಯುವ ಮಗು ತನ್ನ ಉದ್ಯೋಗಾರ್ಹತೆಯನ್ನು ಹೆಚ್ಚಿಸಿಕೊಳ್ಳುವುದನ್ನು ಕಲ್ಪಿಸಿಕೊಳ್ಳಿ. ಕಂಪೆನಿಗಳು ಯಾವಾಗಲೂ ಪ್ರತಿಭೆಗಳ ಹುಡುಕಾಟದಲ್ಲಿರುತ್ತವೆ. ಇದರ ಮೂಲಕ ಉದ್ಯಮ ವ್ಯವಸ್ಥೆಗೆ ಅಗತ್ಯವಿರುವ ಪ್ರತಿಭೆಗಳನ್ನು ಸಿದ್ಧಪಡಿಸಬಹುದು" ಎಂದು ಅವರು ಅಭಿಪ್ರಾಯಪಡುತ್ತಾರೆ.
ಯೋಜನೆಯನ್ನು ಹೆಚ್ಚು ಜನರಿಗೆ ತಲುಪಿಸಲು ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸಲು PMIS ಈಗ 'ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್' (NCC) ಮತ್ತು 'ಮೇರಾ ಯುವ ಭಾರತ್' ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ. ಅಲ್ಲದೆ, 'ಕ್ಯಾಂಪಸ್ ಮೋಡ್' ಆಯ್ಕೆಯ ಮೂಲಕ ನೇರವಾಗಿ ಕಾಲೇಜುಗಳಿಂದಲೇ ಇಂಟರ್ನ್ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಆದರೆ, ಈ ಬದಲಾವಣೆಗಳು ಯೋಜನೆಯ ನಿಗದಿತ ಗುರಿಯನ್ನು ತಲುಪಲು ಮತ್ತು ಯುವಕರ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಬೃಹತ್ ಉದ್ದೇಶವನ್ನು ಈಡೇರಿಸಲು ಸಾಲುತ್ತವೆಯೇ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಏಕೆಂದರೆ ಇತರ ಸವಾಲುಗಳು ಇನ್ನೂ ಜೀವಂತವಾಗಿವೆ.
►ವ್ಯವಸ್ಥೆಯಲ್ಲಿನ ಲೋಪದೋಷಗಳು
ಲಾಭದ ಸ್ಪಷ್ಟ ಭರವಸೆಯಿಲ್ಲದೆ ಪ್ರತಿವರ್ಷ ನೂರಾರು ಇಂಟರ್ನ್ಗಳಿಗೆ ತರಬೇತಿ ನೀಡಲು ಕಂಪೆನಿಗಳಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿದೆಯೇ ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆಯಾಗಿದೆ.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸುಸ್ಥಿರ ಉದ್ಯೋಗ ಕೇಂದ್ರದ ಮುಖ್ಯಸ್ಥೆ ಮತ್ತು 'ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2026' ವರದಿಯ ಪ್ರಮುಖ ಲೇಖಕಿ ರೋಸಾ ಅಬ್ರಹಾಂ ಅವರ ಪ್ರಕಾರ, ಪ್ರಸ್ತುತ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕಂಪೆನಿಗಳಲ್ಲಿ ಉದ್ಯೋಗ ಕಡಿತ ನಡೆಯುತ್ತಿರುವಾಗ ಇದು ಅತ್ಯಂತ ಸೂಕ್ತ ಪ್ರಶ್ನೆಯಾಗಿದೆ. "ಬೇಡಿಕೆಯಿದ್ದಾಗ ಕಂಪೆನಿಗಳು ಉದ್ಯೋಗಿಗಳಿಗೆ ತರಬೇತಿ ನೀಡಲು ಹಣ ವಿನಿಯೋಗಿಸುತ್ತವೆ. ಅಂದಹಾಗೆ ಪ್ರತಿಯೊಬ್ಬರೂ ಕೆಲಸ ಮಾಡುತ್ತಲೇ ಕಲಿಯುತ್ತಾರೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ತರಬೇತಿ ನೀಡಲು ಕಂಪೆನಿಗಳಿಗೆ ಯಾವುದೇ ಉತ್ತೇಜನವಿಲ್ಲ" ಎಂದು ಅವರು ಹೇಳಿದ್ದಾರೆ.
ಟೀಮ್ಲೀಸ್ ಸಂಸ್ಥೆಯ ಶಂತನು ಅವರ ಪ್ರಕಾರ, ಕಂಪೆನಿಗಳು ತರಬೇತಿಯಲ್ಲಿ ಹೂಡಿಕೆ ಮಾಡಲು ಹಿಂಜರಿಯುವುದಕ್ಕೆ ಮೂರು ಕಾರಣಗಳಿವೆ. "ಮೊದಲನೆಯದಾಗಿ, ನಾನು ತರಬೇತಿ ನೀಡಿದರೂ ಅಭ್ಯರ್ಥಿ ನನ್ನ ಸಂಸ್ಥೆಗೆ ಸೇರುವುದಿಲ್ಲ. ಎರಡನೆಯದಾಗಿ, ತರಬೇತಿ ಪಡೆದರೂ ಅಭ್ಯರ್ಥಿಯಿಂದ ನಿರೀಕ್ಷಿತ ಕೆಲಸ ಸಿಗುವುದಿಲ್ಲ. ಮೂರನೆಯದಾಗಿ, ತರಬೇತಿ ನೀಡಿ ಕೆಲಸಕ್ಕೆ ಸೇರಿಸಿಕೊಂಡ ನಂತರ ಆತ ಬೇರೆ ಸ್ಪರ್ಧಿ ಕಂಪೆನಿಗೆ ಹೊರಟುಹೋಗುತ್ತಾನೆ. ಈ ಕಾರಣಕ್ಕಾಗಿಯೇ ಉದ್ಯೋಗದಾತರು ತರಬೇತಿಗೆ ಹಣ ಖರ್ಚು ಮಾಡಲು ಬಯಸುವುದಿಲ್ಲ. ಬದಲಾಗಿ, ಈಗಾಗಲೇ ತರಬೇತಿ ಪಡೆದ ಅಭ್ಯರ್ಥಿಗೆ ಹೆಚ್ಚಿನ ವೇತನ ನೀಡಲು ಸಿದ್ಧರಿರುತ್ತಾರೆ." ತರಬೇತಿಗೆ ಹಣಕಾಸು ಒದಗಿಸುವ ಈ ಹಿಂಜರಿಕೆಗೆ ಇಂದಿಗೂ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಅವರು ಹೇಳುತ್ತಾರೆ.
ಪ್ರತಿವರ್ಷ ನೂರಾರು ಹೊಸ ಇಂಟರ್ನ್ಗಳನ್ನು ತೆಗೆದುಕೊಳ್ಳುವುದನ್ನು ಕಂಪೆನಿಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಉನ್ನತಿ ಸಂಸ್ಥೆಯ ರಮೇಶ್ ಹೇಳುತ್ತಾರೆ. ನೈಜ ತರಬೇತಿ ನೀಡಲು ಉತ್ತೇಜನ ಸಿಗುವಂತೆ ಕಂಪೆನಿಗಳಿಗೆ ರಿಯಾಯಿತಿಗಳನ್ನು ನೀಡಬೇಕು. "ಉದ್ಯಮ ರಂಗವನ್ನು ನಿಮ್ಮೊಂದಿಗೆ ಕರೆದೊಯ್ಯಬೇಕು. ಅವರ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಇಲ್ಲದಿದ್ದರೆ, ಅವರು ಕೇವಲ ಅಂಕಿ-ಅಂಶಗಳನ್ನು ತೋರಿಸುತ್ತಾರೆಯೇ ವಿನಃ ನೈಜ ಬದಲಾವಣೆ ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.
ಸಚಿವಾಲಯ ಹಂಚಿಕೊಂಡಿರುವ ದತ್ತಾಂಶದ ಪ್ರಕಾರ, ಮೊದಲ ಎರಡು ಪೈಲಟ್ ಹಂತಗಳಲ್ಲಿ HDFC Bank ಅತಿ ಹೆಚ್ಚು ಇಂಟರ್ನ್ಗಳನ್ನು (1,180) ಆಯ್ಕೆ ಮಾಡಿಕೊಂಡಿದೆ. ನಂತರದ ಸ್ಥಾನಗಳಲ್ಲಿ ONGC (1,039) ಮತ್ತು NTPC (1,034) ಸಂಸ್ಥೆಗಳಿವೆ. PMIS ಸರ್ಕಾರಿ ಯೋಜನೆಯಾಗಿರುವುದರಿಂದ ಕಂಪೆನಿಗಳು ಹೆಸರು ನೋಂದಾಯಿಸಿಕೊಳ್ಳಬಹುದು. ಆದರೆ ನಂತರದ ದಿನಗಳಲ್ಲಿ ಅವು ತಮ್ಮದೇ ಆದ ಆಂತರಿಕ ತರಬೇತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತವೆ ಎಂದು ವಾಹನ ತಯಾರಿಕಾ ಸಂಸ್ಥೆಯೊಂದರ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೂಕ್ತ ಅಭ್ಯರ್ಥಿಗಳ ಕೊರತೆಯ ಬಗ್ಗೆಯೂ ಇತರರು ಮಾತನಾಡಿದ್ದಾರೆ. ಮೇ ತಿಂಗಳಿನಲ್ಲಿ ಸಚಿವಾಲಯದ ಕಾರ್ಯದರ್ಶಿ ಉಪಸ್ಥಿತರಿದ್ದ ಉದ್ಯಮ ಶೃಂಗಸಭೆಯಲ್ಲಿ ಟಾಟಾ ಸ್ಟೀಲ್ನ ಉಪಾಧ್ಯಕ್ಷ (ಕಾರ್ಪೊರೇಟ್ ಸರ್ವೀಸಸ್) ಡಿ.ಬಿ. ಸುಂದರ ರಾಮನ್, ಈ ಯೋಜನೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ಯೋಜನೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು ನೆರವಾಗಬಹುದು ಎಂದು ಹೇಳಿದ್ದರು.
ಇನ್ನು ಇಂಟರ್ನ್ ಶಿಪ್ ಅವಧಿಯಲ್ಲಿ ನೀಡಲಾಗುವ ತರಬೇತಿಯ ಸ್ವರೂಪ ಮತ್ತು ಅದರ ಪ್ರಸ್ತುತತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ತಂದೆ ಪಾನ್ ಅಂಗಡಿ ನಡೆಸುತ್ತಿರುವ ಅಸ್ಸಾಂನ ಸಿವಸಾಗರ ಜಿಲ್ಲೆಯ ನಜೀರಾ ನಿವಾಸಿ ಸೈದಾ ಅಝರಾ ಜನ್ನತ್ ಸುಲ್ತಾನಾ, ಹತ್ತಿರದ ONGC ಸಂಸ್ಥೆಯಲ್ಲಿ ತಾವು ಪಡೆದ 12 ತಿಂಗಳ ಇಂಟರ್ನ್ ಶಿಪ್ ಅನ್ನು "ಅದ್ಭುತ ಅನುಭವ" ಎಂದು ಬಣ್ಣಿಸುತ್ತಾರೆ. ನಜೀರಾದಲ್ಲಿ ಬೆಳೆದ ಸೈದಾಗೆ ONGC ಆವರಣದ ಬಾಗಿಲು ದಾಟಿ ಒಳಗೆ ಹೋಗುವುದು ಬಾಲ್ಯದ ಕನಸಾಗಿತ್ತು. PMIS ಯೋಜನೆಗೆ ಧನ್ಯವಾದಗಳು, ಆ ಕನಸು ಕೊನೆಗೂ ನನಸಾಯಿತು ಎಂದು ಅವರು ಹೇಳುತ್ತಾರೆ.
12 ತಿಂಗಳ ಅವಧಿಯಲ್ಲಿ ಅವರು ಮತ್ತು 200ಕ್ಕೂ ಹೆಚ್ಚು ಇಂಟರ್ನ್ಗಳನ್ನು ವಿವಿಧ ವಿಭಾಗಗಳಿಗೆ ನಿಯೋಜಿಸಲಾಯಿತು. ಅವರಿಗೆ ತೈಲ ಮತ್ತು ಅನಿಲ ಉದ್ಯಮದ ಕುರಿತು ವಿವರಿಸಲಾಯಿತು ಹಾಗೂ ರಿಗ್ಗಳಿಗೆ ಕರೆದೊಯ್ಯಲಾಯಿತು. ಇವರಲ್ಲಿ ಕೆಲವರು ಹಣಕಾಸು ಸಚಿವರನ್ನೂ ಭೇಟಿಯಾಗಿದ್ದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಶಿಕ್ಷಣ ವಿಷಯದಲ್ಲಿ ಬಿಎ (ಆನರ್ಸ್) ಮುಗಿಸಿರುವ ಸೈದಾಗೆ 12 ತಿಂಗಳ ನಂತರ ಉದ್ಯೋಗಾವಕಾಶವೇನೂ ಸಿಗಲಿಲ್ಲ. "ಆದರೆ ನಾನು ಹೊಸ ವಿಷಯಗಳನ್ನು ಕಲಿತೆ, ಕಚೇರಿಯ ಜನರೊಂದಿಗೆ ಸಂವಹನ ನಡೆಸಿದೆ, ನನ್ನ ಸಂವಹನ ಕೌಶಲ್ಯವನ್ನು ಸುಧಾರಿಸಿಕೊಂಡೆ. ಈ ಇಂಟರ್ನ್ ಶಿಪ್ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ" ಎಂದು ಅವರು ಹೇಳುತ್ತಾರೆ. ಪ್ರಸ್ತುತ ಅವರು ಪಾಲಿಕ್ಲಿನಿಕ್ ಒಂದರಲ್ಲಿ ಫ್ರಂಟ್ ಆಫೀಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದು, ಈ ಹೊಸ ಉದ್ಯೋಗ ಸಿಗಲು ಇಂಟರ್ನ್ ಶಿಪ್ ಅನುಭವವೇ ಕಾರಣ ಎಂದು ಹೇಳಿದ್ದಾರೆ.
ಸೈದಾ ಅವರು PMIS ಯೋಜನೆಯನ್ನು ಪ್ರಶಂಸಿಸಿ ರೀಲ್ ಒಂದನ್ನು ಮಾಡಿದ್ದರು. ಅದನ್ನು ಸಚಿವಾಲಯದ ಇನ್ಸ್ಟಾಗ್ರಾಮ್ ಖಾತೆ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ONGC ಸೇರಿದಂತೆ ವಿವಿಧ ಕಂಪೆನಿಗಳ ಇಂಟರ್ನ್ಗಳನ್ನು ಒಳಗೊಂಡ ಇಂತಹ ಹಲವು ಪ್ರಶಂಸನೀಯ ವಿಡಿಯೊಗಳು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಇನ್ಸ್ಟಾಗ್ರಾಮ್ ಪುಟದಲ್ಲಿವೆ. ವಿಡಿಯೊದಲ್ಲಿ ಕಾಣಿಸಿಕೊಂಡ ಕನಿಷ್ಠ ಒಬ್ಬ ವಿದ್ಯಾರ್ಥಿಯಾದರೂ, ಇದು ಕಂಪೆನಿಯ ಅಧಿಕಾರಿಯೊಬ್ಬರ (ಅವರ ಮಾರ್ಗದರ್ಶಕರ) ಸಲಹೆಯಂತೆ ವಿಡಿಯೊ ರೆಕಾರ್ಡ್ ಮಾಡಿರುವುದಾಗಿ ತಿಳಿಸಿದ್ದಾರೆ.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ರೋಸಾ ಅವರ ಪ್ರಕಾರ, ನಿರ್ದಿಷ್ಟ ಕಲಿಕೆಯ ಫಲಿತಾಂಶಗಳನ್ನು ನಿಗದಿಪಡಿಸುವುದು, ಕಡ್ಡಾಯಗೊಳಿಸುವುದು ಮತ್ತು ಪರೀಕ್ಷಿಸುವುದು ಮುಖ್ಯವಾಗಿದೆ. ಆಗ ಮಾತ್ರ ಯೋಜನೆಗೆ ಮೌಲ್ಯ ಸಿಗುತ್ತದೆ. ಇಲ್ಲದಿದ್ದರೆ, ಈ ಇಂಟರ್ನ್ ಶಿಪ್ಗಳಿಂದ ಬಂದ ಕಲಿಕೆ ಏನು ಎಂಬುದು ತಿಳಿಯುವುದಿಲ್ಲ. ಬಹುತೇಕ ಇಂಟರ್ನ್ಗಳು ಅವಧಿ ಪೂರ್ಣಗೊಳ್ಳುವ ಮುನ್ನವೇ ಹೊರನಡೆದಿರುವುದು ಇಂಟರ್ನ್ ಶಿಪ್ನ ಗುಣಮಟ್ಟವನ್ನು ತೋರಿಸುತ್ತದೆ. ಕಲಿಕೆ ಇಲ್ಲದಿದ್ದರೆ, ಮಾರ್ಗದರ್ಶನ ಸಿಗದಿದ್ದರೆ, ಸ್ವಲ್ಪ ಭತ್ಯೆ ಸಿಕ್ಕರೂ ಸಹ ಅಲ್ಲಿ ಮುಂದುವರಿಯಲು ಹೆಚ್ಚಿನ ಆಸಕ್ತಿ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
'ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ' ವರದಿಯ ಸಹ-ಲೇಖಕ ತಮೋಘ್ನ ಹಾಲ್ದಾರ್ ಮಾತನಾಡಿ, ಇಂತಹ ಸರ್ಕಾರಿ ಯೋಜನೆಗಳ ಹಠಾತ್ ಹೆಚ್ಚಳವೇ ಗೊಂದಲ ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಉದ್ಯೋಗ ಹಂತಕ್ಕೆ ಯುವಕರನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಸ್ತುತ ಸರ್ಕಾರದ ಆಲೋಚನೆ ಸರಿಯಾದ ದಾರಿಯಲ್ಲಿದೆ. ಆದರೆ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಯೋಜನೆಗಳ ಸಂಖ್ಯೆಯಿಂದಾಗಿ ದಾರಿ ತಪ್ಪಿದಂತಾಗಿದೆ. ಅಭ್ಯರ್ಥಿಗಳು ದಿಕ್ಕು ತೋಚದಂತಾಗುತ್ತಾರೆ ಎಂದಿದ್ದಾರೆ.
ಇಂಟರ್ನ್ ಶಿಪ್ ಅನ್ನು ಮೆಚ್ಚುವ ಅಭ್ಯರ್ಥಿಗಳೂ ಸೇರಿದಂತೆ ಪ್ರತಿಯೊಬ್ಬರಿಗೂ ಉದ್ಯೋಗದ ಅಭಾವವೇ ಪ್ರಮುಖ ಕಾಳಜಿಯಾಗಿದೆ. "ಇಂಟರ್ನ್ ಶಿಪ್ನಲ್ಲಿ ಅಷ್ಟು ಸಮಯ ಕಳೆದ ನಂತರ, ಅದು ಉದ್ಯೋಗವಾಗಿ ಬದಲಾಗಬೇಕು" ಎಂದು ಆಕೃತಿ ಹೇಳುತ್ತಾರೆ. "ಇಲ್ಲದಿದ್ದರೆ ಯಾರೂ ಸೇರಿಕೊಳ್ಳುವುದಿಲ್ಲ."
ಆಕೃತಿಯವರ ಇಂಟರ್ನ್ ಶಿಪ್ ಸೇಲ್ಸ್ ವಿಭಾಗದಲ್ಲಿತ್ತು. ಆದರೆ ಅವರಿಗೆ ಆ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿಯಿರಲಿಲ್ಲ. ಇಂಟರ್ನ್ ಶಿಪ್ ಕೊನೆಯಲ್ಲಿ ಕಂಪೆನಿಯು ಉದ್ಯೋಗಾವಕಾಶ ನೀಡಿದಾಗ ಅವರು ಅದನ್ನು ಸ್ವೀಕರಿಸಲಿಲ್ಲ. ಬದಲಾಗಿ, ಹೆಚ್ಚಿನ ಅಧ್ಯಯನ ನಡೆಸಿ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಲು ಯೋಜಿಸಿದ್ದಾರೆ. ಆದರೆ ಈ ಇಂಟರ್ನ್ ಶಿಪ್ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ನೆರವಾಯಿತು ಎಂದು ಅವರು ಹೇಳುತ್ತಾರೆ.
PMIS ಯೋಜನೆ ಮತ್ತು ಉದ್ಯೋಗ ಸೃಷ್ಟಿಯ ಕುರಿತು ಸಂಸತ್ತಿನಲ್ಲೂ ಪ್ರಶ್ನೆಗಳನ್ನು ಎತ್ತಲಾಗಿದೆ. ಆದರೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಇದನ್ನು ನೇರ ಉದ್ಯೋಗ ನೀಡುವ ಯೋಜನೆ ಎಂದು ಎಂದೂ ಹೇಳಿಕೊಂಡಿಲ್ಲ. ಹಣಕಾಸು ಸಚಿವರು 2025ರ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಇದನ್ನು ಸ್ಪಷ್ಟಪಡಿಸಿದ್ದರು. ಡಿಸೆಂಬರ್ನಲ್ಲಿ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಸಚಿವಾಲಯ, "PM ಇಂಟರ್ನ್ ಶಿಪ್ ಯೋಜನೆಯನ್ನು ಉದ್ಯೋಗ ನೀಡುವ (ಪ್ಲೇಸ್ಮೆಂಟ್) ಉದ್ದೇಶದಿಂದ ವಿನ್ಯಾಸಗೊಳಿಸಲಾಗಿಲ್ಲ. ಆದರೆ ಕಂಪೆನಿಗಳು ತಮ್ಮ ಕೆಲಸದ ಅವಶ್ಯಕತೆ ಮತ್ತು ನೀತಿಗೆ ಅನುಗುಣವಾಗಿ ಅಭ್ಯರ್ಥಿಗಳ ಅರ್ಹತೆಯನ್ನು ಮೌಲ್ಯಮಾಪನ ಮಾಡಿ ಉದ್ಯೋಗಾವಕಾಶ ನೀಡುತ್ತಿವೆ" ಎಂದು ಪುನರುಚ್ಚರಿಸಿತ್ತು.
PMIS ನೇರ ಉದ್ಯೋಗ ನೀಡುವ ಬದಲು, ಕೇವಲ 'ಉದ್ಯೋಗಾರ್ಹತೆ' ಹೆಚ್ಚಿಸುವ ಯೋಜನೆ ಎಂದು ಸ್ಪಷ್ಟವಾಗಿ ಬಿಂಬಿತವಾಗಿರುವುದೇ ಅಭ್ಯರ್ಥಿಗಳು ಆಸಕ್ತಿ ಕಳೆದುಕೊಳ್ಳಲು ಕಾರಣವಾಗಿರಬಹುದು. ಹೆಚ್ಚಿನ ಯುವ ನಿರುದ್ಯೋಗ ಮತ್ತು ಅರೆ ಉದ್ಯೋಗವಿರುವ ಪ್ರಸ್ತುತ ಶ್ರಮಿಕ ಮಾರುಕಟ್ಟೆಯಲ್ಲಿ, ಸ್ಪಷ್ಟ ಉದ್ಯೋಗ ಮಾರ್ಗವಿಲ್ಲದಿರುವುದು ಯೋಜನೆಯ ಆಕರ್ಷಣೆಯನ್ನು ಕುಗ್ಗಿಸುತ್ತದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಸಂಪಾದಕೀಯದಲ್ಲಿ ಹೇಳಲಾಗಿದೆ.
CIIನ ಸೌಗತ ರಾಯ್ ಚೌಧರಿ, PMIS ಮುಂದಿನ ದಿನಗಳಲ್ಲಿ ಉತ್ತಮ ಯಶಸ್ಸು ಕಾಣಲಿದೆ ಎಂಬ ಆಶಾವಾದ ಹೊಂದಿದ್ದಾರೆ. ಕಂಪೆನಿಗಳಿಗೆ ಪ್ರೋತ್ಸಾಹದ ಕೊರತೆಯಿದೆ ಎಂಬ ವಿಷಯಕ್ಕೆ ಉತ್ತರಿಸುವ ಅವರು, ಕಂಪೆನಿಗಳು ಹೇಗಾದರೂ ಮಾಡಿ CSR ನಿಧಿಯನ್ನು ಖರ್ಚು ಮಾಡಲೇಬೇಕಿದೆ ಎಂದಿದ್ದಾರೆ. "ಸರ್ಕಾರವೇ ವೆಚ್ಚದ ಬಹುಪಾಲನ್ನು ಭರಿಸುತ್ತಿರುವಾಗ, ಅನೇಕ ಜನರಿಗೆ ತರಬೇತಿ ನೀಡಲು ಇದಕ್ಕಿಂತ ಉತ್ತಮ ಮಾರ್ಗ ಬೇರೆನಿದೆ? ಎಲ್ಲಾ ಕಂಪೆನಿಗಳಲ್ಲೂ ಮಾನವ ಸಂಪನ್ಮೂಲದ ಅಗತ್ಯವಿದ್ದೇ ಇದೆ" ಎಂದು ಅವರು ಹೇಳುತ್ತಾರೆ.
ತರಬೇತಿಯ ಕಲಿಕಾ ಫಲಿತಾಂಶಗಳು ಮತ್ತು ಮೌಲ್ಯವರ್ಧನೆಗೆ ಕಂಪೆನಿಗಳನ್ನು ಜವಾಬ್ದಾರರನ್ನಾಗಿ ಮಾಡಬೇಕು ಹಾಗೂ ಕಂಪೆನಿಗಳನ್ನು ಆಕರ್ಷಿಸಲು ಸ್ಪಷ್ಟ ಪ್ರೋತ್ಸಾಹಕಗಳನ್ನು ನೀಡಬೇಕು ಎಂದು ರೋಸಾ ಸಲಹೆ ನೀಡುತ್ತಾರೆ. ಟೀಮ್ಲೀಸ್ ಸಂಸ್ಥೆಯ ಶಂತನು ಅವರ ಪ್ರಕಾರ, ಇಂತಹ ಯೋಜನೆಯು ಯಶಸ್ವಿಯಾಗಲು ಕೇವಲ ಇಂಟರ್ನ್ಗಳು ಮತ್ತು ಉದ್ಯೋಗದಾತರನ್ನು ಒಂದೆಡೆ ಸೇರಿಸಿದರೆ ಸಾಲದು; ಶೈಕ್ಷಣಿಕ ಸಂಸ್ಥೆಗಳು ಮತ್ತು ಕೌಶಲ್ಯ ವ್ಯವಸ್ಥೆಗಳನ್ನು ಒಳಗೊಂಡ ಸಮಗ್ರ ವ್ಯವಸ್ಥೆಯ ಅಗತ್ಯವಿದೆ. "ವಿದ್ಯಾರ್ಥಿಗಳು ಇಂಟರ್ನ್ ಶಿಪ್ ಗಾಗಿ ಬೇರೆ ನಗರಗಳಿಗೆ ತೆರಳುವುದನ್ನು ತಪ್ಪಿಸಲು ಹೆಚ್ಚು ಉದ್ಯೋಗದಾತರಿಗೆ ಈ ಯೋಜನೆಯಲ್ಲಿ ಅವಕಾಶ ನೀಡಬೇಕು. ಇವುಗಳನ್ನು ಜಾರಿಗೆ ತರುವುದು ತೀರಾ ಕಷ್ಟದ ಕೆಲಸವೇನಲ್ಲ."
ಭಿಲಾಯ್ನ 22 ವರ್ಷದ ಯುವಕ ಆದರ್ಶ್, ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿದ ನಂತರ ತಮಗೆ ಇಂಟರ್ನ್ ಶಿಪ್ ಗೆ ಸೇರಿಕೊಳ್ಳುವಂತೆ ಕರೆ ಬಂದಿತ್ತು ಎಂದು ಹೇಳುತ್ತಾರೆ. ಆದರೆ ಅವರು ಹೋಗಲು ಇಚ್ಛಿಸಲಿಲ್ಲ.
"ಇಂಟರ್ನ್ ಶಿಪ್ ಕೊನೆಯಲ್ಲಿ ಸಣ್ಣ ನಗರದಲ್ಲಾದರೂ BPCL ಸಂಸ್ಥೆಯಲ್ಲಿ ತಿಂಗಳಿಗೆ 20,000 ರೂಪಾಯಿಯ ಗುತ್ತಿಗೆ ಆಧಾರದ ಕೆಲಸ ಸಿಗುವ ಭರವಸೆಯಿದ್ದರೆ ನಾನು ಸೇರುತ್ತಿದ್ದೆ. ಆ ಅನುಭವದ ಪ್ರಮಾಣಪತ್ರ ಮೌಲ್ಯಯುತವಾಗಿರುತ್ತಿತ್ತು. ಅವರು ಯುವಕರ ನಿರುದ್ಯೋಗದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದರು. ಆದರೆ ಇದು ಈಗಲೂ ಯಶಸ್ವಿಯಾಗುತ್ತದೆ ಎಂದು ನನಗೆ ಅನಿಸುವುದಿಲ್ಲ. ಸರ್ಕಾರ ದೇಶದ ಯುವಕರಿಗಾಗಿ ಅಗತ್ಯವಿರುವಷ್ಟು ಕೆಲಸ ಮಾಡುತ್ತಿಲ್ಲ."
ಯೋಜನೆಯ ಯಶಸ್ಸಿನ ಬಗ್ಗೆ ಅವರು ಇಂದಿಗೂ ಸಂದೇಹ ವ್ಯಕ್ತಪಡಿಸುತ್ತಾರೆ.
(*ಹೆಸರು ಬದಲಿಸಲಾಗಿದೆ)
ಸೌಜನ್ಯ: newslaundry.com