ದಿಲ್ಲಿ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಗಳ ಬಳಕೆ: ಸರ್ಕಾರದ ಪ್ರಮಾಣಿತ ಕಾರ್ಯಾಚರಣೆ ವಿಧಾನ ಏನು ಹೇಳುತ್ತವೆ?

ಶಿವಾನಿ ಕಾವಾ - thenewsminute. com ವರದಿ

Update: 2026-07-31 21:00 IST

Photo Credit : thenewsminute.com


ಜುಲೈ 20ರಂದು ದಿಲ್ಲಿಯ ಜಂತರ್ ಮಂತರ್ ನಲ್ಲಿ ನಡೆದ 'ಚಲೋ ಸಂಸತ್' ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಗಳನ್ನು ಬಳಸಿರುವುದು ಇದೀಗ ತೀವ್ರ ಪರಿಶೀಲನೆಗೆ ಒಳಪಟ್ಟಿದೆ. ನಾಗರಿಕ ಪ್ರತಿಭಟನೆಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಮತ್ತು ದಿಲ್ಲಿ ಪೊಲೀಸರ ಸ್ವಂತ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಅಡಿಯಲ್ಲಿ ಪೆಲೆಟ್ ಗನ್ ಗಳ ಬಳಕೆಗೆ ಅನುಮತಿ ಇದೆಯೇ ಎಂಬ ಪ್ರಶ್ನೆಗಳನ್ನು ಅಧಿಕೃತ ದಾಖಲೆಗಳು ಹಾಗೂ ಸುಪ್ರೀಂ ಕೋರ್ಟ್‌ ಗೆ ಸಲ್ಲಿಕೆಯಾಗಿರುವ ಅರ್ಜಿಯೊಂದು ಎತ್ತಿವೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ದಿಲ್ಲಿ ಪೊಲೀಸರೊಂದಿಗೆ 'ಕೇಂದ್ರ ರಿಸರ್ವ್ ಪೊಲೀಸ್ ಪಡೆ'ಯ ಗಲಭೆ ನಿಗ್ರಹ ವಿಭಾಗವಾದ 'ರ್ಯಾ ಪಿಡ್ ಆಕ್ಷನ್ ಫೋರ್ಸ್' (RAF) ನಿಯೋಜನೆಗೊಂಡಿತ್ತು. ಪೆಲೆಟ್ ಗನ್ ಗಳು ಮತ್ತು ಶಾಕ್ ಬ್ಯಾಟನ್ ಗಳು ಈ ಪಡೆ ಬಳಸುವ ಉಪಕರಣಗಳ ಭಾಗವಾಗಿವೆ.

ಹೊಸದಿಲ್ಲಿಯಲ್ಲಿ ನಿರಾಯುಧ ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್ ಗಳನ್ನು ಬಳಸಿದ್ದು ಇದೇ ಮೊದಲ ಪ್ರಕರಣ ಎಂದು ವರದಿಯಾಗಿದೆ. ಗುರುಗ್ರಾಮ ಮೂಲದ ಕಾರ್ಮಿಕ ಇರ್ಷಾದ್ ಶೇಖ್ (25), ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾಹಿಲ್ ಲೋಚಾಬ್ (19) ಹಾಗೂ 'Outlook' ಪತ್ರಿಕೆಯ 28 ವರ್ಷದ ಪತ್ರಕರ್ತರೊಬ್ಬರು ಪೆಲೆಟ್ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೆಲೆಟ್ ಗುಂಡು ಸಾಹಿಲ್ ಅವರ ಬಲಗಣ್ಣಿಗೆ ಹೊಕ್ಕಿದ್ದು, ಅವರು ದೃಷ್ಟಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ದರ್ಜೆಯ ಅಧಿಕಾರಿಯ ನಿರ್ದೇಶನದ ಮೇರೆಗೆ RAF ಸಿಬ್ಬಂದಿ ಪ್ಲಾಸ್ಟಿಕ್ ಪೆಲೆಟ್ ಗಳನ್ನು ಹೊಂದಿದ್ದ ಗಲಭೆ ನಿಗ್ರಹ ಬಂದೂಕಿನಿಂದ ಎರಡು ರೌಂಡ್ ಗುಂಡು ಹಾರಿಸಿದ್ದಾರೆ ಎಂದು ಜುಲೈ 20ರಂದು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಜನರಲ್ ಡೈರಿ ನಮೂದಿನ ಪ್ರಕಾರ ತಿಳಿಸಲಾಗಿದೆ. ಪ್ರತಿಭಟನೆ ಹತೋಟಿಗೆ ತರುವ ಪ್ರಕ್ರಿಯೆಯಲ್ಲಿ 55 ಎಲೆಕ್ಟ್ರಿಕ್ಯೇತರ ಶೆಲ್ ಗಳು, 15 ಎಲೆಕ್ಟ್ರಿಕ್ ಶೆಲ್ ಗಳು ಮತ್ತು 5 ಅಶ್ರುವಾಯು ಗ್ರೆನೇಡ್ ಗಳನ್ನು ಬಳಸಲಾಗಿದೆ ಎಂದೂ ಡೈರಿ ನಮೂದಿನಲ್ಲಿ ದಾಖಲಿಸಲಾಗಿದೆ.

►ಅಧಿಕೃತ ಪ್ರಮಾಣಿತ ಕಾರ್ಯಾಚರಣೆ ವಿಧಾನ ಏನು ಹೇಳುತ್ತವೆ?

ಜನಸಂದಣಿ ಮತ್ತು ಪ್ರತಿಭಟನೆ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನ ಸಾಮಾನ್ಯವಾಗಿ ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ. ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಸಲ್ಲಿಸಿದ್ದ ಅರ್ಜಿ ಮೂಲಕ 'ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ' (BPRD) ಸಿದ್ಧಪಡಿಸಿದ್ದ 2011ರ SOP ಹೊರಬಂದವು. ದೇಶಾದ್ಯಂತ ಪ್ರತಿಭಟನೆಗಳ ವೇಳೆ ನಡೆದ ಪೊಲೀಸ್ ದೌರ್ಜನ್ಯದ ವರದಿಗಳ ನಂತರ, ಬಲಪ್ರಯೋಗಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳ ವಿವರ ಕೋರಿ ನಾಯಕ್ ಅವರು 2012ರಲ್ಲಿ ಈ ಅರ್ಜಿ ಸಲ್ಲಿಸಿದ್ದರು.

ಈ SOP ಹಂತ ಹಂತವಾಗಿ ಬಲಪ್ರಯೋಗ ಮಾಡುವ ವಿಧಾನವನ್ನು ಸೂಚಿಸುತ್ತದೆ. ಕಾನೂನುಬಾಹಿರವಾಗಿ ಗುಂಪುಗೂಡಿದವರನ್ನು ಚದುರಿಸಲು ಪೊಲೀಸರು ಮೊದಲು ಮಾತುಕತೆ, ಸಂಧಾನ ಮತ್ತು ಎಚ್ಚರಿಕೆಗಳನ್ನು ನೀಡಬೇಕು ಎಂದು ಅದು ನಿರ್ದೇಶಿಸುತ್ತದೆ.

ಆ ಕ್ರಮಗಳು ವಿಫಲವಾದರೆ, ಲಾಠಿ ಚಾರ್ಜ್, ವಾಟರ್ ಕ್ಯಾನನ್, ಅಶ್ರುವಾಯು ಮತ್ತು ಇತರ ಕಡಿಮೆ ಅಪಾಯಕಾರಿ ಅಸ್ತ್ರಗಳಂತಹ ಮಾರಕವಲ್ಲದ ಮಾರ್ಗಗಳನ್ನು ಬಳಸಿ ಕನಿಷ್ಠ ಬಲಪ್ರಯೋಗ ಮಾಡಬಹುದು. ಈ ಕ್ರಮಗಳೂ ನಿಷ್ಪ್ರಯೋಜಕವಾದರೆ ಮಾತ್ರ ಮತ್ತು ಕೊನೆಯ ಆಯ್ಕೆಯಾಗಿ ಬಂದೂಕು ಬಳಕೆಯನ್ನು ಪರಿಗಣಿಸಬಹುದು. ಬಲಪ್ರಯೋಗವು ಪ್ರಮಾಣಬದ್ಧವಾಗಿರಬೇಕು, ಅತ್ಯಂತ ಅಗತ್ಯವಿದ್ದಾಗ ಮಾತ್ರ ಬಳಸಬೇಕು ಮತ್ತು ಹಿಂಸಾಚಾರ ನಿಂತ ತಕ್ಷಣ ಅದನ್ನು ನಿಲ್ಲಿಸಬೇಕು ಎಂದು ನಿಯಮಾವಳಿಯಲ್ಲಿ ತಿಳಿಸಲಾಗಿದೆ. ಗುಂಡು ಹಾರಿಸುವುದು ಅನಿವಾರ್ಯವಾದರೆ, ಸಾಧ್ಯವಾದಷ್ಟು ಸೊಂಟದಿಂದ ಕೆಳಗೆ ಗುರಿ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಗಾಯಗೊಂಡವರಿಗೆ ತಕ್ಷಣ ವೈದ್ಯಕೀಯ ನೆರವು ನೀಡುವುದು, ಹಿಂಸಾಚಾರವನ್ನು ಸಣ್ಣ ಪ್ರದೇಶಕ್ಕೆ ಸೀಮಿತಗೊಳಿಸುವುದು ಮತ್ತು ನಿಯಂತ್ರಣ ಕಾರ್ಯಾಚರಣೆಗಳು ಅಗತ್ಯ ಹಾಗೂ ಪ್ರಮಾಣಬದ್ಧತೆಯ ತತ್ವಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದು ಈ ನಿಯಮಾವಳಿ ಹೇಳುತ್ತದೆ.

2011ರ ಈ SOPಯಲ್ಲಿ ಅನುಮೋದಿತ ಪ್ರತಿಭಟನಾ ನಿಯಂತ್ರಣ ಕ್ರಮಗಳ ಪಟ್ಟಿಯಲ್ಲಿ ಪೆಲೆಟ್ ಗನ್ ಗಳ ಉಲ್ಲೇಖವಿಲ್ಲ.

►ದಿಲ್ಲಿ ಪೊಲೀಸರ ಸ್ಥಾಯಿ ಆದೇಶಗಳು

1989ರ ಜನವರಿಯಲ್ಲಿ ಹೊರಡಿಸಲಾದ ದಿಲ್ಲಿ ಪೊಲೀಸರ ಸ್ಥಾಯಿ ಆದೇಶ ಸಂಖ್ಯೆ 72, ಕಾನೂನುಬಾಹಿರ ಗುಂಪುಗಳನ್ನು ಚದುರಿಸುವಾಗ ಸಂಯಮ, ಶಿಸ್ತು ಮತ್ತು ಕನಿಷ್ಠ ಬಲಪ್ರಯೋಗಕ್ಕೆ ಒತ್ತು ನೀಡುತ್ತದೆ. ಗುಂಪನ್ನು ಚದುರಿಸಲು ಮತ್ತು ಅಗತ್ಯಬಿದ್ದರೆ ಬಲಪ್ರಯೋಗ ಮಾಡಲು ಇದು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ನಿಯೋಜಿತ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಆದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಹಾಗೂ ಜೀವ ಮತ್ತು ಆಸ್ತಿ ಹಾನಿಯನ್ನು ಕನಿಷ್ಠಗೊಳಿಸಲು ಅಧಿಕಾರಿಗಳು "ಅತ್ಯಂತ ಸಂಯಮ ಮತ್ತು ಸಮಾಧಾನದಿಂದ" ವರ್ತಿಸಬೇಕು ಎಂದು ಇದು ಪದೇ ಪದೇ ಪ್ರತಿಪಾದಿಸುತ್ತದೆ.

ಈ ಸ್ಥಾಯಿ ಆದೇಶವು ಕಾರ್ಯಾಚರಣೆಯ ಸುರಕ್ಷತಾ ಕ್ರಮಗಳನ್ನು ಸ್ಪಷ್ಟಪಡಿಸುತ್ತದೆ. ಪಡೆಗಳನ್ನು ಶಿಸ್ತಿನಿಂದ ನಿಯೋಜಿಸುವುದು, ಅಧಿಕಾರ ಶ್ರೇಣಿಯ ಆಜ್ಞೆಗಳನ್ನು ಕಾಯ್ದುಕೊಳ್ಳುವುದು, ರೈಫಲ್, ಮಸ್ಕೆಟ್ ಅಥವಾ ಅಶ್ರುವಾಯು ಬಂದೂಕುಗಳನ್ನು ಹೊಂದಿರುವ ಸಿಬ್ಬಂದಿ ಸರಿಯಾಗಿ ನಿಯೋಜನೆಗೊಳ್ಳುವವರೆಗೆ ಗುಂಡು ಹಾರಿಸದಿರುವುದನ್ನು ಖಚಿತಪಡಿಸುವುದು ಹಾಗೂ ಹೆಲ್ಮೆಟ್ ಮತ್ತು ಗುರಾಣಿಗಳಂತಹ ರಕ್ಷಣಾತ್ಮಕ ಉಪಕರಣಗಳನ್ನು ಸಿಬ್ಬಂದಿ ಧರಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ.

ಅಶ್ರುವಾಯು ಬಂದೂಕುಗಳು ಮತ್ತು ಗ್ರೆನೇಡ್ ಗಳನ್ನು ತರಬೇತಿ ಪಡೆದ ಸಿಬ್ಬಂದಿ ಮಾತ್ರ ಬಳಸಬೇಕು ಎಂದು ಸಹ ಇದು ನಿರ್ದಿಷ್ಟಪಡಿಸುತ್ತದೆ.

ಅಶ್ರುವಾಯು ಅಥವಾ ಬಂದೂಕುಗಳನ್ನು ಬಳಸುವ ಮೊದಲು, ಜನಸಂದಣಿ ಮತ್ತು ಸಶಸ್ತ್ರ ಪಡೆಯ ನಡುವೆ ಇರುವ ಸಿಬ್ಬಂದಿಯನ್ನು ಹಿಂಪಡೆಯಬೇಕು. ಚದುರಿಸುವ ಕಾರ್ಯಾಚರಣೆಯನ್ನು ವೈಯಕ್ತಿಕ ಕ್ರಮದ ಬದಲು ಸಂಘಟಿತ ತಂಡಗಳ ರೂಪದಲ್ಲಿ ನಡೆಸಬೇಕು ಎಂದು ಆದೇಶ ಹೇಳುತ್ತದೆ.

ಇದರಲ್ಲಿ ಪೆಲೆಟ್ ಗನ್ ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

►2022ರ ದಿಲ್ಲಿ ಪೊಲೀಸ್ ಸ್ಥಾಯಿ ಆದೇಶ

2022ರ ಮೇ 25ರಂದು ಅಂದಿನ ಕಮಿಷನರ್ ರಾಕೇಶ್ ಅಸ್ಥಾನಾ ಹೊರಡಿಸಿದ ದಿಲ್ಲಿ ಪೊಲೀಸರ ಸ್ಥಾಯಿ ಆದೇಶ L&O/10/2022, ರಾಜಧಾನಿಯಲ್ಲಿ ರ್ಯಾ ಲಿಗಳು, ಪ್ರತಿಭಟನೆಗಳು ಮತ್ತು ಮೆರವಣಿಗೆಗಳನ್ನು ನಿಯಂತ್ರಿಸಲು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ನೀಡುತ್ತದೆ.

ಈ ಆದೇಶವು ಮೂರು ಹಂತದ ಬ್ಯಾರಿಕೇಡ್ ವ್ಯವಸ್ಥೆಯನ್ನು ಸೂಚಿಸುತ್ತದೆ. ಮೊದಲ ಹಂತದಲ್ಲಿ ಲಾಠಿ ಇಲ್ಲದ, ಕೇವಲ ಹೆಲ್ಮೆಟ್ ಮತ್ತು ಬಾಡಿ ಪ್ರೊಟೆಕ್ಟರ್ ಧರಿಸಿದ ಪೊಲೀಸರು ಇರುತ್ತಾರೆ. ಎರಡನೇ ಹಂತದ ಸಿಬ್ಬಂದಿ ಬೆತ್ತದ ಗುರಾಣಿಗಳನ್ನು ಹೊಂದಿರುತ್ತಾರೆ. ಇನ್ನು ಮೂರನೇ ಹಂತದ ಸಿಬ್ಬಂದಿ ಮಾತ್ರ ಲಾಠಿ ಮತ್ತು ಅಶ್ರುವಾಯು ಸೇರಿದಂತೆ ಸಂಪೂರ್ಣ ದಂಗೆ ನಿಯಂತ್ರಣ ಉಪಕರಣಗಳನ್ನು ಹೊಂದಿರುತ್ತಾರೆ.

ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಮತ್ತು ಕನಿಷ್ಠ ಪ್ರಮಾಣದ ಗಾಯಗಳಾಗುವಂತೆ ಮಾತ್ರ ಬಲಪ್ರಯೋಗ ಮಾಡಬೇಕು ಎಂದು ಸ್ಥಾಯಿ ಆದೇಶ ತಿಳಿಸುತ್ತದೆ. ಬಲಪ್ರಯೋಗಕ್ಕೂ ಮುನ್ನ ಧ್ವನಿವರ್ಧಕಗಳ ಮೂಲಕ ಪದೇ ಪದೇ ಸಾರ್ವಜನಿಕ ಪ್ರಕಟಣೆ ಮಾಡುವುದು, ಕಾರ್ಯಾಚರಣೆಯ ವಿಡಿಯೋಗ್ರಫಿ ಮಾಡುವುದು ಮತ್ತು ಗಾಯಗೊಂಡ ಪ್ರತಿಭಟನಾಕಾರರು ಹಾಗೂ ಪೊಲೀಸ್ ಸಿಬ್ಬಂದಿಗೆ ತಕ್ಷಣದ ವೈದ್ಯಕೀಯ ನೆರವು ನೀಡುವುದನ್ನು ಇದು ಕಡ್ಡಾಯಗೊಳಿಸಿದೆ. ಅಗತ್ಯವಿರುವ ಕಡೆ ವಾಟರ್ ಕ್ಯಾನನ್, ವಜ್ರ ವಾಹನಗಳು ಮತ್ತು ಅಶ್ರುವಾಯು ಬಳಕೆಗೆ ಇದು ಅವಕಾಶ ನೀಡುತ್ತದೆ.

ಹಿಂದಿನ ಕಾರ್ಯವಿಧಾನಗಳಂತೆಯೇ, 2022ರ ಈ ಸ್ಥಾಯಿ ಆದೇಶದಲ್ಲೂ ಜನಸಂದಣಿ ನಿಯಂತ್ರಣ ಉಪಕರಣಗಳ ಪಟ್ಟಿಯಲ್ಲಿ ಪೆಲೆಟ್ ಗನ್ ಗಳನ್ನು ಸೇರಿಸಲಾಗಿಲ್ಲ.

►2016ರ ಅಪವಾದ

ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಕೆಯಿಂದಾದ ಗಾಯಗಳ ಕುರಿತು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು 2016ರಲ್ಲಿ ಪ್ರತ್ಯೇಕ ಪ್ರಮಾಣಿತ ಕಾರ್ಯಾಚರಣೆ ನಿಯಮಾವಳಿಯನ್ನು ರೂಪಿಸಿತು. ಈ ನಿಯಮಾವಳಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಿದ್ದರೂ, ಸಂಸತ್ತಿನಲ್ಲಿ ನೀಡಿದ ಉತ್ತರಗಳ ಮೂಲಕ ಇದರ ವಿವರಗಳು ಬೆಳಕಿಗೆ ಬಂದವು. ಸರ್ಕಾರದ ವಿವರಣೆಯ ಪ್ರಕಾರ, ಹಿಂಸಾತ್ಮಕ ಜನಸಂದಣಿಯನ್ನು ಚದುರಿಸಲು ಭದ್ರತಾ ಪಡೆಗಳು ಮೊದಲು PAVA ಮೆಣಸಿನಪುಡಿ ಶೆಲ್ ಗಳು, ಶಬ್ದ ಮಾಡುವ ಗ್ರೆನೇಡ್ ಗಳು ಮತ್ತು ಹೊಗೆಯ ಶೆಲ್ ಗಳನ್ನು ಬಳಸಬೇಕು. ಈ ಕ್ರಮಗಳು ವಿಫಲವಾದರೆ ಮಾತ್ರ ಪೆಲೆಟ್ ಗನ್ ಗಳನ್ನು ಬಳಸಬಹುದು.

ಫೆಬ್ರವರಿ 2018ರಲ್ಲಿ ಗೃಹ ಸಚಿವಾಲಯವು ರಾಜ್ಯಸಭೆಯಲ್ಲಿ ನೀಡಿದ ವಿವರಣೆಯೂ ಸಹ, ಪೆಲೆಟ್ ಗನ್ ಗಳನ್ನು ಇತರ ಪರ್ಯಾಯಗಳು ವಿಫಲವಾದ ನಂತರವೇ ಬಳಸಬೇಕಾದ ಕೊನೆಯ ಅಸ್ತ್ರ ಎಂದು ಸರ್ಕಾರ ಪರಿಗಣಿಸಿರುವುದನ್ನು ಸೂಚಿಸಿತು.

2018ರ ಫೆಬ್ರವರಿ 7ರಂದು ರಾಜ್ಯಸಭಾ ಸಂಸದ ಪ್ರೊಫೆಸರ್ ಎಂ.ವಿ. ರಾಜೀವ್ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಲೆಟ್ ಗನ್ ಗಳ ಬಳಕೆಯ ಕುರಿತು ಕಳವಳಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, 2016ರ ಜುಲೈ 26ರಂದು ಪರ್ಯಾಯಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿತ್ತು ಎಂದು ತಿಳಿಸಿತು.

ಸಮಿತಿಯ ಶಿಫಾರಸುಗಳನ್ನು ಸ್ವೀಕರಿಸಲಾಗಿದೆ ಹಾಗೂ ಹಿಂಸಾತ್ಮಕ ಪ್ರತಿಭಟನಾಕಾರರನ್ನು ಚದುರಿಸಲು ಪೆಲೆಟ್ ಗನ್ ಗಳ ಬಳಕೆಗೆ ಮೊದಲು PAVA ಮೆಣಸಿನಪುಡಿ ಶೆಲ್ ಮತ್ತು ಗ್ರೆನೇಡ್ ಗಳು, STUN-LAC ಶೆಲ್ ಮತ್ತು ಗ್ರೆನೇಡ್ ಹಾಗೂ ಅಶ್ರುವಾಯು ಶೆಲ್ ಗಳಂತಹ ಪರ್ಯಾಯಗಳನ್ನು ಭದ್ರತಾ ಪಡೆಗಳು ನಿಯೋಜಿಸುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿತು.

2018ರ ಮಾರ್ಚ್ 27ರಂದು ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ, ಗೃಹ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಪೆಲೆಟ್ ಗನ್ ಗಳ ಬಳಕೆಯನ್ನು ಮುಂದುವರಿಸಿದೆ ಎಂದು ಖಚಿತಪಡಿಸಿತು. ದಂಗೆ ನಿಯಂತ್ರಣ ತರಬೇತಿ, ಶಸ್ತ್ರಾಸ್ತ್ರ ಮತ್ತು ಉಪಕರಣಗಳ ಬಳಕೆ, ಕಾನೂನು-ಸುವ್ಯವಸ್ಥೆ ನಿರ್ವಹಣೆ ಹಾಗೂ ಕಡಿಮೆ-ಪ್ರಾಣಾಪಾಯಕಾರಿ ಮದ್ದುಗುಂಡುಗಳ ಶೂಟಿಂಗ್ ಅಭ್ಯಾಸ ಸೇರಿದಂತೆ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳು ಶಾಂತಿ ಮರುಸ್ಥಾಪಿಸಲು, ಹಿಂಸಾತ್ಮಕ ಕಾನೂನುಬಾಹಿರ ಗುಂಪುಗಳನ್ನು ಚದುರಿಸಲು ಮತ್ತು ಜೀವಹಾನಿಯನ್ನು ಕನಿಷ್ಠಗೊಳಿಸಲು "ಬಲಪ್ರಯೋಗ ನೀತಿ" ಆಧಾರಿತ ನಿಯಮಾವಳಿಯನ್ನು ಅಳವಡಿಸಿಕೊಂಡಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಈ ಬಾರಿ, ಪ್ರತಿಭಟನೆಯ ಸಮಯದಲ್ಲಿ ಪೆಲೆಟ್ ಗನ್ ಬಳಸಿರುವುದನ್ನು ದಿಲ್ಲಿ ಪೊಲೀಸರು ನಿರಾಕರಿಸಿದ್ದಾರೆ. ಆದರೆ, ಸ್ಥಳದಲ್ಲಿದ್ದ RAF ಪಡೆಯ ಸಿಬ್ಬಂದಿಯೊಬ್ಬರು 12-ಬೋರ್ ಪೆಲೆಟ್ ಗನ್ ಹಿಡಿದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಪೆಲೆಟ್ ಗನ್ನ ಏಟಿನಿಂದ ಗಾಯಗೊಂಡಿರುವುದಾಗಿ ಪ್ರತಿಭಟನಾಕಾರರು ತಮ್ಮ ಗಾಯದ ಫೋಟೋ ಮತ್ತು ಆಸ್ಪತ್ರೆಯ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ RAF ಪಡೆಯ ಸಿಬ್ಬಂದಿ ಪೆಲೆಟ್ ಗನ್ ಬಳಸಿದ್ದಾರೆಯೇ ಎಂಬುದರ ಕುರಿತು ಕೇಂದ್ರ ಮೀಸಲು ಪೊಲೀಸ್ ಪಡೆ ತನಿಖೆ ಪ್ರಾರಂಭಿಸಿದೆ.

ನಾಗರಿಕ ಜನಸಂದಣಿ ನಿಯಂತ್ರಣಕ್ಕೆ ಪೆಲೆಟ್ ಗನ್ ಬಳಸುವುದನ್ನು ನಿಷೇಧಿಸಬೇಕು ಎಂದು ಕೋರಿ ಗುಪ್ತಚರ ಇಲಾಖೆಯ ಮಾಜಿ ವಿಶೇಷ ನಿರ್ದೇಶಕ ಯಶೋವರ್ಧನ್ ಆಜಾದ್ ಮತ್ತು ಗಾಯಗೊಂಡ ಇಬ್ಬರು ಪ್ರತಿಭಟನಾಕಾರರು ಸಲ್ಲಿಸಿದ ಅರ್ಜಿಯ ಮೂಲಕ ಈ ವಿಷಯ ಈಗ ಸುಪ್ರೀಂ ಕೋರ್ಟ್ ತಲುಪಿದೆ. ಗೃಹ ಸಚಿವಾಲಯದ ನಿಯಮಾವಳಿಯಾಗಲಿ ಅಥವಾ ರ್ಯಾ ಲಿ ಮತ್ತು ಪ್ರತಿಭಟನೆಗಳನ್ನು ನಿಯಂತ್ರಿಸುವ ದಿಲ್ಲಿ ಪೊಲೀಸರ ಸ್ಥಾಯಿ ಆದೇಶಗಳಾಗಲಿ, ಪೆಲೆಟ್ ಗನ್ ಬಳಕೆಗೆ ಅಧಿಕಾರ ನೀಡುವುದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಸೌಜನ್ಯ: thenewsminute.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News