ರೂಪಾಯಿ ಮೌಲ್ಯ ಕುಸಿತ ತಡೆಯಲು RBIನಿಂದ ಸುಮಾರು 7 ಬಿಲಿಯನ್ ಡಾಲರ್ ಮಾರಾಟ!

Update: 2026-07-31 22:00 IST

Photo Credit : PTI 

ಭಾರತೀಯ ರೂಪಾಯಿಯ ಮೌಲ್ಯ ಕುಸಿತ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ಶುಕ್ರವಾರ ಸುಮಾರು 7 ಬಿಲಿಯನ್ ಡಾಲರ್ ಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಿದೆ. ಇತ್ತೀಚಿನ ತಿಂಗಳುಗಳಲ್ಲಿ RBI ನಡೆಸಿದ ಅತಿದೊಡ್ಡ ನೇರ ಮಾರುಕಟ್ಟೆ ಹಸ್ತಕ್ಷೇಪಗಳಲ್ಲಿ ಇದು ಒಂದಾಗಿದೆ ಎಂದು ವಿಷಯ ತಿಳಿದಿರುವ ಮೂಲಗಳು ತಿಳಿಸಿವೆ.

ರೂಪಾಯಿಯ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಹತ್ತಿರವಾಗುತ್ತಿದ್ದಂತೆಯೇ, ದೇಶೀಯ ಮತ್ತು ವಿದೇಶಿ ಮಾರುಕಟ್ಟೆಗಳೆರಡರಲ್ಲೂ RBI ಡಾಲರ್ ಮಾರಾಟ ಮಾಡುವ ಮೂಲಕ ಮಧ್ಯಪ್ರವೇಶ ಮಾಡಿದೆ. ಆದರೆ ಡಾಲರ್ ಮಾರಾಟದ ಕುರಿತು ದೃಢೀಕರಣ ಕೋರಿ ನಡೆಸಿದ ಕರೆಗಳು ಮತ್ತು ಇಮೇಲ್ ಗಳಿಗೆ RBI ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಬ್ಲೂಮ್ಬರ್ಗ್ ವರದಿ ಉಲ್ಲೇಖಿಸಿದೆ.

ಈ ತಿಂಗಳ ಆರಂಭದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು ಏಷ್ಯಾದ ತೈಲ ಆಮದುದಾರ ದೇಶಗಳಿಗೆ ತೀವ್ರ ಹೊಡೆತ ನೀಡಿದೆ. ಇದರಿಂದಾಗಿ ಫಿಲಿಪೈನ್ಸ್ ನ ಆರ್ಥಿಕ ಸಂಸ್ಥೆಗಳು ಸಹ ತಮ್ಮ ದೇಶದ ಹಣದ ಮೌಲ್ಯ ರಕ್ಷಣೆಗೆ ಮಾರುಕಟ್ಟೆಗೆ ಧುಮುಕಿದ್ದವು. ಭಾರತದಲ್ಲಿ ಶುಕ್ರವಾರದ ಹಸ್ತಕ್ಷೇಪದ ನಂತರವೂ RBI ಮುಂದಿನ ಎರಡು ವಹಿವಾಟು ದಿನಗಳಲ್ಲಿ ಡಾಲರ್ ಮಾರಾಟ ಮುಂದುವರಿಸಿದ್ದು, ರೂಪಾಯಿಯ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳಲು ನೆರವಾಗಿದೆ.

ಡಾಲರ್ ಮಾರಾಟದ ಈ ಬೃಹತ್ ಪ್ರಮಾಣದ ಮಾರಾಟವು ರೂಪಾಯಿಗೆ ಬೆಂಬಲ ನೀಡಲು RBI ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ. ರೂಪಾಯಿಯ ಮೌಲ್ಯ ಗುರುವಾರ ಪ್ರತಿ ಡಾಲರ್ಗೆ 95.7437 ರಂತೆ ವಹಿವಾಟು ನಡೆಸಿತು. ಇದು ತನ್ನ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕಿಂತ ಸುಮಾರು ಶೇ 1.3 ರಷ್ಟು ಸುಧಾರಣೆ ಕಂಡಿದೆ.

ಶುಕ್ರವಾರ ತೈವಾನ್ ನ ಕೇಂದ್ರ ಬ್ಯಾಂಕ್ ಕೂಡ ಡಾಲರ್ ಖರೀದಿಸುವ ಆದೇಶಗಳನ್ನು ಹಿಂಪಡೆಯುವಂತೆ ಕೆಲವು ಬ್ಯಾಂಕ್ ಗಳಿಗೆ ಸೂಚಿಸುವ ಮೂಲಕ ತನ್ನ ದೇಶದ ಹಣದ ಮೌಲ್ಯ ರಕ್ಷಣೆಗೆ ಮುಂದಾಗಿತ್ತು. ಮತ್ತೊಂದೆಡೆ, ಕಳೆದ ವಾರ ಪೆಸೊ ಮೌಲ್ಯ ಕಾಪಾಡಲು ಫಿಲಿಪೈನ್ಸ್ ಬ್ಯಾಂಕ್ ಸಣ್ಣ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು ಎಂದು ಅಲ್ಲಿನ ಗವರ್ನರ್ ಎಲಿ ರೆಮೊಲೋನಾ ಮಂಗಳವಾರ ತಿಳಿಸಿದ್ದಾರೆ.

ಬಂಡವಾಳ ಹರಿವನ್ನು ಹೆಚ್ಚಿಸಲು RBI ಇತ್ತೀಚೆಗೆ ತೆಗೆದುಕೊಂಡ ಕ್ರಮಗಳು ಅದರ ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸಿವೆ. ಇದು ರೂಪಾಯಿಯ ಮೌಲ್ಯ ರಕ್ಷಿಸಲು RBIಗೆ ಹೆಚ್ಚಿನ ಶಕ್ತಿ ನೀಡಿದೆ. ಈ ಕ್ರಮಗಳಿಗೆ ಇಲ್ಲಿಯವರೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಬ್ಯಾಂಕ್ ಗಳು 32 ಬಿಲಿಯನ್ ಡಾಲರ್ ಸಂಗ್ರಹಿಸಿವೆ ಎಂದು RBI ಗವರ್ನರ್ ಸಂಜಯ್ ಮಲ್ಹೋತ್ರಾ ಈ ವಾರದ ಆರಂಭದಲ್ಲಿ 'ದಿ ಹಿಂದೂ ಬಿಸಿನೆಸ್ ಲೈನ್'ಗೆ ತಿಳಿಸಿದ್ದಾರೆ.

ಜುಲೈ 17ರ ವೇಳೆಗೆ ಭಾರತದ ವಿದೇಶಿ ವಿನಿಮಯ ಸಂಗ್ರಹವು 676.2 ಬಿಲಿಯನ್ ಡಾಲರ್ಗಳಷ್ಟಿದ್ದು, ಮೂರು ವಾರಗಳಲ್ಲಿ 9 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ಏರಿಕೆ ಕಂಡಿದೆ.

►ಅಮೆರಿಕನ್ ಡಾಲರ್ ಎದುರು 15 ಪೈಸೆ ಚೇತರಿಸಿಕೊಂಡು 95.35ಕ್ಕೆ ತಲುಪಿದ ರೂಪಾಯಿ ಮೌಲ್ಯ

ವಿದೇಶಿ ಬಂಡವಾಳದ ಹರಿವು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನ ಬೆಂಬಲದ ಪರಿಣಾಮವಾಗಿ, ಶುಕ್ರವಾರ (ಜುಲೈ 31) ಅಮೆರಿಕನ್ ಡಾಲರ್ ಎದುರು ರೂಪಾಯಿಯ ಮೌಲ್ಯವು 15 ಪೈಸೆ ಏರಿಕೆಯಾಗಿ 95.35ಕ್ಕೆ (ತಾತ್ಕಾಲಿಕ) ಸ್ಥಿರಗೊಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಅಮೆರಿಕನ್ ಡಾಲರ್ ಬಲವರ್ಧನೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ವಿದೇಶಿ ವಿನಿಮಯ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದ್ದು, ರೂಪಾಯಿಯ ಹೆಚ್ಚಿನ ಚೇತರಿಕೆಗೆ ತಡೆಯೊಡ್ಡಿದೆ ಎಂದು ವಿದೇಶಿ ವಿನಿಮಯ ತಜ್ಞರು ತಿಳಿಸಿದ್ದಾರೆ.

ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ರೂಪಾಯಿ ಮೌಲ್ಯವು 95.40ರಲ್ಲಿ ವಹಿವಾಟು ಆರಂಭಿಸಿತು. ದಿನದ ವಹಿವಾಟಿನಲ್ಲಿ 95.25ರಿಂದ 95.46ರ ನಡುವೆ ಏರಿಳಿತ ಕಂಡುಬಂದ ನಂತರ, ಅಂತಿಮವಾಗಿ ಹಿಂದಿನ ದಿನದ ಮಟ್ಟಕ್ಕಿಂತ 15 ಪೈಸೆ ಚೇತರಿಸಿಕೊಂಡು 95.35ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು.

ಗುರುವಾರ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು 26 ಪೈಸೆ ಏರಿಕೆಯಾಗಿ 95.50ಕ್ಕೆ ತಲುಪಿತ್ತು. ಈ ಮೂಲಕ ರೂಪಾಯಿಯು ಸತತ ಐದನೇ ದಿನವೂ ಚೇತರಿಕೆಯ ಹಾದಿಯಲ್ಲಿ ಮುಂದುವರಿದಿದೆ.

►ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆಯೂ ರೂಪಾಯಿ ಚೇತರಿಕೆ

ಸ್ವಲ್ಪ ದಿನಗಳ ವಿಶ್ರಾಂತಿಯ ನಂತರ, ಯುದ್ಧ ಮತ್ತೆ ಭುಗಿಲೇಳುವ ಭೀತಿ ಎದುರಾಗಿದ್ದು, ಮತ್ತಷ್ಟು ದೇಶಗಳಿಗೆ ಸಂಘರ್ಷ ಹರಡುವ ಮುನ್ಸೂಚನೆ ಸಿಕ್ಕಿದೆ. ಜೋರ್ಡಾನ್ ದೇಶವು ಸತತ ಎರಡನೇ ದಿನವೂ ಇರಾನ್ ನ ಕ್ಷಿಪಣಿಗಳನ್ನು ತಡೆದು ಧ್ವಂಸಗೊಳಿಸಿರುವುದಾಗಿ ತಿಳಿಸಿದೆ. ಇತ್ತ ಕುವೈತ್ ದೇಶದ ಉತ್ತರ ಭಾಗದಲ್ಲಿ ನಡೆದ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

"ಈ ವಾರ RBI ಸತತವಾಗಿ ಡಾಲರ್ ಮಾರಾಟ ಮಾಡುತ್ತಿರುವುದರಿಂದ ರೂಪಾಯಿ ಮೌಲ್ಯ ಬಲಗೊಳ್ಳುತ್ತಿದೆ. ಇದರ ಜೊತೆಗೆ ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರ (FPI) ಹಣದ ಹರಿವು ಕೂಡ ರೂಪಾಯಿಯ ಸ್ಥಿರತೆ ಮತ್ತು ಬೆಳವಣಿಗೆಗೆ ಕಾರಣವಾಗಿದೆ. ಕಳೆದ ಮೂರು ದಿನಗಳಲ್ಲಿ ವಿದೇಶಿ ಹೂಡಿಕೆದಾರರು 7,360 ಕೋಟಿ ರೂ. ಮೌಲ್ಯದ ಈಕ್ವಿಟಿಗಳನ್ನು ಖರೀದಿಸಿದ್ದಾರೆ. ಸತತವಾಗಿ ಷೇರು ಮಾರಾಟ ಮಾಡುತ್ತಿದ್ದ ಹೂಡಿಕೆದಾರರು ಈಗ ಖರೀದಿ ಕಡೆಗೆ ಒಲವು ತೋರಿರುವುದು ದೇಶೀಯ ಕರೆನ್ಸಿ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ" ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಕಂಪೆನಿಯ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿರುವುದಾಗಿ The Hindu ವರದಿ ಉಲ್ಲೇಖಿಸಿದೆ.

"ಡಾಲರ್ ಮೌಲ್ಯ ಕುಸಿತ ಹಾಗೂ ಅಮೆರಿಕದ ಫೆಡರಲ್ ರಿಸರ್ವ್ನ ಸೌಮ್ಯ ನಿಲುವಿನಿಂದಾಗಿ ರೂಪಾಯಿ ಮೌಲ್ಯವು ಸಣ್ಣ ಮಟ್ಟದ ಏರಿಕೆಯ ಹಾದಿಯಲ್ಲಿರಲಿದೆ ಎಂದು ಭಾವಿಸುತ್ತೇವೆ. ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ವಾತಾವರಣ ಮತ್ತು ವಿದೇಶಿ ಬಂಡವಾಳ ಹರಿವು ಕೂಡ ರೂಪಾಯಿಗೆ ಬೆಂಬಲ ನೀಡಬಹುದು. ಆದರೆ, ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯು ಹೆಚ್ಚಿನ ಮಟ್ಟದ ಚೇತರಿಕೆಗೆ ತಡೆಯೊಡ್ಡಬಹುದು" ಎಂದು ಮಿರೇ ಅಸೆಟ್ ಷೇರ್ಖಾನ್ ಕಂಪೆನಿಯ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

ಡಾಲರ್ ಎದುರು ರೂಪಾಯಿಯ ಮೌಲ್ಯವು 95 ರೂ. ರಿಂದ 95.60 ರೂ. ವ್ಯಾಪ್ತಿಯಲ್ಲಿ ವಹಿವಾಟು ನಡೆಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಆರು ಪ್ರಮುಖ ಕರೆನ್ಸಿಗಳ ಎದುರು ಅಮೆರಿಕನ್ ಡಾಲರ್ನ ಸಾಮರ್ಥ್ಯವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇ 0.28ರಷ್ಟು ಏರಿಕೆಯಾಗಿ 100.14ಕ್ಕೆ ತಲುಪಿದೆ.

ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಶೇ 0.42ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ ಗೆ 89.40 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.

ದೇಶೀಯ ಷೇರು ಮಾರುಕಟ್ಟೆಯಲ್ಲಿ, ಸೆನ್ಸೆಕ್ಸ್ 166.49 ಅಂಕಗಳಷ್ಟು (ಶೇ 0.21) ಏರಿಕೆಯಾಗಿ 78,094.64ಕ್ಕೆ ಸ್ಥಿರಗೊಂಡರೆ, ನಿಫ್ಟಿ 66.45 ಅಂಕಗಳಷ್ಟು (ಶೇ 0.27) ಚೇತರಿಸಿಕೊಂಡು 24,383.60 ಅಂಕಗಳಿಗೆ ತಲುಪಿದೆ.

ಷೇರು ವಿನಿಮಯ ಕೇಂದ್ರದ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ನಿವ್ವಳ ಆಧಾರದ ಮೇಲೆ 3,623.51 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News