ಏನಿದು ಸಮುದ್ರ ಮಂಥನ - ರಾಷ್ಟ್ರೀಯ ಕಡಲಾಚೆಯ ಅನ್ವೇಷಣೆ ಯೋಜನೆ?; ಭಾರತ 84,084 ಕೋಟಿ ರೂ. ಹೂಡಿಕೆ ಮಾಡುತ್ತಿರುವುದೇಕೆ?
Photo: Pexels
ಜಾಗತಿಕ ಭೂರಾಜಕೀಯ ಅನಿಶ್ಚಿತತೆಗಳು ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ದೇಶೀಯ ಇಂಧನ ಉತ್ಪಾದನೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ಶುಕ್ರವಾರ 'ಸಮುದ್ರ ಮಂಥನ - ರಾಷ್ಟ್ರೀಯ ಕಡಲಾಚೆಯ ಅನ್ವೇಷಣೆ ಯೋಜನೆ'ಗೆ ಅನುಮೋದನೆ ನೀಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ 2030-31ರ ಹಣಕಾಸು ವರ್ಷದವರೆಗೆ 84,084 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ.
ಆಳಸಮುದ್ರ ಮತ್ತು ಅತಿ ಆಳದ ಸಮುದ್ರ ಭಾಗಗಳಲ್ಲಿ ಕೊರೆಯುವಿಕೆ, ಭೂಕಂಪನ ಸಮೀಕ್ಷೆ ಹಾಗೂ ಹೊಸ ಶೋಧನೆಗಳಿಂದ ಉತ್ಪಾದನೆ ಉತ್ತೇಜಿಸಲು ಬೇಕಾಗುವ ಜಂಟಿ ಮೂಲಸೌಕರ್ಯ ನಿರ್ಮಾಣಕ್ಕೆ ತಗುಲುವ ಭಾರೀ ವೆಚ್ಚವನ್ನು ಹಂಚಿಕೊಳ್ಳುವ ಮೂಲಕ ಕಡಲಾಚೆಯ ತೈಲ ಮತ್ತು ಅನಿಲ ಅನ್ವೇಷಣೆಗೆ ಪ್ರೋತ್ಸಾಹ ನೀಡಲು ಈ ಯೋಜನೆ ರೂಪಿಸಲಾಗಿದೆ.
ಈ ಕಾರ್ಯಕ್ರಮದ ಭಾಗವಾಗಿ, ಹೆಚ್ಚಿನ ಆರ್ಥಿಕ ಅಪಾಯ ಮತ್ತು ಅಸ್ಪಷ್ಟ ವಾಣಿಜ್ಯ ಲಾಭದ ಸಾಧ್ಯತೆಗಳಿರುವ ಆಳಸಮುದ್ರ ಹಾಗೂ ಅತಿ ಆಳದ ಸಮುದ್ರ ಪ್ರದೇಶಗಳಲ್ಲಿ ಕೊರೆಯಲಾಗುವ ಪ್ರತಿ ಪ್ರಾಯೋಗಿಕ ಶೋಧನಾ ಬಾವಿಗೆ (ಎಕ್ಸ್‌ಪ್ಲೋರೇಟರಿ ವೆಲ್) ಕೇಂದ್ರ ಸರ್ಕಾರವು 650 ಕೋಟಿ ರೂಪಾಯಿವರೆಗೆ ಆರ್ಥಿಕ ನೆರವು ನೀಡಲಿದೆ.
ಯೋಜನೆಯ ಒಟ್ಟು ಮೊತ್ತದಲ್ಲಿ ಸಿಂಹಪಾಲು, ಅಂದರೆ 43,200 ಕೋಟಿ ರೂಪಾಯಿಯನ್ನು ಮುಂದಿನ ಐದು ವರ್ಷಗಳಲ್ಲಿ ಆಳಸಮುದ್ರದ ಕೊರೆಯುವಿಕೆ (ಡ್ರಿಲ್ಲಿಂಗ್) ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಉಳಿದಂತೆ ಕಡಲಾಚೆಯ ಡೇಟಾ ಸಂಗ್ರಹಣೆಗೆ 28,534 ಕೋಟಿ ರೂ., ಜಂಟಿ ಉತ್ಪಾದನೆ ಹಾಗೂ ಸಾಗಣೆ ಮೂಲಸೌಕರ್ಯಕ್ಕಾಗಿ 10,000 ಕೋಟಿ ರೂಪಾಯಿ ಮತ್ತು ತೈಲ ಹಾಗೂ ಅನಿಲ ತಯಾರಿಕಾ ಮತ್ತು ಸೇವಾ ಕೇಂದ್ರಗಳ ಸ್ಥಾಪನೆಗೆ 2,000 ಕೋಟಿ ರೂ. ವಿನಿಯೋಗಿಸಲಾಗುವುದು.
1,500 ಮೀಟರ್‌ಗಿಂತಲೂ ಹೆಚ್ಚು ಆಳವಿರುವ ಅತಿ ಆಳದ ಸಮುದ್ರ ಭಾಗಗಳಲ್ಲಿ (ಅಲ್ಟ್ರಾ-ದೀಪ್‌ವಾಟರ್) ಒಂದು ಬಾವಿ ಕೊರೆಯಲು 950 ಕೋಟಿ ರೂಪಾಯಿಯಿಂದ 2,400 ಕೋಟಿ ರೂಪಾಯಿವರೆಗೆ ವೆಚ್ಚವಾಗುತ್ತದೆ. ವಾಣಿಜ್ಯಿಕವಾಗಿ ಲಾಭದಾಯಕ ತೈಲ ಅಥವಾ ಅನಿಲ ಸಿಗುವ ಯಾವುದೇ ಖಾತ್ರಿ ಇಲ್ಲದಿರುವುದರಿಂದ ಈ ಕಾರ್ಯಕ್ಕೆ ಭಾರಿ ಮೊತ್ತ ವ್ಯಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿರುವುದಾಗಿ Deccan Herald ವರದಿ ಮಾಡಿದೆ.
ಅಪಾರ ಸಂಪನ್ಮೂಲಗಳನ್ನು ಹೊಂದಿದ್ದರೂ ಇನ್ನು ಶೋಧನೆಯಾಗದೆ ಉಳಿದಿರುವ ಆಳಸಮುದ್ರದ ಪ್ರದೇಶಗಳಲ್ಲಿ ತೈಲ ಮತ್ತು ಅನಿಲ ಹುಡುಕಾಟವನ್ನು ಚುರುಕುಗೊಳಿಸಿ, ದೇಶದ ಇಂಧನ ಭದ್ರತೆಯನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಸಮುದ್ರ ಮಂಥನ ಎಂಬ ಹೆಸರು ಹಿಂದೂ ಪೌರಾಣಿಕ ಕಥೆಯಾದ 'ಸಮುದ್ರ ಮಂಥನ'ದಿಂದ (ಸಮುದ್ರವನ್ನು ಕಡೆದು ಅಡಗಿರುವ ನಿಧಿಯನ್ನು ಹುಡುಕುವುದು) ಪ್ರೇರಿತವಾಗಿದೆ.
ಸರ್ಕಾರದ ಮಾಹಿತಿಯ ಪ್ರಕಾರ, 2025 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದ್ದ ಕಡಲಾಚೆಯ ಇಂಧನ ಸಾಮರ್ಥ್ಯವನ್ನು ಬಳಸಿಕೊಳ್ಳುವ 'ಆಧುನಿಕ ಸಮುದ್ರ ಮಂಥನ'ದ ಪರಿಕಲ್ಪನೆಗೆ ಈ ಯೋಜನೆ ರೂಪ ನೀಡಿದೆ.
ಪ್ರಸ್ತುತ ಭಾರತವು ತನ್ನ ಬಳಕೆಯ ಶೇಕಡಾ 88 ರಿಂದ 89 ರಷ್ಟು ಕಚ್ಚಾ ತೈಲ ಮತ್ತು ಸುಮಾರು ಅರ್ಧದಷ್ಟು ನೈಸರ್ಗಿಕ ಅನಿಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಇಂಧನದ ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತಿದ್ದು, ವಿದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಈ ಯೋಜನೆ ಸಹಕಾರಿಯಾಗಲಿದೆ.
ಭಾರತಕ್ಕೆ 'ಸಮುದ್ರ ಮಂಥನ' ಯಾಕೆ ಬೇಕು?
ಭಾರತವು ತೈಲ ಮತ್ತು ನೈಸರ್ಗಿಕ ಅನಿಲವನ್ನು ಹೊಂದಿರಬಹುದಾದ ಹಲವಾರು ಕಡಲಾಚೆಯ ಶೇಖರಣಾ ಜಲಾನಯನ ಪ್ರದೇಶಗಳನ್ನು ಹೊಂದಿದೆ. ತಾಂತ್ರಿಕ ಸವಾಲುಗಳು, ಭಾರೀ ವೆಚ್ಚ ಹಾಗೂ ಅಪಾಯ ಹೆಚ್ಚಿರುವ ಕಾರಣ ಇವುಗಳಲ್ಲಿ ಹೆಚ್ಚಿನ ಪ್ರದೇಶಗಳು ಇನ್ನು ಶೋಧನೆಯಾಗದೆ ಉಳಿದಿವೆ.
ಈ ಯೋಜನೆಯಡಿ ಸರ್ಕಾರವು ಬೃಹತ್ ಪ್ರಮಾಣದ ಸಿಲ್ಮಾಯಿಕ್ (ಭೂಕಂಪನ) ಸಮೀಕ್ಷೆಗಳು, ಭೂವೈಜ್ಞಾನಿಕ ಅಧ್ಯಯನಗಳು, ಎಕ್ಸ್‌ಪ್ಲೋರೇಟರಿ ಡ್ರಿಲ್ಲಿಂಗ್ ಮತ್ತು ಕಡಲಾಚೆಯ ಮೂಲಸೌಕರ್ಯಗಳ ಅಭಿವೃದ್ಧಿಯಂತಹ ಪ್ರಮುಖ ಆರಂಭಿಕ ಹಂತದ ಕಾರ್ಯಗಳಿಗೆ ಅನುದಾನ ನೀಡಲಿದೆ.
ಹೈಡ್ರೋಕಾರ್ಬನ್ ಸಂಪನ್ಮೂಲಗಳನ್ನು ಗುರುತಿಸಬಲ್ಲ ಹಾಗೂ ಕಡಲಾಚೆಯ ಇಂಧನ ಶೋಧನೆಯಲ್ಲಿ ಹೆಚ್ಚಿನ ಹೂಡಿಕೆಯನ್ನು ಉತ್ತೇಜಿಸಬಲ್ಲ ಉನ್ನತ ಮಟ್ಟದ ಭೂವೈಜ್ಞಾನಿಕ ಡೇಟಾ ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ.
ಈ ಕಾರ್ಯಕ್ರಮವು ಭಾರತದ ಕಡಲಾಚೆಯ ಇಂಧನ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ, ತೈಲ ಮತ್ತು ಅನಿಲ ವಲಯದ ವಿವಿಧ ಹಂತಗಳಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ.
'ಸಮುದ್ರ ಮಂಥನ' ಯೋಜನೆಯಡಿ ಏನೇನು ನಡೆಯಲಿದೆ?
ಯೋಜನೆಯ ಭಾಗವಾಗಿ, ಆಳಸಮುದ್ರ ಮತ್ತು ಅತಿ ಆಳದ ಸಮುದ್ರ ಭಾಗಗಳಲ್ಲಿ ಶೋಧನಾ ಕೊರೆಯುವಿಕೆ ಕೈಗೊಳ್ಳುವ ಮುನ್ನ, ಆಧುನಿಕ ತಂತ್ರಜ್ಞಾನ ಬಳಸಿ ಕಡಲಾಚೆಯ ಪ್ರದೇಶಗಳ ವ್ಯವಸ್ಥಿತ ಭೂಪಟ ತಯಾರಿಸಲಾಗುತ್ತದೆ.
ಇದರ ಜೊತೆಗೆ, ಹೊಸ ಜಲಾನಯನ ಪ್ರದೇಶಗಳಲ್ಲಿ ವೈಜ್ಞಾನಿಕ ಕೊರೆಯುವಿಕೆ, ಕಡಲಾಚೆಯ ಉತ್ಪಾದನೆ ಹಾಗೂ ಸಾಗಣೆ ಮೂಲಸೌಕರ್ಯ, ಸಂಯೋಜಿತ ತೈಲ ಮತ್ತು ಅನಿಲ ತಯಾರಿಕಾ ಹಾಗೂ ಸೇವಾ ವಲಯ, ಸುಧಾರಿತ ತಂತ್ರಜ್ಞಾನಗಳು, ಡಿಜಿಟಲ್ ನಿರ್ವಹಣೆ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಗಳು ಇದರಲ್ಲಿ ಸೇರಿವೆ.
ಈ ಯೋಜನೆಯಿಂದ 600 ಮಿಲಿಯನ್ ಟನ್‌ಗಿಂತಲೂ ಹೆಚ್ಚಿನ 'ಆಯಿಲ್ ಇಕ್ವಿವಲೆಂಟ್' (MMTOE) ಹೈಡ್ರೋಕಾರ್ಬನ್ ಸಂಗ್ರಹವನ್ನು ಗುರುತಿಸಲು ನೆರವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
ವಾಣಿಜ್ಯ ಮಟ್ಟದ ಉತ್ಪಾದನೆಗೆ ಇನ್ನು ಹಲವು ವರ್ಷಗಳು ಬೇಕಾಗಬಹುದು. ಈ ಅನ್ವೇಷಣೆಗಳು ಯಶಸ್ವಿಯಾದರೆ, ಭಾರತದ ಇಂಧನ ಆಮದು ಅವಲಂಬನೆ ಕಡಿಮೆಯಾಗಲಿದೆ. ಜೊತೆಗೆ ದೀರ್ಘಕಾಲದ ಇಂಧನ ಭದ್ರತೆ ಬಲಗೊಂಡು, ಹೂಡಿಕೆಗಳು ಹರಿದುಬರಲಿವೆ, ಉದ್ಯೋಗ ಸೃಷ್ಟಿಯಾಗಲಿದೆ ಹಾಗೂ ದೇಶದ ಕಡಲಾಚೆಯ ಇಂಧನ ಸಾಮರ್ಥ್ಯಕ್ಕೆ ಹೆಚ್ಚಿನ ಬಲ ಸಿಗಲಿದೆ.