ಪರಿಹಾರ ನೀಡಲು ಒಪ್ಪಿದ Johnson & Johnson; ಟಾಲ್ಕಮ್ ಪೌಡರ್ ನಿಜವಾಗಿಯೂ ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆಯೇ?
ನಿಮ್ಮ ಟಾಲ್ಕಮ್ ಪೌಡರ್ ಎಷ್ಟು ಸುರಕ್ಷಿತ?
Photo Credit: PTI File Photo
ಜಾನ್ಸನ್ & ಜಾನ್ಸನ್ (J&J) ಸಂಸ್ಥೆಯು ತನ್ನ ಟಾಲ್ಕಮ್ ಪೌಡರ್ ಉತ್ಪನ್ನಗಳು ಅಸ್ಬೆಸ್ಟಾಸ್‌ನಿಂದ ಕಲುಷಿತಗೊಂಡಿದ್ದವು ಮತ್ತು ಇವುಗಳ ಬಳಕೆಯಿಂದ ಅಂಡಾಶಯದ ಕ್ಯಾನ್ಸರ್ ಸೇರಿದಂತೆ ಇತರ ಕಾಯಿಲೆಗಳು ಉಂಟಾಗಿವೆ ಎಂಬ ದಾವೆಗಳನ್ನು ಬಗೆಹರಿಸಿಕೊಳ್ಳಲು ಬಿಲಿಯನ್ ಡಾಲರ್‌ಗಳ ಪರಿಹಾರ ನೀಡಲು ಒಪ್ಪಿಕೊಂಡಿದೆ.
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪರಿಹಾರ ಒಪ್ಪಂದಗಳಲ್ಲಿ ಒಂದಾದ ಈ ನಿರ್ಧಾರವು, ಹಲವು ವರ್ಷಗಳ ಕಾನೂನು ಹೋರಾಟ, ವೈಜ್ಞಾನಿಕ ಸಾಕ್ಷ್ಯಗಳ ಭಿನ್ನಾಭಿಪ್ರಾಯ ಮತ್ತು ಕಂಪನಿಗೆ ಎದುರಾದ ಸರಣಿ ಹಿನ್ನಡೆಗಳ ನಂತರ ಹೊರಬಿದ್ದಿದೆ.
ದಶಕಗಳಿಂದ ಈ ಫಾರ್ಮಾಸ್ಯುಟಿಕಲ್ ದೈತ್ಯ ಸಂಸ್ಥೆಯು ಟಾಲ್ಕ್ ಆಧಾರಿತ ಬೇಬಿ ಪೌಡರ್ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿತ್ತು. ಟಾಲ್ಕ್‌ನಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಸ್ಬೆಸ್ಟಾಸ್ ಅಂಶವಿತ್ತು ಮತ್ತು ಈ ಉತ್ಪನ್ನಗಳ ಸುದೀರ್ಘ ಬಳಕೆಯಿಂದ ಅಂಡಾಶಯದ ಕ್ಯಾನ್ಸರ್ ಹಾಗೂ 'ಮೆಸೊಥೆಲಿಯೋಮಾ' (ದೇಹದ ಒಳಭಾಗದ ಅಂಗಗಳನ್ನು ಆವರಿಸಿರುವ ತೆಳುವಾದ ಅಂಗಾಂಶದಲ್ಲಿ ಕಾಣಿಸಿಕೊಳ್ಳುವ ಅಪರೂಪದ ಹಾಗೂ ತೀವ್ರ ಮಾದರಿಯ ಕ್ಯಾನ್ಸರ್) ಉಂಟಾಗಿದೆ ಎಂದು ಸಾವಿರಾರು ಗ್ರಾಹಕರು ಆರೋಪಿಸಿದ್ದರು. ಆದರೆ, ತನ್ನ ಉತ್ಪನ್ನಗಳು ಸುರಕ್ಷಿತವಲ್ಲ ಎಂಬ ಆರೋಪವನ್ನು ಕಂಪನಿಯು ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ದೀರ್ಘಕಾಲದ ವೆಚ್ಚದಾಯಕ ಕಾನೂನು ಹೋರಾಟವನ್ನು ಕೊನೆಗೊಳಿಸಲು ಮತ್ತು ಸಂತ್ರಸ್ತರಿಗೆ ಹಾಗೂ ಷೇರುದಾರರಿಗೆ ಸ್ಪಷ್ಟತೆ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
2020 ರಲ್ಲಿ ಅಮೆರಿಕ ಮತ್ತು ಕೆನಡಾದಲ್ಲಿ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು J&J ಸ್ಥಗಿತಗೊಳಿಸಿತ್ತು. ನಂತರ 2023 ರಲ್ಲಿ ಜಾಗತಿಕವಾಗಿ ಟಾಲ್ಕ್ ಆಧಾರಿತ ಬೇಬಿ ಪೌಡರ್ ಅನ್ನು ಪೂರ್ಣವಾಗಿ ಸ್ಥಗಿತಗೊಳಿಸಿ, ಅದರ ಬದಲಿಗೆ ಜೋಳದ ಹಿಟ್ಟು (ಕಾರ್ನ್‌ಸ್ಟಾರ್ಚ್) ಆಧಾರಿತ ಪೌಡರ್ ಅನ್ನು ಮಾರುಕಟ್ಟೆಗೆ ತಂದಿತು.
ನಿಮ್ಮ ಟಾಲ್ಕಮ್ ಪೌಡರ್ ಎಷ್ಟು ಸುರಕ್ಷಿತ?
ಅಸ್ಬೆಸ್ಟಾಸ್ ಹೊಂದಿಲ್ಲದ ಟಾಲ್ಕ್ ಅನ್ನು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC), ಮಾನವರಲ್ಲಿ ದೊರೆತಿರುವ ಸೀಮಿತ ಸಾಕ್ಷ್ಯಗಳು ಹಾಗೂ ಪ್ರಾಣಿಗಳ ಮೇಲಿನ ಅಧ್ಯಯನಗಳ ಆಧಾರದ ಮೇಲೆ ಅಂಡಾಶಯದ ಕ್ಯಾನ್ಸರ್‌ಗೆ "ಮಾನವರಲ್ಲಿ ಕ್ಯಾನ್ಸರ್ ತರಬಲ್ಲ ಸಂಭಾವ್ಯ ವಸ್ತು" (ಗ್ರೂಪ್ 2A) ಎಂದು ವರ್ಗೀಕರಿಸಿದೆ.
"ಟಾಲ್ಕ್ ಖಚಿತವಾಗಿ ಕ್ಯಾನ್ಸರ್ ಉಂಟುಮಾಡುವ (ಅಥವಾ ಗ್ರೂಪ್ 1) ವಸ್ತುವಾಗಿದೆ ಎಂದು ಹೇಳಲು ಪೂರಕ ಸಾಕ್ಷ್ಯಗಳಿಲ್ಲ. ನೆನಪಿನ ಆಧಾರದ ಮೇಲೆ ಮಾಹಿತಿ ಸಂಗ್ರಹಿಸುವ ಅಧ್ಯಯನಗಳಿಗಿಂತ ದೀರ್ಘಕಾಲಿಕವಾಗಿ ಗಮನಿಸುವ ಅಧ್ಯಯನಗಳು ಅಂಡಾಶಯದ ಕ್ಯಾನ್ಸರ್ ಅಪಾಯ ಹೆಚ್ಚಿರುವುದಕ್ಕೆ ಯಾವುದೇ ಬಲವಾದ ವೈಜ್ಞಾನಿಕ ಸಾಕ್ಷ್ಯವನ್ನು ನೀಡಿಲ್ಲ" ಎಂದು ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ಸೆಂಟರ್ ಫಾರ್ ಕ್ಯಾನ್ಸರ್ ಎಪಿಡೆಮಿಯಾಲಜಿ (CCE) ಉಪ ನಿರ್ದೇಶಕರಾದ ಡಾ. ಗೌರವಿ ಮಿಶ್ರಾ ತಿಳಿಸಿದ್ದಾರೆ.
ಸೌಂದರ್ಯವರ್ಧಕ ಟಾಲ್ಕ್ ಮತ್ತು ಅಸ್ಬೆಸ್ಟಾಸ್ ನಡುವಿನ ವ್ಯತ್ಯಾಸವೇನು? ಟಾಲ್ಕ್‌ನಲ್ಲಿ ಅಸ್ಬೆಸ್ಟಾಸ್ ಕಲುಷಿತಗೊಳ್ಳುವುದು ಹೇಗೆ?
ಟಾಲ್ಕ್ ಮತ್ತು ಅಸ್ಬೆಸ್ಟಾಸ್ ಎರಡೂ ನೈಸರ್ಗಿಕವಾಗಿ ಒಂದೇ ಭೂಗರ್ಭದ ಶೇಖರಣೆಗಳಲ್ಲಿ ಒಟ್ಟಿಗೆ ಸಿಗುವ ಸಿಲಿಕೇಟ್ ಖನಿಜಗಳಾಗಿವೆ. 19 ನೇ ಶತಮಾನದ ಕೊನೆಯಿಂದಲೂ ಈ ಭೂವೈಜ್ಞಾನಿಕ ಸಂಬಂಧವನ್ನು ದಾಖಲಿಸಲಾಗಿದೆ. "ಆದ್ದರಿಂದ ಟಾಲ್ಕ್‌ನಲ್ಲಿ ಅಸ್ಬೆಸ್ಟಾಸ್ ಕಲುಷಿತಗೊಳ್ಳುವುದು ಅದನ್ನು ಹೊರತೆಗೆಯುವ ಗಣಿಯ ಮೇಲ್ಮೈ ಹಾಗೂ ಪರಿಶೀಲನೆಯ ಕಟ್ಟುನಿಟ್ಟಿನ ಮೇಲೆ ಅವಲಂಬಿತವಾಗಿದೆಯೇ ಹೊರತು, ಗ್ರಾಹಕರು ಬಳಸುವ ಟಾಲ್ಕ್ ಉತ್ಪನ್ನದ ಸ್ವಭಾವದಿಂದಲ್ಲ. ಭಾರತದಲ್ಲಿ ಅಸ್ಬೆಸ್ಟಾಸ್ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಸೂಕ್ಷ್ಮ ಪ್ರಮಾಣದ ಅಸ್ಬೆಸ್ಟಾಸ್ ಅನ್ನು ಖಚಿತವಾಗಿ ಗುರುತಿಸಲು ಪ್ರಸ್ತುತ ಇರುವ ಪರೀಕ್ಷೆಗಳು ಸಾಲುತ್ತಿಲ್ಲ. ಹೀಗಾಗಿ ಯಾವುದೇ ನಿಯಂತ್ರಣ ಮಂಡಳಿಯು ನಿಖರವಾದ ಪರೀಕ್ಷಾ ವಿಧಾನವನ್ನು ಪ್ರಸ್ತುತ ಶಿಫಾರಸು ಮಾಡಿಲ್ಲ" ಎಂದು ಸಿಸಿಇಯ ಪ್ರಿವೆಂಟಿವ್ ಆಂಕಾಲಜಿ ವಿಭಾಗದ ಹಿರಿಯ ವೈದ್ಯರಾದ ಡಾ. ಅಶ್ವಿನ್ ಸತ್ಯನ್ ಹೇಳಿದ್ದಾರೆ.
ವರ್ಷಗಳಿಂದ ಟಾಲ್ಕಮ್ ಪೌಡರ್ ಬಳಸುತ್ತಿರುವವರು ಆತಂಕ ಪಡಬೇಕೇ?
ದೀರ್ಘಕಾಲದಿಂದ ಟಾಲ್ಕಮ್ ಪೌಡರ್ ಬಳಸುತ್ತಿರುವವರು ಭಯಪಡುವ ಅಗತ್ಯವಿಲ್ಲ. IARC ಮತ್ತು ಇತರ ಸ್ವತಂತ್ರ ಪರಿಶೀಲನೆಗಳು ಇದನ್ನೇ ಸ್ಪಷ್ಟಪಡಿಸಿವೆ. "ಸೂಕ್ತ ವೈದ್ಯಕೀಯ ತಪಾಸಣೆ ಇಲ್ಲದೆ, ಹಿಂದೆ ಬಳಸಿದ ಪೌಡರ್ ಅನ್ನು ಪ್ರಸ್ತುತ ಕಾಣಿಸಿಕೊಳ್ಳುವ ರೋಗಲಕ್ಷಣಗಳಿಗೆ ಕಾರಣ ಎಂದು ಭಾವಿಸಬಾರದು. ಕುಟುಂಬದಲ್ಲಿ ಅಂಡಾಶಯ ಅಥವಾ ಸ್ತನ ಕ್ಯಾನ್ಸರ್‌ನ ಇತಿಹಾಸವಿರುವ ಮಹಿಳೆಯರು ಈ ಬಗ್ಗೆ ತಮ್ಮ ವೈದ್ಯರೊಂದಿಗೆ ಸಮಾಲೋಚಿಸುವುದು ಒಳಿತು" ಎಂದು ಡಾ. ಮಿಶ್ರಾ ಸಲಹೆ ನೀಡಿದ್ದಾರೆ.
ಟಾಲ್ಕಮ್ ಪೌಡರ್ ಬಳಕೆಯ ಕುರಿತು ಪ್ರಸ್ತುತ ಇರುವ ಮಾರ್ಗದರ್ಶಿ ಸೂತ್ರಗಳೇನು?
ಜನನಾಂಗದ ಭಾಗಗಳು ಸೇರಿದಂತೆ ದೇಹದ ಯಾವುದೇ ಭಾಗದಲ್ಲಿ ಟಾಲ್ಕಮ್ ಪೌಡರ್ ಬಳಸುವುದನ್ನು ಯಾವುದೇ ಪ್ರಮುಖ ನಿಯಂತ್ರಣ ಅಥವಾ ವೈಜ್ಞಾನಿಕ ಸಂಸ್ಥೆಯು ನಿಷೇಧಿಸಿಲ್ಲ. "ತೆರೆದ ಗಾಯಗಳು ಅಥವಾ ಸೂಕ್ಷ್ಮ ಚರ್ಮದ ಮೇಲೆ ಟಾಲ್ಕ್ ಬಳಸುವುದನ್ನು ಶಿಫಾರಸು ಮಾಡುವುದಿಲ್ಲ, ಏಕೆಂದರೆ ಇದು ಉರಿ ಅಥವಾ ಖನಿಜದ ವಿಷಕಾರಿ ಪರಿಣಾಮಕ್ಕೆ ಕಾರಣವಾಗಬಹುದು. ಭಾರತದಲ್ಲಿ ಈ ಕುರಿತ ನಿಯಂತ್ರಣ ನೀತಿಯು ಇನ್ನು ಪರಿಶೀಲನೆ ಹಾಗೂ ಅಭಿವೃದ್ಧಿಯ ಹಂತದಲ್ಲಿದೆ" ಎಂದು ಡಾ. ಮಿಶ್ರಾ ಹೇಳುತ್ತಾರೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) 2018 ರಲ್ಲಿ ಅಸ್ಬೆಸ್ಟಾಸ್-ರಹಿತ ಪ್ರಮಾಣಪತ್ರ ಸಿಗುವವರೆಗೆ ಪ್ರಮುಖ ಬ್ರ್ಯಾಂಡ್ ಒಂದರ ತಯಾರಿಕೆಯನ್ನು ತಡೆಹಿಡಿಯಲು ಆದೇಶಿಸಿತ್ತು. ಇನ್ನು ಮಹಾರಾಷ್ಟ್ರದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) 2022 ರಲ್ಲಿ pH ಪ್ರಮಾಣದ ನಿಗದಿತ ಮಟ್ಟ ಸರಿಯಿಲ್ಲ ಎಂಬ ಕಾರಣಕ್ಕೆ ತಯಾರಿಕಾ ಪರವಾನಗಿಯನ್ನು ರದ್ದುಗೊಳಿಸಿತ್ತೇ ಹೊರತು ಕ್ಯಾನ್ಸರ್ ಅಪಾಯದ ಕಾರಣಕ್ಕಲ್ಲ.
"ಟಾಲ್ಕ್ ಭಯಪಡುವಂತಹ ವಸ್ತುವಲ್ಲ, ಅದೇ ಸಮಯದಲ್ಲಿ ಇದು ದೈನಂದಿನ ಆರೈಕೆಗೆ ಅತ್ಯಗತ್ಯವಾದ ಉತ್ಪನ್ನವೂ ಅಲ್ಲ. ಅನಿಶ್ಚಿತತೆಗಳು ಇನ್ನು ಉಳಿದಿರುವುದರಿಂದ, ಪೌಡರ್ ಅಗತ್ಯವೇ ಇದ್ದರೆ ಟಾಲ್ಕ್-ರಹಿತ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಸುರಕ್ಷಿತ ಮಾರ್ಗ" ಎಂದು ಮುಂಬೈನ ಜೆಜೆ ಆಸ್ಪತ್ರೆಯ ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಉಷಾ ಖೇಮಾನಿ ಹೇಳುತ್ತಾರೆ.
ಚಿಕ್ಕ ಮಕ್ಕಳಲ್ಲಿ, ವಿಶೇಷವಾಗಿ ಮೂಗು ಮತ್ತು ಬಾಯಿಯ ಹತ್ತಿರ ಪೌಡರ್ ಬಳಕೆಯನ್ನು ಸಂಪೂರ್ಣವಾಗಿ ದೂರವಿಡಬೇಕು. ಅಸ್ತಮಾ ಅಥವಾ ದೀರ್ಘಕಾಲದ ಉಸಿರಾಟದ ತೊಂದರೆ ಇರುವವರು, ಗಾಯಗೊಂಡ ಅಥವಾ ಸೋಂಕಿಗೆ ಒಳಗಾದ ಚರ್ಮ ಹೊಂದಿರುವವರು, ರೋಗನಿರ್ಣಯವಾಗದ ಚರ್ಮದ ಅಲರ್ಜಿ ಇದ್ದಾಗ ಹಾಗೂ ಬೆವರಿನಿಂದ ಪೌಡರ್ ಹೆಪ್ಪುಗಟ್ಟಿ ಉರಿ ಹೆಚ್ಚಾಗುವ ಸಂದರ್ಭಗಳಲ್ಲಿ ಪೌಡರ್ ಬಳಕೆಯನ್ನು ತಪ್ಪಿಸಬೇಕು ಎಂದು ಮುಂಬೈನ ಜೆಜೆ ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ಪ್ರಹ್ಲಾದ್ ರಾಥೋಡ್ ಸಲಹೆ ನೀಡುತ್ತಾರೆ
ಜೋಳದ ಹಿಟ್ಟು ಆಧಾರಿತ ಪೌಡರ್‌ಗಳು ಸುರಕ್ಷಿತ ಪರ್ಯಾಯವೇ?
ಸಸ್ಯ ಆಧಾರಿತವಾಗಿರುವ ಹಾಗೂ ಅಸ್ಬೆಸ್ಟಾಸ್ ಕಲುಷಿತಗೊಳ್ಳುವ ಯಾವುದೇ ಅಪಾಯವಿಲ್ಲದ ಜೋಳದ ಹಿಟ್ಟಿನ (ಕಾರ್ನ್‌ಸ್ಟಾರ್ಚ್) ಪೌಡರ್‌ಗಳು ಉತ್ತಮ ಪರ್ಯಾಯವಾಗಿವೆ. "ಅವು ಅಂಡಾಶಯದ ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗುತ್ತವೆ ಎಂದು ಯಾವುದೇ ಸಂಶೋಧನೆಗಳಲ್ಲಿ ಕಂಡುಬಂದಿಲ್ಲ. ಆದರೆ, ಯಾವುದೇ ರೀತಿಯ ಪೌಡರ್ ಆದರೂ ಗಾಯಗೊಂಡ ಅಥವಾ ಕಿರಿಕಿರಿ ಇರುವ ಚರ್ಮದ ಮೇಲೆ, ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆಯ ನಂತರದ ಗಾಯಗಳ ಮೇಲೆ ಮತ್ತು ಉಸಿರಿನೊಂದಿಗೆ ಒಳಗೆ ಹೋಗುವ ಅಪಾಯ ಹೆಚ್ಚಿರುವ ಕಾರಣ ಸಣ್ಣ ಮಕ್ಕಳಲ್ಲಿ ಬಳಸುವುದು ಬೇಡ" ಎಂದು ಡಾ. ಮಿಶ್ರಾ ಹೇಳುತ್ತಾರೆ.
ಭಾರತದಲ್ಲಿ ತಯಾರಾಗುವ ಟಾಲ್ಕ್ ಪೌಡರ್‌ಗಳು ಸುರಕ್ಷಿತವೇ?
ಭಾರತಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ದತ್ತಾಂಶಗಳು ಬಹಳ ಸೀಮಿತವಾಗಿವೆ. "ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದ 13 ಟಾಲ್ಕ್ ಉತ್ಪನ್ನಗಳನ್ನು ಪರೀಕ್ಷಿಸಿದಾಗ ಅದರಲ್ಲಿ ಏಳು ಉತ್ಪನ್ನಗಳಲ್ಲಿ 'ಟ್ರೆಮೋಲೈಟ್ ಅಸ್ಬೆಸ್ಟಾಸ್' ಕಂಡುಬಂದಿದೆ. ಲಖನೌದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್ (IITR) ನ ಪರೀಕ್ಷೆಯಲ್ಲೂ ಐದು ಭಾರತೀಯ ಬ್ರ್ಯಾಂಡ್‌ಗಳಲ್ಲಿ ಅಸ್ಬೆಸ್ಟಾಸ್ ಎಳೆಗಳು ಪತ್ತೆಯಾಗಿದ್ದವು" ಎಂದು ಡಾ. ಸತ್ಯನ್ ಹೇಳಿರುವುದಾಗಿ The Indian Express ವರದಿ ಉಲ್ಲೇಖಿಸಿದೆ.
ಭಾರತದ ಕಾಸ್ಮೆಟಿಕ್ಸ್ ನಿಯಮಗಳು 2020 ರ ಪ್ರಕಾರ, ಮಾರುಕಟ್ಟೆಗೆ ಬರುವ ಪೌಡರ್‌ಗಳು 'ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್' (BIS) ನ ತಾಂತ್ರಿಕ ಮಾನದಂಡಗಳಿಗೆ ಒಳಪಟ್ಟಿರಬೇಕು. ಚರ್ಮದ ಪೌಡರ್‌ಗಳಿಗೆ IS 3959 ಮತ್ತು ಮಕ್ಕಳ ಪೌಡರ್‌ಗಳಿಗೆ IS 5339 ಮಾನದಂಡಗಳು ಅನ್ವಯಿಸುತ್ತವೆ. ಟಾಲ್ಕ್ ತಯಾರಿಕೆಯಲ್ಲಿ ಕಟ್ಟುನಿಟ್ಟಿನ ಅಸ್ಬೆಸ್ಟಾಸ್ ತಪಾಸಣೆ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಪರಿಶೀಲನಾ ವರದಿ ಪ್ರತಿಪಾದಿಸಿದೆ. "ಗ್ರಾಹಕರು ಪರವಾನಗಿ ಹೊಂದಿರುವ ತಯಾರಕರು, ಸಂಪೂರ್ಣ ವಿವರವಿರುವ ಲೇಬಲ್ ಮತ್ತು ಬ್ಯಾಚ್ ವಿವರಗಳನ್ನು ಗಮನಿಸಿ ಉತ್ಪನ್ನ ಖರೀದಿಸಬೇಕು. ಸರ್ಕಾರವು ಮಾರುಕಟ್ಟೆಯಿಂದ ಮಾದರಿಗಳನ್ನು ಪಡೆದು ಅಸ್ಬೆಸ್ಟಾಸ್ ತಪಾಸಣೆ ನಡೆಸಬೇಕು" ಎಂದು ಡಾ. ರಾಥೋಡ್ ಸಲಹೆ ನೀಡುತ್ತಾರೆ.
ಇದರ ಹೊರತಾಗಿ, IARC ನ ಅಪಾಯಕಾರಿ ವರ್ಗೀಕರಣವು ಅಪರೂಪಕ್ಕೆ ಪೌಡರ್ ಬಳಸುವುದರಿಂದಲೇ ಕ್ಯಾನ್ಸರ್ ಬರುತ್ತದೆ ಎಂದು ಹೇಳುವುದಿಲ್ಲ. "ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಈ ವಸ್ತುವು ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದರ್ಥವೇ ಹೊರತು, ಇದನ್ನು ಬಳಸುವ ಪ್ರತಿಯೊಬ್ಬರಿಗೂ ಅಥವಾ ಬಹುತೇಕ ಗ್ರಾಹಕರಿಗೆ ಕ್ಯಾನ್ಸರ್ ಬರುತ್ತದೆ ಎಂದಲ್ಲ" ಎಂದು ಡಾ. ರಾಥೋಡ್ ಸ್ಪಷ್ಟಪಡಿಸಿದ್ದಾರೆ.
ಕೃಪೆ: indianexpress.com