ನೇರ ಪ್ರಸಾರವಾಯ್ತು ಮಾದಕದ್ರವ್ಯ ವಿರೋಧಿ ಹೋರಾಟಗಾರರ ಕೊಲೆ: ಪಂಜಾಬ್ ನ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ?
►ಸಫಾವತ್ ಝರ್ಗರ್ – scroll. in ವರದಿ
Photo Credit : scroll.in
ಮಾದಕದ್ರವ್ಯ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಝೋಟಾ ಅವರ ಕೊಲೆಯಾಗಿ ಹದಿನೈದು ದಿನಗಳ ನಂತರವೂ, ಪಂಜಾಬ್ ನ ಮಾನಸಾ ನಗರದಾದ್ಯಂತ ಅವರ ಫೋಟೊಗಳು ಕಾಣಸಿಗುತ್ತಿವೆ. ವಾಹನಗಳ ಮೇಲಿನ ಪೋಸ್ಟರ್ ಗಳು, ನಗರದಲ್ಲಿ ಎತ್ತರವಾಗಿ ನಿಂತಿರುವ ಬ್ಯಾನರ್ ಗಳು ಹಾಗೂ ಮುಖ್ಯವಾಗಿ, ಅವರ ಸಾವನ್ನು ಪ್ರತಿಭಟಿಸಿ ಹೆದ್ದಾರಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಅವರ ಚಿತ್ರಗಳು ರಾರಾಜಿಸುತ್ತಿವೆ.
ಅನೇಕ ಪೋಸ್ಟರ್ ಗಳಲ್ಲಿ ಝೋಟಾ ಅವರು ಗುಂಡೇಟಿನಿಂದ ರಕ್ತಸ್ರಾವವಾಗಿ ಬಿದ್ದಿದ್ದ ಕೊನೆಯ ಕ್ಷಣಗಳ AI ನಿರ್ಮಿತ ಚಿತ್ರಗಳನ್ನು ಬಳಸಲಾಗಿದೆ.
ಅ. 13ರಂದು, ಮಾನಸಾ ಜಿಲ್ಲೆಯಲ್ಲಿ ಮಾದಕದ್ರವ್ಯ ವಿರೋಧಿ ಸ್ವಯಂಸೇವಕರ ತಂಡವನ್ನು ಮುನ್ನಡೆಸುತ್ತಿದ್ದ ಝೋಟಾ, ಮೆಡಿಕಲ್ ಶಾಪ್ ಒಂದಕ್ಕೆ ಸ್ಮಾರ್ಟ್ ಫೋನ್ ಹಿಡಿದು ತೆರಳಿದ್ದರು. ನಿಷೇಧಿತ ಮಾದಕ ಗಿಡಮೂಲಿಕೆ/ಔಷಧಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೆಮಿಸ್ಟ್ ಅಶ್ವಿನ್ ಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಈ ವೇಳೆ ವಾಗ್ವಾದ ಹಿಂಸಾರೂಪಕ್ಕೆ ತಿರುಗಿತು. ಕೆಮಿಸ್ಟ್ ಅಶ್ವಿನ್ ಕುಮಾರ್ ತಮ್ಮ ಬಳಿಯಿದ್ದ ಪರವಾನಗಿ ಹೊಂದಿದ ಪಿಸ್ತೂಲಿನಿಂದ ಝೋಟಾ ಮೇಲೆ ಹಲವು ಸುತ್ತು ಗುಂಡು ಹಾರಿಸಿದರು. ಬಳಿಕ ರಸ್ತೆಯಲ್ಲಿ ಅಟ್ಟಾಡಿಸಿ ಮತ್ತೆ ಗುಂಡಿಕ್ಕಿ ಕೊಲೆ ಮಾಡಿದರು.
ಝೋಟಾ ಮತ್ತು ಅವರ ತಂಡವು ತಾವು ಮಾಡುವ ದಾಳಿಗಳನ್ನು ಸಾಮಾನ್ಯವಾಗಿ ಫೇಸ್ ಬುಕ್ ನಲ್ಲಿ ನೇರ ಪ್ರಸಾರ (Live stream) ಮಾಡುತ್ತಿದ್ದ ಕಾರಣ, ಈ ಕೊಲೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.
ಝೋಟಾ ಅವರ ಕೊಲೆ ಮಾನಸಾವಷ್ಟೇ ಅಲ್ಲದೆ, ಇಡೀ ಪಂಜಾಬ್ ನಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ಇದು ಪಂಜಾಬ್ ನಲ್ಲಿ ಡ್ರಗ್ಸ್ ದಂಧೆಕೋರರ ಉಪಟಳಕ್ಕೆ ಸಾಕ್ಷಿಯಂತಿದ್ದು, ವಿಧಾನಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (AAP) ಸರ್ಕಾರಕ್ಕೆ ತೀವ್ರ ಮುಜುಗರ ತಂದಿಟ್ಟಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರು ರಾಜೀನಾಮೆ ನೀಡುವವರೆಗೆ ಮೃತದೇಹದ ಅಂತ್ಯಸಂಸ್ಕಾರ ಮಾಡಲು ಅಥವಾ ಮರಣೋತ್ತರ ಪರೀಕ್ಷೆಗೆ ಅನುಮತಿಸಲು ಝೋಟಾ ಕುಟುಂಬ ನಿರಾಕರಿಸಿದೆ. ಬರ್ನಾಲಾ-ಮಾನಸಾ ಹೆದ್ದಾರಿಯಲ್ಲಿ ಕುಟುಂಬಸ್ಥರು, ರೈತ, ಕಾರ್ಮಿಕ ಮತ್ತು ಧಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಮಂಗಳವಾರ, ಮಾದಕದ್ರವ್ಯ ಸೇವನೆಯಿಂದ ಅತಿಯಾಗಿ ಸಾವನ್ನಪ್ಪಿದ ಯುವಕನೊಬ್ಬನ ಕುಟುಂಬಸ್ಥರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಾಗ ಪೊಲೀಸರು ಬಲವಂತವಾಗಿ ತಡೆದಿದ್ದಾರೆ.
"ಡ್ರಗ್ಸ್ ಹಾವಳಿಯ ವಿರುದ್ಧ ನಮಗಿದ್ದ ತೀವ್ರ ಅಸಮಾಧಾನವನ್ನು ಝೋಟಾ ಅವರ ಹೋರಾಟ ಪ್ರತಿನಿಧಿಸುತ್ತಿತ್ತು" ಎಂದು ಜಮೀನುರಹಿತ ಕೃಷಿ ಕಾರ್ಮಿಕರು ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಡುವ ಎಡಪಂಥೀಯ ಸಂಘಟನೆ 'ಮಜ್ದೂರ್ ಮುಕ್ತಿ ಮೋರ್ಚಾ ಆಜಾದ್'ನ ರಾಜ್ಯ ಅಧ್ಯಕ್ಷ ಭಗವಂತ್ ಸಿಂಗ್ ಸಮಾವೊನ್ ಹೇಳಿದ್ದಾರೆ. "ನಮ್ಮಲ್ಲಿ ಹಲವರು ಈ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದರು. ತಮ್ಮ ಜೀವದ ಹಂಗು ತೊರೆದು ನೇರವಾಗಿ ರಂಗಕ್ಕಿಳಿದು ಕೆಲಸ ಮಾಡಿದ ವ್ಯಕ್ತಿ ಅವರು" ಎಂದು ಸ್ಮರಿಸಿದ್ದಾರೆ.
ಝೋಟಾ ಅವರ ಮೇಲೆ ದೊಡ್ಡ ಮಟ್ಟದ ಅನುಕಂಪ ವ್ಯಕ್ತವಾಗುತ್ತಿದ್ದರೂ, ಕಾಯ್ದೆಯನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಅವರ ಇಂತಹ ಹೋರಾಟಗಳು ಮೂಲಭೂತ ಸಮಸ್ಯೆಯಾದ 'ವ್ಯವಸ್ಥೆಯ ವೈಫಲ್ಯ'ಕ್ಕೆ ಪರಿಹಾರವಲ್ಲ, ಬದಲಿಗೆ ಜನರ ಅಸಹಾಯಕತೆಯ ಸಂಕೇತವಾಗಿತ್ತು ಎಂದು ಅನೇಕರು ವಾದಿಸುತ್ತಾರೆ. "ವ್ಯವಸ್ಥೆಯು ನ್ಯಾಯ ಒದಗಿಸದಿದ್ದಾಗ ಜನರು ಕೆಲವೊಮ್ಮೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ ಎಂಬುದು ಕಾಲ ಸಾಬೀತುಪಡಿಸಿದ ಸತ್ಯ" ಎಂದು ಪಂಜಾಬ್ ಸೇರಿದಂತೆ ಐದು ಉತ್ತರ ಭಾರತದ ರಾಜ್ಯಗಳ ಮಾದಕದ್ರವ್ಯ ಸಮಸ್ಯೆಯ ಕುರಿತು ಅಧ್ಯಯನ ಮಾಡಿರುವ ನಿವೃತ್ತ ಪ್ರಾಧ್ಯಾಪಕ ಡಾ. ರಂಜಿತ್ ಸಿಂಗ್ ಘುಮನ್ ಅಭಿಪ್ರಾಯಪಟ್ಟಿದ್ದಾರೆ.
►ವ್ಯಸನಿಯಿಂದ ಹೋರಾಟಗಾರನವರೆಗೆ
ಪರ್ವಿಂದರ್ ಸಿಂಗ್ ಝೋಟಾ ಅವರ ಈ ಹೋರಾಟದ ಹಿಂದೆ ಅವರ ವೈಯಕ್ತಿಕ ಬದುಕಿನ ಅನುಭವವಿತ್ತು. ಕ್ರೀಡಾಪಟು ಹಾಗೂ ಬಾಕ್ಸರ್ ಆಗಿದ್ದ ಅವರು, ಜಲಂಧರ್ನಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗ ಪೊಲೀಸ್ ದೂರಿನಲ್ಲಿ ಹೆಸರು ಬಂದ ನಂತರ ಡ್ರಗ್ಸ್ ಚಟಕ್ಕೆ ಬಿದ್ದಿದ್ದರು. 2015ರ ಸುಮಾರಿಗೆ ಅವರು ಸ್ವತಃ ಡ್ರಗ್ಸ್ ಚಟವನ್ನು ತೊರೆದರು ಎಂದು ನಂತರದ ದಿನಗಳಲ್ಲಿ ಝೋಟಾ ಅವರ ಹೋರಾಟದಲ್ಲಿ ಭಾಗಿಯಾದ ಜಗ್ಸೀರ್ ಸಿಂಗ್ ತಿಳಿಸಿದ್ದಾರೆ.
"ಅವರು ಚಟದ ಜಾಲದಿಂದ ಹೊರಬಂದಿದ್ದರು. ಆದ್ದರಿಂದಲೇ ಈ ಹಾವಳಿಯ ವಿರುದ್ಧ ಅಷ್ಟೊಂದು ಧೈರ್ಯದಿಂದ ಹೋರಾಡುತ್ತಿದ್ದರು" ಎಂದು ಮಾದಕ ವ್ಯಸನದಿಂದ ಹೊರಬಂದಿರುವ ಜಗ್ಸೀರ್ ಸಿಂಗ್ ಹೇಳಿದ್ದಾರೆ.
ಡ್ರಗ್ಸ್ ಚಟಕ್ಕೆ ಬಿದ್ದವರ ಪೋಷಕರು ಮತ್ತು ಡ್ರಗ್ಸ್ ಸೇವನೆಯಿಂದ ಮಕ್ಕಳನ್ನು ಕಳೆದುಕೊಂಡವರ ನೋವನ್ನು ಕಂಡು ತಮ್ಮ ಪತಿ ಮಿಡಿಯುತ್ತಿದ್ದರು ಎಂದು ಝೋಟಾ ಅವರ ಪತ್ನಿ ಮನ್ಪ್ರೀತ್ ಕೌರ್ ಹೇಳಿದ್ದಾರೆ. "ಚಟಕ್ಕೆ ಬಿದ್ದ ಯುವಕರು ಅಥವಾ ಮಕ್ಕಳನ್ನು ನೋಡಿದಾಗಲೆಲ್ಲಾ ಅವರು ಒಳಗೊಳಗೇ ನರಳುತ್ತಿದ್ದುದನ್ನು ನಾನು ಕಂಡಿದ್ದೇನೆ" ಎಂದು ಕೌರ್ ನೆನಪಿಸಿಕೊಂಡಿದ್ದಾರೆ.
ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಾಗ ಬೇಸತ್ತ ಝೋಟಾ, 2023ರಲ್ಲಿ ಮಾನಸಾ ಜಿಲ್ಲೆಯ ಹಳ್ಳಿಗಳ ಸ್ವಯಂಸೇವಕರನ್ನು ಸಂಘಟಿಸಿ ತಮ್ಮದೇ ಆದ ಮಾದಕದ್ರವ್ಯ ವಿರೋಧಿ ಪಡೆಯನ್ನು ರೂಪಿಸಿದರು.
ನಿಷೇಧವಿದ್ದರೂ ವೈದ್ಯರ ಚೀಟಿ ಇಲ್ಲದೆ ಹೆಚ್ಚಿನ ಪ್ರಮಾಣದ 'ಪ್ರಿಗಬಾಲಿನ್' ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಮೆಡಿಕಲ್ ಶಾಪ್ ಗಳ ಮೇಲೆ ಅವರು ಮುಖ್ಯವಾಗಿ ಗಮನಹರಿಸಿದ್ದರು.
ನೋವು ನಿವಾರಣೆ ಮತ್ತು ಅಪಸ್ಮಾರದಂತಹ ದೀರ್ಘಕಾಲದ ಕಾಯಿಲೆಗಳಿಗೆ ಈ ಔಷಧಿಯನ್ನು ಶಿಫಾರಸು ಮಾಡಲಾಗುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅಮಲಿನ ಪರಿಣಾಮ ಉಂಟಾಗುತ್ತದೆ.
ಪಂಜಾಬ್ ನ ಗ್ರಾಮೀಣ ಭಾಗದಲ್ಲಿ ಹೆರಾಯಿನ್ ನಂತಹ ಮಾದಕ ದ್ರವ್ಯಗಳಿಗೆ ಹೋಲಿಸಿದರೆ ಇದು ಅತ್ಯಂತ ಅಗ್ಗವಾಗಿರುವುದರಿಂದ ಇದರ ದುರ್ಬಳಕೆ ಹೆಚ್ಚಾಗಿದೆ. ಈ ಬಗ್ಗೆ ಮಾತನಾಡಿದ ಸಮಾವೊನ್, "ಪ್ರಿಗಬಾಲಿನ್ ಮಾತ್ರೆ ಕೇವಲ 10 ರೂಪಾಯಿಗೆ ಸಿಗುವುದರಿಂದ, ಇದನ್ನು ಅಕ್ರಮವಾಗಿ ಸೇವಿಸುವವರಲ್ಲಿ ಬಹುಪಾಲು ಜನರು ಕೂಲಿ ಕಾರ್ಮಿಕರಾಗಿದ್ದಾರೆ. ಬೆಳಗ್ಗೆ ಈ ಮಾತ್ರೆ ತೆಗೆದುಕೊಂಡರೆ ಮಾತ್ರ ಕೆಲಸ ಪ್ರಾರಂಭಿಸುವಷ್ಟರ ಮಟ್ಟಿಗೆ ಅನೇಕ ಕಾರ್ಮಿಕರು ಇದರ ದಾಸರಾಗಿದ್ದಾರೆ" ಎಂದು ಹೇಳಿದ್ದಾರೆ.
ಪಂಜಾಬ್ ಹಾಗೂ ಚಂಡೀಗಢದ ಮೂರು ಬೇರೆ ಬೇರೆ ಪ್ರದೇಶಗಳ ವಿವಿಧ ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮನೋವೈದ್ಯರ ತಂಡವೊಂದು ನಡೆಸಿದ ಒಂದು ವರ್ಷದ ಅಧ್ಯಯನವು ಕಳವಳಕಾರಿ ವರದಿಯೊಂದನ್ನು ನೀಡಿದೆ. "ಮಾದಕದ್ರವ್ಯ ಚಟದಿಂದ ಮುಕ್ತಿ ಪಡೆಯಲು ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಅರ್ಧದಷ್ಟು ಜನರು ವೈದ್ಯರ ಚೀಟಿ ಇಲ್ಲದೆ ಪ್ರಿಗಬಾಲಿನ್ ಮಾತ್ರೆ ಸೇವಿಸುವ ಚಟಕ್ಕೆ ಬಿದ್ದಿದ್ದಾರೆ" ಎಂದು ಅದು ಎಚ್ಚರಿಸಿದೆ. 2024ರಲ್ಲಿ ಪಂಜಾಬ್ ಸರ್ಕಾರವು 75 ಮಿಲಿಗ್ರಾಂಗಿಂತ ಹೆಚ್ಚಿನ ಪ್ರಮಾಣದ ಪ್ರಿಗಬಾಲಿನ್ ಮಾರಾಟ ಮತ್ತು ದಾಸ್ತಾನನ್ನು ನಿಷೇಧಿಸಿತ್ತು.
ಮಾನಸಾದಲ್ಲಿ ಝೋಟಾ ನಡೆಸುತ್ತಿದ್ದ ಹೋರಾಟವು ಇಂತಹ ನಿಷೇಧಿತ ಮಾತ್ರೆಗಳ ಮಾರಾಟವನ್ನು ಕ್ಯಾಮೆರಾ ಮುಂದೆ ಬಯಲಿಗೆಳೆಯುವುದಾಗಿತ್ತು. "ಅಕ್ರಮವಾಗಿ ಮಾತ್ರೆಗಳನ್ನು ಮಾರಾಟ ಮಾಡುವ ಮೆಡಿಕಲ್ ಶಾಪ್ ಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ನಮಗೆ ಸಾಕಾಗಿತ್ತು" ಎಂದು 2023ರಿಂದ ಝೋಟಾ ಅವರ ಹೋರಾಟದಲ್ಲಿ ಭಾಗಿಯಾಗಿ, ಅವರು ಕೊಲೆಯಾದ ದಿನವೂ ಜೊತೆಯಲ್ಲಿದ್ದ ಭೂಪಿಂದರ್ ಪಾಲ್ ಸಿಂಗ್ ಹೇಳಿದ್ದಾರೆ. "ಕೇವಲ ಆರು ವರ್ಷದ ಮಕ್ಕಳು ಕೂಡ ಪ್ರಿಗಬಾಲಿನ್ ಮಾತ್ರೆಗಳನ್ನು ಸೇವಿಸುವ ಹಾಗೂ ಮಾರಾಟ ಮಾಡುವ ಜಾಲದಲ್ಲಿ ಸಿಲುಕಿರುವುದನ್ನು ನಾವು ಕಂಡಿದ್ದೇವೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಝೋಟಾ ಅವರಿಂದ ಪ್ರೇರಣೆಗೊಂಡು ಪಂಜಾಬ್ ನ ಮಾಲ್ವಾ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸ್ವಯಂಸೇವಕರು ಸಂಘಟಿತರಾಗಿ 'ನಶಾ ರೋಕೋ ಕಮಿಟಿ'ಗಳನ್ನು (ಮಾದಕದ್ರವ್ಯ ತಡೆ ಸಮಿತಿ) ರಚಿಸಿಕೊಂಡರು.
2023ರ ಜುಲೈನಲ್ಲಿ, ತಮ್ಮನ್ನು ಕೊಲೆ ಮಾಡಿದ ಕೆಮಿಸ್ಟ್ ಅಶ್ವಿನ್ ಕುಮಾರ್ ವಿರುದ್ಧ ಝೋಟಾ ರಹಸ್ಯ ಕಾರ್ಯಾಚರಣೆ (Sting operation) ನಡೆಸಿದ್ದರು. 150 mg ಮತ್ತು 300 mg ಪ್ರಮಾಣದ ಪ್ರಿಗಬಾಲಿನ್ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಕುಮಾರ್ ಗೆ ಚಪ್ಪಲಿ ಹಾರ ಹಾಕಿ, ಮಾನಸಾದ ಮುಖ್ಯ ಮಾರುಕಟ್ಟೆಯಲ್ಲಿ ಮೆರವಣಿಗೆ ನಡೆಸಿ ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.
ಈ ವೇಳೆ ಪೊಲೀಸರು ಕುಮಾರ್ ವಿರುದ್ಧ ಮಾದಕದ್ರವ್ಯ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ, ಝೋಟಾ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರು. ಝೋಟಾ ಅವರನ್ನು ಬಂಧಿಸಲಾಯಿತಾದರೂ, ಪ್ರದೇಶದಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದ ನಂತರ ಬಿಡುಗಡೆ ಮಾಡಲಾಯಿತು.
ಕೆಲ ಕಾಲ ನಶಾ ರೋಕೋ ಕಮಿಟಿಗಳು ಪೊಲೀಸರ ತೀವ್ರ ಕಣ್ಣಾವಲಿಗೆ ಒಳಗಾದವು ಹಾಗೂ ಹಲವರ ವಿರುದ್ಧ ಎಫ್ಐಆರ್ ಗಳು ದಾಖಲಾದವು. ಇದರಿಂದಾಗಿ ಹಲವರು ಈ ಹೋರಾಟದಿಂದ ಹಿಂದೆ ಸರಿದರು, ಆದರೆ ಝೋಟಾ ಮತ್ತು ಅವರ ಸಹೋದ್ಯೋಗಿಗಳು ಹಿಂಜರಿಯಲಿಲ್ಲ.
ಚಟಕ್ಕೆ ಬಿದ್ದವರಿಂದಲೇ ಮಾಹಿತಿ ಪಡೆದು ಅವರು ಮೆಡಿಕಲ್ ಶಾಪ್ ಗಳ ಮೇಲೆ ದಾಳಿ ಮುಂದುವರಿಸಿದರು.
ಕಾನೂನು ಜಾರಿ ಸಂಸ್ಥೆಗಳು ಹಾಗೂ ಪೊಲೀಸರು ಅತಿಯಾದ ಪ್ರಮಾಣದ ಪ್ರಿಗಬಾಲಿನ್ ಮಾತ್ರೆ ತಯಾರಕರು ಮತ್ತು ಮಾರಾಟಗಾರರೊಂದಿಗೆ ಶಾಮೀಲಾಗಿದ್ದಾರೆ ಎಂದು ಭೂಪಿಂದರ್ ಸಿಂಗ್ ಆರೋಪಿಸಿದ್ದಾರೆ.
ತಮ್ಮ ದಾಳಿಗಳನ್ನು ಫೇಸ್ ಬುಕ್ ನಲ್ಲಿ ನೇರ ಪ್ರಸಾರ ಮಾಡಲು ಇದೇ ಮುಖ್ಯ ಕಾರಣವಾಗಿತ್ತು. "ಈ ಜನರನ್ನು ಕ್ಯಾಮೆರಾ ಮುಂದೆ ತಂದು, ಸಾರ್ವಜನಿಕವಾಗಿ ಅವರನ್ನು ಬಹಿಷ್ಕರಿಸುವಂತೆ ಜನರಿಗೆ ಮನವಿ ಮಾಡುವುದು ಸೂಕ್ತ ಎಂದು ನಾವು ಭಾವಿಸಿದೆವು" ಎಂದು ಅವರು ಹೇಳಿದ್ದಾರೆ. "ಇದು ಕೊನೆಗೆ ಪೊಲೀಸರನ್ನೂ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡಬಹುದು ಎಂಬ ನಿರೀಕ್ಷೆ ನಮ್ಮದಾಗಿತ್ತು. ಆದರೆ ಅಂತಹವರ ವಿರುದ್ಧ ಸಣ್ಣಪುಟ್ಟ ಪ್ರಕರಣಗಳನ್ನು ಹಾಕಿ ಬಿಡಲಾಗುತ್ತಿತ್ತು. ಹೆಚ್ಚೆಂದರೆ ಅವರ ಲೈಸೆನ್ಸ್ ಅನ್ನು ಕೆಲ ದಿನ ಅಮಾನತುಗೊಳಿಸಲಾಗುತ್ತಿತ್ತು ಅಷ್ಟೇ" ಎಂದು ಭೂಪಿಂದರ್ ಬೇಸರ ವ್ಯಕ್ತಪಡಿಸಿದ್ದಾರೆ.
►ಏನೂ ಬದಲಾಗಿಲ್ಲ
ಅಶ್ವಿನ್ ಕುಮಾರ್ ತಮ್ಮ ಹಳೆಯ ಹಾದಿಯನ್ನು ಬದಲಾಯಿಸಿಕೊಳ್ಳಲು ನಿರಾಕರಿಸಿದ್ದು, ಈ ಪ್ರದೇಶದಲ್ಲಿ ಕಾನೂನಿಗೆ ಯಾವುದೇ ಬೆಲೆ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನೆಯಲ್ಲಿದ್ದ ಹಲವರು ಹೇಳಿದ್ದಾರೆ.
2020ರಿಂದ ಕುಮಾರ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್ಸ್ಟೇನ್ಸಸ್ ಆ್ಯಕ್ಟ್ (NDPS) ಅಡಿಯಲ್ಲಿ ದಾಖಲಾದ ಪ್ರಕರಣವೂ ಸೇರಿದಂತೆ ಐದು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಕಳೆದ ನಾಲ್ಕು ವರ್ಷಗಳಲ್ಲಿ ಕುಮಾರ್ ಅವರ ಅಂಗಡಿಯ ಮೇಲೆ ಸುಮಾರು 10 ಬಾರಿ ದಾಳಿ ನಡೆಸಲಾಗಿದ್ದು, ಮೂರು ಬಾರಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿಗಳು ತಿಳಿಸಿವೆ. ಮೂರು ಬಾರಿ ಅವರ ಮೆಡಿಕಲ್ ಲೈಸೆನ್ಸ್ ಅಮಾನತುಗೊಂಡಿದ್ದರೂ, ಪ್ರತಿ ಬಾರಿಯೂ ಅವರು ಅಂಗಡಿಯನ್ನು ಮತ್ತೆ ತೆರೆಯುವಲ್ಲಿ ಯಶಸ್ವಿಯಾಗಿದ್ದರು.
ಇಷ್ಟೆಲ್ಲಾ ಕ್ರಿಮಿನಲ್ ಹಿನ್ನೆಲೆಯಿದ್ದರೂ, ಝೋಟಾ ಅವರ ಕೊಲೆಯಾದ ಒಂದು ವಾರದ ನಂತರವಷ್ಟೇ ಕುಮಾರ್ ಅವರ ಮೆಡಿಕಲ್ ಶಾಪ್ ಲೈಸೆನ್ಸ್ ರದ್ದುಗೊಳಿಸಲಾಯಿತು.
ಇಂತಹ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಕುಮಾರ್ ಗೆ ಬಂದೂಕು ಲೈಸೆನ್ಸ್ ಹೇಗೆ ಸಿಕ್ಕಿತು ಎಂದು ಝೋಟಾ ಬೆಂಬಲಿಗರು ಪ್ರಶ್ನಿಸಿದ್ದಾರೆ. "ಅಕ್ರಮ ಮಾದಕದ್ರವ್ಯ ಮಾರಾಟಕ್ಕೆ ಸಹಕರಿಸಿದ ಪ್ರತಿಯೊಬ್ಬ ಪೊಲೀಸ್ ಮತ್ತು ಡ್ರಗ್ಸ್ ನಿಯಂತ್ರಣ ಇಲಾಖೆಯ ಅಧಿಕಾರಿಯ ವಿರುದ್ಧವೂ ತನಿಖೆಯಾಗಬೇಕು ಎಂಬುದು ನಮ್ಮ ಆಗ್ರಹ" ಎಂದು ಝೋಟಾ ಜೊತೆಗಿದ್ದ ಭೂಪಿಂದರ್ ಪಾಲ್ ಸಿಂಗ್ ಹೇಳಿದ್ದಾರೆ. "ಆಗ ಮಾತ್ರ ಈ ಜಾಲವು ವ್ಯವಸ್ಥೆಯೊಳಗೆ ಎಷ್ಟು ಆಳವಾಗಿ ಬೇರೂರಿದೆ ಎಂಬುದು ಜನರಿಗೆ ತಿಳಿಯುತ್ತದೆ" ಎಂದಿದ್ದಾರೆ ಅವರು.
►ಸ್ವಯಂಘೋಷಿತ ಕಾನೂನು ಪಾಲನೆ ಯಶಸ್ವಿಯಾಗುವುದಿಲ್ಲ
ಪಂಜಾಬ್ ನ ಮಾದಕದ್ರವ್ಯ ಬಿಕ್ಕಟ್ಟಿನ ಕುರಿತು ಝೋಟಾ ಅವರಿಗಿದ್ದ ಕಳಕಳಿಯನ್ನು ಹಲವರು ಬೆಂಬಲಿಸಿದರೂ, ಅವರ ಹೋರಾಟದ ಹಾದಿಯನ್ನು ಎಲ್ಲರೂ ಒಪ್ಪಿರಲಿಲ್ಲ.
ಅಂಥವರಲ್ಲಿ ತಲ್ವಂಡಿ ಸಾಬೋದ 42 ವರ್ಷದ ರೂಪಿಂದರ್ ಸಿಂಗ್ ಕೂಡ ಒಬ್ಬರು.
2007ರಲ್ಲಿ ತಮ್ಮ 24 ವರ್ಷದ ಸೋದರಸಂಬಂಧಿ ಸುಖ್ದೇವ್ ಸಿಂಗ್ ಮಾದಕದ್ರವ್ಯ ಸೇವನೆಯಿಂದ ಮೃತಪಟ್ಟ ನಂತರ, ರೂಪಿಂದರ್ ಸಿಂಗ್ ಕೂಡ ವೈಯಕ್ತಿಕ ಅಪಾಯಗಳನ್ನು ಲೆಕ್ಕಿಸದೆ ಡ್ರಗ್ಸ್ ಮಾಫಿಯಾ ವಿರುದ್ಧ ಆಕ್ರಮಣಕಾರಿ ಹೋರಾಟಕ್ಕಿಳಿದಿದ್ದರು.
ಅವರ ತಳಮಟ್ಟದ ಕೆಲಸ ಮತ್ತು ಸ್ಥಳೀಯರ ಸಹಕಾರದಿಂದಾಗಿ ಪೊಲೀಸರು 50 ಡ್ರಗ್ಸ್ ಸರಬರಾಜುದಾರರನ್ನು ಬಂಧಿಸಲು ಸಾಧ್ಯವಾಯಿತು. ಕಾಲಕ್ರಮೇಣ ಸಿಂಗ್ ಇಂತಹ ನೇರ ಸಂಘರ್ಷದ ಹಾದಿಯನ್ನು ತೊರೆದರು. "ಬಂಧಿತರು ಜೈಲಿಗೆ ತೆರಳಿದ ನಂತರ ಅವರ ಜಾಲ ಇನ್ನಷ್ಟು ವಿಸ್ತರಿಸಿತು" ಎಂದು ಸಿಂಗ್ ಹೇಳಿದ್ದಾರೆ. "ಈ ಹಿಂದೆ ಅವರು ಮಾದಕವಸ್ತುಗಳನ್ನು ತರಲು ಮನೆ ಬಿಟ್ಟು ಹೋಗಬೇಕಿತ್ತು, ಆದರೆ ಜೈಲಿಗೆ ಹೋಗಿ ಬಂದ ನಂತರ ಜಾಲ ಎಷ್ಟು ಪ್ರಬಲವಾಯಿತೆಂದರೆ ಮಾದಕವಸ್ತುಗಳು ಅವರ ಮನೆ ಬಾಗಿಲಿಗೇ ತಲುಪಲು ಪ್ರಾರಂಭಿಸಿದವು. ಆದ್ದರಿಂದ ಸ್ವಯಂಘೋಷಿತವಾಗಿ ಕಾನೂನು ಕೈಗೆತ್ತಿಕೊಳ್ಳುವ ಈ ಹಾದಿ ಯಶಸ್ವಿಯಾಗಲಿಲ್ಲ" ಎಂದು ಅವರು ವಿವರಿಸಿದ್ದಾರೆ.
ಝೋಟಾ ಅವರ ಹೋರಾಟದ ಹಾದಿಯು ಕಾನೂನನ್ನು ಕೈಗೆತ್ತಿಕೊಳ್ಳುವಂತಿತ್ತು ಎಂಬುದನ್ನು ಮಾನಸಾದ 56 ವರ್ಷದ ಕಾಲೇಜು ಪ್ರಾಧ್ಯಾಪಕರೊಬ್ಬರು ಒಪ್ಪಿಕೊಂಡಿದ್ದಾರೆ. "ಪೊಲೀಸರು ಮತ್ತು ಅಧಿಕಾರಿಗಳ ಗಮನಕ್ಕೆ ಅವರು ಈ ಸಮಸ್ಯೆಯನ್ನು ಪದೇ ಪದೇ ತಂದರೂ ತಳಮಟ್ಟದಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಅದೇ ಅವರ ಹತಾಶೆಗೆ ಕಾರಣ" ಎಂದು ಅವರು ಹೇಳಿದ್ದಾರೆ.
►ರಾಜಕೀಯ ಪರಿಣಾಮಗಳು
ಮಾನಸಾದ ಪ್ರತಿಭಟನಾ ಸ್ಥಳದಲ್ಲಿದ್ದ ಪ್ರತಿಭಟನಾಕಾರರು ರಾಜ್ಯದ ಮಾದಕದ್ರವ್ಯ ಬಿಕ್ಕಟ್ಟಿಗೆ ಅಕಾಲಿ ದಳ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳೇ ಹೊಣೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಯ ವಿರುದ್ಧವೇ ಸಾರ್ವಜನಿಕರ ಕೋಪ ಹೆಚ್ಚಾಗಿ ಕಂಡುಬರುತ್ತಿದೆ.
"2022ರಲ್ಲಿ ಪಂಜಾಬ್ ನ ಜನತೆ 'ಆಪ್' ಪಕ್ಷಕ್ಕೆ ಮತ ನೀಡಲು ಪ್ರಮುಖ ಕಾರಣವೆಂದರೆ ಹೊಸ ರಾಜಕೀಯ ಶಕ್ತಿಗೆ ಅವಕಾಶ ನೀಡುವುದಾಗಿತ್ತು" ಎಂದು ಡ್ರಗ್ಸ್ ವಿರುದ್ಧದ ಝೋಟಾ ಅವರ ಹೋರಾಟವನ್ನು ಬೆಂಬಲಿಸಿದ್ದ ಮಾನಸಾದ ಪ್ರಾಧ್ಯಾಪಕ ಅನೂಪ್ ಸಿಂಗ್ ಖಾಲ್ಸಾ ಹೇಳಿದ್ದಾರೆ. ಆದರೆ ಆಪ್ ಸರ್ಕಾರದ ಅವಧಿಯಲ್ಲಿ ಪಂಜಾಬ್ ನ ಮಾದಕದ್ರವ್ಯ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
2012ರ ವಿಧಾನಸಭಾ ಚುನಾವಣೆಯಿಂದೀಚೆಗೆ ಎಲ್ಲಾ ಚುನಾವಣಾ ಪ್ರಣಾಳಿಕೆಗಳಲ್ಲೂ ಮಾದಕದ್ರವ್ಯ ಬಿಕ್ಕಟ್ಟಿನ ವಿಷಯ ಪ್ರಮುಖವಾಗಿ ಪ್ರಸ್ತಾಪವಾಗುತ್ತಿದೆ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ತಜ್ಞ ಡಾ. ಘುಮನ್ ಹೇಳಿದ್ದಾರೆ. "ರಾಜಕೀಯ ಪಕ್ಷಗಳು ಈ ಸಮಸ್ಯೆಯನ್ನು ಬಗೆಹರಿಸುವ ಬದಲು ಇದರ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ" ಎಂದು ಅವರು ಹೇಳಿದ್ದಾರೆ. "ಇದರ ಪರಿಣಾಮವಾಗಿ ರಾಜಕಾರಣಿಗಳು, ಪೊಲೀಸರು ಮತ್ತು ಇತರ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆ ತೀವ್ರ ಪ್ರಶ್ನೆಗೆ ಒಳಪಟ್ಟಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಂಥ ಸನ್ನಿವೇಶದಲ್ಲಿ ಝೋಟಾ ಅವರಂತಹ ಒಂಟಿ ಹೋರಾಟಗಾರರು ಮಾಡಲು ಸಾಧ್ಯವಿರುವುದು ಸ್ವಲ್ಪವೇ ಎಂದು ಅವರು ಹೇಳಿದ್ದಾರೆ. "ಈ ಬಿಕ್ಕಟ್ಟು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದೆ. ಇದನ್ನು ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನಿಂದಷ್ಟೇ ಬಗೆಹರಿಸಲು ಸಾಧ್ಯವಿಲ್ಲ" ಎಂದಿದ್ದಾರೆ ಘುಮನ್.
ಖಾಸಗಿಯಾಗಿ ಮಾತನಾಡಿದ ಝೋಟಾ ಅವರ ಸಹೋದ್ಯೋಗಿಗಳು ಕೂಡ ತಮ್ಮ ಹೋರಾಟದ ಮಿತಿಯನ್ನು ಒಪ್ಪಿಕೊಂಡಿದ್ದಾರೆ.
ತಮಗೆ ಈ ಹೋರಾಟವನ್ನು ಮುಂದುವರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ. "ನಾವೆಲ್ಲರೂ ಯಾವುದೋ ಒಂದು ದಿನ ಸಾಯಲೇಬೇಕು. ಈ ಮಾದಕದ್ರವ್ಯ ಹಾವಳಿಯ ವಿರುದ್ಧ ಏನನ್ನಾದರೂ ಮಾಡಿ ಸಾಯುವುದು ಮೇಲು" ಎಂದು ಝೋಟಾ ಅವರ ಆಪ್ತ ಗೆಳೆಯ ಭೂಪಿಂದರ್ ಪಾಲ್ ಸಿಂಗ್ ಹೇಳಿದ್ದಾರೆ.
ಸೌಜನ್ಯ: scroll.in