‘ದಿಮಾಗಿ ನಕ್ಸಲ್’ ಪಟ್ಟಿ ಕೇಂದ್ರ ಸರಕಾರದ ಬಳಿ ಇಲ್ಲ: ಪತ್ರಕರ್ತ ಅಶೋಕ್ ಉಪಾಧ್ಯಾಯ ಪ್ರಶ್ನೆಗೆ ಗೃಹ ಸಚಿವಾಲಯದ ಉತ್ತರ
ದೇಶದಲ್ಲಿ ‘ದಿಮಾಗಿ ನಕ್ಸಲರು’ ಯಾರು?: ಗೃಹ ಸಚಿವಾಲಯದ ಬಳಿ ಉತ್ತರವಿಲ್ಲ; RTIಗೆ ಸಿಕ್ತು ‘NIL’ ರಿಪ್ಲೈ!
ಪತ್ರಕರ್ತ ಅಶೋಕ್ ಉಪಾಧ್ಯಾಯ | Photo Credit : X \@ashoupadhyay
ಕೇಂದ್ರ ಸರಕಾರವು ಎಷ್ಟು ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ‘ದಿಮಾಗಿ ನಕ್ಸಲ್’ ಎಂದು ಗುರುತಿಸಿದೆ ಎಂಬ ವಿವರಗಳನ್ನು ಕೋರಿ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಅರ್ಜಿಗೆ ಕೇಂದ್ರ ಗೃಹ ಸಚಿವಾಲಯವು ಅಚ್ಚರಿಯ ಉತ್ತರ ನೀಡಿದೆ. ದಿಲ್ಲಿ ಮೂಲದ ಪತ್ರಕರ್ತ ಅಶೋಕ್ ಉಪಾಧ್ಯಾಯ ಅವರು ಕೇಂದ್ರ ಗೃಹ ಸಚಿವಾಲಯದ ನಕ್ಸಲಿಸಂ ಸಂಬಂಧಿತ ವಿಭಾಗಕ್ಕೆ RTI ಅರ್ಜಿ ಸಲ್ಲಿಸಿ, ದೇಶದಲ್ಲಿ ಎಷ್ಟು ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ‘ದಿಮಾಗಿ ನಕ್ಸಲ್’ ಎಂದು ಗುರುತಿಸಲಾಗಿದೆ ಎಂಬ ಮಾಹಿತಿ ಕೋರಿದ್ದರು. ಆದರೆ, ಈ ಕುರಿತು ತಮ್ಮ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿರುವ ಸಚಿವಾಲಯವು, ಮಾಹಿತಿಯನ್ನು ‘ಶೂನ್ಯ’ (NIL) ಎಂದು ಘೋಷಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧಿಗಳು ಹಾಗೂ ನಿರ್ದಿಷ್ಟ ಸಿದ್ಧಾಂತ ಹೊಂದಿರುವವರನ್ನು ಗುರಿಯಾಗಿಸಿ ‘ದಿಮಾಗಿ ನಕ್ಸಲ್’ ಎಂಬ ಪದಪ್ರಯೋಗ ಮಾಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ರಾಜಕೀಯ ಹೇಳಿಕೆಯನ್ನೇ ಆಧರಿಸಿ, ಸರಕಾರ ಅಧಿಕೃತವಾಗಿ ಅಂತಹ ಯಾರನ್ನಾದರೂ ಗುರುತಿಸಿದೆಯೇ ಎಂದು ಪರಿಶೀಲಿಸಲು ಈ RTI ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಗೃಹ ಸಚಿವಾಲಯದ ನಕ್ಸಲಿಸಂ ಸಂಬಂಧಿತ ವಿಭಾಗದ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಈ ರೀತಿಯ ಯಾವುದೇ ಮಾಹಿತಿ ತಮ್ಮ ವ್ಯಾಪ್ತಿಯ ದಾಖಲೆಗಳಲ್ಲಿ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಈ ಉತ್ತರವು ರಾಜಕೀಯ ವೇದಿಕೆಗಳಲ್ಲಿ ಪ್ರಚಾರಕ್ಕಾಗಿ ಬಳಸುವ ವಿವಾದಾತ್ಮಕ ಪದಗಳು ಮತ್ತು ಅಧಿಕೃತ ಆಡಳಿತಾತ್ಮಕ ವರ್ಗೀಕರಣಗಳ ನಡುವಿನ ಅಂತರವನ್ನು ಬಯಲಿಗೆಳೆದಿದೆ. ಭಾಷಣಗಳಲ್ಲಿ ಸಾರ್ವಜನಿಕವಾಗಿ ಬಳಸಲಾಗುವ ಇಂತಹ ಹಣೆಪಟ್ಟಿಗಳಿಗೆ ಕಾನೂನುಬದ್ಧ ಅಥವಾ ಅಧಿಕೃತ ಆಧಾರಗಳಿಲ್ಲ ಎಂಬುದನ್ನು ಗೃಹ ಸಚಿವಾಲಯದ ‘NIL’ ಉತ್ತರವೇ ಸಾಬೀತುಪಡಿಸಿದಂತಾಗಿದೆ.
ಮತ್ತೊಂದೆಡೆ, ಸಚಿವಾಲಯವು ಈ ಅರ್ಜಿಯನ್ನು RTI ಕಾಯ್ದೆಯ ಸೆಕ್ಷನ್ 6(3)ರ ಅಡಿಯಲ್ಲಿ ತನ್ನ ಇತರ ವಿಭಾಗಗಳಿಗೆ ವರ್ಗಾಯಿಸಿದ್ದು, ಉತ್ತರದಿಂದ ಅತೃಪ್ತರಾದಲ್ಲಿ 30 ದಿನಗಳೊಳಗೆ ಜಂಟಿ ಕಾರ್ಯದರ್ಶಿ ಮುಂದೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ.