ಗಾಡಿಯಲ್ಲಿ ಋತುಮಾನದ ಹಣ್ಣುಗಳು; ಭಾರತದ ಬೇಸಗೆ ಹಣ್ಣುಗಳು ವೈರಲ್ ಆಗುತ್ತಿರುವುದೇಕೆ?

Update: 2026-07-23 20:02 IST

Photos: Swasti Pachauri

ಆಹಾರದ ಜಾಗತೀಕರಣದ ನಂತರ ವಿಶ್ವಾದ್ಯಂತ ವಿವಿಧ ಹಣ್ಣುಗಳು ಋತುಮಾನ ಪೂರ್ತಿ ಸಿಗುತ್ತಿದ್ದರೂ, ಋತುಮಾನಕ್ಕೆ ತಕ್ಕ ಆಹಾರ ಸೇವಿಸುವುದು ಉತ್ತಮ. ಇದರಿಂದ ಪರಿಸರವಿಜ್ಞಾನ ಹಾಗೂ ಸ್ಥಳೀಯ ಆರ್ಥಿಕತೆಗೂ ಉತ್ತೇಜನ ಸಿಗುತ್ತದೆ.

ಬೇಸಗೆ ಋತುವಿನಲ್ಲಿ ಭಾರತೀಯ ಮಾರುಕಟ್ಟೆಗಳಲ್ಲಿ ಸಿಗುವ ಹಣ್ಣುಗಳನ್ನು ನೋಡಿದರೆ, ನಾವೇಕೆ ಬ್ಲೂಬೆರಿ, ರಾಸ್ಬೆರಿ ಮತ್ತು ಸ್ಟ್ರಾಬೆರಿಗಳ ಬೆನ್ನು ಬೀಳುತ್ತೇವೆ ಎನ್ನುವ ಆಶ್ಚರ್ಯವಾಗುತ್ತದೆ. ನಿರಂತರ ಶಾಖ, ಹ್ಯುಮಿಡಿಟಿ ಮತ್ತು ಅಲ್ಪ ಮಳೆಯ ಎಚ್ಚರಿಕೆಗಳ ನಡುವೆ ಈ ಹಣ್ಣುಗಳನ್ನು ಸೇವಿಸಲು ಮರೆತುಬಿಡುತ್ತೇವೆ. ಮಾವಿನ ಹಣ್ಣುಗಳು ಗಮನ ಸೆಳೆಯುತ್ತಿದ್ದರೂ, ಇತರ ಹಣ್ಣುಗಳು ಮೂಲೆ ಸೇರುತ್ತಿದ್ದವು. ಆದರೆ ಈ ಬಾರಿ ನಮ್ಮ ನೇರಳೆ ಹಣ್ಣು ಬ್ಲೂಬೆರಿಗಿಂತ ಕಡಿಮೆ ಇಲ್ಲ ಎನ್ನುವಂತೆ ಪ್ರಚಾರ ಪಡೆದಿದೆ. ಭಾರತಾದ್ಯಂತ ಸಿಗುವ, ಮತ್ತೆ ಜನಪ್ರಿಯಗೊಳ್ಳುತ್ತಿರುವ ಹಾಗೂ ಈ ಬಾರಿ ಉತ್ತಮ ಇಳುವರಿಯಾಗಿರುವ ನೇರಳೆ ಮತ್ತು ಕರೋಂಡಾಗಳಂತಹ ಹಣ್ಣುಗಳ ಬಗ್ಗೆ ತಿಳಿದುಕೊಳ್ಳಲೇಬೇಕು.

ನೇರಳೆ ಭಾರತದಲ್ಲಿ ಬಹಳ ಹಿಂದಿನಿಂದಲೂ ಉಲ್ಲೇಖಿಸಲಾಗುತ್ತಿರುವ ಜಂಬೂದ್ವೀಪದ ಅತ್ಯಂತ ಸ್ಥಳೀಯ ಹಣ್ಣುಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಸೆಲೆಬ್ರಿಟಿ ಚೆಫ್ ವಿಕಾಸ್ ಖನ್ನಾ ಈ ನೇರಳೆಗಳನ್ನು ಪ್ಯಾಕ್ ಮಾಡಿ ಅಮೆರಿಕಕ್ಕೆ ಹೊತ್ತೊಯ್ದಿದ್ದರು. ಅಶೋಕ ರಸ್ತೆಯ ಹಸಿರು ಪ್ರದೇಶದಿಂದ ಆರಂಭಿಸಿ, ಮಧ್ಯ ಭಾರತದ ಬಯಲುಗಳಲ್ಲಿ ನೇರಳೆ ಮತ್ತು ನೆಲ್ಲಿಕಾಯಿ ಮರಗಳನ್ನು ನೆಡಬೇಕು ಎನ್ನುವ ಮಾತುಗಳವರೆಗೆ ಈ ಹಣ್ಣುಗಳು ಪ್ರಚಾರ ಪಡೆದಿವೆ.

ಈ ನಡುವೆ ಬೇಸಗೆಯಲ್ಲಿ ಅತ್ಯಂತ ಪ್ರಿಯವಾದ ಲಿಚಿ ಹಣ್ಣುಗಳು, ಮುಜಫರ್ಪುರದ ಜಿಐ ಟ್ಯಾಗ್ ಪಡೆದ ಶಾಹಿ ಲಿಚಿಗಳು ಈ ಬಾರಿ ಕಳಪೆ ಇಳುವರಿಯಿಂದ ದುಬಾರಿಯಾಗಿವೆ. ಹೀಗಾಗಿ ಲಿಚಿ ಬಿಕ್ಕಟ್ಟನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಬೇಕಾಗಿ ಬಂತು.

ಹಣ್ಣುಗಳು ಒಂದೆಡೆಯಾದರೆ, ಹರಿವೆ ಸೊಪ್ಪಿನಂತಹ ತರಕಾರಿಗಳು ಮತ್ತೊಂದೆಡೆ. ಹಣ್ಣುಗಳ ವಿಷಯಕ್ಕೆ ಬಂದಾಗ, ಬೇಸಗೆ ಸಮಯದಲ್ಲಿ ಕರಬೂಜದಂತೆಯೇ ಕಾಣುವ ಮತ್ತೊಂದು ಹಣ್ಣು ಕಾಚ್ರಿ (ಕಾಡು ಕಲ್ಲಂಗಡಿ) ಮಾರುಕಟ್ಟೆಗೆ ಬರುತ್ತದೆ. ಇವುಗಳನ್ನು ಹಸಿಯಾಗಿಯೇ ತಿನ್ನಬಹುದು ಅಥವಾ ಚಟ್ನಿ ಮಾಡಬಹುದು. ಇವುಗಳನ್ನು ಕತ್ತರಿಸಿ ಒಣಗಿಸಿ ಚಿಪ್ಸ್ ಮತ್ತು ವೇಫರ್‌ಗಳನ್ನೂ ತಯಾರಿಸಲಾಗುತ್ತದೆ. ಹುರಿದ ಕಾಚ್ರಿಯನ್ನು ದಾಲ್-ಚಾವಲ್ ಜೊತೆಗೆ ಬಡಿಸಲಾಗುತ್ತದೆ ಅಥವಾ ಚಹಾಗೆ ತಿನಿಸಾಗಿಯೂ ನೀಡಲಾಗುತ್ತದೆ.

ಫಾಲ್ಸಾ ಹಣ್ಣು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಹಣ್ಣುಗಳು ಮೇ ಮತ್ತು ಜೂನ್ ಸಂದರ್ಭದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತವೆ. ಬೇಸಗೆಯಲ್ಲಿ ತಂಪು ಮಾಡುವ ಹಣ್ಣೆಂದೇ ಇದು ಪ್ರಸಿದ್ಧಿಪಡೆದಿದೆ. ಮತ್ತೊಂದು ಹಣ್ಣು ಪುನಾರ್ಪುಳಿ ಅಥವಾ ಕೋಕಂ, ಮಲಬಾರಿನ ಹುಳಿ. ಇದು ಮಹಾರಾಷ್ಟ್ರದಿಂದ ಕರ್ನಾಟಕದವರೆಗೆ ಪ್ರಸಿದ್ಧಿಪಡೆದಿದೆ. ಶರಬತ್ ರೂಪದಲ್ಲಿಯೂ ಜನಪ್ರಿಯವಾಗಿದೆ. ಈಗ ಅವು ಉತ್ತರ ಭಾರತದಲ್ಲೂ ಸಿಗುತ್ತಿದ್ದು, ಈ ಬೇಸಗೆಯಲ್ಲಿ ಅನೇಕ ರೆಸ್ಟೊರೆಂಟ್‌ ಗಳು ಇವುಗಳ ಶರಬತ್ತನ್ನು ವಿತರಿಸುತ್ತಿವೆ. ಅಪರೂಪದ ಬ್ಲೂಬೆರಿಯನ್ನು 1836ರ ನಂತರ ಮತ್ತೆ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ವಿಜಯನಗರ ಅರಣ್ಯಗಳಲ್ಲಿ ಮತ್ತೆ ಪತ್ತೆ ಮಾಡಲಾಗಿದೆ.

ಈರೊಳು (ತಾರಿಫಲ) ಅಥವಾ ಐಸ್ ಆಪಲ್ ದಕ್ಷಿಣ ಭಾರತದ ಸೀಸನಲ್ ಹಣ್ಣಾಗಿದೆ. ಈ ವರ್ಷ ಅದಕ್ಕೆ ಬೇಡಿಕೆ ಏರಿಕೆಯಾಗಿದೆ. ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಇದು ನೈಸರ್ಗಿಕವಾಗಿ ಲಭ್ಯವಿದ್ದು, ತಂಪು ಮಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಭಾರತ ಐಸ್ ಆಪಲ್ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುವ ರಾಷ್ಟ್ರವಾಗಿದೆ.

ಜಂಬು ನೇರಳೆಗಳು (ರೋಸ್ ಆಪಲ್‌ ಗಳು) ಬಿಳಿ ಮತ್ತು ಗುಲಾಬಿ ಬಣ್ಣಗಳಲ್ಲಿ ಸಿಗುತ್ತಿದ್ದು, ಬೇಸಗೆಯಲ್ಲಿ ಶಾಖದಿಂದ ತಂಪು ಮಾಡಿಕೊಳ್ಳಲು ನೆರವಾಗುತ್ತವೆ. ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಇವುಗಳನ್ನು ಬೆಳೆಯಲಾಗುತ್ತದೆ. ರಂಬುಟಾನ್ ಮಾರುಕಟ್ಟೆಗಳಲ್ಲಿ ಸಿಗುವ ಮತ್ತೊಂದು ಹಣ್ಣು. ರಸ್ತೆಬದಿಯ ಮಾರಾಟಗಾರರ ಬಂಡಿಗಳು ಮತ್ತು ಹೆದ್ದಾರಿ ಅಂಗಡಿಗಳಲ್ಲಿ ಹೆಚ್ಚು ಸಿಗುತ್ತದೆ.

ಹಲಸಿನ ಹಣ್ಣು ಹೇರಳವಾಗಿ ಬೆಳೆಯುವ ರಾಜ್ಯಗಳಲ್ಲಿ ಅದರ ಪಕ್ವತೆಯನ್ನು ಆಧರಿಸಿ ಆನಂದಿಸಬಹುದು. ಹಸಿಯಾದ ಹಣ್ಣುಗಳಿಂದಲೂ ರುಚಿಕರವಾದ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಡ್ರ್ಯಾಗನ್ ಫ್ರುಟ್ ಅಮೆರಿಕದ ಹಣ್ಣಾದರೂ, ವಾರದ ಸಂತೆಯಲ್ಲಿ ಹೆಚ್ಚು ಸಿಗುತ್ತಿದೆ. ಬರಗಾಲದ ಕೃಷಿ ಸಂಕಷ್ಟದಿಂದ ಬಳಲುತ್ತಿರುವ ರೈತರು ಬೆಳೆ ವೈವಿಧ್ಯೀಕರಣದ ಪ್ರಯತ್ನಗಳ ಭಾಗವಾಗಿ ಈ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ವಿದರ್ಭ ಪ್ರದೇಶದಲ್ಲೂ ಡ್ರ್ಯಾಗನ್ ಫ್ರುಟ್ ಹೆಚ್ಚು ಬೆಳೆಯಲಾಗುತ್ತದೆ. ಇಂತಹುದೇ ಬೆಳೆ ವೈವಿಧ್ಯೀಕರಣದ ಭಾಗವಾಗಿ ಒಡಿಶಾ ಮತ್ತು ಜಾರ್ಖಂಡ್‌ ನ ರೈತರು ಹಳದಿ ಕಲ್ಲಂಗಡಿಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೆ, ಕೆಲವು ಮಾರಾಟಗಾರರು ತಾಜಾ ಅಂಜೂರದ ಹಣ್ಣುಗಳು ಮತ್ತು ಹಸಿರು ಬಾದಾಮಿಗಳನ್ನು ಸಂಗ್ರಹಿಸುತ್ತಿದ್ದಾರೆ. ಇವುಗಳನ್ನು ನಂತರ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ.

ಸ್ಪೈನಿ ಗಾರ್ಡ್ ಅಥವಾ ಮಡ ಹಾಗಲಕಾಯಿ ಕೇರಳದಲ್ಲಿ ಹೆಚ್ಚು ಸಿಗುತ್ತದೆ. ಸಣ್ಣ ಮುಳ್ಳುಗಳಿಂದ ಆವೃತವಾಗಿದ್ದರೂ, ಸಾಮಾನ್ಯ ಹಾಗಲಕಾಯಿಗಿಂತ ಸಿಹಿಯಾಗಿರುತ್ತದೆ. ಮುಂಗಾರು ಪ್ರಾರಂಭವಾಗುವವರೆಗೂ ಹಣ್ಣು ಬಿಡುತ್ತದೆ. ರಾಜಸ್ಥಾನದಲ್ಲಿ ಬೇಸಗೆಯಲ್ಲಿ ಸಿಗುವ ಕೆರ್ ಮತ್ತು ಸಾಂಗ್ರಿ ಹೆಚ್ಚು ಬಳಕೆಯಾಗುತ್ತವೆ. ಮಧ್ಯ ಭಾರತದ ಬಯಲು ಪ್ರದೇಶಗಳಲ್ಲಿ ಟೊರೈ ಮತ್ತು ಗಿಲ್ಕಿಗಳೂ ಹೆಚ್ಚು ಜನಪ್ರಿಯವಾಗಿವೆ.

ಇದಲ್ಲದೆ, ಲೆಕ್ಕವಿಲ್ಲದಷ್ಟು ಹಣ್ಣುಗಳು ಬೇಸಗೆಯಲ್ಲಿ ತಂಪಾಗಿಸಲು ಕಾಯಿ ಬಿಡುತ್ತವೆ. ಪ್ಲಮ್, ಪೀಚ್, ಪೇರಳೆ, ಬೆಲ್ ಇವುಗಳಲ್ಲಿ ಸೇರಿವೆ. ಲಸೋರಾ ಅಥವಾ ಗ್ಲೂ ಬೆರ್ರಿ, ದಕ್ಷಿಣ ಭಾರತದಲ್ಲಿ ಬಾಳೆಯ ಕಾಂಡ, ಬಿದಿರಿನ ಚಿಗುರುಗಳು, ಕುಂಬಳದ ಹೂವುಗಳು, ಬಿಲಿಂಬಿ (ಟ್ರೀ ಸೊರೆಲ್) ಕೂಡ ಬಳಕೆಯಾಗುತ್ತವೆ. ಅನನಾಸು ಮತ್ತೊಂದು ಜನಪ್ರಿಯ ಹಣ್ಣು. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮೇಘಾಲಯ ಅನನಾಸು ಉತ್ಸವದಲ್ಲಿ 30 ಟನ್ ಅನನಾಸು ಮಾರಾಟವಾದವು.

ಇವೆಲ್ಲವೂ ಭಾರತದ ಜೈವಿಕ ಆರ್ಥಿಕತೆಯ ಶ್ರೀಮಂತಿಕೆಯನ್ನು ತೋರಿಸುತ್ತವೆ. ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳುವ ಅಗತ್ಯವನ್ನು ಹೇಳುತ್ತವೆ. ಕಾಲೋಚಿತ ಹಣ್ಣುಗಳು ಹೆಚ್ಚು ಪೌಷ್ಠಿಕ ಹಾಗೂ ಸುಸ್ಥಿರ ಆಹಾರವಾಗಿರುತ್ತವೆ. ಆಹಾರದ ಜಾಗತೀಕರಣದ ನಂತರ ವಿಶ್ವಾದ್ಯಂತ ವಿವಿಧ ಹಣ್ಣುಗಳು ಋತುಮಾನ ಪೂರ್ತಿ ಸಿಗುತ್ತಿದ್ದರೂ, ಋತುಮಾನಕ್ಕೆ ತಕ್ಕ ಆಹಾರ ಸೇವಿಸುವುದು ಉತ್ತಮ. ಇದರಿಂದ ಪರಿಸರವಿಜ್ಞಾನ ಹಾಗೂ ಸ್ಥಳೀಯ ಆರ್ಥಿಕತೆಗೂ ಉತ್ತೇಜನ ಸಿಗುತ್ತದೆ.

ಮಾಹಿತಿ ಕೃಪೆ: Indian Express

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News