1997ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆಗೆ ಧರ್ಮೇಂದ್ರ ಪ್ರಧಾನ್ ನೇತೃತ್ವ ವಹಿಸಿದ್ದರೇ?; NEET ವಿವಾದದ ನಡುವೆ ವೈರಲ್ ಆದ 2021ರ ವರದಿ

Update: 2026-07-23 07:22 IST

Photo : x.com/IndiaToday

ಹೊಸದಿಲ್ಲಿ, ಜು.23: NEET UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಸುಮಾರು ಮೂರು ದಶಕಗಳ ಹಿಂದಿನ ಘಟನೆ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. 2021ರಲ್ಲಿ ಪ್ರಕಟವಾಗಿದ್ದ ವರದಿಯೊಂದರಲ್ಲಿ, 1997ರಲ್ಲಿ ಒಡಿಶಾದಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಪ್ರಧಾನ್ ಭಾಗವಹಿಸಿದ್ದನ್ನು ಉಲ್ಲೇಖಿಸಲಾಗಿದ್ದು, ಧರ್ಮೇಂದ್ರ ಪ್ರಧಾನ್ ಅವರ ಹಿಂದಿನ ನಿಲುವು ಮತ್ತು ಈಗಿನ ಪರಿಸ್ಥಿತಿಯನ್ನು ಹೋಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.

2021ರಲ್ಲಿ The New Indian Express ಪ್ರಕಟಿಸಿದ್ದ ವರದಿಯ ಪ್ರಕಾರ, ಪ್ರಧಾನ್ ಅವರ ಆಪ್ತರೊಬ್ಬರು 1997ರಲ್ಲಿ ಒಡಿಶಾ ಸಚಿವಾಲಯದ ಎದುರು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯನ್ನು ನೆನಪಿಸಿಕೊಂಡಿದ್ದಾರೆ. ಆ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ಪ್ರಧಾನ್ ಗಾಯಗೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

1997ರಲ್ಲಿ ಹೊಸದಾಗಿ ರಚನೆಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಸಂಸತ್ತಿನಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸುವ ಪ್ರಕ್ರಿಯೆಯಲ್ಲಿದ್ದ ಸಮಯದಲ್ಲೇ, ಒಡಿಶಾದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಭುಗಿಲೆದ್ದಿತ್ತು. ಆ ಸಂದರ್ಭದಲ್ಲಿ ಧರ್ಮೇಂದ್ರ ಪ್ರಧಾನ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು, ಬಿಜೆಪಿ ಸೇರುವ ಹಂತದಲ್ಲಿದ್ದರು.

ವರದಿಯ ಪ್ರಕಾರ, ಆಗಿನ ಕಾಂಗ್ರೆಸ್ ನೇತೃತ್ವದ ಒಡಿಶಾ ಸರ್ಕಾರದ ವಿರುದ್ಧ ಸುಮಾರು 1,500 ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರಧಾನ್ ನೇತೃತ್ವ ವಹಿಸಿದ್ದರು. ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಅನೇಕ ಮೂಳೆ ಮುರಿತಗಳಾಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯನ್ನು ಉಲ್ಲೇಖಿಸುವ ಪೋಸ್ಟ್‌ಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. 1997ರ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಅವರ ನಾಯಕತ್ವವನ್ನು ಕೆಲವರು ಶ್ಲಾಘಿಸುತ್ತಿದ್ದರೆ, ಇನ್ನು ಕೆಲವರು ಈಗ ಕೇಂದ್ರ ಶಿಕ್ಷಣ ಸಚಿವರಾಗಿರುವ ಅವರು ಪ್ರಶ್ನೆಪತ್ರಿಕೆ ಸೋರಿಕೆಗಳ ಪುನರಾವರ್ತಿತ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ತಡೆಯಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ವಿದ್ಯಾರ್ಥಿ ರಾಜಕೀಯದಿಂದ ರಾಷ್ಟ್ರೀಯ ರಾಜಕೀಯದವರೆಗೆ

2021ರ ಲೇಖನದ ಪ್ರಕಾರ, ಒಡಿಶಾ ಸರ್ಕಾರದ ವಿರುದ್ಧ ಎಬಿವಿಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಪ್ರಧಾನ್ ರಾಜ್ಯ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಸಂಘಟಿಸಿದ್ದರು. ಪೊಲೀಸ್ ಲಾಠಿ ಚಾರ್ಜ್‌ನಿಂದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದಿದ್ದು, ಪ್ರಧಾನ್ ಗಾಯಗೊಂಡರೂ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯ ಪ್ರಕಾರ, ಪ್ರಧಾನ್ 18ನೇ ವಯಸ್ಸಿನಲ್ಲೇ ಎಬಿವಿಪಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಉತ್ಕಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಅವರು ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. 1994ರ ನವೆಂಬರ್‌ನಿಂದ 1997ರವರೆಗೆ ಎರಡು ಬಾರಿ ಎಬಿವಿಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1997ರ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ವಹಿಸಿದ್ದ ಪಾತ್ರದ ಬಳಿಕ ಅವರು ಒಡಿಶಾದ ಪ್ರಮುಖ ವಿದ್ಯಾರ್ಥಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಭಟನೆಗಳಲ್ಲಿ ವಹಿಸಿದ್ದ ಸಕ್ರಿಯ ಪಾತ್ರ ಮತ್ತು ಪ್ರದರ್ಶಿಸಿದ್ದ ಸ್ಥೈರ್ಯ ಅವರಿಗೆ ವಿದ್ಯಾರ್ಥಿ ಚಳವಳಿಯಲ್ಲಿ ಮನ್ನಣೆ ತಂದುಕೊಟ್ಟಿತು. 1990ರ ದಶಕದಲ್ಲಿ ವಿವಿಧ ಪ್ರತಿಭಟನೆಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದ ಅವರು, ವೈಯಕ್ತಿಕ ಹಿತಾಸಕ್ತಿಗಳಿಗಿಂತ ಸಾರ್ವಜನಿಕ ಸಮಸ್ಯೆಗಳಿಗೆ ಆದ್ಯತೆ ನೀಡಿದ ನಾಯಕನಾಗಿ ಗುರುತಿಸಿಕೊಂಡರು. ವಿದ್ಯಾರ್ಥಿ ಕಾರ್ಯಕರ್ತ, ಸಂಘಟನಾ ನಾಯಕ ಹಾಗೂ ಸಾರ್ವಜನಿಕ ಪ್ರತಿನಿಧಿಯಾಗಿ ಅವರ ರಾಜಕೀಯ ಪಯಣ ಮುಂದುವರಿಯಿತು.

ಒಡಿಶಾದಲ್ಲಿ ಬಿಜೆಪಿಯ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವಲ್ಲಿ ಪ್ರಧಾನ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳದ ಎರಡು ದಶಕಗಳಿಗೂ ಅಧಿಕ ಆಡಳಿತಕ್ಕೆ ತೆರೆ ಎಳೆದು, 2024ರಲ್ಲಿ ಬಿಜೆಪಿ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿತು. ಈ ಗೆಲುವಿನ ಹಿಂದೆ ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ವಿಸ್ತರಿಸುವಲ್ಲಿ ಪ್ರಧಾನ್ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೀಟ್ ವಿವಾದದ ನಡುವೆ ಮತ್ತೆ ಚರ್ಚೆ

2021ರಲ್ಲಿ ನಿಶಾಂಕ್ ಪೋಖ್ರಿಯಾಲ್ ಅವರಿಂದ ಕೇಂದ್ರ ಶಿಕ್ಷಣ ಸಚಿವರ ಹುದ್ದೆ ವಹಿಸಿಕೊಂಡ ಬಳಿಕ ಧರ್ಮೇಂದ್ರ ಪ್ರಧಾನ್ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಂದ ಹಿಡಿದು CBSEಗೆ ಸಂಬಂಧಿಸಿದ ವಿವಿಧ ವಿವಾದಗಳವರೆಗೆ ಹಲವು ಸಂದರ್ಭಗಳಲ್ಲಿ ಅವರು ಟೀಕೆಗೆ ಗುರಿಯಾಗಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ದೇಶಾದ್ಯಂತ 90ಕ್ಕೂ ಹೆಚ್ಚು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗಿದ್ದು, ಇದು ಶಿಕ್ಷಣ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬೆಳವಣಿಗೆಗಳ ನಡುವೆಯೇ ಪ್ರಧಾನ್ ಮತ್ತೆ ಟೀಕೆಯ ಕೇಂದ್ರಬಿಂದುವಾಗಿದ್ದಾರೆ.

ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ರಾಜಕೀಯ ನಾಯಕರು, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು, ಪೋಷಕರು ಹಾಗೂ ಇತರ ಪಾಲುದಾರರು ಭಾಗವಹಿಸಿದ್ದು, ಶಿಕ್ಷಣ ಸಚಿವರು ಹೊಣೆಗಾರಿಕೆ ವಹಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. 2026ರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News