×
Ad

ಒಂದು ಹಳ್ಳಿಯ ಕತೆ

Update: 2025-12-31 10:10 IST

ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅಧಿಕೃತ ಭೂದಾಖಲೆಯೇ ನೂರಮೂವತ್ತು ವರ್ಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟಿಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟಿಷರು ಹೋಗಿ ಈಗಾಗಲೇ ಎಪ್ಪತ್ತೈದು ವರ್ಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ.ಮೀ.ಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಕರಾಗಿದ್ದವರು.

ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಭಾಗದಲ್ಲಿದೆ. ಇಲ್ಲಿಂದ ಜೋಗಕ್ಕೆ ವೈಮಾನಿಕ ದೂರ ಸುಮಾರು ಒಂದು ಕಿ.ಮೀ. ಇರಬಹುದು. ರಸ್ತೆಯಲ್ಲಿ ಸಾಗಿದರೆ ಅದು ಸುಮಾರು ಎಂಟು ಕಿ.ಮೀ.ಗಳು ಅಗಬಹುದು. ಈ ಹಳ್ಳಿಯ ಹೆಸರು ಪಡನ್ ಬೈಲು. ಇದು ಆಡಳಿತಾತ್ಮಕವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಸೇರುತ್ತದೆ. ಈ ಹಳ್ಳಿಯ ಪಕ್ಕದಲ್ಲಿ, ಅಂದರೆ ಎರಡೂವರೆ ಕಿ.ಮೀ.ಗಳಷ್ಟು ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಈ ಹೆದ್ದಾರಿಯಿಂದ ಒಂದು ಮಣ್ಣುರಸ್ತೆ ಕವಲೊಡೆದು ಈ ಹಳ್ಳಿಯ ಮೂಲಕ ಸಾಗುತ್ತದೆ. ಈ ರಸ್ತೆ ಮುಂದೆ ಎಂಟರಿಂದ ಹತ್ತು ಕಿ.ಮೀ. ಕ್ರಮಿಸಿ ಕಾರ್ಗಲ್ ಎಂಬ ಊರಿನ ಮೂಲಕ ಮತ್ತೆ ಅದೇ ಹೆದ್ದಾರಿಯನ್ನು ಸೇರಿಕೊಳ್ಳುತ್ತದೆ. ಇದನ್ನು ಜಿಲ್ಲಾ ಮುಖ್ಯರಸ್ತೆ ಎಂದು ಗುರುತಿಸಿ ಕಿ.ಮೀ. ಕಲ್ಲುಗಳನ್ನು ಹಾಕಲಾಗಿದೆ. ಆದರೆ ಈ ರಸ್ತೆಯಲ್ಲಿ ಬೇಸಿಗೆಯಲ್ಲೇ ವಾಹನಗಳು ತಿರುಗಾಡಲು ಸಾಧ್ಯವಿಲ್ಲದಂತಹ ಸ್ಥಿತಿಯಿದೆ. ಕನಿಷ್ಠ ಜಲ್ಲಿಕಲ್ಲುಗಳನ್ನು ಕೂಡ ಇನ್ನೂ ಕಾಣದಿರುವ ಜಿಲ್ಲಾ ಮುಖ್ಯ ರಸ್ತೆ ಎಂದು ಕರೆಸಿಕೊಂಡಿರುವ ರಸ್ತೆ ಇದಾಗಿದೆ ಎಂದರೆ ನೀವು ನಂಬಲೇಬೇಕು. ಇನ್ನು ಮಳೆಗಾಲದಲ್ಲಂತೂ ಕಾಲ್ನಡಿಗೆಯಷ್ಟೇ ಸಾಧ್ಯ. ಆಟೊರಿಕ್ಷಾಗಳಾಗಲೀ, ಬೈಕು, ಕಾರುಗಳಾಗಲೀ ಮಳೆಗಾಲದಲ್ಲಿ ಈ ರಸ್ತೆಗಿಳಿಯಲು ಅಸಾಧ್ಯವೆನ್ನುವಂತಹ ಪರಿಸ್ಥಿತಿಯಿದೆ. ಪಡನ್ ಬೈಲಿನ ಜನರು ಸೇರಿಕೊಂಡು ಶ್ರಮದಾನ ಮಾಡಿ ತಮ್ಮ ಊರಿನವರೆಗಿನ ರಸ್ತೆಯನ್ನು ವರ್ಷವರ್ಷವೂ ರಿಪೇರಿ ಮಾಡುತ್ತಿರುವುದರಿಂದಾಗಿ ಬೇಸಿಗೆಯಲ್ಲಿ ಒಂದಷ್ಟು ಶ್ರಮ ವಹಿಸಿ ವಾಹನಗಳನ್ನು ಅಲ್ಲಿಯವರೆಗೆ ತೆಗೆದುಕೊಂಡು ಹೋಗಬಹುದು ಅಷ್ಟೆ. ಯಾರಿಗಾದರೂ ಆರೋಗ್ಯ ಏರುಪೇರಾಗಿ ನಡೆಯಲಾರದಂತಹ ಪರಿಸ್ಥಿತಿ ಬಂದರೆ ಕಂಬಳಿ ಇಲ್ಲವೇ ಬೆಡ್‌ಶೀಟಿನಲ್ಲಿ ಮಲಗಿಸಿ ನಾಲ್ಕಾರು ಜನರು ಸೇರಿ ಎತ್ತಿಕೊಂಡು ಹಲವು ಕಿ.ಮೀ. ಕ್ರಮಿಸಿ ಹೆದ್ದಾರಿ ಸೇರಿ ಅಲ್ಲಿಂದ ಯಾವುದಾದರೂ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿ ಈಗಲೂ ಇದೆಯೆಂದರೆ ಅಲ್ಲಿನ ಪರಿಸ್ಥಿತಿಯ ದಾರುಣತೆಯನ್ನು ಗ್ರಹಿಸಬಹುದು. ಈ ರಸ್ತೆಯಲ್ಲಿ ಕಾರ್ಗಲ್‌ವರೆಗೂ ಹಲವಾರು ಮನೆಗಳಿವೆ. ಅವರುಗಳಂತೂ ಏಳೆಂಟು ಕಿ.ಮೀ.ಗಳು ಈ ರಸ್ತೆಯೆಂದು ಕರೆಯಲ್ಪಡುವ ಆದರೆ ವಾಹನಗಳು ಚಲಿಸಲಾಗದಂತಿರುವ ದಾರಿಯಲ್ಲಿ ಸಾಗಿ ಬರಬೇಕಾಗುತ್ತದೆ. ಶಾಲೆಗಳಿಗೆ ಹೋಗುವ ಮಕ್ಕಳಂತೂ ಮಳೆಗಾಲದಲ್ಲಿ ಪಡುವ ಪಾಡು ಅಷ್ಟಿಷ್ಟಲ್ಲ. ರಭಸವಾಗಿ ಸುರಿಯುವ ಭಾರೀ ಮಳೆ ಹಾಗೂ ರಭಸದ ಕುಳಿರ್ಗಾಳಿಯ ಜೊತೆಗೆ ಕಾಡಿನ ರಸ್ತೆಯ ಕೆಸರಿನ ಮಧ್ಯೆ ಹಲವು ಕಿ.ಮೀ.ಗಳಷ್ಟು ನಡೆದುಕೊಂಡೇ ಸಾಗಬೇಕಾದ ದುಸ್ಥಿತಿ.

ಅಲ್ಲಿನವರಿಗೆ ಅಲ್ಪಸ್ವಲ್ಪ ಭೂಮಿಯಿದೆ. ಭತ್ತ, ಅಡಿಕೆ ಪ್ರಧಾನವಾಗಿ ಬೆಳೆಯುತ್ತಾರೆ. ಅಡಿಕೆಗೆ ರೋಗ ಈಗಾಗಲೇ ಹರಡತೊಡಗಿದೆ. ಈ ಹಳ್ಳಿ ಸ್ವಯಂಪೂರ್ಣ ಹಳ್ಳಿಯಂತೆ ಇದೆ. ಮಿಗುತಾಯ ಆದಾಯ ಎನ್ನುವುದು ಇಲ್ಲವೆನ್ನುವಷ್ಟು ಕಡಿಮೆ. ಪಕ್ಕದಲ್ಲೇ ಲೋಕಪ್ರಸಿದ್ಧವೆಂದು ಕರೆಯಲ್ಪಡುವ ಜೋಗ ಜಲಪಾತವಿದೆ. ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗಳು ಇಲ್ಲಿಗೆ ಬೇಟಿ ನೀಡುತ್ತಾರೆ. ದೇಶದ ಒಂದು ಪ್ರಮುಖ ಪ್ರವಾಸಿ ತಾಣವೆಂದು ಜೋಗ ಜಲಪಾತಕ್ಕೆ ಹೆಸರಿದೆ. ಕವಿಗಳಿಗೆ ಸೌಂದರ್ಯ ಹಾಗೂ ರಮ್ಯತೆಯ ಸ್ಫೂರ್ತಿಯಾಗಿ ಕನ್ನಡದ ಕವಿ ನಿಸಾರ್ ಅಹಮದ್‌ರಿಂದ ನಿತ್ಯೋತ್ಸವ ಕವನದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಜಲಪಾತವಿದು. ‘ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ’ ಎಂದೆಲ್ಲಾ ಕರ್ನಾಟಕದ ಮೇರು ಕಲಾವಿದ ರಾಜಕುಮಾರ್‌ರಿಂದ ಹಾಡಿಸಿಕೊಂಡ ತಾಣವಿದು. ಆದರೆ ‘ಜೋಗದ ಸಿರಿಯ ಬೆಳಕು’ ಈ ಭಾಗದ ಜನರ ಬದುಕಿಗೆ ಸಿರಿ ಹೋಗಲಿ ಕನಿಷ್ಠ ಮೂಲಭೂತ ನಾಗರಿಕ ಸೌಲಭ್ಯಗಳಿಗೂ ದಾರಿ ಮಾಡಿಕೊಡಲಿಲ್ಲವೆಂದರೆ ಏನನ್ನಬೇಕು? ಇಷ್ಟೆಲ್ಲಾ ಇದ್ದರೂ ಜೋಗಕ್ಕೆ ಹೊಂದಿಕೊಂಡಿರುವ ಈ ಹಳ್ಳಿಗಳಿಗೆ ಕನಿಷ್ಠ ಜಲ್ಲಿ ರಸ್ತೆಯೂ ಇಲ್ಲ. ವಿದ್ಯುತ್ ಸಂಪರ್ಕವಿದ್ದರೂ ಮಿಕ್ಸಿ ನಡೆಸಲೂ ಕೂಡ ವೋಲ್ಟೇಜ್ ಇರುವುದಿಲ್ಲವೆಂದರೆ ನಮ್ಮ ದೇಶದ ಅದರಲ್ಲೂ ನಮ್ಮ ರಾಜ್ಯದ ಅಭಿವೃದ್ಧಿಯ ಅಣಕವಲ್ಲವೇ?! ಈ ಹಳ್ಳಿಯು ನಮ್ಮ ನಾಡಿನ ಇಂತಹ ಸಾವಿರಾರು ಹಳ್ಳಿಗಳನ್ನು ಪ್ರತಿನಿಧಿಸುತ್ತದೆ ಎನ್ನಬಹುದು.

ಇದು ನಮ್ಮ ರಾಜಕೀಯ ಅಧಿಕಾರ ವ್ಯವಸ್ಥೆ ಇಲ್ಲವೇ ಆಡಳಿತ ವ್ಯವಸ್ಥೆಯ ಗಂಭೀರ ವೈಫಲ್ಯವಲ್ಲವೇ?! ಈ ಭಾಗವನ್ನು ಕರ್ನಾಟಕದ ಅಧಿಕಾರ ರಾಜಕಾರಣದ ದಿಗ್ಗಜರಲ್ಲಿ ಸ್ಥಾನ ಪಡೆದಿದ್ದ ಬಂಗಾರಪ್ಪ, ಕಾಗೋಡು ತಿಮ್ಮಪ್ಪರಂತಹವರು ವಿಧಾನ ಸಭೆಯಲ್ಲಿ ಪ್ರತಿನಿಧಿಸಿದ್ದರು. ಬಂಗಾರಪ್ಪ ಮುಖ್ಯ ಮಂತ್ರಿಯಾಗಿಯೂ ಅಧಿಕಾರ ನಡೆಸಿದವರು. ಕಾಗೋಡು ತಿಮ್ಮಪ್ಪ ಶಾಸಕ, ಸಭಾಪತಿ, ಕಂದಾಯ ಮಂತ್ರಿಯಾಗಿಯೂ ಅಧಿಕಾರ ನಡೆಸಿದವರು. ನಂತರ ಕುಮಾರ್ ಬಂಗಾರಪ್ಪ, ಈಗ ಮಧುಬಂಗಾರಪ್ಪ, ಬೇಳೂರು ಗೋಪಾಲಕೃಷ್ಣರಂತಹವರು ಪ್ರತಿನಿಧಿಸುತ್ತಿದ್ದಾರೆ. ಮಧು ಬಂಗಾರಪ್ಪ ಸಂಫುಟ ಸಚಿವರಾಗಿರುವವರು.

ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣರು ನಗುತ್ತಿರುವ ಕಟೌಟುಗಳು ಜೋಗ ಜಲಪಾತದ ಸ್ಥಳದಲ್ಲಿ ಈಗಲೂ ನೋಡಬಹುದು. ಅವರುಗಳ ಅದರಲ್ಲಿನ ನಗುಮುಖದ ಅರ್ಥವೇನೋ ಗೊತ್ತಿಲ್ಲ.

ಇದು ಕೇವಲ ಈ ಒಂದು ಹಳ್ಳಿಗಷ್ಟೇ ಸೀಮಿತವಾದ ವಿಚಾರವಲ್ಲ ಈ ಶಿವಮೊಗ್ಗ ಜಿಲ್ಲೆಯ ಈ ಭಾಗದ ಹಾಗೂ ಉತ್ತರಕನ್ನಡ ಜಿಲ್ಲೆಯ ಹಲವು ಹಳ್ಳಿಗಳ ಕತೆಗಳು ಹಾಗೂ ಪರಿಸ್ಥಿತಿಗಳು ಇದೇ ರೀತಿಯಲ್ಲಿವೆ. ಅಲ್ಪ ಸ್ವಲ್ಪ ವ್ಯತ್ಯಾಸಗಳು ಕಾಣಬಹುದಷ್ಟೇ. ಈ ಎಲ್ಲಾ ಹಳ್ಳಿಗಳಿರುವ ಭಾಗಗಳು ಕರ್ನಾಟಕ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿರುವ ಪ್ರದೇಶಗಳಾಗಿವೆ ಎನ್ನುವುದನ್ನಿಲ್ಲಿ ಗಮನಿಸಬೇಕು.

ಕೆಲವು ವರ್ಷಗಳ ಹಿಂದೆ ಈ ಹಳ್ಳಿಗಾಡುಗಳಿರುವ ಪ್ರದೇಶವನ್ನು ಖಾಸಗಿ ಕಂಪನಿಯೊಂದಕ್ಕೆ ಜೋಗ ಜಲಪಾತದ ಅಭಿವೃದ್ಧಿಯ ಹೆಸರಿನಲ್ಲಿ ಪರಭಾರೆ ಮಾಡಲು ಸರಕಾರಿ ವ್ಯವಸ್ಥೆ ಹೊರಟಿತ್ತು. ಚೆಕ್ ಡ್ಯಾಮ್ ನಿರ್ಮಿಸಿ ಈ ಪ್ರದೇಶವನ್ನು ಮುಳುಗಡೆ ಮಾಡಿ ನೂರಾರು ವರುಷಗಳಿಂದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನರನ್ನು ಒಕ್ಕಲೆಬ್ಬಿಸಿ ನಿರ್ವಸಿತರನ್ನಾಗಿ ಮಾಡಿ ಕಾರ್ಪೊರೇಟ್‌ಗಳಿಗೆ ಭಾರೀ ಲಾಭ ಮಾಡಿಕೊಡುವ ಕುತಂತ್ರ ಅದಾಗಿತ್ತು. ಜೋಗ ಜಲಪಾತ ವರ್ಷವಿಡೀ ತುಂಬಿತುಳುಕುವಂತೆ ಮಾಡುವ ಭಾರೀ ಪ್ರವಾಸೋದ್ದಿಮೆ ಅಭಿವೃದ್ದಿ ಯೋಜನೆ ಎಂದೆಲ್ಲಾ ಅದನ್ನು ಬಿಂಬಿಸಲಾಗಿತ್ತು. ಈ ಭಾಗದ ಜನಸಾಮಾನ್ಯರು ಹಾಗೂ ಪ್ರಕೃತಿಯ ನಾಶಕ್ಕೆ ಕಾರಣವಾಗಬಹುದಾಗಿದ್ದ ಆ ಯೋಜನೆಗೆ ಜನರ ವಿರೋಧ ತೀವ್ರವಾಗಿದ್ದರಿಂದ ಅದು ಜಾರಿಯಾಗಿರಲಿಲ್ಲ. ಈ ಭಾಗದವರೇ ಆಗಿದ್ದ ಕನ್ನಡದ ಸಾಹಿತಿ, ಕತೆಗಾರ ನಾ. ಡಿಸೋಜರು ಹೋರಾಟದಲ್ಲಿ ಇಲ್ಲಿನ ಜನರೊಂದಿಗೆ ನಿಂತಿದ್ದರು. ಅದರಿಂದಾಗಿ ಈ ಭಾಗದ ಹಳ್ಳಿಗಳಷ್ಟೇ ಅಲ್ಲ ಕಾಡು ಹಾಗೂ ಸಾವಿರಾರು ಎಕರೆ ಕೃಷಿಯೋಗ್ಯ ಭೂಪ್ರದೇಶವೂ ಮುಳುಗಡೆಯಾಗುತ್ತಿತ್ತು. ಅದೂ ಅಲ್ಲದೆ ಹಿಂದೆ ಲಿಂಗನಮಕ್ಕಿ ಅಣೆಕಟ್ಟೆಗಾಗಿ ಕೂಡ ಈ ಭಾಗದಿಂದ ಭಾರೀ ಪ್ರಮಾಣದಲ್ಲಿ ಕಲ್ಲು ಮಣ್ಣುಗಳನ್ನು ಬಗೆದು ಸಾಗಿಸಲಾಗಿತ್ತು.

ಕಾರ್ಪೊರೇಟ್‌ಗಳಿಗೆ ಲಾಭದ ಖಜಾನೆಯನ್ನು ತೆರೆದುಕೊಡುವ ಯೋಜನೆಗಳ ಜಾರಿಗಾಗಿನ ಉತ್ಸಾಹ ಹಾಗೂ ಮುತುವರ್ಜಿ ಜನಸಾಮಾನ್ಯರ ವಿಚಾರದಲ್ಲಿ ತೋರದಿರುವವರೇ ನಮ್ಮ ಅಧಿಕಾರ ರಾಜಕಾರಣದಲ್ಲಿರುವವರಲ್ಲಿ ಹೆಚ್ಚಿನವರಾಗಿದ್ದಾರೆ. ಇದು ನಮ್ಮ ಚುನಾವಣಾ ರಾಜಕಾರಣದ ಪ್ರಧಾನ ಭಾಗವಾಗಿರುವುದು ನಾಡಿನ ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ಇದಕ್ಕೆ ಪಕ್ಷಗಳ ಭೇದಗಳೂ ಇಲ್ಲವಲ್ಲ. ಕರ್ನಾಟಕ ಸರಕಾರ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಆಡಳಿತಾಂಗ ಇನ್ನಾದರೂ ತಮ್ಮ ಇರುವಿಕೆಯನ್ನು ಈ ಭಾಗದ ಜನರ ಬದುಕಿಗೆ ಪೂರಕವಾಗಿ ತೋರಿಸುತ್ತಾರೋ.. ಕಾದುನೋಡಬೇಕಾಗಿದೆ. ಜನರು ಸಂಘಟಿತರಾಗಿ ಇದಕ್ಕಾಗಿ ಶ್ರಮಿಸಬೇಕಾದ ಅಗತ್ಯವೂ ಇದೆ. ನಾಡಿನ ಜನರ ಒತ್ತಾಸೆಯೂ ಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News