×
Ad

ಹೊಸ ವರ್ಷದ ಸಂದೇಶದ ರೂಪದಲ್ಲಿ ಬರುತ್ತಿದೆ APK ಫೈಲ್, ತೆರೆಯುವಾಗ ಜಾಗ್ರತೆ!

Update: 2025-12-28 15:54 IST

ಸಾಂದರ್ಭಿಕ ಚಿತ್ರ | Photo Credit : freepik.com

ಈ ಹೊಸ ವರ್ಷದಲ್ಲಿ ದುರುದ್ದೇಶಪೂರಿತ Apk ಫೈಲ್‌ ನಿಂದ ಎಚ್ಚರವಾಗಿರಿ. ಹೊಸ ವರ್ಷದ ಸಂದೇಶ ಅಥವಾ ಫೋಟೋಗಳು ಇರುವ ಎಪಿಕೆ ಫೈಲ್‌ ಗಳನ್ನು ತೆರೆದಲ್ಲಿ ನಿಮ್ಮ ಫೋನ್ ಅನ್ನು ದುರುಳರ ಕೈಗೆ ಕೊಟ್ಟೀರಿ ಜೋಕೆ!

ಹೊಸ ವರ್ಷದ ಸಂದೇಶ ಅಥವಾ ಫೋಟೋಗಳು ಇರುವ ಎಪಿಕೆ ಫೈಲ್‌ ಗಳನ್ನು ತೆರೆದಲ್ಲಿ ನಿಮ್ಮ ಫೋನ್ ಅನ್ನು ದುರುಳರ ಕೈಗೆ ಕೊಟ್ಟೀರಿ ಜೋಕೆ! ಸಂದೇಶದಲ್ಲಿ ಲಗತ್ತಿಸಿರಬಹುದಾದ ಎಪಿಕೆ ಫೈಲ್ ತೆರೆಯದಿರಿ. ನಿಮಗೆ ಮೇಲ್ನೋಟಕ್ಕೆ ಹೊಸ ವರ್ಷದ ಶುಭಾಶಯದ ವಾಟ್ಸ್‌ ಆ್ಯಪ್ ಸಂದೇಶವಾಗಿ ಕಾಣಬಹುದು. ಸಂದೇಶದಲ್ಲಿ ಒಂದು ಎಪಿಕೆ ಫೈಲ್ ಲಗತ್ತಿಸಲಾಗಿರುತ್ತದೆ ಮತ್ತು ಡೌನ್‌ಲೋಡ್ ಮಾಡುವಂತೆ ಆಮಿಷ ಒಡ್ಡಲಾಗಿರುತ್ತದೆ.

ನಿಮಗಾಗೇ ಪ್ರತ್ಯೇಕವಾಗಿ ರೂಪಿಸಿದ ಶುಭಾಶಯಗಳನ್ನು ಸ್ನೇಹಿತರು ಮತ್ತು ಸಂಬಂಧಿಕರಿಂದ ಹಂಚಿಕೊಳ್ಳುವುದು ಸಾಮಾನ್ಯ ವಿಚಾರ. ಆದರೆ ಈ ಎಪಿಕೆ ಫೈಲ್ ಅನ್ನು ನೀವು ಡೌನ್‌ಲೋಡ್ ಮಾಡಿದರೆ ಗಂಟೆಗಳೊಳಗೆ, ಅನುಮಾನಾಸ್ಪದ ಚಟುವಟಿಕೆ ಫೋನ್‌ ನಲ್ಲಿ ಕಾಣಿಸಬಹುದು. ತಮ್ಮಷ್ಟಕ್ಕೆ ನಿಮ್ಮ ಮೊಬೈಲ್‌ ನಲ್ಲಿರುವ ಆ್ಯಪ್ ಗಳು ತೆರೆದುಕೊಳ್ಳಬಹುದು. ಸಂಪರ್ಕ ಸಂಖ್ಯೆಗಳಿಗೆ ದುರುಳರು ಪ್ರವೇಶ ಪಡೆಯುತ್ತಾರೆ. ಮತ್ತು ಕೆಲವು ಪ್ರಕರಣಗಳಲ್ಲಿ ಅನಧಿಕೃತ ಬ್ಯಾಂಕ್ ವ್ಯವಹಾರಗಳೂ ಸಂಭವಿಸಬಹುದು.

ಹಬ್ಬದ ಸಂದರ್ಭದಲ್ಲಿ ಹೆಚ್ಚಾಗುವ APK ಫೈಲ್‌ಗಳು

ಸೈಬರ್ ತಜ್ಞರು ಹೇಳುವ ಪ್ರಕಾರ ಈ ದುರುದ್ದೇಶಪೂರಿತ ಎಪಿಕೆ ಫೈಲ್‌ಗಳನ್ನು ಕಳುಹಿಸುವ ಮೂಲಕ ಸದ್ದೇ ಇಲ್ಲದೆ ನಿಮ್ಮ ಫೋನ್‌ ಅನ್ನು ದುರುಳರು ನಿಯಂತ್ರಿಸಲು ಆರಂಭಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಇಂತಹ ಸಂದೇಶಗಳು ಹೆಚ್ಚಾಗುತ್ತವೆ. ಜನರು ಅಪರಿಚಿತ ಲಿಂಕ್‌ ಗಳನ್ನು ಕ್ಲಿಕ್ ಮಾಡುವುದು ಹೆಚ್ಚಾಗಿರುತ್ತದೆ. ಅಥವಾ ಫೈಲ್‌ಗಳನ್ನು ಗಮನಿಸದೆ ಡೌನ್‌ಲೋಡ್ ಮಾಡಿರುತ್ತಾರೆ.

ಈ ಕುರಿತಂತೆ ಹೈದರಾಬಾದ್ ಪೊಲೀಸರು ಇತ್ತೀಚೆಗೆ ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ.” ವಂಚಕರು ವಾಟ್ಸ್‌ಆ್ಯಪ್, ಎಸ್‌ಎಂಎಸ್ ಮತ್ತು ಇಮೇಲ್‌ಗಳ ಮೂಲಕ ಹಬ್ಬದ ಸಂದರ್ಭದಲ್ಲಿ ಜನರನ್ನು ಮರಳುಗೊಳಿಸಲು ಪ್ರಯತ್ನಿಸುತ್ತಾರೆ. ಅಮಾಯಕ ಆನ್‌ಲೈನ್ ಬಳಕೆದಾರರನ್ನು ಗುರಿಯಾಗಿಸಿ ಈ ಸಂದೇಶಗಳನ್ನು ಕಳುಹಿಸಲಾಗುತ್ತದೆ ಮತ್ತು ಹಣಕಾಸು ಮತ್ತು ವೈಯಕ್ತಿಕ ಡಾಟಾ ಕದಿಯಲಾಗುತ್ತಿದೆ” ಎಂದು ಪೊಲೀಸರು ಎಚ್ಚರಿಸಿದ್ದಾರೆ.

APK ಫೈಲ್ ಎಂದರೇನು?

ಒಂದು ಆಂಡ್ರ್ಯಾಡ್ ಪ್ಯಾಕೇಜ್ ಕಿಟ್ ಅಥವಾ ಎಪಿಕೆ ಫೈಲ್ ಅನ್ನು ನಿಮ್ಮ ಸ್ಮಾರ್ಟ್‌ ಫೋನ್‌ ಗಳು ಮುಖ್ಯವಾಗಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಅಪ್ಲಿಕೇಶನ್‌ ಗಳನ್ನು ಇನ್‌ ಸ್ಟಾಲ್ ಮಾಡಲು ಬಳಸಲಾಗುತ್ತದೆ. ಮುಖ್ಯವಾಗಿ ವಿಂಡೋಸ್ ಕಂಪ್ಯೂಟರ್‌ನಲ್ಲಿ ಬಳಸಲಾಗುವ .exe ಫೈಲ್‌ ನಂತೆಯೇ ಇರುತ್ತದೆ. ಅಪ್ಲಿಕೇಶನ್‌ ಕಾರ್ಯನಿರ್ವಹಿಸಲು ಬೇಕಾಗಿರುವುದೆಲ್ಲವೂ ಅದರಲ್ಲಿರುತ್ತದೆ. ಎಲ್ಲವನ್ನೂ ಒಂದೇ ಪ್ಯಾಕ್‌ ನಲ್ಲಿ ಕೊಡಲಾಗಿರುತ್ತದೆ.

ಸಾಮಾನ್ಯವಾಗಿ ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್‌ ನಿಂದ ಡೌನ್‌ಲೋಡ್ ಮಾಡಲಾಗುತ್ತದೆ. ಆದರೆ ಎಪಿಕೆ ಫೈಲ್‌ ಗಳನ್ನು ಇತರ ವೆಬ್‌ ತಾಣಗಳು ಅಥವಾ ಹಂಚಿಕೊಳ್ಳುವ ತಾಣಗಳಾದ ವಾಟ್ಸ್‌ಆ್ಯಪ್, ಎಸ್‌ಎಂಎಸ್ ಅಥವಾ ಇಮೇಲ್ ಮೂಲಕವೂ ಕಳುಹಿಸಬಹುದು. ಇದನ್ನು ಸೈಡ್ ಲೋಡಿಂಗ್ ಎಂದು ಕರೆಯುತ್ತಾರೆ.

ಅಪಾಯಕಾರಿ ಸೈಡ್ ಲೋಡಿಂಗ್

ಸೈಡ್‌ಲೋಡಿಂಗ್ ಕೆಲವೊಮ್ಮೆ ಉತ್ತಮವಾಗಿದ್ದರೂ, ಅಪಾಯಕಾರಿ. ಎಪಿಕೆ ಫೈಲ್‌ಗಳು ಅಪರಿಚಿತ ಅಥವಾ ವಿಶ್ವಾಸಾರ್ಹವಲ್ಲದ ಮೂಲದಿಂದ ಬಂದಲ್ಲಿ ಅದರಲ್ಲಿ ಮಾಲ್ವರೆಗಳು ಇರಬಹುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು. ನಿಮ್ಮ ಫೋನಿಗೆ ಪ್ರವೇಶ ಪಡೆಯಬಹುದು ಮತ್ತು ಹಣಕಾಸು ನಷ್ಟವೂ ಸಂಭವಿಸಬಹುದು. ಹೀಗಾಗಿ ಎಪಿಕೆ ಫೈಲ್‌ ಗಳನ್ನು ಡೌನ್‌ಲೋಡ್ ಮಾಡುವಾಗ ಅವು ವಿಶ್ವಾಸಾರ್ಹ ಮೂಲವೇ ಎಂದು ಗಮನಿಸಬೇಕು. ಅಪರಿಚಿತ ಸಂದೇಶಗಳು ಅಥವಾ ಲಿಂಕ್ ಮೂಲಕ ಬಂದಲ್ಲಿ ಅದನ್ನು ಅಲಕ್ಷಿಸಬೇಕು.

ಪರಿಚಿತರಿಂದಲೇ ಖೆಡ್ಡಾ

ಬಹಳಷ್ಟು ಬಾರಿ ಎಪಿಕೆ ಫೈಲ್‌ ಗಳು ಪರಿಚಿತರಿಂದಲೇ ಬರಬಹುದು. ಆರಂಭದಲ್ಲಿ ಹ್ಯಾಪಿ ನ್ಯೂ ಇಯರ್ ಎನ್ನುವ ಸಂದೇಶ ಬರಬಹುದು. ನಂತರ ಕ್ಲಿಕ್ ಮಾಡಿದರೆ ನಿಮಗಾಗಿ ವಿಶೇಷ ಗ್ರೀಟಿಂಗ್ ಎಂದು ಇರಬಹುದು. ಕೆಲವೊಮ್ಮೆ ಸಹೋದ್ಯೋಗಿ, ದೂರದ ಸಂಬಂಧಿಕರು ಅಥವಾ ಸ್ನೇಹಿತರ ಕಡೆಯಿಂದಲೂ ಬರಬಹುದು. ಯಾವುದೇ ಪ್ರಕರಣಗಳಲ್ಲಿ ದಾಳಿಕೋರರು ಲಿಂಕ್ ಹರಡಲು ವಾಟ್ಸ್‌ಆ್ಯಪ್ ಬಳಸುವುದೇ ಹೆಚ್ಚು. ಹೀಗಾಗಿ ವಿಶ್ವಾಸಾರ್ಹ ಮೂಲವೆಂದು ತಿಳಿದು ಡೌನ್‌ಲೋಡ್ ಮಾಡುವ ಅಪಾಯ ಹೆಚ್ಚಾಗಿರುತ್ತದೆ. ಹೊಸ ವರ್ಷದ ಶುಭಾಶಯ ಎನ್ನುವ ಸಂದೇಶ ಬಂದ ನಂತರ ಅದರಲ್ಲಿ ಸಂದೇಶ ನೋಡಲು ಆ್ಯಪ್ ಇರುತ್ತದೆ. ಅದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡುವುದಿಲ್ಲ. ಬದಲಾಗಿ ಎಪಿಕೆ ಫೈಲ್ ಆಗಿರುತ್ತದೆ. ಅದು ನಿಮ್ಮನ್ನು ಜಾಲಕ್ಕೆ ಬೀಳಿಸುವ ತಂತ್ರವಾಗಿದೆ.

ಸರ್ಕಾರದ ಹೆಸರಿನಲ್ಲೂ ಎಪಿಕೆ

ಇತ್ತೀಚೆಗೆ ವಾಟ್ಸ್‌ಆ್ಯಪ್ನಲ್ಲಿ ಪ್ರಸಾರ ಮಾಡಲಾಗುತ್ತಿರುವ ಎಪಿಕೆ ಫೈಲ್‌ಗಳನ್ನು ಸರ್ಕಾರದಿಂದ ಬಂದಿರುವ ರೀತಿಯಲ್ಲಿ ಕಳುಹಿಸಲಾಗುತ್ತಿದೆ. RTO ಚಲನ್.ಎಪಿಕೆ, SBI ಯೋಜನಾ.ಎಪಿಕೆ ಅಥವಾ ಕಿಸಾನ್‌ಯೋಜನಾ.ಎಪಿಕೆ ಎಂಬ ಹೆಸರಿನಲ್ಲಿ ಕಳುಹಿಸಲಾಗುತ್ತಿದೆ. ಜನರು ಭಯ ಅಥವಾ ಆಸೆಯಿಂದ ಟ್ರಾಫಿಕ್ ಚಲನ್ ಅಥವಾ ಸರ್ಕಾರದ ಯೋಜನೆಗಳ ಕುರಿತಾದ ಸಂದೇಶ ಎಂದುಕೊಂಡು ಎಪಿಕೆಯನ್ನು ಕ್ಲಿಕ್ ಮಾಡುತ್ತಾರೆ.

ಆದರೆ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಕಳುಹಿಸಿರುವ ಸಂದೇಶ ಹೊಸದಾಗಿದೆ. ವಂಚಕರು ಹೊಸ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಅದರಲ್ಲಿ ಹೊಸ ವರ್ಷದ ಗಿಫ್ಟ್‌.ಎಪಿಕೆ, ಕ್ರಿಸ್ಮಸ್ ಗ್ರೀಟಿಂಗ್.ಎಪಿಕೆ ಅಥವಾ ಲಾಸ್ಟ್‌ ಇಯರ್‌ ನ್ಯೂಯಿರ್ ಪಾರ್ಟಿ ಪಿಕ್ಸ್‌.ಎಪಿಕೆ ಮೊದಲಾಗಿ ಕಳುಹಿಸುತ್ತಿದ್ದಾರೆ.

ಫೈಲ್ ಹೆಸರುಗಳನ್ನು ಸ್ಮರಣೀಯ ವೀಡಿಯೋ ಅಥವಾ ಫೋಟೋ ಎನ್ನುವಂತೆ ಕಾಣುವ ರೀತಿಯಲ್ಲಿ ಕಳುಹಿಸಲಾಗುತ್ತಿದೆ. ಹೆಸರುಗಳು ಬದಲಾಗಿದ್ದರೂ ಅದರಲ್ಲಿರುವ ಮಾಲ್ವರೆ ಒಂದೇ ಆಗಿರುತ್ತದೆ. ಒಮ್ಮೆ ಇನ್‌ ಸ್ಟಾಲ್ ಮಾಡಿದರೆ ನಿಮ್ಮ ಫೋನ್ ನಿಯಂತ್ರಣ ದುರುಳರ ಕೈಗೆ ಹೊರಟು ಹೋಗಲಿದೆ. ವೈಯಕ್ತಿಕ ಡಾಟಾದಿಂದ ಹಣಕಾಸು ವಿವರಗಳವರೆಗೆ ಎಲ್ಲವೂ ಬಹಿರಂಗವಾಗಿಬಿಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News