ಅದಾನಿ ಪವರ್ ಲಿ.ವೊಂದಕ್ಕೇ ಎರಡು ವರ್ಷದಲ್ಲಿ 53.16 ಮಿ. ಮೆಟ್ರಿಕ್ ಟನ್ ಕಲ್ಲಿದ್ದಲು ಹಂಚಿಕೆ

Update: 2026-07-24 08:13 IST

ಬೆಂಗಳೂರು : ಭಾರತದಲ್ಲಿ ಪ್ರತೀ ಖಾಸಗಿ ವಲಯದ ವಿದ್ಯುತ್ ಉತ್ಪಾದಕರಿಗೆ 2024ರಿಂದ 2026ವರೆಗೆ 212.69 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿಪಿಎ) ಕಲ್ಲಿದ್ದಲು ಹಂಚಿಕೆಯಾಗಿದೆ. ಈ ಪೈಕಿ ಅದಾನಿ ಪವರ್ ಲಿಮಿಟೆಡ್ ಒಂದಕ್ಕೇ ಈ ಎರಡು ವರ್ಷಗಳಲ್ಲಿ 53.16 ಮಿಲಿಯನ್ ಮೆಟ್ರಿಕ್ ಟನ್ ಪ್ರಮಾಣದಲ್ಲಿ ಕಲ್ಲಿದ್ದಲು ಹಂಚಿಕೆಯಾಗಿದೆ.

ಕರ್ನಾಟಕ ಸಂಸದ ಜಿ. ಕುಮಾರ್ ನಾಯಕ್ ಅವರು ಲೋಕಸಭೆಯಲ್ಲಿ 2026ರ ಜುಲೈ 23ರಂದು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗೆ ಕೇಂದ್ರ ವಿದ್ಯುತ್ ಇಲಾಖೆಯು ನೀಡಿರುವ ಉತ್ತರದಲ್ಲಿ ಈ ಮಾಹಿತಿಯಿದೆ.

2024 ರಲ್ಲಿ ಭಾರತ ಸರಕಾರ ದೀರ್ಘಾವಧಿಯ ಕಲ್ಲಿದ್ದಲು ವಿದ್ಯುತ್ ಖರೀದಿ ಒಪ್ಪಂದಗಳನ್ನು ಪುನರಾರಂಭಿಸಿದಾಗಿನಿಂದ ಅದಾನಿ ಗ್ರೂಪ್ ಮುಂದಿನ 25 ವರ್ಷಗಳಲ್ಲಿ 13.27 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯವನ್ನು ಗಳಿಸುವ ಸರಕಾರಿ ಒಪ್ಪಂದಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಇದೀಗ ಕೇಂದ್ರ ಸರಕಾರವೇ ಅಧಿಕೃತವಾಗಿ ನೀಡಿರುವ ಈ ಮಾಹಿತಿಯು ಮುನ್ನೆಲೆಗೆ ಬಂದಿದೆ.

ಖಾಸಗಿ ವಲಯದ ವಿದ್ಯುತ್ ಉತ್ಪಾದಕ ಕಂಪೆನಿಗಳಿಗೆ ಕಲ್ಲಿದ್ದಲು ಹಂಚಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 2017ರಲ್ಲಿ ಶಕ್ತಿ ನೀತಿಯನ್ನು ಜಾರಿಗೆ ತರಲಾಗಿತ್ತು. 2025ರಲ್ಲಿ ಈ ನೀತಿಯನ್ನು ಪರಿಷ್ಕೃತಗೊಳಿಸಿತ್ತು. 2024ರಿಂದ ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳಿಗೆ ಸಂಬಂಧಿಸಿದ ಉಷ್ಣ ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಹಂಚಿಕೆಯಾಗಿರುವ ಪಟ್ಟಿಯಲ್ಲಿಯೂ ಅದಾನಿ ಪವರ್ ಲಿಮಿಟೆಡ್ ಮೇಲುಗೈ ಸಾಧಿಸಿರುವುದು ಕೇಂದ್ರವು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

2024ರಿಂದ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಗಳಿಗೆ ಸಂಬಂಧಿಸಿದ ಉಷ್ಣ ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಹಂಚಿಕೆಗಾಗಿ ರಾಜ್ಯ ವಿದ್ಯುತ್ ಸಂಸ್ಥೆಗಳು ಮತ್ತು ವಿದ್ಯುತ್ ಖರೀದಿ ಏಜೆನ್ಸಿಗಳು ಪ್ರಸ್ತಾವನೆ ಸಲ್ಲಿಸಿದ್ದವು. ಇದರಲ್ಲಿ ಜಿಂದಾಲ್ ಸಮೂಹದ ಜೆಎಸ್‌ಡಬ್ಲ್ಯು ಕೂಡ ಇತ್ತು. ಆದರೆ ಅದಾನಿ ಪವರ್ ಲಿಮಿಟೆಡ್‌ಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಹಂಚಿಕೆಯಾಗಿರುವುದು ಕೇಂದ್ರವು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಕೋಲ್ ಇಂಡಿಯಾ ಲಿಮಿಟೆಡ್ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳು ಮತ್ತು ನೀತಿಗಳ ಅಡಿಯಲ್ಲಿ 2026ರ ಮಾರ್ಚ್ 31ರ ಅಂತ್ಯಕ್ಕೆ ಒಟ್ಟು 617.7 ಮಿಲಿಯನ್ ಟನ್ ಪ್ರಮಾಣದಲ್ಲಿ ದೀರ್ಘಾವಧಿ ಇಂಧನ ಪೂರೈಕೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಖಾಸಗಿ ವಲಯದ ವಿದ್ಯುತ್ ಸ್ಥಾವರಗಳಿಗೆ 174.6 ಮಿಲಿಯನ್ ಟನ್ ಹಂಚಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ವಲಯದ ವಿದ್ಯುತ್ ಸ್ಥಾವರಗಳಿಗೆ 443.1 ಮಿಲಿಯನ್ ಟನ್ ಹಂಚಿಕೆಯಾಗಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಹೀಗಾಗಿ, ಖಾಸಗಿ ವಲಯದ ವಿದ್ಯುತ್ ಸ್ಥಾವರಗಳು ಮತ್ತು ಕೇಂದ್ರ/ರಾಜ್ಯ ವಲಯದ ವಿದ್ಯುತ್ ಸ್ಥಾವರಗಳ ನಡುವಿನ ಅನುಪಾತ 28 : 72ರಷ್ಟಿದೆ. ವಿವಿಧ ಯೋಜನೆಗಳು ಮತ್ತು ನೀತಿಗಳ ಅಡಿಯಲ್ಲಿ ಸಿಂಗರೇಣಿ ಕಂಪೆನಿ ಲಿಮಿಟೆಡ್ (ಎಸ್‌ಸಿಸಿಎಲ್)ನೊಂದಿಗೆ 83.08 ಮಿಲಿಯನ್ ಟನ್ ದೀರ್ಘಾವಧಿಯ ಇಂಧನ ಪೂರೈಕೆ ಒಪ್ಪಂದ ಹೊಂದಿದೆ. ಈ 83.08 ಮಿಲಿಯನ್ ಟನ್ ಸಂಪೂರ್ಣ ಪ್ರಮಾಣವು ಕೇಂದ್ರ ಮತ್ತು ರಾಜ್ಯ ವಲಯದ ವಿದ್ಯುತ್ ಸ್ಥಾವರಗಳಿಗೆ ಮಾತ್ರ ಹಂಚಿಕೆಯಾಗಿದೆ. ಖಾಸಗಿ ವಲಯದ ವಿದ್ಯುತ್ ಸ್ಥಾವರಗಳು ಕೇಂದ್ರ ಹಾಗೂ ರಾಜ್ಯ ವಲಯದ ವಿದ್ಯುತ್ ಸ್ಥಾವರಗಳು ಎಂಬ ಅನುಪಾತ 0 : 100 ರಷ್ಟಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

ಕರ್ನಾಟಕಕ್ಕೆ ಹಂಚಿಕೆಯಾಗಿದ್ದೆಷ್ಟು?

ಕರ್ನಾಟಕದಲ್ಲಿ ಒಪಿಜಿ ಪವರ್ ಜನರೇಷನ್ ಲಿಮಿಟೆಡ್ ( 150 ಮೆಗಾವ್ಯಾಟ್), ಬಾರಧಾರ ಟಿಪಿಪಿ (ಡಿಬಿ ಪವರ್) 125 ಮೆಗಾವ್ಯಾಟ್, ಜಿಎಂಆರ್ ಎನರ್ಜಿ 100 ಮೆಗಾವ್ಯಾಟ್‌ಗೆ ಸೇರಿ ಒಟ್ಟಾರೆ 2,000 ಮೆಗಾವ್ಯಾಟ್‌ಗೆ 10.26 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲನ್ನು 2024ರ ಜೂನ್ 11ರಿಂದ 26ವರೆಗೆ ಹಂಚಿಕೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿನ ಸಲಬೋನಿ ಟಿಪಿಪಿ ಜೆಎಸ್‌ಡಬ್ಲ್ಯುಎನರ್ಜಿ ಲಿಮಿಟೆಡ್‌ಗೆ 1,600 ಮೆಗಾವ್ಯಾಟ್‌ಗೆ ಒಟ್ಟಾರೆ 16.08 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲು ಹಂಚಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News