‘ಹೆಸರು ಬೇಕಿದ್ದರೆ ಬದಲಿಸಿ, ನಮ್ಮ ಭವಿಷ್ಯ ಹಾಳುಮಾಡಬೇಡಿ’: ಜೌಹರ್ ವಿಶ್ವವಿದ್ಯಾಲಯ ಕಟ್ಟಡ ತೆರವಿಗೆ ವಿದ್ಯಾರ್ಥಿಗಳ ಆತಂಕ
"ಹೆಸರಿನಿಂದ ತೊಂದರೆಯಿದ್ದರೆ ಹೆಸರನ್ನು ಬದಲಾಯಿಸಿ, ವಿಶ್ವವಿದ್ಯಾಲಯವನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಿ... ಆದರೆ ಕಟ್ಟಡಗಳನ್ನು ನೆಲಸಮ ಮಾಡಬೇಡಿ" ಎಂದು ರಾಂಪುರದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದಲ್ಲಿ ಒಟಿ ಟೆಕ್ನಿಷಿಯನ್ ಕೋರ್ಸ್ ಮಾಡುತ್ತಿರುವ 20 ವರ್ಷದ ಶಾಹವೇಜ್ ಹೇಳುತ್ತಾರೆ.
ವಿಶ್ವವಿದ್ಯಾಲಯದ 40 ಕಟ್ಟಡಗಳ ಪೈಕಿ 38 ಕಟ್ಟಡಗಳನ್ನು ತೆರವುಗೊಳಿಸುವಂತೆ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರವು ಜುಲೈ 15ರಂದು ನೋಟಿಸ್ ನೀಡಿದ್ದು, ಆಗಸ್ಟ್ 5ರವರೆಗೆ ಕಾಲಾವಕಾಶ ನೀಡಿದೆ. ಈ ಬೆನ್ನಲ್ಲೇ ಎಂ.ಫಾರ್ಮಾ ಅಂತಿಮ ವರ್ಷದ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿರುವ 26 ವರ್ಷದ ಮೊಹಮ್ಮದ್ ಶೋಯೆಬ್, ಇನ್ನು ಮೂರು ತಿಂಗಳಲ್ಲಿ ನಡೆಯಬೇಕಿರುವ ಪದವಿಪ್ರದಾನ ಸಮಾರಂಭ ಏನಾಗಲಿದೆಯೋ ಅಥವಾ ತಮಗೆ ಸಿಗುವ ಪದವಿ ಪ್ರಮಾಣಪತ್ರ ಮಾನ್ಯತೆ ಪಡೆಯುತ್ತದೆಯೋ ಇಲ್ಲವೋ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಕಾಲೇಜು ಕಟ್ಟಡ ಮತ್ತು ಶೈಕ್ಷಣಿಕ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲಾ ಕಟ್ಟಡಗಳನ್ನು ನೆಲಸಮಗೊಳಿಸಿದರೆ, ಸುಮಾರು 20 ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಸ್ಥಾಪಿಸಿದ 250 ಎಕರೆ ವಿಸ್ತೀರ್ಣದ ಈ ಸಂಸ್ಥೆಯು ಸಂಪೂರ್ಣವಾಗಿ ಮುಚ್ಚಲ್ಪಡಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಈ ವಿಶ್ವವಿದ್ಯಾಲಯದ ಆಜೀವ ಕುಲಪತಿಯಾಗಿರುವ ಅಜಂ ಖಾನ್ ವಿರುದ್ಧ ಸುಮಾರು ನೂರು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು 2019ರೊಂದರಲ್ಲೇ ದಾಖಲಾಗಿದ್ದು, ಸುಮಾರು 30 ಪ್ರಕರಣಗಳು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯದ ಗೇಟ್ ಬಳಿ ರಾಂಪುರದ ಸರ್ಕಾರಿ ಕಾಲೇಜುಗಳ ಸುಮಾರು 15 ಶಿಕ್ಷಕರು ಮತ್ತು ಸಿಬ್ಬಂದಿಗಳು ಟೆಂಟ್ ಹಾಕಿ ನಡೆಸುತ್ತಿರುವ ‘ವಿದ್ಯಾರ್ಥಿ ಸಲಹಾ ಕೇಂದ್ರ’ವು ಶೋಯೆಬ್ ಅವರಿಗೆ ಆತಂಕಪಡಬೇಡಿ, ನಿಮಗೆ ಪದವಿ ದೊರೆಯಲಿದೆ ಎಂದು ಧೈರ್ಯ ತುಂಬುತ್ತಿದೆ.
ಆದರೆ ಇದರ ಪರಿಣಾಮ ಕೇವಲ ತಮಗೆ ಅಥವಾ ಇತರ ವಿದ್ಯಾರ್ಥಿಗಳಿಗೆಷ್ಟೇ ಸೀಮಿತವಾಗಿರುವುದಿಲ್ಲ ಎಂದು ಶೋಯೆಬ್ ಅಭಿಪ್ರಾಯಪಡುತ್ತಾರೆ. "2011ರ ಜನಗಣತಿಯಲ್ಲಿ ರಾಂಪುರವು ಉತ್ತರ ಪ್ರದೇಶದಲ್ಲೇ ಸಾಕ್ಷರತೆಯಲ್ಲಿ ಐದನೇ ಅತ್ಯಂತ ಕೆಳಮಟ್ಟದ ಜಿಲ್ಲೆಯಾಗಿತ್ತು. ನಮ್ಮನ್ನು ನೋಡಿ ಎಲ್ಲರೂ ತಮಾಷೆ ಮಾಡುತ್ತಿದ್ದರು. ಈಗ ಜಿಲ್ಲೆಯಲ್ಲಿರುವ ಒಂದೇ ಒಂದು ವಿಶ್ವವಿದ್ಯಾಲಯವನ್ನು ನೆಲಸಮಗೊಳಿಸಿದರೆ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿ" ಎನ್ನುತ್ತಾರೆ ಅವರು.
ಹಿಜಾಬ್ ಧರಿಸಿ ಸ್ಕೂಟಿಯಲ್ಲಿ ಹೊರಟಿದ್ದ ಮೂವರು ಸ್ನೇಹಿತೆಯರು ಈ ಪ್ರಶ್ನೆಗೆ ಆತಂಕ ವ್ಯಕ್ತಪಡಿಸುತ್ತಾರೆ. "ಸರ್ಕಾರವೇನೋ 'ಬೇಟಿ ಬಚಾವೋ, ಬೇಟಿ ಪಢಾವೋ' ಎಂದು ಹೇಳುತ್ತದೆ, ಆದರೆ ನಮ್ಮ ಶಿಕ್ಷಣದ ಗತಿಯೇನು? ನಮ್ಮ ಪೋಷಕರು ನಮ್ಮನ್ನು ಬೇರೆ ಎಲ್ಲೂ ಓದಲು ಕಳುಹಿಸುವುದಿಲ್ಲ" ಎಂದು ಸ್ಕೂಟಿ ಚಲಾಯಿಸುತ್ತಿದ್ದ ಫರಾ ಹೇಳುತ್ತಾರೆ. ಈ ಮೂವರೂ ವಿಶ್ವವಿದ್ಯಾಲಯದಲ್ಲಿ ನರ್ಸಿಂಗ್ ಕೋರ್ಸ್ ಕಲಿಯುತ್ತಿದ್ದಾರೆ.
ಅವರ ಇಷ್ಟದ ಬೇರೆ ಕಾಲೇಜುಗಳಿಗೆ ಸೇರ್ಪಡೆ ಮಾಡುವುದಾಗಿ ಸಲಹೆಗಾರರು ಭರವಸೆ ನೀಡುತ್ತಿದ್ದರೂ, "ನಾವು ಬೇರೆಲ್ಲೂ ಹೋಗಲು ಬಯಸುವುದಿಲ್ಲ" ಎಂದು ಮೂವರೂ ಒಟ್ಟಾಗಿ ಹೇಳುತ್ತಾರೆ.
ವಿಶ್ವವಿದ್ಯಾಲಯವನ್ನು ನಡೆಸುತ್ತಿರುವ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್‌ನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ವಿಜ್ಞಾನ, ಕಾನೂನು, ಹ್ಯೂಮಾನಿಟೀಸ್, ವಾಣಿಜ್ಯ, ಇಸ್ಲಾಮಿಕ್ ಅಧ್ಯಯನ, ಶಿಕ್ಷಣ, ಕೃಷಿ ವಿಜ್ಞಾನ ಮತ್ತು ಫಾರ್ಮಸಿ ಸೇರಿದಂತೆ 14 ವಿಭಾಗಗಳ ಸುಮಾರು 40 ಕೋರ್ಸ್‌ಗಳು ಮತ್ತು ಡಿಪ್ಲೊಮಾಗಳಲ್ಲಿ ಸುಮಾರು 2,400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಪ್ಯಾರಾಮೆಡಿಕಲ್ ಮತ್ತು ಫಾರ್ಮಸಿಯಂತಹ ವೃತ್ತಿಪರ ಕೋರ್ಸ್‌ಗಳಲ್ಲಿದ್ದಾರೆ. ಇವರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರಿದ್ದು, ಗಮನಾರ್ಹ ಸಂಖ್ಯೆಯಲ್ಲಿ ಹಿಂದೂ ವಿದ್ಯಾರ್ಥಿಗಳೂ ಇದ್ದಾರೆ.
ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ರಾಂಪುರ ಜಿಲ್ಲೆಯಲ್ಲಿ ಬೇರೆ ಯಾವುದೇ ವಿಶ್ವವಿದ್ಯಾಲಯವಿಲ್ಲ. ಹತ್ತಿರದ ವಿಶ್ವವಿದ್ಯಾಲಯಗಳೆಂದರೆ 50 ಕಿ.ಮೀ ದೂರದಲ್ಲಿರುವ ಮೊರಾದಾಬಾದ್ ನ ಸರ್ಕಾರಿ ವಿಶ್ವವಿದ್ಯಾಲಯ ಮತ್ತು ಗುರು ಜಂಬೇಶ್ವರ ವಿಶ್ವವಿದ್ಯಾಲಯ. ಜೌಹರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಆಡಳಿತ ಮಂಡಳಿಯು ಸಿದ್ಧಪಡಿಸಿರುವ 30 ಕಾಲೇಜುಗಳ ಪಟ್ಟಿಯಲ್ಲಿರುವ ಹೆಚ್ಚಿನವು ಗುರು ಜಂಬೇಶ್ವರ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿವೆ. ಕಳೆದ ವರ್ಷವಷ್ಟೇ ಸ್ಥಾಪನೆಯಾದ ಗುರು ಜಂಬೇಶ್ವರ ವಿಶ್ವವಿದ್ಯಾಲಯಕ್ಕೆ ಇನ್ನೂ ಸ್ವಂತ ಕ್ಯಾಂಪಸ್ ಇಲ್ಲ ಎಂದು ಮೂಲಗಳು ತಿಳಿಸಿವೆ.
ಕಟ್ಟಡ ತೆರವು ನೋಟಿಸ್‌ನೊಂದಿಗೆ ಜೌಹರ್ ವಿಶ್ವವಿದ್ಯಾಲಯದ ಗೇಟ್‌ನಲ್ಲಿ ಸಲಹೆಗಾರರನ್ನು ನಿಯೋಜಿಸುವುದಾಗಿ ಜಿಲ್ಲಾಡಳಿತ ಘೋಷಿಸಿತ್ತು. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾದ ಕಾಲೇಜುಗಳ ಹೆಸರು ಸೇರಿದಂತೆ ಯಾವುದೇ ಪ್ರಶ್ನೆಗಳಿಗೆ ಇವರು ಉತ್ತರಿಸಲಿದ್ದಾರೆ. ಸಲಹೆಗಾರರು ಕ್ಯಾಂಪಸ್‌ಗೆ ಪ್ರವೇಶಿಸುವ ಮತ್ತು ಹೊರಹೋಗುವ ಪ್ರತಿಯೊಬ್ಬ ವಿದ್ಯಾರ್ಥಿಯ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಸಲಹಾ ಕೇಂದ್ರದ ಮುಖ್ಯಸ್ಥರು ಹಾಗೂ ಸರ್ಕಾರಿ ರಾಝಾ ಪಿಜಿ ಕಾಲೇಜಿನ ಪ್ರಾಂಶುಪಾಲರಾದ ಜಾಗೃತಿ ಮದನ್ ಅವರು The India Express ಜತೆ ಮಾತನಾಡಿದ್ದು, ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. "ವಿದ್ಯಾರ್ಥಿಗಳು ಈ 30 ಕಾಲೇಜುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲಿ ಐದು ಸರ್ಕಾರಿ ಕಾಲೇಜುಗಳಾಗಿದ್ದು, ಬಾಕಿಯಿರುವ ಖಾಸಗಿ ಕಾಲೇಜುಗಳು ಗುರು ಜಂಬೇಶ್ವರ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿವೆ. ಜೌಹರ್ ವಿಶ್ವವಿದ್ಯಾಲಯದಲ್ಲಿರುವ ಬಹುತೇಕ ಕೋರ್ಸ್‌ಗಳು ಇಲ್ಲಿ ಲಭ್ಯವಿವೆ" ಎಂದು ಅವರು ತಿಳಿಸಿದ್ದಾರೆ.
ತೆರವು ನೋಟಿಸ್ ಅವಧಿ ಮುಗಿಯಲು ಇನ್ನು ಹಲವು ದಿನಗಳಿರುವಾಗಲೇ ಸಲಹಾ ಕೇಂದ್ರವನ್ನು ಏಕೆ ಆರಂಭಿಸಲಾಗಿದೆ ಎಂದು ಪ್ರಶ್ನಿಸಿ, ಜುಲೈ 18ರಂದು ವಿದ್ಯಾರ್ಥಿಗಳು ತೆರವು ಆದೇಶ ಹಾಗೂ ಸಲಹಾ ಕೇಂದ್ರದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಇದರ ಬೆನ್ನಲ್ಲೇ ಸಲಹೆಗಾರರು ತಮ್ಮ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿದರು.
ಹೆಚ್ಚಿನ ವಿದ್ಯಾರ್ಥಿಗಳು ಕೇಂದ್ರದಲ್ಲಿ ತಮ್ಮ ಹೆಸರು, ವ್ಯಾಸಂಗ ಮಾಡುತ್ತಿರುವ ಕೋರ್ಸ್ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸುತ್ತಿದ್ದರೂ, ಆತಂಕ ಮಾತ್ರ ಕಡಿಮೆಯಾಗಿಲ್ಲ. ವಿದ್ಯಾರ್ಥಿಗಳ ಹೊರತಾಗಿ, ಅವರ ಸಂಬಂಧಿಕರು ಹಾಗೂ ಹಳೆಯ ವಿದ್ಯಾರ್ಥಿಗಳು ಕೂಡ ಕ್ಯಾಂಪಸ್‌ಗೆ ಆಗಮಿಸುತ್ತಿದ್ದಾರೆ. "ಈ ಹಿಂದೆ ನೀಡಿರುವ ಪದವಿ ಮತ್ತು ಡಿಪ್ಲೊಮಾ ಪ್ರಮಾಣಪತ್ರಗಳಿಗೆ ಮಾನ್ಯತೆ ಇರುತ್ತದೆಯೇ?" ಹಾಗೂ "ನಾವು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ ನಮ್ಮ ಪ್ರಮಾಣಪತ್ರಗಳನ್ನು ಯಾರು ಪರಿಶೀಲಿಸುತ್ತಾರೆ?" ಎಂದು ಅವರು ಪ್ರಶ್ನಿಸುತ್ತಿದ್ದಾರೆ.
ಸಲಹೆಗಾರರ ಬಳಿಯಿರುವ ರಿಜಿಸ್ಟರ್ ಗಳಲ್ಲಿ ಕೆಲವರು "ವಿಶ್ವವಿದ್ಯಾಲಯವನ್ನು ನೆಲಸಮಗೊಳಿಸಬೇಡಿ, ಇದು ನಮ್ಮ ಭವಿಷ್ಯವನ್ನು ಹಾಳುಮಾಡುತ್ತದೆ" ಎಂದು ಮನವಿ ಬರೆದಿದ್ದಾರೆ. ಇನ್ನು ಕೆಲವರು ಅನಿವಾರ್ಯವಾಗಿ "ಯಾವುದೇ ಅಭ್ಯಂತರವಿಲ್ಲ" ಎಂದು ನಮೂದಿಸಿದ್ದಾರೆ.
ದಂಡ ವಿಧಿಸುವುದು ಅಥವಾ ಇತರ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ಕಟ್ಟಡಗಳನ್ನೇ ನೆಲಸಮಗೊಳಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಗಟ್ಟಿಯಾಗಿ ಕೇಳಿಬರುತ್ತಿದೆ. ಫರಾ ಕೂಡಾ ಇದನ್ನೇ ಹೇಳಿದ್ದು, "ಏನಾದರೂ ಲೋಪದೋಷಗಳಿದ್ದರೆ ಅವುಗಳನ್ನು ಸರಿಪಡಿಸಬಹುದು" ಎಂದಿದ್ದಾರೆ.
ಎರಡು ವರ್ಷಗಳ ಹಿಂದೆ ಇದೇ ವಿಶ್ವವಿದ್ಯಾಲಯದಲ್ಲಿ ಫಾರ್ಮಸಿ ಕೋರ್ಸ್ ಪೂರ್ಣಗೊಳಿಸಿದ ಅನ್ಸಾರ್ ಅಲಿ ಮಾತನಾಡಿ, "ವಿಶ್ವವಿದ್ಯಾಲಯ ಹಾಗಿರಲಿ, ಇಲ್ಲಿಗೆ ಹತ್ತಿರದಲ್ಲಿರುವ ರಾಝಾ ಕಾಲೇಜಿಗೆ ಹೋಗಬೇಕೆಂದರೂ 30 ನಿಮಿಷ ಪ್ರಯಾಣಿಸಬೇಕು. ಇದರಿಂದ ಹೆಣ್ಣುಮಕ್ಕಳಿಗೆ ಹೆಚ್ಚಿನ ತೊಂದರೆಯಾಗಲಿದ್ದು, ಅವರನ್ನು ಮನೆಯಲ್ಲೇ ಕುಳ್ಳಿರಿಸುವ ಸಾಧ್ಯತೆಯಿದೆ. ಅಲ್ಲದೆ, ಬೇರೆ ಕಾಲೇಜುಗಳಲ್ಲಿ ಶುಲ್ಕವೂ ಹೆಚ್ಚಿರುತ್ತದೆ. ಜೌಹರ್ ವಿಶ್ವವಿದ್ಯಾಲಯದಲ್ಲಿ ಶುಲ್ಕ ವಿನಾಯಿತಿಗೆ ಹಲವು ಅವಕಾಶಗಳಿದ್ದು, ಇತರ ಖಾಸಗಿ ವಿಶ್ವವಿದ್ಯಾಲಯಗಳಿಗಿಂತ ಕಡಿಮೆ ವೆಚ್ಚವಿತ್ತು" ಎಂದು ತಿಳಿಸಿದ್ದಾರೆ.
ಜೌಹರ್ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ಪೂರ್ಣಗೊಳಿಸಿರುವ ತಮ್ಮ ಸಂಬಂಧಿಯೊಬ್ಬರಿಗಾಗಿ ಸಲಹಾ ಕೇಂದ್ರಕ್ಕೆ ಬಂದ ಮೋನಾ ಕಾಂಬೋಜ್, "ಅವರ ಪದವಿ ಪ್ರಮಾಣಪತ್ರ ಮಾನ್ಯತೆ ಪಡೆಯುತ್ತದೆಯೇ ಮತ್ತು ಅದರ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದೇ ಎಂದು ಅವರು ಆತಂಕಗೊಂಡಿದ್ದಾರೆ" ಎಂದು ಹೇಳಿದ್ದಾರೆ.
ಬುಧವಾರ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್, ಈ ತೆರವು ಆದೇಶವನ್ನು "ಹಠದ ಕ್ರಮ" ಎಂದು ಕರೆದಿದ್ದಾರೆ. "ಕಟ್ಟಡ ನಿರ್ಮಾಣ ಅಕ್ರಮವಾಗಿದ್ದರೆ ದಂಡ ವಿಧಿಸುವುದು ಅಥವಾ ಸರ್ಕಾರದ ವಶಕ್ಕೆ ಪಡೆಯುವುದರ ಮೂಲಕ ಶಿಕ್ಷೆ ನೀಡಿ. ಆದರೆ ಉತ್ತರ ಪ್ರದೇಶಕ್ಕೆ ಅಗತ್ಯವಿರುವ, ಕಾರ್ಯಾಚರಿಸುತ್ತಿರುವ ವಿಶ್ವವಿದ್ಯಾಲಯವನ್ನು ನಾಶಪಡಿಸಬೇಡಿ" ಎಂದು ಒತ್ತಾಯಿಸಿದ್ದಾರೆ.
ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮೊರಾದಾಬಾದ್ ವಿಭಾಗೀಯ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸುವುದು ಅಥವಾ ನ್ಯಾಯಾಲಯದ ಬಾಗಿಲು ತಟ್ಟುವುದು - ಈ ಎರಡು ಆಯ್ಕೆಗಳು ಮಾತ್ರ ವಿಶ್ವವಿದ್ಯಾಲಯದ ಮುಂದಿವೆ ಎಂದು ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.
ತೆರವು ನೋಟಿಸ್ ನೀಡುವ ಮುನ್ನ ಅಕ್ರಮಗಳ ಕುರಿತು ಸ್ಪಷ್ಟನೆ ನೀಡಲು ವಿಶ್ವವಿದ್ಯಾಲಯಕ್ಕೆ ಸಾಕಷ್ಟು ಸಮಯ ನೀಡಲಾಗಿತ್ತು ಎಂದು ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅಜಯ್ ದ್ವಿವೇದಿ ತಿಳಿಸಿದ್ದಾರೆ. ನೆಲಸಮಗೊಳಿಸಲು ಗುರುತಿಸಲಾದ ಕಟ್ಟಡಗಳ ನಕ್ಷೆಗೆ ಅನುಮೋದನೆ ಪಡೆದಿರಲಿಲ್ಲ. ಅಷ್ಟೇ ಅಲ್ಲದೆ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ದಾಖಲೆಗಳ ಪ್ರಕಾರ, ತೆರವುಗೊಳಿಸದ ಎರಡು ವಿಶ್ವವಿದ್ಯಾಲಯ ಕಟ್ಟಡಗಳಿಗೆ ಮಾತ್ರ ಸಿಂಧುವಾದ ನಿರ್ಮಾಣ ಅನುಮೋದನೆ ಇದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯು ಸಮಾಜವಾದಿ ಪಕ್ಷದ (SP) ವಿರುದ್ಧ ವಾಗ್ದಾಳಿ ನಡೆಸಿದ್ದು, 2006ರಲ್ಲಿ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿದ ಎಸ್‌ಪಿ ಸರ್ಕಾರಕ್ಕೆ ಸಂಸ್ಥೆಯ ಹಿತಾಸಕ್ತಿ ಮುಖ್ಯವಾಗಿದ್ದರೆ ಭೂ ಬಳಕೆಯ ಉದ್ದೇಶವನ್ನು ಏಕೆ ಬದಲಾಯಿಸಲಿಲ್ಲ ಎಂದು ಪ್ರಶ್ನಿಸಿದೆ.
ಅಜಂ ಖಾನ್ ವಿರುದ್ಧ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಹೆಚ್ಚಿನವು ವಿಶ್ವವಿದ್ಯಾಲಯ ವಿಸ್ತರಣೆಗಾಗಿ ಭೂಮಿ ವಶಪಡಿಸಿಕೊಂಡ ಆರೋಪಗಳಿಗೆ ಸಂಬಂಧಿಸಿವೆ. ಸರ್ಕಾರಿ ರಸ್ತೆ ಸ್ವಚ್ಛಗೊಳಿಸುವ ಯಂತ್ರಗಳು ಜೌಹರ್ ವಿಶ್ವವಿದ್ಯಾಲಯದ ಆವರಣದಲ್ಲಿ ಹೂತುಹಾಕಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಒಂದು ಪ್ರಕರಣವಾದರೆ, ಆವರಣದಲ್ಲಿರುವ ಮದರಸಾದಿಂದ ಕಳುವಾಗಿದ್ದ ಅಪರೂಪದ ಪುಸ್ತಕಗಳು ಮತ್ತು ಹಳೆಯ ಹಸ್ತಪ್ರತಿಗಳನ್ನು ವಶಪಡಿಸಿಕೊಂಡಿರುವುದು ಇತರ ಪ್ರಕರಣಗಳಾಗಿವೆ.
ವಿಶ್ವವಿದ್ಯಾಲಯ ಟ್ರಸ್ಟ್‌ನ ಸದಸ್ಯೆಯೂ ಆಗಿರುವ ಅಜಂ ಖಾನ್ ಅವರ ಪತ್ನಿ ತಜೀನ್ ಫಾತಿಮಾ, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ತಮ್ಮ ಪತಿಯ ವಿರುದ್ಧ ನಡೆಯುತ್ತಿರುವ ಪ್ರಚಾರಕ್ಕೆ ಸಂಯೋಜಿಸಿ ಮಾತನಾಡಿದ್ದಾರೆ. "ನಾವು ಈಗಾಗಲೇ ಸಾಕಷ್ಟು ಅನುಭವಿಸಿದ್ದೇವೆ. ಸಮಾಜದ ಏಳಿಗೆಗಾಗಿ ಒಂದು ವಿಶ್ವವಿದ್ಯಾಲಯವನ್ನು ನಿರ್ಮಿಸುವುದಷ್ಟೇ ಅವರ (ಅಜಂ ಖಾನ್) ಉದ್ದೇಶವಾಗಿತ್ತು. ಕಳೆದ ದಶಕದಲ್ಲಿ ನಮ್ಮ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳಿದ್ದಾರೆ, ಅಧಿಕಾರಿಗಳಾಗಿದ್ದಾರೆ, ನ್ಯಾಯಾಂಗಕ್ಕೆ ಸೇರ್ಪಡೆಯಾಗಿದ್ದಾರೆ... ಈ ಎಲ್ಲಾ ಕೊಡುಗೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
2009ರವರೆಗೆ ರಾಝಾ ಸರ್ಕಾರಿ ಪಿಜಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ಫಾತಿಮಾ, ವಿಶ್ವವಿದ್ಯಾಲಯದ ಹೊರಗೆ ಪೊಲೀಸ್ ಪಡೆ ನಿಯೋಜನೆ ಮತ್ತು ಸಲಹಾ ಕೇಂದ್ರ ಸ್ಥಾಪನೆಯನ್ನು ಪ್ರಶ್ನಿಸುತ್ತಾ, "ಅವರು ಈಗಾಗಲೇ ತೀರ್ಪು ನೀಡಿದಂತಿದೆ. ನಾವು ಉಸಿರಿರುವವರೆಗೂ ಹೋರಾಟ ಮುಂದುವರಿಸುತ್ತೇವೆ" ಎಂದು ಹೇಳಿದ್ದಾರೆ.
ಜೌಹರ್ ವಿಶ್ವವಿದ್ಯಾಲಯವು ಇಂತಹ ಸಂಕಷ್ಟವನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ ಎಂಬ ಸತ್ಯವೇ, ಪ್ರಸ್ತುತ ಫರಾ ಮತ್ತು ಅವರ ಸ್ನೇಹಿತೆಯರಿಗೆ ಭರವಸೆಯ ಬೆಳಕಾಗಿದೆ. "ವಿಶ್ವವಿದ್ಯಾಲಯ ನೆಲಸಮವಾಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಈ ಹಿಂದೆಯೂ ಇಂತಹ ವದಂತಿಗಳು ಬಂದಿದ್ದವು" ಎಂದು ಫರಾ ಹೇಳುತ್ತಾರೆ.
ಸೌಜನ್ಯ: indianexpress.com