ಕಾಗದದ ನೋಟುಗಳ ಬದಲು ಪ್ಲಾಸ್ಟಿಕ್ ನೋಟು ಬಳಕೆಯಿಂದ ಏನು ಪ್ರಯೋಜನ?

Update: 2026-07-23 21:40 IST

ಸಾಂದರ್ಭಿಕ ಚಿತ್ರ 

ಕಳೆದ ವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಅಂಗಸಂಸ್ಥೆಯೊಂದು ಕರೆದ ಟೆಂಡರ್, RBI ಪ್ಲಾಸ್ಟಿಕ್ ನೋಟುಗಳ ಪ್ರಾಯೋಗಿಕ ಬಳಕೆಗೆ ಮುಂದಾಗುವ ಉದ್ದೇಶವನ್ನು ಬಹಿರಂಗಪಡಿಸಿದೆ. ಸುಮಾರು 15 ವರ್ಷಗಳ ಹಿಂದೆ ಇದೇ ರೀತಿಯ ಪ್ರಾಯೋಗಿಕ ಯೋಜನೆಯನ್ನು ಘೋಷಿಸಲಾಗಿತ್ತು. 2012ರ ಆ ಪ್ರಯತ್ನವು ಯಾವುದೇ ಸುಳಿವು ಇಲ್ಲದೆ ಸ್ಥಗಿತಗೊಂಡಿತ್ತಾದರೂ, ಈ ಬಾರಿ ಈ ಪ್ರಕ್ರಿಯೆಗೆ ಹೆಚ್ಚಿನ ವೇಗ ಸಿಕ್ಕಂತೆ ಕಾಣುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ (BRBNMPL) ಕರೆದಿರುವ ಟೆಂಡರ್‌ ನಲ್ಲಿ, ನೋಟುಗಳನ್ನು ಮುದ್ರಿಸಲು ಬಳಸಲಾಗುವ 3.4 ಕೋಟಿ ಪಾಲಿಮರ್ ಶೀಟ್‌ ಗಳಿಗೆ ಬಿಡ್ ಆಹ್ವಾನಿಸಲಾಗಿದೆ. ಇವು ಕೇವಲ ಸಾಂಪ್ರದಾಯಿಕ ಪ್ಲಾಸ್ಟಿಕ್ ಶೀಟ್‌ ಗಳಾಗಿರದೆ, ವಿಶೇಷ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿವೆ. ಪ್ರಾಯೋಗಿಕ ಬಳಕೆ ಯಶಸ್ವಿಯಾದ ನಂತರ ಬಿಆರ್‌ಬಿಎನ್‌ಎಂಪಿಎಲ್ ಹೆಚ್ಚಿನ ಪ್ರಮಾಣದಲ್ಲಿ ಶೀಟ್‌ ಗಳನ್ನು ಖರೀದಿಸಲಿದ್ದು, ಈ 3.4 ಕೋಟಿ ಶೀಟ್‌ ಗಳು ‘ತಕ್ಷಣದ ಅಗತ್ಯ’ ಎಂದು ಟೆಂಡರ್‌ ನಲ್ಲಿ ಉಲ್ಲೇಖಿಸಲಾಗಿದೆ.

ಶೇ. 100ರಷ್ಟು ಹತ್ತಿಯನ್ನು ಬಳಸಿ ತಯಾರಿಸುವ ಕಾಗದದ ನೋಟುಗಳ ಬದಲು ಪ್ಲಾಸ್ಟಿಕ್ ನೋಟುಗಳನ್ನು ತರುವ ಅಗತ್ಯವಾದರೂ ಏನಿದೆ? ಇದರಿಂದ ನಿಜವಾದ ಪ್ರಯೋಜನಗಳಿವೆಯೇ?

►2012ರ ಪ್ರಾಯೋಗಿಕ ಪ್ರಯತ್ನಗಳು

ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ ಏಳು ವರ್ಷಗಳ ನಂತರ, ಅಂದರೆ 2009ರ ಸೆಪ್ಟೆಂಬರ್‌ ನಲ್ಲಿ RBI 10 ರೂಪಾಯಿ ಮೌಲ್ಯದ 100 ಕೋಟಿ ಪ್ಲಾಸ್ಟಿಕ್ ನೋಟುಗಳನ್ನು ಸಂಗ್ರಹಿಸಲು ಬಿಡ್ ಆಹ್ವಾನಿಸಿತ್ತು. ವಿವಿಧ ಹವಾಮಾನ ವಲಯಗಳಲ್ಲಿ ನೋಟುಗಳ ಬಾಳಿಕೆಯನ್ನು ಪರೀಕ್ಷಿಸಲು ಕೊಚ್ಚಿ, ಮೈಸೂರು, ಶಿಮ್ಲಾ, ಜೈಪುರ ಮತ್ತು ಭುವನೇಶ್ವರಗಳಲ್ಲಿ ಪ್ರಾಯೋಗಿಕವಾಗಿ ಈ ನೋಟುಗಳನ್ನು ತರಲು ಉದ್ದೇಶಿಸಲಾಗಿತ್ತು.

ಈ ಪ್ರಾಯೋಗಿಕ ಪ್ರಯತ್ನವು ಮುಂದೆ ಸಾಗಲಿಲ್ಲ.

"ನಾವು 2012-13ರಲ್ಲಿ ಪ್ಲಾಸ್ಟಿಕ್ ನೋಟುಗಳ ಪ್ರಾಯೋಗಿಕ ಬಳಕೆಯನ್ನು ಯೋಜಿಸಿದ್ದೆವಾದರೂ, ಅದು ಯೋಜನೆಯಾಗಿಯೇ ಉಳಿಯಿತು. ನೋಟುಗಳ ಖರೀದಿ ಪ್ರಕ್ರಿಯೆಯನ್ನು ಮುಂದುವರಿಸಲು ಆ ಸಮಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ" ಎಂದು RBIನ ಮಾಜಿ ಅಧಿಕಾರಿಯೊಬ್ಬರು 'The Indian Express'ಗೆ ತಿಳಿಸಿದ್ದಾರೆ.

ತನ್ನ 2014-15ರ ವಾರ್ಷಿಕ ವರದಿಯಲ್ಲಿ RBI, 10 ರೂಪಾಯಿಯ ಪ್ಲಾಸ್ಟಿಕ್ ನೋಟುಗಳನ್ನು ತಾಂತ್ರಿಕವಾಗಿ ಮೌಲ್ಯಮಾಪನ ಮಾಡಲಾಯಿತಾದರೂ, "ಕೆಲವು ತಾಂತ್ರಿಕ ಕೊರತೆಗಳು ಕಂಡುಬಂದ ಕಾರಣ ಪ್ರಕ್ರಿಯೆಯನ್ನು ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ" ಎಂದು ಹೇಳಿತ್ತು.

ಆ ನಂತರ ಈ ಯೋಜನೆಯನ್ನು ಬಿಆರ್‌ಬಿಎನ್‌ಎಂಪಿಎಲ್ ಮತ್ತು ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SPMCIL) ಸಂಸ್ಥೆಗಳಿಗೆ ವಹಿಸಲಾಯಿತು. ಆ ನಂತರವೂ ಈ ವಿಷಯದಲ್ಲಿ ಹೆಚ್ಚಿನ ಪ್ರಗತಿ ಆಗಿರಲಿಲ್ಲ. ಕಳೆದ ವಾರದ ಟೆಂಡರ್ ಬಹಿರಂಗಪಡಿಸಿರುವಂತೆ, ಬಿಆರ್‌ಬಿಎನ್‌ಎಂಪಿಎಲ್ ಮತ್ತು ಎಸ್‌ಪಿಎಂಸಿಐಎಲ್ ಸಂಸ್ಥೆಗಳು ತಮಗೆ ಪೂರೈಕೆಯಾಗುವ ಪಾಲಿಮರ್ ಶೀಟ್‌ ಗಳನ್ನು ಬಳಸಿ ನೋಟುಗಳನ್ನು ಮುದ್ರಿಸಲಿವೆ.

►ಜಾಗತಿಕ ಬಳಕೆ

ಭಾರತವು 2009 ಅಥವಾ 2012ರಲ್ಲೇ ಪ್ಲಾಸ್ಟಿಕ್ ನೋಟುಗಳನ್ನು ತಂದಿದ್ದರೂ ಸಹ, ಅದು ಉಳಿದ ದೇಶಗಳಿಗೆ ಹೋಲಿಸಿದರೆ ತಡವೇ ಆಗುತ್ತಿತ್ತು.

1988ರಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಪ್ಲಾಸ್ಟಿಕ್ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡಿತ್ತು. ಪ್ರಸ್ತುತ 50ಕ್ಕೂ ಹೆಚ್ಚು ದೇಶಗಳಲ್ಲಿ ಇವು ಬಳಕೆಯಲ್ಲಿದ್ದು, ಕಾಗದದ ನೋಟುಗಳಿಗಿಂತ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲ್ಪಟ್ಟಿವೆ. ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಯುಕೆ, ಕೆನಡಾ ಮತ್ತು ನ್ಯೂಜಿಲೆಂಡ್ ಪಾಲಿಮರ್ ನೋಟುಗಳನ್ನು ಬಳಸುತ್ತಿವೆ. ಭಾರತೀಯ ಪ್ರವಾಸಿಗರಿಗೆ ತಿಳಿದಿರುವಂತೆ, ನಮ್ಮ ನೆರೆಹೊರೆಯ ದೇಶಗಳಾದ ಥೈಲ್ಯಾಂಡ್, ವಿಯೆಟ್ನಾಂ, ಮಲೇಷ್ಯಾ ಮತ್ತು ಸಿಂಗಾಪುರಗಳು ಕೂಡ ಸಂಪೂರ್ಣವಾಗಿ ಅಲ್ಲದಿದ್ದರೂ ಪ್ಲಾಸ್ಟಿಕ್ ಹಣವನ್ನು ಬಳಸುತ್ತಿವೆ.

►ಪರಿಸರಕ್ಕೆ ಪ್ಲಾಸ್ಟಿಕ್‌ನಿಂದ ಪ್ರಯೋಜನ

ಕಾಗದದ ನೋಟುಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ನೋಟುಗಳಿಂದ ಸಿಗುವ ದೊಡ್ಡ ಅನುಕೂಲವೆಂದರೆ ಅವುಗಳ ಬಾಳಿಕೆ. ನೋಟಿನ ಮೌಲ್ಯಕ್ಕೆ ಅನುಗುಣವಾಗಿ ಇವು ಎರಡರಿಂದ ಆರರಷ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ (ಸಣ್ಣ ಮೌಲ್ಯದ ನೋಟುಗಳ ಬಳಕೆ ಹೆಚ್ಚಿರುವುದರಿಂದ ಅವುಗಳ ಆಯುಷ್ಯ ಕಡಿಮೆಯಿರುತ್ತದೆ). ಈ ಹೆಚ್ಚಿನ ಬಾಳಿಕೆಯೇ ಇವುಗಳ ಎಲ್ಲಾ ಅನುಕೂಲಗಳಿಗೆ ಮುಖ್ಯ ಕಾರಣವಾಗಿದೆ.

ಮೊದಲನೆಯದಾಗಿ, ಹೆಚ್ಚಿನ ಬಾಳಿಕೆ ಎಂದರೆ ಯಾವುದೇ ಅವಧಿಯಲ್ಲಿ ಕಡಿಮೆ ಸಂಖ್ಯೆಯ ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಿದರೆ ಸಾಕಾಗುತ್ತದೆ. ಎರಡನೆಯದಾಗಿ, ಒಂದು ಪ್ಲಾಸ್ಟಿಕ್ ನೋಟು ತಯಾರಿಕೆ ಕಾಗದದ ನೋಟಿಗಿಂತ ದುಬಾರಿಯಾಗಿದ್ದರೂ, ಕಡಿಮೆ ನೋಟುಗಳನ್ನು ಮುದ್ರಿಸುವುದರಿಂದ ಅವುಗಳ ತಯಾರಿಕೆ, ವಿತರಣೆ ಮತ್ತು ನಷ್ಟಗೊಳಿಸುವ ವೆಚ್ಚಗಳು ಕಡಿಮೆಯಾಗುತ್ತವೆ. ಈ ವೆಚ್ಚಗಳ ಕಡಿತವು ಪರಿಸರದ ಮೇಲೆಯೂ ಅನುಕೂಲಕರ ಪರಿಣಾಮ ಬೀರುತ್ತದೆ.

2013ರ ಆಗಸ್ಟ್‌ನಲ್ಲಿ, ಹತ್ತಿ ಆಧಾರಿತ ಕಾಗದದ ನೋಟುಗಳು ಮತ್ತು ಪ್ಲಾಸ್ಟಿಕ್ ನೋಟುಗಳು ತಮ್ಮ ಸಂಪೂರ್ಣ ಆಯುಷ್ಯದಲ್ಲಿ ಬೀರುವ ಕಾರ್ಬನ್ ಪರಿಣಾಮದ ಕುರಿತು ಅಧ್ಯಯನ ನಡೆಸಲು 'ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್' (TERI) ಸಂಸ್ಥೆಗೆ ಸೂಚಿಸಿರುವುದಾಗಿ RBI ತಿಳಿಸಿತ್ತು. ಈ ಅಧ್ಯಯನದ ವರದಿಯು, ಹತ್ತಿ ಆಧಾರಿತ ನೋಟುಗಳ ಬದಲು ಪ್ಲಾಸ್ಟಿಕ್ ನೋಟುಗಳನ್ನು ತರುವುದು ಪರಿಸರಕ್ಕೆ "ಗಮನಾರ್ಹ ಅನುಕೂಲಗಳನ್ನು" ಉಂಟುಮಾಡುತ್ತದೆ ಎಂದು ತೀರ್ಮಾನಿಸಿತ್ತು.

"ಪಾಲಿಮರ್/ಪ್ಲಾಸ್ಟಿಕ್ ನೋಟುಗಳನ್ನು (ಮತ್ತು ಉತ್ಪಾದನೆಯ ತ್ಯಾಜ್ಯವನ್ನು) ಪುಡಿಮಾಡಿ, ಕಸದ ಡಬ್ಬಿಗಳು, ಪೈಪಿಂಗ್ ಪರಿಕರಗಳು ಹಾಗೂ ಇತರ ಗೃಹಬಳಕೆಯ ಮತ್ತು ಕೈಗಾರಿಕಾ ಉತ್ಪನ್ನಗಳಾಗಿ ಮರುಬಳಕೆ ಮಾಡಬಹುದು. ಪಾಲಿಮರ್‌ ನ ಮೂಲ ವಸ್ತುವನ್ನು ಮರುಸೃಷ್ಟಿಸಲು ಸಾಧ್ಯವಿಲ್ಲದಿದ್ದರೂ, ಅದರ ಮರುಬಳಕೆಯ ಗುಣದಿಂದಾಗಿ ಅದು ಒಂದಕ್ಕಿಂತ ಹೆಚ್ಚು ಬಾರಿ ಉಪಯೋಗಕ್ಕೆ ಬರುತ್ತದೆ" ಎಂದು RBI ಹೇಳಿತ್ತು.

►ವೆಚ್ಚ ಮತ್ತು ಅಂಕಿ-ಅಂಶಗಳು

ಕಳೆದ ಮೂರು ವರ್ಷಗಳಲ್ಲಿ, RBI 8,270 ಕೋಟಿ ಹೊಸ ನೋಟುಗಳನ್ನು ಮಾರುಕಟ್ಟೆಗೆ ಪೂರೈಸಿದೆ. ಇದೇ ಅವಧಿಯಲ್ಲಿ, ಅತ್ಯಂತ ಹಳೆಯದಾದ, ಕೊಳೆಯಾದ ಅಥವಾ ಹರಿದು ಹೋಗಿದ್ದ 6,213 ಕೋಟಿ ಹಳೆಯ ನೋಟುಗಳನ್ನು ನಾಶ ಮಾಡಿದೆ.

ಅಂದರೆ, RBI ಪ್ರತಿವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರತಿ ನಾಲ್ಕು ಹೊಸ ನೋಟುಗಳಲ್ಲಿ ಮೂರು ಹಳೆಯ ನೋಟುಗಳನ್ನು ನಾಶ ಮಾಡಬೇಕಾಗುತ್ತದೆ. ಪ್ಲಾಸ್ಟಿಕ್ ನೋಟುಗಳು ಹೆಚ್ಚು ಕಾಲ ಬಾಳಿಕೆ ಬರುವುದರಿಂದ, ಅವುಗಳನ್ನು ನಿಯಮಿತವಾಗಿ ನಾಶ ಮಾಡುವ ಅಗತ್ಯವಿರುವುದಿಲ್ಲ. ಇದು RBIನ ಹಣವನ್ನು ಉಳಿಸುವುದಲ್ಲದೆ, ಪರಿಸರದ ಮೇಲಿನ ಪ್ರಭಾವವನ್ನೂ ಕಡಿಮೆ ಮಾಡುತ್ತದೆ.

►ನೋಟು ಮುದ್ರಣಕ್ಕೆ RBI ಮಾಡುವ ವೆಚ್ಚ

RBI ಪ್ರಸ್ತುತ ನೋಟುಗಳನ್ನು ಮುದ್ರಿಸಲು ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಕಳೆದ ಒಂದು ದಶಕದಲ್ಲೇ, ಸುಮಾರು 26,000 ಕೋಟಿ ನೋಟುಗಳನ್ನು ಮುದ್ರಿಸಲು ಕೇಂದ್ರ ಬ್ಯಾಂಕ್ ಒಟ್ಟು 52,095 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದೆ.

ಇದು ಭಾರೀ ಮೊತ್ತವಾಗಿದ್ದು, ಪ್ರತಿದಿನ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸುವ RBIಗೂ ಇದು ದೊಡ್ಡ ಮೊತ್ತವೇ ಆಗಿದೆ. ಕಳೆದ 10 ವರ್ಷಗಳಲ್ಲಿ ಕಾಗದದ ನೋಟುಗಳನ್ನು ಮುದ್ರಿಸುವ ವೆಚ್ಚವು, ಮೀಸಲು ನಿಧಿಯನ್ನು ಹೊರತುಪಡಿಸಿ RBIನ ಒಟ್ಟು ವೆಚ್ಚದ ಶೇ. 15ರಿಂದ 44ರವರೆಗೆ ಇದೆ.

ಇದರ ಜೊತೆಗೆ ಭದ್ರತೆಯ ಅನುಕೂಲವೂ ಇದೆ. ಜಗತ್ತಿನ ಅರ್ಧಕ್ಕೂ ಹೆಚ್ಚು ಕೇಂದ್ರ ಬ್ಯಾಂಕ್‌ಗಳಿಗೆ ನೋಟುಗಳನ್ನು ಪೂರೈಸುವ ಬ್ರಿಟಿಷ್ ಸಂಸ್ಥೆ 'ಡಿ ಲಾ ರೂ' ಪ್ರಕಾರ, ಹೆಚ್ಚಿನ ನಕಲಿ ನೋಟುಗಳು ಕಾಗದದ ಮೇಲೆ ಮುದ್ರಿತವಾಗುವುದರಿಂದ ಪ್ಲಾಸ್ಟಿಕ್ ನೋಟುಗಳು ಹೆಚ್ಚು ಸುರಕ್ಷಿತವಾಗಿವೆ. ಹೀಗಾಗಿ, ನೋಟುಗಳಿಗೆ ಪಾಲಿಮರ್ ಬಳಸುವ ದೇಶಗಳಲ್ಲಿ ನಕಲಿ ನೋಟುಗಳ ಹಾವಳಿ ಕಡಿಮೆಯಾಗಿದೆ.

ಭಾರತದಲ್ಲಿ 2024-25ರಲ್ಲಿ 2.17 ಲಕ್ಷದಷ್ಟಿದ್ದ ಪತ್ತೆಯಾದ ನಕಲಿ ನೋಟುಗಳ ಸಂಖ್ಯೆ, 2025-26ರಲ್ಲಿ 2.3 ಲಕ್ಷಕ್ಕೆ ಏರಿಕೆಯಾಗಿದೆ.

►ನಗದಿನ ಮೇಲೆಯೇ ವ್ಯಾಮೋಹ

ನೋಟು ರದ್ದತಿ ಮತ್ತು ಕೋವಿಡ್-19 ಸಾಂಕ್ರಾಮಿಕದ ನಂತರ ಕಳೆದ 10 ವರ್ಷಗಳಲ್ಲಿ ಡಿಜಿಟಲ್ ಕ್ರಾಂತಿಯೇ ನಡೆದಿದೆ. ಹೀಗಿರುವಾಗ ಭಾರತಕ್ಕೆ ಪ್ಲಾಸ್ಟಿಕ್ ನೋಟುಗಳ ಅಗತ್ಯವಿದೆಯೇ?

RBI ಕಳೆದ ವರ್ಷ ನಡೆಸಿದ ಸಮೀಕ್ಷೆಯ ಪ್ರಕಾರ, ಕುಟುಂಬಗಳು ಮತ್ತು ಸಣ್ಣ ವ್ಯಾಪಾರಿಗಳು ನಗದು ಬಳಸಲು ಇಂದಿಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ನೋಟು ರದ್ದತಿಗಿಂತ ಮುಂಚಿನ ಅವಧಿಯಷ್ಟೇ ವೇಗದಲ್ಲಿ ಭಾರತೀಯರು ನಗದಿಗೆ ಬೇಡಿಕೆ ಇಡುತ್ತಿದ್ದಾರೆ.

►ಹೆಚ್ಚುತ್ತಿರುವ ನಗದು ಬೇಡಿಕೆ

2026ರ ಮಾರ್ಚ್ ಅಂತ್ಯದ ವೇಳೆಗೆ, ಭಾರತದಲ್ಲಿ ಚಲಾವಣೆಯಲ್ಲಿದ್ದ ಒಟ್ಟು ನಗದು ಪ್ರಮಾಣವು 41.7 ಲಕ್ಷ ಕೋಟಿ ರೂ.ಗೆ ತಲುಪಿದ್ದು, ವಾರ್ಷಿಕ ಶೇ. 12ರಷ್ಟು ಬೆಳವಣಿಗೆ ಕಂಡಿದೆ. ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿದ್ದರೂ, ನಗದಿನ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.

►ಆಮದು ಮಾಡಿಕೊಳ್ಳುವ ಆತಂಕ

ಪ್ಲಾಸ್ಟಿಕ್ ನೋಟುಗಳಿಂದ ಇಷ್ಟೆಲ್ಲಾ ಅನುಕೂಲಗಳಿದ್ದರೂ, ಒಂದು ಆತಂಕ ಉಳಿದುಕೊಂಡಿದೆ. ಅದೇನೆಂದರೆ, ನೋಟುಗಳನ್ನು ಮುದ್ರಿಸಲು ಬೇಕಾದ ಶೀಟ್‌ ಗಳನ್ನು ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿ ಬರಬಹುದು.

ಈ ಯೋಜನೆಯಲ್ಲಿ ಭಾಗವಹಿಸುವ ಬಿಡ್‌ದಾರರು ಪಾಕಿಸ್ತಾನ ಅಥವಾ ಚೀನಾದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಹೊಂದಿದ್ದರೆ, ಅದನ್ನು ಭಾರತದ ಯೋಜನೆಯಿಂದ ಸಂಪೂರ್ಣವಾಗಿ ಪ್ರತ್ಯೇಕಿಸಬೇಕು ಎಂದು ಟೆಂಡರ್‌ ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಜೊತೆಗೆ ಈ ಎರಡು ದೇಶಗಳಿಂದ ಯಾವುದೇ ಕಚ್ಚಾ ವಸ್ತುಗಳನ್ನು ಖರೀದಿಸಬಾರದು ಮತ್ತು ಅಲ್ಲಿನ ಪೌರತ್ವ ಅಥವಾ ಮೂಲ ಹೊಂದಿರುವ ನೌಕರರನ್ನು ಬಳಸಿಕೊಳ್ಳಬಾರದು ಎಂದೂ ಸೂಚಿಸಲಾಗಿದೆ. ಏನೇ ಆದರೂ, ದೇಶದ ಅಧಿಕೃತ ಹಣಕ್ಕಾಗಿ ವಿದೇಶಿ ಸಂಸ್ಥೆಯ ಮೇಲೆ ಅವಲಂಬಿತವಾಗುವುದು ಒಂದು ದೌರ್ಬಲ್ಯವೇ ಸರಿ.

ಆದರೆ, ಇದು ಹೊಸದೇನಲ್ಲ. RBI ನೋಟು ಮತ್ತು ಶಾಯಿಯ ಆಮದನ್ನು ಹಂತ ಹಂತವಾಗಿ ಕಡಿಮೆ ಮಾಡಿದೆ. ಬಿಆರ್‌ಬಿಎನ್‌ಎಂಪಿಎಲ್ ಮತ್ತು ಎಸ್‌ಪಿಎಂಸಿಐಎಲ್ ಜಂಟಿ ಸಹಯೋಗದ 'ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್', ಸುಮಾರು ಒಂದು ದಶಕದ ಹಿಂದೆಯೇ ವಾಟರ್‌ಮಾರ್ಕ್ ಕಾಗದದ ದೇಶೀಯ ಉತ್ಪಾದನೆಯನ್ನು ಪ್ರಾರಂಭಿಸಿತ್ತು. ಆಗಸ್ಟ್ 2018ರಲ್ಲಿ ಮೈಸೂರಿನಲ್ಲಿ ಬಿಆರ್‌ಬಿಎನ್‌ಎಂಪಿಎಲ್‌ನ ಶಾಯಿ ಕಾರ್ಖಾನೆ ಕಾರ್ಯಾರಂಭ ಮಾಡಿತು.

ಈಗಾಗಲೇ ಇರುವ ವ್ಯವಸ್ಥೆಗಳನ್ನು ಗಮನಿಸಿದರೆ, ಪ್ಲಾಸ್ಟಿಕ್ ನೋಟುಗಳಿಗೆ ಬದಲಾಗುವುದು ಹಂತ ಹಂತವಾಗಿ ನಡೆಯಬೇಕು. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದಾಗಿ, ಹಾಲಿ ವ್ಯವಸ್ಥೆಯಲ್ಲಿ ಈಗಾಗಲೇ ಅಪಾರ ಹೂಡಿಕೆ ಮಾಡಲಾಗಿದೆ. ಎರಡನೆಯದಾಗಿ, ಪ್ಲಾಸ್ಟಿಕ್ ನೋಟುಗಳಿಗೆ ಬದಲಾಗಲು ಮತ್ತಷ್ಟು ಹೆಚ್ಚುವರಿ ಹೂಡಿಕೆಯ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News