Photo Credit : maktoobmedia.com

ಮುಂಬೈ, ಸೆ. 20: ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಕಿರಿಟ್ ಸೋಮಯ್ಯ ಅವರು ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 2ರ ಸಮೀಪದಲ್ಲಿರುವ ಮಸೀದಿಯ ವಿರುದ್ಧ ‘ಲ್ಯಾಂಡ್ ಜಿಹಾದ್’ ಆರೋಪ ಮಾಡಿದ ಬೆನ್ನಲ್ಲೇ, ಮಸೀದಿಯ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಸೂಚಿಸಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (CSMIA) ನಿರ್ವಹಿಸುವ ಆಡಳಿತ ಮಂಡಳಿಗೆ ಬಿಎಂಸಿ ಈ ಸೂಚನೆ ನೀಡಿದೆ.

ಮುಂಬೈ ಮೆಟ್ರೋಪಾಲಿಟನ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ (MMRDA) ಮಸೀದಿ ಇರುವ ರಚನೆಯನ್ನು ‘ಅಕ್ರಮ’ ಧಾರ್ಮಿಕ ರಚನೆ ಎಂದು ಘೋಷಿಸಿ, ಅದನ್ನು ತೆರವುಗೊಳಿಸುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿತ್ತು. ಇದರ ಕೆಲವೇ ದಿನಗಳ ಬಳಿಕ ಬಿಎಂಸಿ ನೋಟಿಸ್ ನೀಡಿದೆ.

ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ಇಂಜಿನಿಯರ್‌ ಗೆ ನೀಡಿರುವ ನೋಟಿಸ್‌ ನಲ್ಲಿ, ಮಸೀದಿಯ ನೀರಿನ ಸಂಪರ್ಕಕ್ಕೆ ಅನುಮೋದನೆ ಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಾಲಿಕೆಗೆ ಸಲ್ಲಿಸುವಂತೆ BMC ತಿಳಿಸಿದೆ. ಈ ದಾಖಲೆಗಳನ್ನು ಏಳು ದಿನಗಳೊಳಗೆ ಸಲ್ಲಿಸದಿದ್ದರೆ ನೀರಿನ ಸಂಪರ್ಕ ಕಡಿತಗೊಳಿಸಬೇಕು ಎಂದು ಸೂಚಿಸಿದೆ. ಸೂಚನೆ ಪಾಲಿಸದಿದ್ದರೆ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯಡಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಟರ್ಮಿನಲ್ 2ರ ಸಮೀಪದ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಸೋಮಯ್ಯ ಅವರು ಸೆ. 8ರಂದು ದೂರು ನೀಡಿದ್ದರು. ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ಟರ್ಮಿನಲ್‌ ನ ಟ್ಯಾಕ್ಸಿ ನಿಲ್ದಾಣದ ಬಳಿ ಅಗತ್ಯ ಅನುಮತಿಗಳಿಲ್ಲದೆ ಮಸೀದಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದರು.

ವಿಮಾನ ನಿಲ್ದಾಣದ ಜಾಗದಲ್ಲಿ ಅಕ್ರಮವಾಗಿ ಭೂ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ ಎಂದೂ ಅವರು ಆರೋಪಿಸಿದ್ದರು. MIALನ ಕಾರ್ಗೋ ವಿಭಾಗದ ಸಹಾಯಕ ಅಧಿಕಾರಿ ಮುಹಮ್ಮದ್ ಸರ್ವಾರ್ ಮತ್ತು ಮತ್ತೊಬ್ಬ ಅಧಿಕಾರಿ ಎನ್.ಆರ್. ಶ್ರೀನಿವಾಸನ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದ್ದರು.

ಮಸೀದಿಯ ನಿರ್ಮಾಣವನ್ನು ‘ಅಕ್ರಮ’ ಎಂದು ಹೇಳಿದ್ದ ಸೋಮಯ್ಯ, ಇದು ‘ವಂಚನೆಯ ಭೂ ಒತ್ತುವರಿ’ ಎಂದು ಆರೋಪಿಸಿದ್ದರು. MIALನ ಕಾರ್ಗೋ ವಿಭಾಗದ ಉದ್ಯೋಗಿ ಮುಹಮ್ಮದ್ ಸರ್ವಾರ್ ಅವರೊಂದಿಗೆ ಶಾಮೀಲಾಗಿ ‘ಲ್ಯಾಂಡ್ ಜಿಹಾದ್ ಮಾಫಿಯಾ’ ಈ ಕೃತ್ಯ ಎಸಗಿದೆ ಎಂದೂ ಅವರು ದೂರಿದ್ದರು.

ಬಳಿಕ MMRDA ಕೂಡ ಮಸೀದಿ ಇರುವ ರಚನೆಯನ್ನು ‘ಅಕ್ರಮ’ ಎಂದು ಘೋಷಿಸಿತು. ವಿಮಾನ ನಿಲ್ದಾಣ ಪ್ರದೇಶದ ಮಧ್ಯಂತರ ಅಭಿವೃದ್ಧಿ ಯೋಜನೆ (IDP)ಯಲ್ಲಿ ಸಾರ್ವಜನಿಕ ಆರಾಧನಾ ಸ್ಥಳಕ್ಕೆ ಯಾವುದೇ ಅವಕಾಶವಿಲ್ಲ ಎಂದು MMRDA ತಿಳಿಸಿತು.

ಶುಕ್ರವಾರ, ‘ಲ್ಯಾಂಡ್ ಜಿಹಾದ್ ಮಾಫಿಯಾ’ ಮತ್ತು MIAL ಉದ್ಯೋಗಿ ಮುಹಮ್ಮದ್ ಸರ್ವಾರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸೋಮಯ್ಯ ಸಹಾರ್ ಪೊಲೀಸ್ ಠಾಣೆಗೆ ತೆರಳಿದ್ದರು.

ವಿಮಾನ ನಿಲ್ದಾಣವನ್ನು ನಿರ್ವಹಿಸುವ ಕಂಪೆನಿ MIAL ಮೇಲೆಯೇ ಈ ವಿಚಾರದ ಜವಾಬ್ದಾರಿ ಇದೆ ಎಂದು MMRDA ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮುಸ್ಲಿಂ ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸೋಮಯ್ಯ ಅವರು ‘ಜಿಹಾದ್’ ಎಂಬ ಪದವನ್ನು ಪದೇ ಪದೇ ಬಳಸುತ್ತಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಮುಸ್ಲಿಮರು ಮತ್ತು ಮುಸ್ಲಿಂ ಸಂಸ್ಥೆಗಳಿಗೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಅವರು ‘ಜಿಹಾದ್’ ಆರೋಪಗಳ ಮೂಲಕ ಪ್ರಸ್ತಾಪಿಸುತ್ತಿದ್ದಾರೆ ಎನ್ನಲಾಗಿದೆ.

ಜುಲೈನಲ್ಲಿ ಮುಂಬೈನ ಗೋವಂಡಿಯ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಸೋಮಯ್ಯ ಅವರು ‘ಅನಧಿಕೃತ ಮದರಸಾ’ ಮತ್ತು ‘ಶಾಲಾ ಜಿಹಾದ್’ನ ಉದಾಹರಣೆ ಎಂದು ಪದೇ ಪದೇ ಆರೋಪಿಸಿದ್ದರು. ಶಾಲೆಯ ಕಟ್ಟಡದ ಒಂದು ಭಾಗವನ್ನು ಬಿಎಂಸಿ ಕೆಡವಲು ಮುಂದಾಗಿತ್ತು. ಬಳಿಕ ಬಾಂಬೆ ಹೈಕೋರ್ಟ್ ಬಿಎಂಸಿಗೆ ತಡೆಯಾಜ್ಞೆ ನೀಡಿತ್ತು.

ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಲ್ಲಿ ಜನಸಂಖ್ಯೆ ಮತ್ತು ಮತದಾನದ ಬದಲಾವಣೆಗಳ ಬಗ್ಗೆ ಆರೋಪಿಸುವಾಗಲೂ ಸೋಮಯ್ಯ ಅವರು ಈ ಹಿಂದೆ ‘ಮತ ಜಿಹಾದ್’ ಎಂಬ ಪದ ಬಳಸಿದ್ದರು.

2026ರಲ್ಲಿ ಬಾಂಗ್ಲಾದೇಶಿ ವಲಸಿಗರು ಮತ್ತು ಅತಿಕ್ರಮಣಗಳ ವಿರುದ್ಧದ ತಮ್ಮ ಅಭಿಯಾನವನ್ನು ಅವರು ಮತ್ತಷ್ಟು ತೀವ್ರಗೊಳಿಸಿದ್ದರು. ಮುಂಬೈನಲ್ಲಿ ಆಪಾದಿತ ಭೂ ಅತಿಕ್ರಮಣಗಳನ್ನು ‘ಭೂ ಜಿಹಾದ್’ ಎಂದು ಬಣ್ಣಿಸಿದ್ದ ಅವರು, ಅಕ್ರಮ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ವಸಾಹತುಗಳ ವಿರುದ್ಧವೂ ಪ್ರಚಾರ ನಡೆಸಿದ್ದರು.

ಸೌಜನ್ಯ: maktoobmedia.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor