ಸಾಂದರ್ಭಿಕ ಚಿತ್ರ (AI)

ವರ್ಷಗಳ ಕಾಲ H-1B ವೀಸಾ ಪ್ರವೇಶದ್ವಾರವಾಗಿದ್ದರೆ, ಗ್ರೀನ್ ಕಾರ್ಡ್ ಅಂತಿಮ ಗಮ್ಯಸ್ಥಾನವಾಗಿತ್ತು. ಭಾರತೀಯ ತಂತ್ರಜ್ಞಾನ ವೃತ್ತಿಪರರು ಲಾಟರಿ ವ್ಯವಸ್ಥೆ, ವರ್ಷಗಳ ಕಾಲದ ಅನಿಶ್ಚಿತತೆಯನ್ನು ಒಪ್ಪಿಕೊಂಡಿದ್ದರು. ಏಕೆಂದರೆ ಮಾರ್ಗವು ನಿಧಾನವಾಗಿದ್ದರೂ ತೆರೆದಿತ್ತು. ಈಗ ಆ ಮಾರ್ಗದ ಎರಡೂ ತುದಿಗಳ ಮೇಲೆ ಒತ್ತಡ ಹೆಚ್ಚಿದೆ. ಅಮೆರಿಕದ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಕಾಯುವಿಕೆ ಸಾಲಿನಲ್ಲಿ ಸುಮಾರು 10 ಲಕ್ಷ ಭಾರತೀಯರಿದ್ದಾರೆ. ತಾತ್ಕಾಲಿಕ ಉದ್ಯೋಗಿಯಿಂದ ಖಾಯಂ ನಿವಾಸಿಯಾಗುವ ಪ್ರಯಾಣವು ಈಗ ಎರಡೂ ಕಡೆಗಳಿಂದ ಕಿರಿದಾಗುತ್ತಿದೆ. ಒಳಬರಲು ದಾರಿ ಕಷ್ಟವಾಗುತ್ತಿದ್ದರೆ, ವೀಸಾ ಸರತಿಯಿಂದ ಹೊರಬರಲು ದಶಕಗಳೇ ಬೇಕಾಗುತ್ತಿವೆ.

ಸೆಪ್ಟೆಂಬರ್ 8 ರಂದು, ಯುಎಸ್ ಲೇಬರ್ ಡಿಪಾರ್ಟ್ಮೆಂಟ್ ಇನ್ಸ್‌ಪೆಕ್ಟರ್ ಜನರಲ್ ಆಂಥೋನಿ ಡಿ'ಎಸ್ಪೊಸಿಟೊ, ಉದ್ಯೋಗ ಆಧಾರಿತ ವೀಸಾ ಕಾರ್ಯಕ್ರಮಗಳ ದುರ್ಬಳಕೆ ಆರೋಪದ ತನಿಖೆಯ ಭಾಗವಾಗಿ ಕಾಗ್ನಿಜೆಂಟ್‌ನ ಹೊಸ ಪರ್ಮ್ (PERM) ಅರ್ಜಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಘೋಷಿಸಿದರು. ಕೆಲವು ದಿನಗಳ ನಂತರ, ಕ್ಲೌಡೇರಾ ಕಂಪನಿಗೂ ಇದೇ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದರು. ಈ ಕ್ರಮದಿಂದ ಎಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ, ಈ ಸ್ಥಗಿತ ಎಷ್ಟು ದಿನಗಳವರೆಗೆ ಇರುತ್ತದೆ ಅಥವಾ ಕಂಪನಿಗಳ ವಿರುದ್ಧದ ನಿಖರವಾದ ಆರೋಪಗಳೇನು ಎಂಬುದನ್ನು ಇಲಾಖೆ ಇನ್ನೂ ಬಹಿರಂಗಪಡಿಸಿಲ್ಲ.

"ಕಾಗ್ನಿಜೆಂಟ್‌ನ ಪರ್ಮ್ ಅಮಾನತುಗೊಳಿಸಿರುವುದು ಉದ್ಯೋಗದಾತರಿಗೆ ಮತ್ತು ಉದ್ಯೋಗಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡುತ್ತದೆ. ವೀಸಾ ಪ್ರಾಯೋಜಕತ್ವ ನೀತಿಗಳು ಈಗ ಕೇವಲ ಮಾನವ ಸಂಪನ್ಮೂಲ ನಿರ್ವಹಣೆಯ ವಿಷಯಗಳಷ್ಟೇ ಅಲ್ಲ, ಅವು ದೀರ್ಘಕಾಲೀನ ಉದ್ಯೋಗಿ ಯೋಜನೆಯ ಪ್ರಮುಖ ಭಾಗವಾಗುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ನ್ಯಾಷನಲ್ ಆರ್ಗನೈಸೇಷನ್ ಫಾರ್ ಸಾಫ್ಟ್ವೇರ್ ಅಂಡ್ ಟೆಕ್ನಾಲಜಿ ಪ್ರೊಫೆಷನಲ್ಸ್ (NOSTOPS) ಸಂಸ್ಥೆಯ ಸ್ಥಾಪಕ ರಾಜೀವ್ ದಭಡ್ಕರ್ ಹೇಳಿದ್ದಾರೆ.

ಆದರೆ ದೊಡ್ಡ ಸುದ್ದಿಯು ಕೇವಲ ಒಂದು ಕಂಪನಿಗೆ ಸೀಮಿತವಾಗಿಲ್ಲ. ಭಾರತೀಯ ವೃತ್ತಿಪರರು ತಾತ್ಕಾಲಿಕ ವೀಸಾಗಳ ಕಠಿಣ ಪರಿಶೀಲನೆ ಹಾಗೂ ಈಗಾಗಲೇ ದೀರ್ಘಕಾಲ ಕಾಯಬೇಕಿರುವ ಗ್ರೀನ್ ಕಾರ್ಡ್ ವ್ಯವಸ್ಥೆಯ ನಡುವೆ ಸಿಲುಕಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಎರಡು ಬೆಳವಣಿಗೆಗಳು ಕೇವಲ ಕಠಿಣ ವೃತ್ತಿಪರ ನೀತಿಯನ್ನು ಮಾತ್ರವಲ್ಲದೆ, ವ್ಯವಸ್ಥೆಯನ್ನು ಪ್ರವೇಶಿಸುವ ದ್ವಾರ ಕಿರಿದಾಗುತ್ತಿರುವುದನ್ನು ಮತ್ತು ಹೊರಬರುವ ಸರತಿ ಸಾಲು ಮಂದಗತಿಯಲ್ಲಿ ಸಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಪರ್ಮ್ ಸ್ಥಗಿತದಿಂದ ಬದಲಾಗುವುದು ಏನು, ಬದಲಾಗದಿರುವುದು ಏನು?

ಪರ್ಮ್ (PERM) ಅಂದರೆ ಪ್ರೋಗ್ರಾಂ ಎಲೆಕ್ಟ್ರಾನಿಕ್ ರಿವ್ಯೂ ಮ್ಯಾನೇಜ್ಮೆಂಟ್. ಇದು ಅಮೆರಿಕದ ಉದ್ಯೋಗದಾತರು ವಿದೇಶಿ ಉದ್ಯೋಗಿಗೆ ಖಾಯಂ ನಿವಾಸಕ್ಕಾಗಿ ಪ್ರಾಯೋಜಕತ್ವ ನೀಡಲು ಲೇಬರ್ ಡಿಪಾರ್ಟ್ಮೆಂಟ್‌ನ ಅನುಮೋದನೆ ಪಡೆಯುವ ಪ್ರಕ್ರಿಯೆಯಾಗಿದೆ.

ಇದು ನೇರವಾಗಿ ಗ್ರೀನ್ ಕಾರ್ಡ್ ಅಲ್ಲ. ಇದು ಉದ್ಯೋಗದಾತರ ಮೂಲಕ ಗ್ರೀನ್ ಕಾರ್ಡ್ ಪಡೆಯುವ ಹಾದಿಯಲ್ಲಿ ಮೊದಲ ಹೆಜ್ಜೆಯಾಗಿದೆ.

H-1B ವೀಸಾ- ಅಮೆರಿಕದಲ್ಲಿ ಕೆಲಸ ಮಾಡುವುದಕ್ಕೆ -

ಪರ್ಮ್ (PERM) - ಉದ್ಯೋಗದಾತರಿಂದ ಕಾರ್ಮಿಕ ಪ್ರಮಾಣೀಕರಣ ಪ್ರಕ್ರಿಯೆ ಆರಂಭ

I-140 - ಉದ್ಯೋಗದಾತರಿಂದ ವಲಸಿಗರ ಅರ್ಜಿ ಸಲ್ಲಿಕೆ

ಆದ್ಯತಾ ದಿನಾಂಕ (Priority date) - ದಿನಾಂಕ ಬರುವವರೆಗೆ ಉದ್ಯೋಗಿಯ ಕಾಯುವಿಕೆ

I-485 / ದೂತಾಸವಾಸ ಪ್ರಕ್ರಿಯೆ - ಖಾಯಂ ನಿವಾಸಕ್ಕಾಗಿ ಅರ್ಜಿ ಸಲ್ಲಿಸುವುದು

ಗ್ರೀನ್ ಕಾರ್ಡ್ - ಖಾಯಂ ನಿವಾಸದ ಅಧಿಕೃತ ಮಂಜೂರಾತಿ

ಅಂದರೆ, ಹೊಸ ಪರ್ಮ್ ಅರ್ಜಿಗಳ ಸ್ಥಗಿತದಿಂದಾಗಿ ಉದ್ಯೋಗದಾತರು ಹೊಸ ಉದ್ಯೋಗಿಗಳನ್ನು ಖಾಯಂ ನಿವಾಸದ ಪ್ರಕ್ರಿಯೆಗೆ ಒಳಪಡಿಸುವುದು ಕಷ್ಟವಾಗಬಹುದು. ಹಾಗಂದ ಮಾತ್ರಕ್ಕೆ, ಈಗಾಗಲೇ ಇರುವ ಪ್ರತಿಯೊಬ್ಬ ಎಚ್-1ಬಿ ಉದ್ಯೋಗಿಯ ವೀಸಾ ಅಥವಾ ಮುಂಚೆಯೇ ಅನುಮೋದನೆಗೊಂಡಿರುವ ವಲಸೆ ಪ್ರಕರಣಗಳು ರದ್ದಾಗಿವೆ ಎಂದರ್ಥವಲ್ಲ.

ಈ ವ್ಯತ್ಯಾಸವು ಬಹಳ ಮುಖ್ಯವಾಗಿದೆ. ಏಕೆಂದರೆ ಕಾಗ್ನಿಜೆಂಟ್‌ನಲ್ಲಿ ನಡೆದ ಬೆಳವಣಿಗೆಯು, ಉದ್ಯೋಗದಾತರ ಪ್ರಾಯೋಜಕತ್ವದಲ್ಲಿ ಖಾಯಂ ನಿವಾಸ ಪಡೆಯಲು ಯೋಜಿಸುತ್ತಿದ್ದ ಭಾರತೀಯ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.

ಆದರೆ ಕಾಗ್ನಿಜೆಂಟ್‌ನ ಪರ್ಮ್ ಸ್ಥಗಿತವೊಂದೇ ಭಾರತೀಯ ಉದ್ಯೋಗಿಗಳು ಇಷ್ಟು ಕಷ್ಟಕರವಾದ ಗ್ರೀನ್ ಕಾರ್ಡ್ ಹಾದಿಯನ್ನು ಎದುರಿಸುತ್ತಿರುವುದಕ್ಕೆ ಏಕೈಕ ಕಾರಣವಲ್ಲ. ಈ ಸಮಸ್ಯೆ ಇತ್ತೀಚಿನ ತನಿಖೆಗೂ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ.

"ಭಾರತೀಯ ತಂತ್ರಜ್ಞಾನ ವೃತ್ತಿಪರರಿಗೆ ದೊರೆಯುತ್ತಿರುವ ಪಾಠವೆಂದರೆ, ಅಮೆರಿಕದ ಉದ್ಯೋಗವು ಒಂದು ವೃತ್ತಿಪರ ಅವಕಾಶವಾಗಿರಬಹುದು, ಆದರೆ ಅಮೆರಿಕದ ಗ್ರೀನ್ ಕಾರ್ಡ್ ಎಂಬುದು ಸಂಪೂರ್ಣವಾಗಿ ಬೇರೆಯಾದ ಮತ್ತು ದಿನೇ ದಿನೇ ಅನಿಶ್ಚಿತವಾಗುತ್ತಿರುವ ವಿಷಯವಾಗಿದೆ" ಅಂತಾರೆ ದಭಡ್ಕರ್ .

ಮೊದಲ ಸಂಕಷ್ಟ: ಎಚ್-1ಬಿ ವೀಸಾದಲ್ಲಿ ಮುಂದುವರಿಯುವುದು

ಅನೇಕ ಭಾರತೀಯ ತಂತ್ರಜ್ಞಾನ ಉದ್ಯೋಗಿಗಳಿಗೆ, ಅಮೆರಿಕದಲ್ಲಿ ಸುದೀರ್ಘ ವೃತ್ತಿಜೀವನಕ್ಕೆ ಎಚ್-1ಬಿ ವೀಸಾವೇ ಪ್ರವೇಶದ್ವಾರವಾಗಿದೆ.

ವಿಶೇಷ ಪರಿಣತಿಯ ಉದ್ಯೋಗಗಳಲ್ಲಿ, ಮುಖ್ಯವಾಗಿ ಹಲವು ತಂತ್ರಜ್ಞಾನ ಹುದ್ದೆಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಈ ವೀಸಾವು ಅಮೆರಿಕದ ಕಂಪನಿಗಳಿಗೆ ಅವಕಾಶ ನೀಡುತ್ತದೆ. ಈ ವ್ಯವಸ್ಥೆಯಲ್ಲಿ ಪ್ರತಿವರ್ಷ ಒಟ್ಟು 85,000 ಹೊಸ ಎಚ್-1ಬಿ ವೀಸಾಗಳ ಮಿತಿ ಇದೆ. ಅದೇ ವೇಳೆ ಸಾಮಾನ್ಯ ಕೋಟಾದಡಿ 65,000 ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳಿಂದ ಉನ್ನತ ಪದವಿ ಪಡೆದ ವಿದೇಶಿ ಪದವೀಧರರಿಗೆ ಹೆಚ್ಚುವರಿಯಾಗಿ 20,000 ವೀಸಾಗಳು ಲಭ್ಯವಿವೆ.

ಬೇಡಿಕೆಯು ಯಾವಾಗಲೂ ಪೂರೈಕೆಗಿಂತ ಹೆಚ್ಚಾಗಿರುವುದರಿಂದ, ಆಯ್ಕೆ ಪ್ರಕ್ರಿಯೆಯು ಅತ್ಯಂತ ಸ್ಪರ್ಧಾತ್ಮಕವಾಗಿದೆ. ಆದರೆ ಈಗಾಗಲೇ ಅಮೆರಿಕದಲ್ಲಿರುವ ಉದ್ಯೋಗಿಗಳಿಗೆ ಇರುವ ದೊಡ್ಡ ಸಮಸ್ಯೆಯೆಂದರೆ, ಎಚ್-1ಬಿ ವೀಸಾವು ಅವರ ಉದ್ಯೋಗದೊಂದಿಗೆ ನೇರವಾಗಿ ತಳಕುಹಾಕಿಕೊಂಡಿದೆ.

ಉದ್ಯೋಗಿ ತನ್ನ ಕೆಲಸವನ್ನು ಕಳೆದುಕೊಂಡರೆ, ವೀಸಾ ಸ್ಥಾನಮಾನವು ಕೆಲವೇ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ (DHS) ಹೊಸ ಪ್ರಸ್ತಾವನೆಯು ಜಾರಿಗೆ ಬಂದರೆ ಈ ಅಪಾಯ ಮತ್ತಷ್ಟು ಹೆಚ್ಚಾಗಬಹುದು. ಕೆಲಸ ಕಳೆದುಕೊಂಡ ಬಳಿಕ ಬೇರೆ ಉದ್ಯೋಗದಾತರನ್ನು ಹುಡುಕಲು ಅಥವಾ ಇತರ ವಲಸೆ ಮಾರ್ಗಗಳನ್ನು ಕಂಡುಕೊಳ್ಳಲು ಎಚ್-1ಬಿ ಮತ್ತು ಇತರ ಉದ್ಯೋಗ ವೀಸಾ ಹೊಂದಿರುವವರಿಗೆ ಸದ್ಯ ನೀಡಲಾಗಿರುವ 60 ದಿನಗಳ ಕಾಲಾವಕಾಶವನ್ನು ರದ್ದುಗೊಳಿಸಲು ಡಿಎಚ್‌ಎಸ್ ಪ್ರಸ್ತಾವಿಸಿದೆ.

ಈ ಪ್ರಸ್ತಾವನೆಯು ಇನ್ನೂ ನಿಯಮ ರೂಪಿಸುವ ಹಂತದಲ್ಲಿದೆ ಮತ್ತು ಇದು ಪ್ರಸ್ತುತ ಕಾನೂನಾಗಿಲ್ಲ. ಅಮೆರಿಕದಲ್ಲಿ ವರ್ಷಗಟ್ಟಲೆ ಕಷ್ಟಪಟ್ಟು ತಮ್ಮ ವೃತ್ತಿಜೀವನವನ್ನು ಕಟ್ಟಿಕೊಂಡಿರುವ ಭಾರತೀಯ ಉದ್ಯೋಗಿಯೊಬ್ಬರಿಗೆ, ಈ ನಿಯಮವು ದಿನನಿತ್ಯದ ಉದ್ಯೋಗ ಬದಲಾವಣೆಯನ್ನೇ ಒಂದು ವಲಸೆ ತುರ್ತು ಪರಿಸ್ಥಿತಿಯನ್ನಾಗಿ ಪರಿವರ್ತಿಸಬಹುದು.

ಎರಡನೇ ಸಂಕಷ್ಟ: ಗ್ರೀನ್ ಕಾರ್ಡ್ ಸರತಿ ಸಾಲು

ಇಲ್ಲಿಯೇ ಭಾರತೀಯರ ವಲಸೆ ಸಮಸ್ಯೆಯು ಇತರ ರಾಷ್ಟ್ರಗಳ ನಾಗರಿಕರಿಗಿಂತ ಸಂಪೂರ್ಣ ಭಿನ್ನವಾಗುತ್ತದೆ. ಅಮೆರಿಕವು ಉದ್ಯೋಗ ಆಧಾರಿತ ವಲಸೆ ವೀಸಾಗಳಿಗೆ ಮಿತಿಯನ್ನು ವಿಧಿಸುವುದಲ್ಲದೆ, ಪ್ರತಿ ದೇಶಕ್ಕೂ ಇಂತಿಷ್ಟೇ ಕೋಟಾ ಎಂದು ನಿಗದಿಪಡಿಸಿದೆ.

ಲಭ್ಯವಿರುವ ವಾರ್ಷಿಕ ವೀಸಾಗಳ ಸಂಖ್ಯೆಗಿಂತ ಉದ್ಯೋಗ ಆಧಾರಿತ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿರುವ ಭಾರತೀಯರ ಸಂಖ್ಯೆ ಬಹಳಷ್ಟಿದೆ. ಇದರ ಪರಿಣಾಮವಾಗಿ ಭಾರೀ ದೊಡ್ಡ ಬ್ಯಾಕ್‌ಲಾಗ್ ಸೃಷ್ಟಿಯಾಗಿದೆ. ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ (NFAP) ನಡೆಸಿದ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ, ಅಮೆರಿಕದ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಸಾಲಿನಲ್ಲಿ ಸುಮಾರು 10 ಲಕ್ಷ ಭಾರತೀಯರು ಸಿಲುಕಿಕೊಂಡಿದ್ದಾರೆ. ಇದು ಮೊದಲ ಮೂರು ಉದ್ಯೋಗ ಆಧಾರಿತ ವಿಭಾಗಗಳಲ್ಲಿ ಕಾಯುತ್ತಿರುವ ಅಂದಾಜು 12.6 ಲಕ್ಷ ಜನರಲ್ಲಿ ಶೇಕಡಾ 79 ರಷ್ಟು ಭಾಗವಾಗಿದೆ.

ಕೆಲವು ಅರ್ಜಿದಾರರಿಗೆ ಕಾಯುವಿಕೆಯ ಸಮಯವು ಅತಿ ದೀರ್ಘವಾಗಿರಲಿದೆ. ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ ಅಂದಾಜು ಪ್ರಕಾರ, 2026 ರಲ್ಲಿ ಈ ಸರತಿ ಸಾಲಿಗೆ ಸೇರುವ ಭಾರತೀಯ ವೃತ್ತಿಪರರು ಇಬಿ-2 (EB-2) ವಿಭಾಗದಲ್ಲಿ 179 ವರ್ಷಗಳು ಮತ್ತು ಇಬಿ-3 (EB-3) ವಿಭಾಗದಲ್ಲಿ 38 ವರ್ಷಗಳಷ್ಟು ಸುದೀರ್ಘ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಬಹುದು.

ಇವು ಸರ್ಕಾರಿ ಕಾಯುವಿಕೆಯ ಅಧಿಕೃತ ಸಮಯವಲ್ಲ, ಬದಲಿಗೆ ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿಸಂಸ್ಥೆಯ ಅಂದಾಜು ಅಷ್ಟೇ. ಬೇಡಿಕೆ, ಲಭ್ಯವಿರುವ ವೀಸಾಗಳು ಮತ್ತು ಅಮೆರಿಕದ ಕಾನೂನಿನಲ್ಲಿ ಆಗುವ ಬದಲಾವಣೆಗಳಿಗೆ ತಕ್ಕಂತೆ ವಾಸ್ತವ ಕಾಯುವಿಕೆ ಅವಧಿಯು ಬದಲಾಗಬಹುದು. ಆದರೆ 22 ವರ್ಷದ ಯುವಕನೊಬ್ಬನ ಭವಿಷ್ಯದ ಕನಸಿಗೆ 179 ವರ್ಷಗಳ ಕಾಯುವಿಕೆ ಎಂಬುದರ ಅರ್ಥವೇನು? ಈ ಕುರಿತು ಮಾತನಾಡಿದ ದಭಡ್ಕರ್, ನಿಖರವಾದ ಅಂಕಿಅಂಶಗಳ ಚರ್ಚೆ ಮುಖ್ಯವಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ವಲಸೆ ಪ್ರಕ್ರಿಯೆಯ ಕಾಯುವ ಅವಧಿಗೂ ಮತ್ತು ಮಾನವನ ಜೀವಿತಾವಧಿಗೂ ನಡುವೆ ಇರುವ ಅಂತರ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಪದವಿ ಪಡೆದ ನಂತರ 'ಅಮೆರಿಕನ್ ಕನಸು' ಏನಾಗಬೇಕು?

2026 ಸೆಪ್ಟೆಂಬರ್‌ಗೆ ಸಂಬಂಧಿಸಿದಂತೆ, ಅಮೆರಿಕದ ವಿದೇಶಾಂಗ ಇಲಾಖೆಯು ಭಾರತದ ಇಬಿ-2 (EB-2) ವಿಭಾಗವನ್ನು ಅಂತಿಮ ಹಂತದ ಕ್ರಮಕ್ಕೆ ಲಭ್ಯವಿಲ್ಲ ಎಂದು ಪಟ್ಟಿ ಮಾಡಿದೆ. ಹಾಗೆಯೇ ಇಬಿ-3 (EB-3) ಅಂತಿಮ ಹಂತದ ದಿನಾಂಕವು 2014 ಜನವರಿ 1 ಆಗಿದ್ದರೆ, ಇಬಿ-1 (EB-1) 2022 ಅಕ್ಟೋಬರ್ 15, ಆಗಿದೆ. ವರ್ಷಗಟ್ಟಲೆ ಕೆಲಸ ಮಾಡಿ, ಉದ್ಯೋಗದಾತರ ಪ್ರಾಯೋಜಕತ್ವ ಪಡೆದ ಉದ್ಯೋಗಿಯೊಬ್ಬರಿಗೆ ನಿಜಕ್ಕೂ ಖಾಯಂ ನಿವಾಸ ಸಿಗುತ್ತದೆಯೇ ಎಂಬುದನ್ನು ಈ ದಿನಾಂಕಗಳು ನಿರ್ಧರಿಸುತ್ತವೆ. ಅಲ್ಲದೆ, 2026ರ ಹಣಕಾಸು ವರ್ಷಕ್ಕೆ ಭಾರತಕ್ಕೆ ಮೀಸಲಾಗಿದ್ದ ಎಲ್ಲಾ ಇಬಿ-2 ವಲಸೆ ವೀಸಾಗಳು ಈಗಾಗಲೇ ಬಳಕೆಯಾಗಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತೀಯರಿಗೆ ಇಷ್ಟು ದೊಡ್ಡ ಸರತಿ ಸಾಲು ಏಕೆ ಇದೆ?

ಉದ್ಯೋಗ ಆಧಾರಿತ ಖಾಯಂ ನಿವಾಸವನ್ನು ಬಯಸುವ ಭಾರತೀಯರ ಸಂಖ್ಯೆ ಮತ್ತು ಅಮೆರಿಕದ ಕಾನೂನಿನಡಿ ಲಭ್ಯವಿರುವ ವೀಸಾಗಳ ಸಂಖ್ಯೆಯ ನಡುವಿನ ಅಸಮತೋಲನವೇ ಈ ಮೂಲ ಸಮಸ್ಯೆಯಾಗಿದೆ. ಭಾರತವು ಅಮೆರಿಕದಲ್ಲಿ ಉದ್ಯೋಗ ಬಯಸುವ ದೊಡ್ಡ ಸಂಖ್ಯೆಯ ಇಂಜಿನಿಯರ್‌ಗಳು, ಸಾಫ್ಟ್‌ವೇರ್ ವೃತ್ತಿಪರರು ಮತ್ತು ಇತರ ಉನ್ನತ ನುರಿತ ಕಾರ್ಮಿಕರನ್ನು ಸೃಷ್ಟಿಸುತ್ತದೆ. ಇವರಲ್ಲಿ ಅನೇಕರು ಎಚ್-1ಬಿ ವ್ಯವಸ್ಥೆಯ ಮೂಲಕ ಪ್ರವೇಶಿಸಿ, ನಂತರ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುತ್ತಾರೆ.

ಆದರೆ ಉದ್ಯೋಗ ಆಧಾರಿತ ವಲಸೆ ವೀಸಾಗಳ ಸಂಖ್ಯೆ ಸೀಮಿತವಾಗಿದೆ. 2026ರ ಹಣಕಾಸು ವರ್ಷಕ್ಕೆ ಜಾಗತಿಕ ಉದ್ಯೋಗ ಆಧಾರಿತ ಆದ್ಯತೆಯ ಮಿತಿಯು 186,317 ಎಂದು ವಿದೇಶಾಂಗ ಇಲಾಖೆಯು ತಿಳಿಸಿದೆ. ಹಾಗೆಯೇ ಕಾನೂನಿನ ನಿಯಮಗಳು ಮತ್ತು ವಿನಾಯಿತಿಗಳಿಗೆ ಒಳಪಟ್ಟು, ಪ್ರತಿ ದೇಶದ ಮಿತಿಯನ್ನು ಕುಟುಂಬ ಆಧಾರಿತ ಮತ್ತು ಉದ್ಯೋಗ ಆಧಾರಿತ ಒಟ್ಟು ಮಿತಿಯ ಶೇಕಡಾ 7 ರಷ್ಟು ಎಂದು ನಿಗದಿಪಡಿಸಲಾಗಿದೆ.

ಭಾರತವು ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಒಂದಾಗಿದೆ. ಭಾರತೀಯ ಇಂಜಿನಿಯರೊಬ್ಬರು ಅತ್ಯುತ್ತಮ ವೇತನದ ಉದ್ಯೋಗ, ಉನ್ನತ ಪದವಿ, ಗ್ರೀನ್ ಕಾರ್ಡ್ ಪ್ರಾಯೋಜಿಸಲು ಸಿದ್ಧರಿರುವ ಅಮೆರಿಕದ ಉದ್ಯೋಗದಾತ ಹಾಗೂ ಅಮೆರಿಕದಲ್ಲಿ ವರ್ಷಗಳ ಕಾಲ ತೆರಿಗೆ ಮತ್ತು ಉದ್ಯೋಗದ ಇತಿಹಾಸವನ್ನು ಹೊಂದಿದ್ದರೂ ಸಹ, ವೀಸಾ ನಂಬರ್ ಲಭ್ಯವಾಗುವವರೆಗೆ ಕಾಯಲೇಬೇಕಾಗುತ್ತದೆ.

ಮಧ್ಯದಲ್ಲಿ ಸಿಲುಕಿಕೊಂಡ ಉದ್ಯೋಗಿಯ ಗತಿ ಏನು?

ಭಾರತೀಯ ತಂತ್ರಜ್ಞಾನ ವೃತ್ತಿಪರರಿಗೆ, ಎಚ್-1ಬಿ ಪಡೆಯುವುದು ಕೇವಲ ಆರಂಭವಷ್ಟೇ. ಉದ್ಯೋಗಿ ಕಂಪನಿಗಳನ್ನು ಬದಲಾಯಿಸುವುದು, ಎಚ್-1ಬಿ ವೀಸಾವನ್ನು ನವೀಕರಿಸಿಕೊಳ್ಳುವುದು ಮತ್ತು ಗ್ರೀನ್ ಕಾರ್ಡ್ ಅರ್ಜಿಯನ್ನು ಆರಂಭಿಸಿ ಅದನ್ನು ಮುಂದುವರಿಸಲು ಉದ್ಯೋಗದಾತರಿಗಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತದೆ.

ಈ ಅವಲಂಬನೆಯು ಮತ್ತೊಂದು ಹಂತದ ಅನಿಶ್ಚಿತತೆಯನ್ನು ಸೃಷ್ಟಿಸುತ್ತದೆ. ಪರ್ಮ್ ಪ್ರಕ್ರಿಯೆಯಲ್ಲಿ ಉಂಟಾಗುವ ವಿಳಂಬವು ಗ್ರೀನ್ ಕಾರ್ಡ್ ಪ್ರಕ್ರಿಯೆಯನ್ನು ಹಿಂದೆ ತಳ್ಳಬಹುದು, ಆದರೆ ಉದ್ಯೋಗದಾತರು ಪ್ರಾಯೋಜಕತ್ವವನ್ನು ರದ್ದುಗೊಳಿಸಿದರೆ ಉದ್ಯೋಗಿಯು ಬೇರೆ ವಲಸೆ ಮಾರ್ಗವನ್ನು ಹುಡುಕಬೇಕಾಗುತ್ತದೆ. ನಂತರದ ಹಂತಗಳನ್ನು ತಲುಪಿದರೂ ಸಹ, ಭಾರತೀಯರ ಆದ್ಯತಾ ದಿನಾಂಕದ ಸರತಿ ಸಾಲು ಖಾಯಂ ನಿವಾಸವನ್ನು ಕೈಗೆಟುಕದಂತೆ ದೂರವಿಡಬಹುದು.

ಇದರ ಪರಿಣಾಮವಾಗಿ ಎರಡು ಕಾಲಮಿತಿಗಳು ಬೇರೆ ಬೇರೆ ವೇಗದಲ್ಲಿ ಚಲಿಸುತ್ತವೆ. ತಾತ್ಕಾಲಿಕ ಸ್ಥಾನಮಾನವು ಮುಂದುವರಿಯುವ ಉದ್ಯೋಗವನ್ನು ಅವಲಂಬಿಸಿರುತ್ತದೆ, ಆದರೆ ಖಾಯಂ ನಿವಾಸವು ವರ್ಷಗಟ್ಟಲೆ ದೂರವಿರಬಹುದು.

ಗ್ರೀನ್ ಕಾರ್ಡ್‌ಗಳನ್ನು ಮೀರಿದ ಒತ್ತಡ:

ಗ್ರೀನ್ ಕಾರ್ಡ್ ಸರತಿ ಸಾಲು ಈ ಸಂಕಷ್ಟದ ಒಂದು ಭಾಗ ಮಾತ್ರ. ಎಚ್-1ಬಿ ವ್ಯವಸ್ಥೆಯೇ ಈಗ ಹೆಚ್ಚು ಕಠಿಣ ವಾತಾವರಣವನ್ನು ಎದುರಿಸುತ್ತಿದೆ.

ಆಡಳಿತವು ಹೆಚ್ಚಿನ ವೆಚ್ಚಗಳು, ತೀವ್ರ ಪರಿಶೀಲನೆ ಮತ್ತು ಉದ್ಯೋಗ ವೀಸಾ ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ. ಅದೇ ಸಮಯದಲ್ಲಿ, ಭಾರತೀಯ ಐಟಿ ಕಂಪನಿಗಳು ಹೊಸ ಎಚ್-1ಬಿ ಉದ್ಯೋಗಿಗಳ ಮೇಲಿನ ತಮ್ಮ ಅವಲಂಬನೆಯನ್ನು ಈಗಾಗಲೇ ಕಡಿಮೆ ಮಾಡುತ್ತಿವೆ.

ಯುಎಸ್‌ಸಿಐಎಸ್ ಡೇಟಾವನ್ನು ವಿಶ್ಲೇಷಿಸಿದ ಎನ್‌ಎಎಫ್‌ಎಪಿ (NFAP) ವರದಿಯ ಪ್ರಕಾರ, ಪ್ರಮುಖ ಏಳು ಭಾರತೀಯ ಮೂಲದ ಐಟಿ ಕಂಪನಿಗಳು 2025ರ ಹಣಕಾಸು ವರ್ಷದಲ್ಲಿ ಆರಂಭಿಕ ಉದ್ಯೋಗಕ್ಕಾಗಿ 4,573 ಎಚ್-1ಬಿ ಅರ್ಜಿಗಳ ಅನುಮೋದನೆ ಪಡೆದಿವೆ. ಇದು 2024ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇಕಡಾ 37ರಷ್ಟು ಮತ್ತು 2015ಕ್ಕೆ ಹೋಲಿಸಿದರೆ ಶೇಕಡಾ 70ರಷ್ಟು ಕುಸಿದಿದೆ. ಇದೇ ವಿಶ್ಲೇಷಣೆಯಲ್ಲಿ ಕಾಗ್ನಿಜೆಂಟ್‌ನ ಸ್ವಂತ ಅಂಕಿಅಂಶವು ತೀವ್ರವಾಗಿ ಕುಸಿದಿದ್ದು, 2024ರ ಹಣಕಾಸು ವರ್ಷದಲ್ಲಿ ಆರಂಭಿಕ ಉದ್ಯೋಗಕ್ಕಾಗಿ ಇದ್ದ 2,873 ಅನುಮೋದನೆಗಳು 2025ರಲ್ಲಿ 743ಕ್ಕೆ ಇಳಿದಿವೆ.

ಈ ಕುಸಿತದರ್ಥ ಭಾರತೀಯ ಐಟಿ ಕಂಪನಿಗಳಿಗೆ ಎಚ್-1ಬಿ ಉದ್ಯೋಗಿಗಳು ಇನ್ನು ಮುಂದೆ ಬೇಕಿಲ್ಲ ಎಂದಲ್ಲ. ಬದಲಾಗಿ, ಎಚ್-1ಬಿ ವ್ಯವಸ್ಥೆಯ ಮೂಲಕ ಉದ್ಯೋಗಿಗಳನ್ನು ಕರೆತರುವ ಮೇಲಿನ ಅವಲಂಬನೆಯನ್ನು ತಗ್ಗಿಸಲು ಕಂಪನಿಗಳು ಅಮೆರಿಕದಲ್ಲೇ ಸ್ಥಳೀಯವಾಗಿ ನೇಮಕಾತಿ ಮಾಡಿಕೊಳ್ಳುವುದು, ಹೊರದೇಶದ ಕಚೇರಿಗಳಿಂದ ಕೆಲಸ ನಿರ್ವಹಿಸುವುದು ಮತ್ತು ಇತರ ಸ್ಥಳಗಳನ್ನು ಹೆಚ್ಚಾಗಿ ಅವಲಂಬಿಸುತ್ತಿವೆ. ಆದರೆ, ಈಗಾಗಲೇ ಅಮೆರಿಕದಲ್ಲಿ ವಾಸಿಸುತ್ತಿರುವ ಮತ್ತು ಖಾಯಂ ನಿವಾಸಕ್ಕಾಗಿ ಕಾಯುತ್ತಿರುವ ವೈಯಕ್ತಿಕ ಭಾರತೀಯ ವೃತ್ತಿಪರರಿಗೆ ಈ ಬದಲಾವಣೆಯಿಂದ ಯಾವುದೇ ದೊಡ್ಡ ಸಮಾಧಾನ ಸಿಗುವುದಿಲ್ಲ.

ತಾತ್ಕಾಲಿಕ ಉದ್ಯೋಗಿಯಿಂದ ಖಾಯಂ ನಿವಾಸಿ ಸ್ಥಾನ: ಹೊರಹೋಗುವ ದಾರಿ ಎಲ್ಲಿದೆ?

ಅನೇಕ ಭಾರತೀಯ ತಂತ್ರಜ್ಞಾನ ಉದ್ಯೋಗಿಗಳು ಎದುರಿಸುತ್ತಿರುವ ಪ್ರಮುಖ ಪ್ರಶ್ನೆ ಇದೇ ಆಗಿದೆ. ಅಮೆರಿಕವು ಜಗತ್ತಿನ ಅತಿ ದೊಡ್ಡ ತಂತ್ರಜ್ಞಾನ ಮಾರುಕಟ್ಟೆಗಳಲ್ಲಿ ಒಂದಾಗಿ ಉಳಿದಿದೆ ಮತ್ತು ಕಂಪನಿಗಳಿಗೆ ನುರಿತ ವೃತ್ತಿಪರರ ಅವಶ್ಯಕತೆ ಮುಂದುವರಿದಿದೆ. ಆದರೆ ಭಾರತೀಯ ಉದ್ಯೋಗಿಯೊಬ್ಬರಿಗೆ, ಅಮೆರಿಕದ ಶ್ರಮಿಕ ಮಾರುಕಟ್ಟೆಯನ್ನು ಪ್ರವೇಶಿಸುವುದು ಮತ್ತು ಖಾಯಂ ನಿವಾಸವನ್ನು ಪಡೆದುಕೊಳ್ಳುವುದು ಎಂಬುದು ದಿನೇ ದಿನೇ ಬೇರೆ ಬೇರೆಯೇ ಆದ ಸವಾಲುಗಳಾಗುತ್ತಿವೆ.

ಎಚ್-1ಬಿ ವೀಸಾದಿಂದ ಉದ್ಯೋಗಿಯು ಅಮೆರಿಕವನ್ನು ಪ್ರವೇಶಿಸಬಹುದು. ಆದರೆ ಇದು ಗ್ರೀನ್ ಕಾರ್ಡ್‌ನ ಖಾತರಿಯನ್ನು ನೀಡುವುದಿಲ್ಲ. ಪರ್ಮ್ ಪ್ರಕ್ರಿಯೆಯು ಉದ್ಯೋಗದಾತರ ಮೂಲಕ ಖಾಯಂ ನಿವಾಸದ ಪ್ರಕ್ರಿಯೆಯನ್ನು ಆರಂಭಿಸಬಹುದು. ಆದರೆ ಇದು ಕೂಡ ಗ್ರೀನ್ ಕಾರ್ಡ್ ಖಾತರಿಯನ್ನು ನೀಡುವುದಿಲ್ಲ. ಅಷ್ಟೇ ಯಾಕೆ, ವಲಸಿಗರಿಗೆ ಸಲ್ಲಿಸಿದ ಅರ್ಜಿಯು ಅನುಮೋದನೆಗೊಂಡಿದ್ದರೂ ಸಹ, ಆದ್ಯತಾ ದಿನಾಂಕದ ಸರತಿ ಸಾಲು ಬಾಕಿ ಇರುವುದರಿಂದ ಭಾರತೀಯ ಅರ್ಜಿದಾರರಿಗೆ ತಕ್ಷಣವೇ ಖಾಯಂ ನಿವಾಸ ಸಿಗಲು ಸಾಧ್ಯವಿಲ್ಲ.

ಉದ್ಯೋಗಿಯೊಬ್ಬರು ಈಗಾಗಲೇ ಗ್ರೀನ್ ಕಾರ್ಡ್ ಸರತಿ ಸಾಲನ್ನು ತಲುಪುವುದಕ್ಕೂ ಮುಂಚೆಯೇ, ಉದ್ಯೋಗದಾತರ ಮಟ್ಟದಲ್ಲಿ ನಡೆಯುವ ವಲಸೆ ಪರಿಶೀಲನೆಗಳು ಅವರ ಖಾಯಂ ನಿವಾಸದ ಹಾದಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಭಾರತೀಯ ತಂತ್ರಜ್ಞಾನ ವೃತ್ತಿಪರರನ್ನು ಕಾಡುತ್ತಿರುವ ನೈಜ ಸಂಕಷ್ಟವೆಂದರೆ ಇದೇ: ತಾತ್ಕಾಲಿಕ ಮಾರ್ಗವನ್ನು ನಿಯಮಿಸುವ ಕಾನೂನುಗಳು ಹೆಚ್ಚು ಅನಿಶ್ಚಿತವಾಗುತ್ತಿದ್ದರೆ, ಖಾಯಂ ಮಾರ್ಗವು ಎಂದಿನಂತೆ ಭಾರೀ ಸರತಿ ಸಾಲಿನಲ್ಲಿ ಸಿಲುಕಿಕೊಂಡಿದೆ.

ಇದರ ಪರಿಣಾಮವಾಗಿ, ಅಮೆರಿಕದಲ್ಲಿ ವರ್ಷಗಟ್ಟಲೆ ಬದುಕಿ, ಕೆಲಸ ಮಾಡಿ ತಮ್ಮ ವೃತ್ತಿಜೀವನವನ್ನು ಕಟ್ಟಿಕೊಂಡಿದ್ದರೂ ಸಹ, ತಮ್ಮ ವಲಸೆಯ ಈ ತಾತ್ಕಾಲಿಕ ಅಧ್ಯಾಯವು ಯಾವಾಗ ಕೊನೆಗೊಳ್ಳುತ್ತದೆ ಎಂದು ಹೇಳಲಾಗದಷ್ಟು ಉನ್ನತ ನುರಿತ ವೃತ್ತಿಪರರ ಒಂದು ದೊಡ್ಡ ಗುಂಪು ಬೆಳೆಯುತ್ತಿದೆ.

ಹೊಸ ಗ್ರೀನ್ ಕಾರ್ಡ್ ನಿಯಮ : ಹೊಸ ಸಾರ್ವಜನಿಕ ಹೊಣೆಗಾರಿಕೆ ಮಾರ್ಗಸೂಚಿಗಳ ಅಡಿಯಲ್ಲಿ ಭಾರತೀಯ ಅರ್ಜಿದಾರರಿಗೆ ಏನೇನು ಬದಲಾವಣೆಗಳಾಗಲಿವೆ?

ಹೊಸ ಯುಎಸ್ ವಲಸೆ ಮಾರ್ಗಸೂಚಿಗಳು ಜಾರಿಗೆ ಬರುವುದರಿಂದ, ಸೆಪ್ಟೆಂಬರ್ 18ರಿಂದ ಸ್ಥಾನಮಾನದ ಹೊಂದಾಣಿಕೆ (adjustment of status) ಮೂಲಕ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಭಾರತೀಯ ನಾಗರಿಕರು ಬದಲಾದ ಸಾರ್ವಜನಿಕ ಹೊಣೆಗಾರಿಕೆ ಮೌಲ್ಯಮಾಪನವನ್ನು ಎದುರಿಸಬೇಕಾಗುತ್ತದೆ. ಅರ್ಜಿದಾರರು ಭವಿಷ್ಯದಲ್ಲಿ ಸರ್ಕಾರದ ನೆರವಿನ ಮೇಲೆ ಅವಲಂಬಿತರಾಗುವ ಸಾಧ್ಯತೆಯಿದೆಯೇ ಎಂಬುದನ್ನು ನಿರ್ಧರಿಸಲು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ(USCIS) ಅಧಿಕಾರಿಗಳು ಹೆಚ್ಚು ವೈವಿಧ್ಯಮಯ ಆದಾಯ ಆಧಾರಿತ ಸಾರ್ವಜನಿಕ ಸೌಲಭ್ಯಗಳನ್ನು ಪರಿಗಣಿಸಲು ಈ ಹೊಸ ಮಾರ್ಗಸೂಚಿ ಅವಕಾಶ ನೀಡುತ್ತದೆ.

2022ರ ಸಾರ್ವಜನಿಕ ಹೊಣೆಗಾರಿಕೆ ನಿಯಮಗಳನ್ನು ರದ್ದುಗೊಳಿಸುವ ಹೋಮ್‌ಲ್ಯಾಂಡ್ ಸೆಕ್ಯುರಿಟಿ (DHS) ಅಂತಿಮ ನಿಯಮದ ಅನುಸಾರ, ಯುಎಸ್‌ಸಿಐಎಸ್ ಆಗಸ್ಟ್ 18ರಂದು ನವೀಕರಿಸಿದ ಪಾಲಿಸಿ ಮ್ಯಾನುಯಲ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಡಿಎಚ್‌ಎಸ್ ನಿಯಮವು ಜುಲೈ 20ರಂದು ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟಗೊಂಡಿದ್ದು, ಸೆಪ್ಟೆಂಬರ್ 18ರಿಂದ ಜಾರಿಗೆ ಬಂದಿದೆ.

ಸೆಪ್ಟೆಂಬರ್ 18ರಿಂದ ಗ್ರೀನ್ ಕಾರ್ಡ್ ಅರ್ಜಿದಾರರಿಗೆ ಏನು ಬದಲಾಗುತ್ತದೆ?

ಸಾರ್ವಜನಿಕ ಹೊಣೆಗಾರಿಕೆ ಅನರ್ಹತೆಯನ್ನು ನಿರ್ಧರಿಸುವಾಗ ಅಧಿಕಾರಿಗಳು ಐದು ಕಾನೂನುಬದ್ಧ ಅಂಶಗಳನ್ನು ಪರಿಗಣಿಸಬೇಕು ಎಂದು ಯುಎಸ್‌ಸಿಐಎಸ್ ತಿಳಿಸಿದೆ. ಅವುಗಳೆಂದರೆ ವಯಸ್ಸು, ಆರೋಗ್ಯ, ಕುಟುಂಬದ ಸ್ಥಿತಿ, ಆಸ್ತಿ, ಸಂಪನ್ಮೂಲ ಹಾಗೂ ಆರ್ಥಿಕ ಸ್ಥಿತಿ, ಮತ್ತು ಶಿಕ್ಷಣ ಹಾಗೂ ಕೌಶಲ್ಯಗಳು.

ಅರ್ಜಿದಾರರು ಸಾರ್ವಜನಿಕ ಹೊಣೆಗಾರಿಕೆಯಾಗುವ ಸಾಧ್ಯತೆಯಿದೆಯೇ ಎಂಬುದನ್ನು ನಿರ್ಧರಿಸಲು ಸಹಕಾರಿಯಾದ ಇತರ ಅಂಶಗಳನ್ನೂ ಸಹ ಸಂಸ್ಥೆಯು ಪರಿಗಣಿಸಬಹುದಾಗಿದೆ. ಇದರಲ್ಲಿ ಅರ್ಜಿದಾರರು ಪಡೆದಿರುವ ಆದಾಯ ಆಧಾರಿತ ಸಾರ್ವಜನಿಕ ಸೌಲಭ್ಯಗಳೂ ಸೇರಿವೆ.

ಆದಾಯ ನಿರ್ವಹಣೆಗಾಗಿ ಸಿಗುವ ನಗದು ನೆರವು, ವಸತಿ ಸೌಲಭ್ಯ ಸಹಾಯ, ಫುಡ್ ಸ್ಟ್ಯಾಂಪ್ಸ್ ಮತ್ತು ಕಾಲೇಜು ಶಿಕ್ಷಣಕ್ಕಾಗಿ ಲಭಿಸುವ ಆರ್ಥಿಕ ನೆರವಿನಂತಹ ಸೌಲಭ್ಯಗಳನ್ನು ಪರಿಗಣಿಸಬಹುದಾದ ಸೌಲಭ್ಯಗಳೆಂದು ಯುಎಸ್‌ಸಿಐಎಸ್ ನಿರ್ದಿಷ್ಟವಾಗಿ ಪಟ್ಟಿ ಮಾಡಿದೆ.

ಸೌಲಭ್ಯಗಳನ್ನು ಪಡೆದ ಸಮಯ ಕೂಡಾ ಮಹತ್ವದ್ದಾಗಿದೆ.

2026ರ ಸೆಪ್ಟೆಂಬರ್ 18ಕ್ಕಿಂತ ಮುಂಚೆ ಪಡೆದ ಆದಾಯ ಆಧಾರಿತ ಸಾರ್ವಜನಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ, ಅಧಿಕಾರಿಗಳು ಕೇವಲ ಸಾರ್ವಜನಿಕ ನಗದು ಸಹಾಯ ಹಾಗೂ ಸರ್ಕಾರದ ವೆಚ್ಚದಲ್ಲಿ ಸಿಗುವ ದೀರ್ಘಕಾಲೀನ ಸಾಂಸ್ಥಿಕ ಆರೈಕೆಯನ್ನು ಮಾತ್ರ ಪರಿಗಣಿಸಲಿದ್ದಾರೆ ಎಂದು ಯುಎಸ್‌ಸಿಐಎಸ್ ತಿಳಿಸಿದೆ.

ಸೆಪ್ಟೆಂಬರ್ 18ರಂದು ಅಥವಾ ಆ ನಂತರ ಪಡೆದ ಸೌಲಭ್ಯಗಳ ವಿಷಯದಲ್ಲಿ, ಅಧಿಕಾರಿಗಳು ಯಾವುದೇ ಮತ್ತು ಎಲ್ಲಾ ಆದಾಯ ಆಧಾರಿತ ಸಾರ್ವಜನಿಕ ಸೌಲಭ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದಾರೆ.

ಭಾರತೀಯ ಗ್ರೀನ್ ಕಾರ್ಡ್ ಆಕಾಂಕ್ಷಿಗಳಿಗೆ ಇದು ಏಕೆ ಮುಖ್ಯ?

ವಲಸೆ ವರ್ಗವು ವಿನಾಯಿತಿಗೆ ಅರ್ಹವಾಗಿದ್ದರೆ ಮಾತ್ರ, ಸ್ಥಾನಮಾನದ ಹೊಂದಾಣಿಕೆಗೆ ಅರ್ಜಿ ಸಲ್ಲಿಸುವ ಎಲ್ಲರಿಗೂ ಸಾರ್ವಜನಿಕ ಹೊಣೆಗಾರಿಕೆ ನಿಯಮ ಅನ್ವಯಿಸುತ್ತದೆ.

ಉದ್ಯೋಗ ಆಧಾರಿತ ಹಲವು ವರ್ಗಗಳು ಈ ನಿಯಮದ ಪರಿಧಿಗೆ ಬರುತ್ತವೆ ಎಂದು ಯುಎಸ್‌ಸಿಐಎಸ್ ಪಟ್ಟಿ ಮಾಡಿದೆ. ಇವುಗಳಲ್ಲಿ ಆದ್ಯತೆಯ ಕೆಲಸಗಾರರು, ಉನ್ನತ ಪದವಿ ಪಡೆದ ವೃತ್ತಿಪರರು ಅಥವಾ ಅಸಾಧಾರಣ ಪ್ರತಿಭೆಯುಳ್ಳವರು, ನುರಿತ ಕೆಲಸಗಾರರು, ಹೂಡಿಕೆದಾರರು ಮತ್ತು ಧರ್ಮಕ್ಕೆ ಸಂಬಂಧಿತ ಕೆಲಸಗಾರರು ಸೇರಿದ್ದಾರೆ.

ಅಂದರೆ, ಸಾರ್ವಜನಿಕ ಹೊಣೆಗಾರಿಕೆ ನಿಯಮದ ವ್ಯಾಪ್ತಿಗೆ ಬರುವ ಉದ್ಯೋಗ ಆಧಾರಿತ ವರ್ಗದ ಮೂಲಕ ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸುವ ಭಾರತೀಯ ನಾಗರಿಕರನ್ನು ಈ ಹೊಸ ಮಾರ್ಗಸೂಚಿಯಡಿ ಮೌಲ್ಯಮಾಪನ ಮಾಡಬಹುದು.

ಆದರೆ, ಈ ನಿಯಮವು ಪ್ರತಿಯೊಬ್ಬ ಗ್ರೀನ್ ಕಾರ್ಡ್ ಅರ್ಜಿದಾರರಿಗೂ ಅನ್ವಯಿಸುವುದಿಲ್ಲ. ನಿರಾಶ್ರಿತರು ಮತ್ತು ಆಶ್ರಯ ಪಡೆದವರು, ವಿಶೇಷ ವಲಸಿಗ ಅಪ್ರಾಪ್ತರು, ಕಳ್ಳಸಾಗಣೆ ಅಥವಾ ಕ್ರಿಮಿನಲ್ ಚಟುವಟಿಕೆಗಳಿಗೆ ತುತ್ತಾದ ನಿರ್ದಿಷ್ಟ ಸಂತ್ರಸ್ತರು, ಸ್ವತಃ ಅರ್ಜಿ ಸಲ್ಲಿಸುವ ವಾವಾ (VAWA) ಅರ್ಜಿದಾರರು ಮತ್ತು ತಾತ್ಕಾಲಿಕ ರಕ್ಷಿತ ಸ್ಥಾನಮಾನದ (TPS) ಕೆಲವು ಅರ್ಜಿದಾರರು ಸೇರಿದಂತೆ ವಿನಾಯಿತಿ ಪಡೆದ ವಿವಿಧ ವರ್ಗಗಳನ್ನು ಯುಎಸ್‌ಸಿಐಎಸ್ ಪಟ್ಟಿ ಮಾಡಿದೆ.

ಆದ್ದರಿಂದ, ಸಾರ್ವಜನಿಕ ಹೊಣೆಗಾರಿಕೆ ನಿಯಮ ಅನ್ವಯವಾಗುತ್ತದೆಯೇ ಎಂಬುದನ್ನು ನಿರ್ಧರಿಸುವಾಗ ನಿರ್ದಿಷ್ಟ ವಲಸೆ ವರ್ಗ ಯಾವುದು ಎಂಬುದು ಮುಖ್ಯವಾಗುತ್ತದೆ.

►ಯುಎಸ್‌ಸಿಐಎಸ್ ಸಾರ್ವಜನಿಕ ಹೊಣೆಗಾರಿಕೆ ಬಾಂಡ್‌ ಅನ್ನು ಪರಿಗಣಿಸಬಹುದು

ಸಾರ್ವಜನಿಕ ಹೊಣೆಗಾರಿಕೆ ಬಾಂಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನವೀಕೃತ ಮಾರ್ಗಸೂಚಿಯು ವಿವರಿಸುತ್ತದೆ.

ಅರ್ಜಿದಾರರು ಭವಿಷ್ಯದಲ್ಲಿ ಸಾರ್ವಜನಿಕ ಹೊಣೆಗಾರಿಕೆಯಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಮಾತ್ರ ಸ್ಥಾನಮಾನದ ಹೊಂದಾಣಿಕೆ ಅರ್ಜಿದಾರರನ್ನು ಅನರ್ಹರೆಂದು ಯುಎಸ್‌ಸಿಐಎಸ್ ಅಧಿಕಾರಿ ನಿರ್ಧರಿಸಿದರೆ, ಅಂತಹವರು ಸಾರ್ವಜನಿಕ ಹೊಣೆಗಾರಿಕೆ ಬಾಂಡ್ ಪಾವತಿಸುವಂತೆ ಅಧಿಕಾರಿ ಆಹ್ವಾನಿಸಬಹುದು.

ಅರ್ಜಿದಾರರು ಸಾರ್ವಜನಿಕ ಹೊಣೆಗಾರಿಕೆಯಾಗುವುದಿಲ್ಲ ಎಂಬುದಕ್ಕೆ ಇದು ಒಂದು ಆರ್ಥಿಕ ಭದ್ರತೆಯಾಗಿದೆ ಎಂದು ಯುಎಸ್‌ಸಿಐಎಸ್ ಬಣ್ಣಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ಅರ್ಜಿದಾರರು ಎಷ್ಟು ಸರ್ಕಾರದ ನೆರವನ್ನು ಪಡೆಯಲು ಅರ್ಹರಾಗಿರಬಹುದು ಮತ್ತು ಅದನ್ನು ಪಡೆಯಬಹುದು ಎಂಬುದನ್ನು ಪರಿಗಣಿಸಿ ಬಾಂಡ್ ಮೊತ್ತವನ್ನು ನಿರ್ಧರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಅರ್ಜಿದಾರರು ತಮ್ಮಷ್ಟಕ್ಕೆ ತಾವೇ ಸಾರ್ವಜನಿಕ ಹೊಣೆಗಾರಿಕೆ ಬಾಂಡ್ ಅನ್ನು ಸಲ್ಲಿಸಲು ಸಾಧ್ಯವಿಲ್ಲ. ಏಜೆನ್ಸಿಯು ತಿರಸ್ಕರಿಸುವ ಉದ್ದೇಶದ ನೋಟೀಸ್ (Notice of Intent to Deny) ಮೂಲಕ ಆಹ್ವಾನಿಸಿದರೆ ಮಾತ್ರ ಫಾರ್ಮ್ ಐ-945 (Form I-945, Public Charge Bond) ಅನ್ನು ಸಲ್ಲಿಸಬಹುದು ಎಂದು ಯುಎಸ್‌ಸಿಐಎಸ್ ತಿಳಿಸಿದೆ.

ಈ ನವೀಕೃತ ಮಾರ್ಗಸೂಚಿಯು 2026ರ ಸೆಪ್ಟೆಂಬರ್ 18ರಿಂದ ಜಾರಿಗೆ ಬಂದಿದ್ದು, ಸಾರ್ವಜನಿಕ ಹೊಣೆಗಾರಿಕೆ ನಿಯಮಕ್ಕೆ ಒಳಪಡುವ ಮತ್ತು ಅಂದೇ ಅಥವಾ ಆ ನಂತರ ಪೋಸ್ಟ್ ಮಾಡಲಾದ ಅಥವಾ ಎಲೆಕ್ಟ್ರಾನಿಕ್ ಮೂಲಕ ಸಲ್ಲಿಸಲಾದ ಫಾರ್ಮ್ ಐ-485 (Form I-485) ಅರ್ಜಿಗಳಿಗೆ ಅನ್ವಯಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor